ADVERTISEMENT

ಪ್ರಮಾಣೀಕೃತ ಆಯ್ಕೆ ನೀತಿ, ಟ್ರಯಲ್ಸ್‌ನಲ್ಲಿ ಕಟ್ಟುನಿಟ್ಟು..: ಸಚಿವಾಲಯದ ಸುತ್ತೋಲೆ

ಪಿಟಿಐ
Published 6 ಮಾರ್ಚ್ 2025, 13:53 IST
Last Updated 6 ಮಾರ್ಚ್ 2025, 13:53 IST
<div class="paragraphs"><p>ಒಲಿಂಪಿಕ್‌ </p></div>

ಒಲಿಂಪಿಕ್‌

   

ನವದೆಹಲಿ: ಕ್ರೀಡಾ ಫೆಡರೇಷನ್‌ಗಳಿಗೆ ಉತ್ತರದಾಯಿತ್ವ ಮತ್ತು ಸ್ಥಿರತೆ ಮೂಡಿಸಲು ಕ್ರೀಡಾ ಸಚಿವಾಲಯವು ಅವುಗಳಿಗೆ ಪ್ರಮಾಣೀಕೃತ ಆಯ್ಕೆನೀತಿ, ಟ್ರಯಲ್ಸ್‌ಗೆ 15 ದಿನ ಮೊದಲೇ ಅಥ್ಲೀಟುಗಳಿಗೆ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಿದೆ.

ಇದರ ಜೊತೆಗೆ ತಮಗೆ ಅನ್ಯಾಯವಾಗಿದೆ ಎಂಬ ಭಾವನೆಯಿಂದ ಕ್ರೀಡಾಪಟುಗಳು ಸಲ್ಲಿಸುವ ದೂರುಗಳ ಪ್ರಮಾಣ ನಿಯಂತ್ರಿಸಲು ಕುಂದುಕೊರತೆ ಆಲಿಸುವ ವ್ಯವಸ್ಥೆಯನ್ನು ರೂಪಿಸಬೇಕು ಎಂದೂ ಫೆಡರೇಷನ್‌ಗಳಿಗೆ ಸೂಚಿಸಲಾಗಿದೆ.

ADVERTISEMENT

ಅಥ್ಲೀಟುಗಳ ಜೊತೆ ಕಾನೂನು ಸಮರವನ್ನು ತಪ್ಪಿಸಲು ತಾವು ಬಯಸಿರುವುದಾಗಿ ಕ್ರೀಡಾ ಸಚಿವ ಮನ್ಸುಖ್‌ ಮಾಂಡವೀಯ ಅವರು ಕ್ರೀಡಾ ಫೆಡರೇಷನ್‌ಗಳಿಗೆ ಇತ್ತೀಚೆಗೆ ಸ್ಪಷ್ಟವಾಗಿ ಹೇಳಿದ್ದ ಬೆನ್ನಲ್ಲೇ ಈ ಸೂಚನೆ ನೀಡಲಾಗಿದೆ. ಕುಸ್ತಿ, ಶೂಟಿಂಗ್ ಮತ್ತು ಕೆಲವು ಚಳಿಗಾಲದ ಕ್ರೀಡೆಗಳಿಗೆ ಸಂಬಂಧಿಸಿದ ಅಥ್ಲೀಟುಗಳು ಇತ್ತೀಚಿನ ದಿನಗಳಲ್ಲಿ ತಮಗೆ ನ್ಯಾಯ ಒದಗಿಸಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದರು.

ಭಾರತ ಒಲಿಂಪಿಕ್‌ ಸಂಸ್ಥೆ (ಐಒಎ), ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌), ಮತ್ತು ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಿಗೆ (ಎನ್‌ಎಸ್‌ಎಫ್‌) ಈ ಸುತ್ತೋಲೆಯನ್ನು ಕಳುಹಿಸಲಾಗಿದೆ.

ಆಯಾ ಫೆಡರೇಷನ್‌ಗಳು ತಮ್ಮ ವೆಬ್‌ಸೈಟ್‌ಗಳಲ್ಲಿ ಆಯ್ಕೆಗೆ ಸಂಬಂಧಿಸಿದ ನೀತಿ ನಿಯಮಗಳನ್ನು ಅಪ್‌ಲೋಡ್‌ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಏನಾದರೂ ತಿದ್ದುಪಡಿ ಅಗತ್ಯವಿದ್ದಲ್ಲಿ ಸ್ಪರ್ಧೆಗೆ ಮೂರು ತಿಂಗಳ ಮೊದಲೇ ಮಾಡಬೇಕಾಗುತ್ತದೆ. ಆಯ್ಕೆ ಟ್ರಯಲ್ಸ್ ಪ್ರಕ್ರಿಯೆಯ ಚಿತ್ರೀಕರಣ ಮಾಡುವುದನ್ನೂ ಕಡ್ಡಾಯಗೊಳಿಸಲಾಗಿದೆ.

‘ಹಣಕಾಸು ನೆರವು ಕೇಳುವಾಗ, ಆಯ್ಕೆ ಟ್ರಯಲ್ಸ್‌ನ ವಿಡಿಯೊ ರೆಕಾರ್ಡಿಂಗ್ ಜೊತೆಗೆ ಆಯ್ಕೆ ಸಮಿತಿ ಸದಸ್ಯರ ...ಅಭಿಪ್ರಾಯವನ್ನು... ಸಹಿಯೊಡನೆ ಸಾಯ್‌ಗೆ ಕಳುಹಿಸಬೇಕು’ ಎಂದು ಐದು ಪುಟಗಳ ಈ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಪ್ರತಿ ಸಲ ಟ್ರಯಲ್ಸ್ ನಡೆಸುವ ಮೊದಲು ಫೆಡರೇಷನ್‌ಗಳು ಸಚಿವಾಲಯಕ್ಕೆ ಮಾಹಿತಿ ನೀಡುವುದನ್ನೂ ಕಡ್ಡಾಯಗೊಳಿಸಲಾಗಿದೆ.

ಒಲಿಂಪಿಕ್ಸ್‌, ಪ್ಯಾರಾಲಿಂಪಿಕ್ಸ್‌, ಏಷ್ಯನ್ ಗೇಮ್ಸ್‌, ಪ್ಯಾರಾ ಏಷ್ಯನ್ ಗೇಮ್ಸ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡೆಯಂತಹ ಮೆಗಾ ಕೂಟಗಳಿಗೆ ಕನಿಷ್ಠ ಎರಡು ವರ್ಷಗಳ ಮೊದಲು ಆಯ್ಕೆ ಮಾನದಂಡಗಳ ಬಗ್ಗೆ ಪ್ರಚಾರ ನೀಡಬೇಕು ಎಂದೂ ಸಚಿವಾಲಯ ಫೆಡರೇಷನ್‌ಗಳಿಗೆ ಸೂಚಿಸಿದೆ.

ದೀರ್ಘಕಾಲದಿಂದ ಈ ಬೇಡಿಕೆ ಇಡಲಾಗಿತ್ತು. ಶೂಟಿಂಗ್‌ನಂತಹ ಕ್ರೀಡೆಗಳಿಗೆ ಪ್ರಮಾಣೀಕೃತ ಆಯ್ಕೆ ವ್ಯವಸ್ಥೆಯಿಲ್ಲದಿರುವುದು ಕ್ರೀಡಾಪಟುಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಪಿಸ್ತೂಲ್‌ ಶೂಟಿಂಗ್ ಕೋಚ್‌ ಜಸ್ಪಾಲ್‌ ರಾಣಾ ಹೇಳಿದ್ದರು.

ಸಚಿವಾಲಯಕ್ಕೆ ಮಾಹಿತಿ ನೀಡದೇ, ಇಂಥ ಮೆಗಾ ಕೂಟಗಳಿಗೆ ಅಥ್ಲೀಟುಗಳು, ಕೋಚ್‌ಗಳು, ನೆರವು ಸಿಬ್ಬಂದಿ ಮತ್ತು ಅಧಿಕಾರಿಗಳ ದೀರ್ಘ ಪಟ್ಟಿ ರೂಪಿಸುವಂತಿಲ್ಲ. ಈ ಆಯ್ಕೆಗಳಿಗೆ ಸಕಾರಣ ನೀಡಬೇಕು ಎಂದೂ ತಿಳಿಸಲಾಗಿದೆ. ಪಟ್ಟಿಯನ್ನು ಕಡೇಪಕ್ಷ ತಿಂಗಳ ಮೊದಲೇ ಸಚಿವಾಲಯ/ ಸಾಯ್‌ಗೆ ಕಳಿಸಬೇಕಾಗುತ್ತದೆ.

ಅಧ್ಯಕ್ಷರಿಗೆ ಅಧಿಕಾರ: ಈ ಹಿಂದಿನ ವ್ಯವಸ್ಥೆಯಲ್ಲಿ ಆಯ್ಕೆ ಸಮಿತಿ ರಚಿಸುವ ಅಧಿಕಾರ ಫೆಡರೇಷನ್‌ಗಳಿಗೆ ಇತ್ತು. ಆದರೆ ಹೊಸದಾಗಿ ಹೊರಡಿಸಿರುವ ನಿರ್ದೇಶನವು ಫೆಡರೇಷನ್‌ನ ಅಧ್ಯಕ್ಷರಿಗೆ ಈ ಪರಮಾಧಿಕಾರ ನೀಡಿದೆ.

ಮಾದರಿ ಆಯ್ಕೆ ಸಮಿತಿ ಹೇಗಿರಬೇಕು ಎಂಬ ಬಗ್ಗೆ ಸಲಹೆಗಳನ್ನು ಹೊಂದಿರುವ ದೀರ್ಘ ಪಟ್ಟಿಯನ್ನು ಸಚಿವಾಲಯವು ರೂಪಿಸಿದೆ. ಸರ್ಕಾರದ ಹಸ್ತಕ್ಷೇಪ ಆರೋಪಗಳನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.