ADVERTISEMENT

ಐಒಸಿಗೆ ಜಿಂಬಾಬ್ವೆಯ ಕೊವೆಂಟ್ರಿ ಸಾರಥ್ಯ: ಈ ಸ್ಥಾನಕ್ಕೇರಿದ ಮೊದಲ ಮಹಿಳೆ

ಏಜೆನ್ಸೀಸ್
Published 20 ಮಾರ್ಚ್ 2025, 15:54 IST
Last Updated 20 ಮಾರ್ಚ್ 2025, 15:54 IST
<div class="paragraphs"><p>ಕ್ರಿಸ್ಟಿ ಕೊವೆಂಟ್ರಿ&nbsp;</p></div>

ಕ್ರಿಸ್ಟಿ ಕೊವೆಂಟ್ರಿ 

   

ಚಿತ್ರ: X / @iocmedia

ಕೋಸ್ಟಾ ನವಾರಿನೊ:  ಜಿಂಬಾಬ್ವೆಯ ಕ್ರಿಸ್ಟಿ ಕೊವೆಂಟ್ರಿ ಅವರು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷರಾಗಿ ಗುರುವಾರ ಆಯ್ಕೆಯಾಗಿದ್ದಾರೆ. ಜಾಗತಿಕ ಕ್ರೀಡಾ ಸಂಸ್ಥೆಯ ಈ  ಉನ್ನತ ಹುದ್ದೆಗೇರಿದ ಮೊದಲ ಮಹಿಳೆ ಮತ್ತು ಮೊದಲ ಆಫ್ರಿಕನ್ ಎಂಬ ಶ್ರೇಯಕ್ಕೆ ಅವರು ಪಾತ್ರರಾಗಿದ್ದಾರೆ.

ADVERTISEMENT

ತಮ್ಮ ದೇಶದ ಕ್ರೀಡಾ ಸಚಿವೆಯೂ ಆಗಿರುವ, 41 ವರ್ಷ ವಯಸ್ಸಿನ ಕೊವೆಂಟ್ರಿ, ಎರಡು ಬಾರಿಯ ಒಲಿಂಪಿಕ್ ಸ್ವರ್ಣ ವಿಜೇತೆ ಕೂಡ. 131 ವರ್ಷಗಳ ಇತಿಹಾಸ ಹೊಂದಿರುವ ಒಲಿಂಪಿಕ್ ಸಮಿತಿಗೆ ಅವರು ಹತ್ತನೇ ಮುಖ್ಯಸ್ಥ ರಾಗಲಿದ್ದಾರೆ. ಥಾಮಸ್‌ ಬಾಕ್‌ ಹಾಲಿ ಅಧ್ಯಕ್ಷರಾಗಿದ್ದಾರೆ.

ಏಳು ಅಭ್ಯರ್ಥಿಗಳು ಕಣದಲ್ಲಿದ್ದ ಈ ಚುನಾವಣೆಯಲ್ಲಿ ಕ್ರಿಸ್ಟಿ ಮೊದಲ ಸುತ್ತಿನಲ್ಲೇ ಅಮೋಘ ಜಯ ಗಳಿಸಿದರು. 97 ಮತಗಳಲ್ಲಿ ಬಹುಮತಕ್ಕೆ 49 ಮತಗಳನ್ನು ಗಳಿಸಬೇಕಿತ್ತು. ಕ್ರಿಸ್ಟಿ ಈ ಮತಗಳನ್ನು ಮೊದಲ ಸುತ್ತಿನಲ್ಲೇ ಪಡೆದರು.

ಕಣದಲ್ಲಿದ್ದ ಇತರ ಅಭ್ಯರ್ಥಿ ಗಳಾದ ಜೋರ್ಡಾನ್‌ನ ಪ್ರಿನ್ಸ್‌ ಫೈಸಲ್ ಅಲ್ ಹುಸೇನ್ (2 ಮತ), ಫ್ರಾನ್ಸ್‌ನ ರಾಜಕಾರಣಿ ಡೇವಿಡ್‌ ಲ್ಯಾಪರ್ಟಿಂಟ್‌ (4), ಸ್ವೀಡನ್‌– ಬ್ರಿಟನ್‌ನ ಹೂಡಿಕೆದಾರ ಜೋಹಾನ್‌ ಎಲಿಷಾ (2), ಸ್ಪೇನ್‌ನ ಕ್ರೀಡಾ ಆಡಳಿತಗಾರ ಜುವಾನ್ ಅಂಟೊನಿಯೊ ಸಮರಾಂಚ್‌ ಜೂನಿಯರ್ (28), ಬ್ರಿಟನ್‌ನ ಒಲಿಂಪಿಯನ್‌ ಸೆಬಾಸ್ಟಿಯನ್ ಕೊ (8) ಮತ್ತು ಜಪಾನಿನ ಉದ್ಯಮಿ, ಅಂತರ ರಾಷ್ಟ್ರೀಯ ಜಿಮ್ನಾಸ್ಟಿಕ್ಸ್‌ ಫೆಡರೇಷನ್‌ ಮುಖ್ಯಸ್ಥ ಮೊರಿನಾರಿ ವತಾನಬೆ (4) ಮತಗಳನ್ನು ಪಡೆದರು.

ಈ ಚುನಾವಣೆ ಪೈಪೋಟಿಯಿಂದ ಕೂಡಿದ್ದು, ಮುಂಚೂಣಿ ಯಲ್ಲಿರುವ ಅಭ್ಯರ್ಥಿ ಯಾರೆಂದು ಊಹಿಸುವುದು ಕಷ್ಟವಾಗಿತ್ತು.

ಈಜು ತಾರೆಯಾಗಿದ್ದ ಕ್ರಿಸ್ಟಿ 2004ರ ಒಲಿಂಪಿಕ್ಸ್‌ ನಲ್ಲಿ ಒಂದು ಚಿನ್ನ (200 ಮೀ. ಬ್ಯಾಕ್‌ಸ್ಟ್ರೋಕ್‌) ಸೇರಿದಂತೆ ಮೂರು ಪದಕ ಗಳನ್ನು ಕೊರಳಿ ಗೇರಿ ಸಿಕೊಂಡಿದ್ದರು. 2008ರ ಬೀಜಿಂಗ್‌ ಕ್ರೀಡೆಗಳಲ್ಲಿ ಈ ಚಿನ್ನ ಉಳಿಸಿಕೊಂಡರಲ್ಲದೇ, 4 ಬೆಳ್ಳಿ, ಒಂದು ಕಂಚಿನ ಪದಕವನ್ನೂ ಬಾಚಿಕೊಂಡಿದ್ದರು. ಇದರ ಜೊತೆಗೆ ಹಲವು ಅಂತರರಾಷ್ಟ್ರೀಯ ಕೂಟಗಳಲ್ಲಿ ಅವರು ದೇಶವನ್ನು ಪ್ರತಿನಿಧಿಸಿದ್ದಾರೆ. 2016ರಲ್ಲಿ ಕ್ರೀಡಾಜೀವನಕ್ಕೆ ವಿದಾಯ ಹೇಳಿದ ಅವರು, ಜಿಂಬಾಬ್ವೆಯ ಕ್ರೀಡಾ, ಯುವಜನ ಸೇವೆ, ಕಲೆ, ಮನರಂಜನಾ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದಾರೆ.

ಥಾಮಸ್‌ ಬಾಕ್ ಅವರ ಅಧಿಕಾರಾವಧಿ ಒಲಿಂಪಿಕ್ ದಿನ (ಜೂನ್‌ 23) ಮುಗಿಯಲಿದೆ. ಅವರು ಗರಿಷ್ಠ 12 ವರ್ಷ ಹುದ್ದೆಯಲ್ಲಿದ್ದಂತೆ ಆಗಲಿದೆ. ಬುಧವಾರ ನಡೆದ ಸಮಾರಂಭದಲ್ಲಿ ಭಾವನಾತ್ಮಕ ರಾಗಿದ್ದ ಬಾಕ್‌ ಅವರನ್ನು ಉಳಿದ ಸದಸ್ಯರು ಅವರ ಸೇವೆಗಾಗಿ ಶ್ಲಾಘಿಸಿದ್ದರು. ಅವರಿಗೆ ‘ಗೌರವ ಅಜೀವ ಅಧ್ಯಕ್ಷ’ ಎಂಬ ಪದವಿ ನೀಡಲಾಗಿತ್ತು.

ಲಾಸ್‌ ಏಂಜಲಿಸ್ ಒಲಿಂಪಿಕ್ಸ್‌ಗೆ ಬಾಕ್ಸಿಂಗ್ ಸೇರ್ಪಡೆ

ಕೋಸ್ಟಾ ನವರಿನೊ, ಗ್ರೀಸ್: ಲಾಸ್‌ ಏಂಜಲಿಸ್‌ನಲ್ಲಿ 2028ರಲ್ಲಿ ನಡೆಯಲಿರುವ ಒಲಿಂಪಿಕ್ ಕೂಟದಲ್ಲಿ ಬಾಕ್ಸಿಂಗ್ ಸೇರ್ಪಡೆ ಮಾಡಲು ಅಂತರ ರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅನುಮೋದನೆ ನೀಡಿದೆ. 

ಇಲ್ಲಿ ನಡೆದ ಐಒಸಿಯ 144ನೇ ಆಡಳಿತ ಸಮಿತಿ ಸಮ್ಮೇಳನದಲ್ಲಿ ಬಾಕ್ಸಿಂಗ್ ಸೇರ್ಪಡೆಗೆ ಸರ್ವಾನುಮತ ಲಭಿಸಿತು.  ಅಧ್ಯಕ್ಷ ಥಾಮಸ್ ಬಾಕ್ ಅವರು, ಬಾಕ್ಸಿಂಗ್ ಕ್ರೀಡೆಯನ್ನು ಒಲಿಂಪಿಕ್ಸ್‌ನಲ್ಲಿ ಸೇರ್ಪಡೆ ಮಾಡುವ ಪರವಾಗಿರುವ ಸದಸ್ಯರು ಕೈಎತ್ತಿ ಅನುಮೋದನೆ ನೀಡುವಂತೆ ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಎಲ್ಲ ಸದಸ್ಯರೂ ಮತ ಚಲಾಯಿಸಿದರು. ಯಾರೊಬ್ಬರೂ ವಿರುದ್ಧ ಮತ ಹಾಕಲಿಲ್ಲ.

‘ಒಲಿಂಪಿಕ್ಸ್‌ನಲ್ಲಿ ಬಾಕ್ಸಿಂಗ್ ಸ್ಪರ್ಧೆಯ ಅಮೋಘ ಪ್ರದರ್ಶನವನ್ನು ಕಣ್ತುಂಬಿಕೊಳ್ಳೋಣ. ಎಲ್ಲರಿಗೂ ಧನ್ಯವಾದಗಳು’ ಎಂದು ಥಾಮಸ್ ಬಾಕ್ ಹೇಳಿದರು. 

ಫೆಬ್ರುವರಿ 2022ರಲ್ಲಿ ಸಿದ್ಧಪಡಿಸಲಾಗಿದ್ದ ಕ್ರೀಡೆಗಳ ಪಟ್ಟಿಯಲ್ಲಿ ಬಾಕ್ಸಿಂಗ್ ಸೇರ್ಪಡೆಯಾಗಿ ರಲಿಲ್ಲ. ಆಗ ಐಬಿಎ (ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ)ಯ ಆಡಳಿತ ಸಮಿತಿಯಲ್ಲಿ ಹಣ ದುರ್ಬಳಕೆ ಮತ್ತಿತರ ವಿಷಯಗಳು ಕುರಿತು ವಿವಾದ ನಡೆದಿತ್ತು. ಅದರಿಂದಾಗಿ ಐಬಿಎಯನ್ನು ಐಒಸಿ ಅಮಾನತು ಮಾಡಿದ್ದರು. 

2020ರ ಟೋಕಿಯೊ ಮತ್ತು 2024ರಲ್ಲಿ ಪ್ಯಾರಿಸ್‌ ಒಲಿಂಪಿಕ್ ಕೂಟದಲ್ಲಿ ಐಒಸಿಯ ವಿಶೇಷ ಕಾರ್ಯಪಡೆಯು ಬಾಕ್ಸಿಂಗ್ ಸ್ಪರ್ಧೆಗಳ ಉಸ್ತುವಾರಿ ವಹಿಸಿತ್ತು. ನಂತರದ ಬೆಳವಣಿಗೆ ಯಲ್ಲಿ ಹೊಸ ಫೆಡರೇಷನ್ ವಿಶ್ವ ಬಾಕ್ಸಿಂಗ್ (ಡಬ್ಲ್ಯುಬಿ) ರಚನೆಯಾಗಿತ್ತು. ಇದರಡಿಯಲ್ಲಿ 80 ರಾಷ್ಟ್ರೀಯ ಫೆಡರೇಷನ್‌ಗಳಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.