ADVERTISEMENT

PV Web Exclusive| ಫುಟ್‌ಬಾಲ್‌ ಆಯಿತು, ಈಗ ‌ಫುಟ್‌ವಾಲಿ ಸರದಿ...

ಪ್ರಮೋದ
Published 20 ನವೆಂಬರ್ 2020, 6:43 IST
Last Updated 20 ನವೆಂಬರ್ 2020, 6:43 IST
ಫುಟ್‌ವಾಲಿ ಪಂದ್ಯದ ನೋಟ (ಸಾಂದರ್ಭಿಕ ಚಿತ್ರ)
ಫುಟ್‌ವಾಲಿ ಪಂದ್ಯದ ನೋಟ (ಸಾಂದರ್ಭಿಕ ಚಿತ್ರ)   
""
""

ಫುಟ್‌ಬಾಲ್‌ ಅಲೆ ಹೊಂದಿರುವ ರಾಷ್ಟ್ರಗಳಿಗಷ್ಟೇ ಸೀಮಿತವಾಗಿದ್ದ ಕೆಲ ಕ್ರೀಡೆಗಳು ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ನಿಧಾನವಾಗಿ ಸದ್ದು ಮಾಡುತ್ತಿವೆ. ಭಾರತದಲ್ಲಿ ಲೀಗ್‌ಗಳ ಪರ್ವ ಆರಂಭವಾಗಿ, ಯಶಸ್ಸು, ಹಣ ಮತ್ತು ಕೀರ್ತಿ ಲಭಿಸಿದ ಬಳಿಕವಂತೂ ಹೊಸ ಕ್ರೀಡೆಗಳನ್ನು ಭಾರತೀಯರು ಮುಕ್ತವಾಗಿ ಸ್ವಾಗತಿಸುತ್ತಿದ್ದಾರೆ. ಇದರಲ್ಲಿ ಜಾಹೀರಾತು ಲೋಕ ಮತ್ತು ತಾರೆಯರ ಸಂಭಾವನೆಯ ಆರ್ಥಿಕ ಲೆಕ್ಕಾಚಾರವೂ ಅಡಗಿದೆ.

ಬ್ರೆಜಿಲ್‌, ಸ್ಪೇನ್‌, ಪೋರ್ಚುಗಲ್‌, ಗ್ರೀಕ್‌, ಫ್ರಾನ್ಸ್‌, ಅಮೆರಿಕ, ನೆದರ್ಲೆಂಡ್ಸ್‌, ಥಾಯ್ಲೆಂಡ್‌, ದಕ್ಷಿಣ ಆಫ್ರಿಕಾ ಮತ್ತು ಪೆರುಗ್ವೆ ರಾಷ್ಟ್ರಗಳಲ್ಲಿ ಅಲೆ ಎಬ್ಬಿಸಿರುವ ‘ಫುಟ್‌ವಾಲಿ’ 2021ರಲ್ಲಿ ಭಾರತಕ್ಕೆ ಕಾಲಿಡಲಿದೆ. ಎಲ್ಲ ರಾಜ್ಯಗಳಲ್ಲಿ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಷಿಪ್‌ಗಳು ಜರುಗಲಿವೆ. ಮುಂದಿನ ವರ್ಷ ನೇಪಾಳದಲ್ಲಿ ಸೌತ್‌ ಏಷ್ಯನ್‌ ಚಾಂಪಿಯನ್‌ಷಿಪ್‌ ಆಯೋಜನೆಯಾಗಿದೆ. ಕೋವಿಡ್‌ ಆತಂಕ ಪೂರ್ಣವಾಗಿ ದೂರವಾದ ಬಳಿಕ ಕರ್ನಾಟಕದಲ್ಲಿಯೂ ಈ ಕ್ರೀಡೆಗೆ ಸಂಬಂಧಿಸಿದ ಚಟುವಟಿಕೆಗಳು ಶುರುವಾಗಲಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಭಾರತಫುಟ್‌ವಾಲಿಸಂಸ್ಥೆ ಉಪಾಧ್ಯಕ್ಷ ಇರ್ಷಾದ್‌ ಮಕ್ಕೂಬಾಯಿ

2016ರಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಫುಟ್‌ವಾಲಿ ಕ್ರೀಡೆಯ ಪ್ರದರ್ಶನ ಪಂದ್ಯ ನಡೆದಿತ್ತು. ಒಲಿಂಪಿಕ್ಸ್‌ ಸಮಿತಿ ಸದಸ್ಯರು ಈ ಕ್ರೀಡೆಯನ್ನು ನೋಡಿ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು. ಆಗ 24 ತಂಡಗಳು ಪೈಪೋಟಿ ನಡೆಸಿದ್ದ ಪ್ರದರ್ಶನ ಟೂರ್ನಿಯಲ್ಲಿ ಮೊದಲ ಬಾರಿಗೆ ಮೂವರು ಭಾರತೀಯ ಆಟಗಾರರು ಭಾಗವಹಿಸಿದ್ದರು. ಪಂಜಾಬ್‌ನ ಜಸನ್‌ದೀಪ್‌ ಸಿಂಗ್‌ ಸಿಧು ಮತ್ತು ಮಹಾರಾಷ್ಟ್ರದ ಇಬ್ಬರು ಆಟಗಾರರು ಪಾಲ್ಗೊಂಡಿದ್ದರು. ಫುಟ್‌ವಾಲಿ ಆಡುವ ಕ್ರೀಡಾಪಟುಗಳ ಮತ್ತು ರಾಷ್ಟ್ರಗಳ ಸಂಖ್ಯೆ ಹೆಚ್ಚಿಸಿ ಒಲಿಂಪಿಕ್ಸ್‌ನಲ್ಲಿ ಈ ಕ್ರೀಡೆಯನ್ನು ಸೇರ್ಪಡೆ ಮಾಡಲು ಪ್ರಯತ್ನ ನಡೆಯುತ್ತಿದೆ. ಆದ್ದರಿಂದ ಈ ಕ್ರೀಡೆಯ ಚಟುವಟಿಕೆಗಳನ್ನು ವಿವಿಧ ರಾಷ್ಟ್ರಗಳಿಗೆ ವಿಸ್ತರಿಸಲಾಗುತ್ತಿದೆ. 2012ರ ಲಂಡನ್‌ ಒಲಿಂಪಿಕ್ಸ್‌ನ ಪ್ರದರ್ಶನ ಟೂರ್ನಿಯಲ್ಲಿ ಎಂಟು ತಂಡಗಳು ಪಾಲ್ಗೊಂಡಿದ್ದವು.

ಫುಟ್‌ವಾಲಿಯ ನೆಟ್‌ ಅಳತೆಯ ಎತ್ತರ ಆಯಾ ಪ್ರಾದೇಶಿಕವಾರು ಬದಲಾವಣೆ ಮಾಡಲಾಗುತ್ತದೆ. ಆದರೆ, ಅಂತರರಾಷ್ಟ್ರೀಯ ನಿಯಮದ ಪ್ರಕಾರ ಪುರುಷರ ನಡುವಿನ ಪಂದ್ಯಗಳಿಗೆ ನೆಟ್‌ 2.2 ಮೀಟರ್‌ ಅಥವಾ 7 ಅಡಿ ಎರಡು ಇಂಚು ಎತ್ತರ ಇರಬೇಕು. ಮಹಿಳೆಯರ ಪಂದ್ಯಗಳಿಗೆ 2 ಮೀಟರ್‌ ಅಥವಾ 6 ಅಡಿ 6 ಇಂಚು ಎತ್ತರ ಇರಬೇಕು.

ಹವ್ಯಾಸದಿಂದ ವೃತ್ತಿಪರತೆಯತ್ತ

ಈ ಕ್ರೀಡೆಯನ್ನು ಆರಂಭದ ದಿನಗಳಲ್ಲಿ ಹವ್ಯಾಸಕ್ಕಾಗಿ ಮಾತ್ರ ಆಡಲಾಗುತ್ತಿತ್ತು. ಮರಳಿನಲ್ಲಿ ಆಡುವುದರಿಂದ ದೈಹಿಕ ಕಸರತ್ತು ಜೊತೆಗೆ ಮನರಂಜನೆ ಸಿಗುತ್ತದೆ. ಹೀಗಾಗಿ ಮಕ್ಕಳು ಮತ್ತು ಯುವಜನತೆಯನ್ನು ಫುಟ್‌ವಾಲಿ ಬಹುಬೇಗ ಆಕರ್ಷಿಸುತ್ತದೆ. ಮೊದಲು ಇದನ್ನು ‘‍ಪೇವಾಲಿ’ ಎಂದು ಕರೆಯಲಾಗುತ್ತಿತ್ತು.

ಇದರ ಬೆಳವಣಿಗೆಗೆ ಮತ್ತು ವ್ಯಾಪಕ ಪ್ರಚಾರಕ್ಕೆ ಸ್ಟಾರ್‌ ಫುಟ್‌ಬಾಲ್‌ ಆಟಗಾರರು ಹಲವು ಬಾರಿ ಪ್ರದರ್ಶನ ಪಂದ್ಯಗಳನ್ನು ಆಡಿದ್ದಾರೆ. ಬ್ರೆಜಿಲ್‌ನ ರಾಷ್ಟ್ರೀಯ ಫುಟ್‌ಬಾಲ್ ತಂಡದಲ್ಲಿ 1982 ಮತ್ತು 1986ರಲ್ಲಿ ಆಡಿದ್ದ ರೊಮಾರಿಯೊ, ಎಡ್ಮಂಡೊ, ರೊನಾಲ್ಡೊ, ರೊನಾಲ್ಡಿನೊ ಜೂನಿಯರ್ ಹೀಗೆ ಅನೇಕ ತಾರಾ ಆಟಗಾರರು ಫುಟ್‌ವಾಲಿ ಆಡುವ ಮೂಲಕ ಕ್ರೀಡೆಯ ಏಳಿಗೆಗೆ ಕೈ ಜೋಡಿಸಿದ್ದಾರೆ. 2003ರಲ್ಲಿ ಮಿಯಾಮಿ ಬೀಚ್‌ನಲ್ಲಿ ಅಮೆರಿಕ ಫುಟ್‌ವಾಲಿ ಸಂಸ್ಥೆ ಮೊದಲ ಬಾರಿಗೆ ‘ಫಿಟ್‌ನೆಸ್‌ ಉತ್ಸವ’ ಫುಟ್‌ವಾಲಿ ಟೂರ್ನಿ ಅಂತರರಾಷ್ಟ್ರೀಯ ಸ್ಪರ್ಧೆ ಆಯೋಜಿಸಿತ್ತು.

ಫುಟ್‌ವಾಲಿಪಂದ್ಯದ ನೋಟ

ಭಾರತದಲ್ಲಿ ಫುಟ್‌ವಾಲಿ ಕ್ರೀಡೆಯ ಕೋಚ್‌ ಆಗಿರುವ ಅಶೋಕ ಶರ್ಮಾ ‘ಈ ಕ್ರೀಡೆ 1962ರಲ್ಲಿ ಬ್ರೆಜಿಲ್‌ನಲ್ಲಿ ಮೊದಲ ಬಾರಿಗೆ ಆರಂಭವಾಯಿತು. ಒಂದು ತಂಡದಲ್ಲಿ ಐವರು ಆಟಗಾರರು ಇರುತ್ತಾರೆ. ಮಿನಿ ಫುಟ್‌ಬಾಲ್‌ ಮಾದರಿಯಲ್ಲಿ ಫೈವ್‌ ‘ಎ’ ಸೈಡ್‌ ಪಂದ್ಯಗಳು ನಡೆಯುತ್ತವೆ. ಮೂರು ಸೆಟ್‌ಗಳ ಪಂದ್ಯ ಇದಾಗಿದ್ದು, ಎರಡು ಸೆಟ್‌ಗಳಲ್ಲಿ ಗೆಲುವು ಸಾಧಿಸುವ ತಂಡಕ್ಕೆ ಜಯ ಲಭಿಸುತ್ತದೆ’ ಎಂದರು.

ಭಾರತ ಫುಟ್‌ವಾಲಿ ಸಂಸ್ಥೆ ಉಪಾಧ್ಯಕ್ಷ ಇರ್ಷಾದ್‌ ಮಕ್ಕೂಬಾಯಿ ‘ಬೀಚ್‌ ವಾಲಿಬಾಲ್‌ ಮಾದರಿಯಲ್ಲಿ ಮರಳಿನಲ್ಲಿ ಫುಟ್‌ವಾಲಿ ಪಂದ್ಯಗಳು ನಡೆಯುತ್ತವೆ. ಪಂದ್ಯಗಳನ್ನು ಆಡುವಾಗ ಕೈಗಳನ್ನು ಬಳಸುವಂತಿಲ್ಲ. ಕಾಲು, ಎದೆ ಮತ್ತು ತಲೆಯ ಶಕ್ತಿ ಪ್ರಯೋಗಿಸಿ ಎದುರಾಳಿಯ ಅಂಕಣಕ್ಕೆ ಚೆಂಡನ್ನು ಕಳುಹಿಸಬೇಕು. ಕೋವಿಡ್‌ ಕಾರಣದಿಂದ ಆನ್‌ಲೈನ್‌ ಮೂಲಕ ವೆಬಿನಾರ್‌ ಮಾಡಿ ಈ ಕ್ರೀಡೆಗೆ ಸಂಬಂಧಿಸಿದ ಕಾರ್ಯ ಯೋಜನೆಗಳ ಬಗ್ಗೆ ವೇಳಾಪಟ್ಟಿ ಸಿದ್ಧಪಡಿಸಿದ್ದೇವೆ. ಜಿಲ್ಲಾ ಮಟ್ಟದಿಂದಲೇ ಸ್ಪರ್ಧೆಗಳು ನಡೆಯಲಿವೆ. ಕರ್ನಾಟಕದಲ್ಲಿಯೂ ಇದರ ಕಂಪು ಹರಡಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.