ಡಿ. ಗುಕೇಶ್ ಹಾಗೂ ಗ್ಯಾರಿ ಕ್ಯಾಸ್ಪರೋವ್
ನವದೆಹಲಿ: ‘ಸದಾ ತಪ್ಪುಗಳನ್ನೇ ಹುಡುಕುವ ವಿಮರ್ಶಕರಿಗೆ ಯಾವುದೇ ಕೆಲಸವನ್ನೂ ನೀಡದೆ ಎದುರಾದ ಎಲ್ಲಾ ಅಡೆತಡೆಗಳನ್ನೂ ಮೀರಿ ಚೆಸ್ ಜಗತ್ತಿನ ಶಿಖರವನ್ನು ಈ ಭಾರತೀಯ ಏರಿದ್ದಾನೆ’ ಎಂದು ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗುವ ಮೂಲಕ ಇತಿಹಾಸ ನಿರ್ಮಿಸಿದ ಡಿ. ಗುಕೇಶ್ ಕುರಿತು ರಷ್ಯಾದ ಚೆಸ್ ದಂತಕಥೆ ಗ್ಯಾರಿ ಕ್ಯಾಸ್ಪರೋವ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಸಿಂಗಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನ ಅಂತಿಮ ಸುತ್ತಿನಲ್ಲಿ 13 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದ ಗುಕೇಶ್, 14ನೇ ಹಾಗೂ ಕೊನೆಯ ಪಂದ್ಯದಲ್ಲಿ ಚೀನಾದ 32 ವರ್ಷದ ಡಿಂಗ್ ಲಿರೆನ್ ವಿರುದ್ಧ ಜಯ ಸಾಧಿಸುವ ಮೂಲಕ ಇಡೀ ಜಗತ್ತಿನ ಹುಬ್ಬೇರುವಂತೆ ಮಾಡಿದ್ದಾರೆ.
1985ರಲ್ಲಿ ಕ್ಯಾಸ್ಪರೋವ್ ಅವರು ಅನಟೊಲಿ ಕಾರ್ಪೋ ಅವರ ವಿರುದ್ಧ ಜಯ ಸಾಧಿಸುವ ಮೂಲಕ ವಿಶ್ವ ಚೆಸ್ ಚಾಂಪಿಯನ್ ಆದ ಅತ್ಯಂತ ಕಿರಿಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆಗ ಅವರಿಗೆ 22 ವರ್ಷ ವಯಸ್ಸಾಗಿತ್ತು. ಇದೀಗ ಕ್ಯಾಸ್ಪರೋವ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಗುಕೇಶ್ ಮುರಿದಿದ್ದಾರೆ.
‘ಸಾಧನೆಯ ಸರ್ವಶ್ರೇಷ್ಠ ಶಿಖರವನ್ನು ಗುಕೇಶ್ ಏರಿದ್ದಾರೆ. ತಮ್ಮ ತಾಯಿ ಹೆಮ್ಮೆಪಡುವಂತೆ ಮಾಡಿದ್ದಾರೆ. ತಮ್ಮ ಜಯದ ಹಾದಿಯಲ್ಲಿ ಎದುರಾಳಿ ಸಹಿತ ಎಲ್ಲಾ ಅಡೆತಡೆಗಳನ್ನು ಅವರು ಮೆಟ್ಟಿ ನಿಂತಿದ್ದಾರೆ. ಈ ಸಾಧನೆಯ ಹಾದಿಯಲ್ಲಿ ಅವರ ವಯೋಮಾನವನ್ನು ಮುಖ್ಯವಾಗಿ ಗಣನೆಗೆ ತೆಗೆದುಕೊಳ್ಳಬೇಕಿದೆ’ ಎಂದಿದ್ದಾರೆ.
2023ರಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ಅವರು ವಿಶ್ವ ನಂ. 1 ಸ್ಥಾನದಲ್ಲಿ ಉಳಿಸಿಕೊಂಡ ನಂತರ ಸಾಂಪ್ರದಾಯಿಕ ಚೆಸ್ ಪದ್ಧತಿ ಕೊನೆಗೊಂಡಿತು ಎಂದು ಭಾವಿಸಿದವರಲ್ಲಿ ಕ್ಯಾಸ್ಪರೋವ್ ಅವರೂ ಒಬ್ಬರು. ಆದರೆ ನನ್ನ ಆ ಅನಿಸಿಕೆ ಗುಕೇಶ್ ಗೆಲುವಿನ ನಂತರ ಉಳಿದಿಲ್ಲ ಎಂದು 61 ವರ್ಷದ ಕ್ಯಾಸ್ಪರೋವ್ ಹೇಳಿದ್ದಾರೆ. ಸದ್ಯ ಇವರು ನ್ಯೂಯಾರ್ಕ್‌ನಲ್ಲಿ ರಾಜಕೀಯ ಕಾರ್ಯಕರ್ತರಾಗಿದ್ದಾರೆ.
‘ಇಬ್ಬರ ಆಟದ ಗುಣಮಟ್ಟ ತುಸು ಎತ್ತರವೇ ಇತ್ತು. ಹಿಂದಿನ ಪಂದ್ಯಗಳಿಗೆ ಹೋಲಿಸಿದರೆ ಸಮಬಲವಿತ್ತು. ಡಿಂಗ್ ಅವರು ಉತ್ತಮ ಪ್ರತಿರೋಧ ತೋರಿದರು. ವಿಶ್ವ ಚಾಂಪಿಯನ್‌ಶಿಪ್ ಆಗಿರಲಿ ಅಥವಾ ಚಾಂಪಿಯನ್ ಒಬ್ಬ ಆಡುತ್ತಿರಲಿ ತಪ್ಪುಗಳಾಗುವುದು ಸಹಜ. ಕಾರ್ಲ್ಸನ್ ಮತ್ತು ಆನಂದ್ ನಡುವೆ 2014ರಲ್ಲಿ ನಡೆದ ಪಂದ್ಯದಲ್ಲೂ ಡಬಲ್ ಲೋಪಗಳಾಗಿದ್ದವು’ ಎಂದು ಕ್ಯಾಸ್ಪರೋವ್ ನೆನಪಿಸಿಕೊಂಡಿದ್ದಾರೆ.
‘ಗುಕೇಶ್ ಸಾಕಷ್ಟು ಪೂರ್ವತಯಾರಿಯೊಂದಿಗೆ ಆಟವಾಡಿದರು. ಹೀಗಾಗಿ ಅದ್ಭುತ ಆಟದ ಮೂಲಕ ಗೆಲುವು ತಮ್ಮದಾಗಿಸಿಕೊಂಡರು. ಅವರ ವಿಜಯದ ಕಿರೀಟವು ಭಾರತದ ಪಾಲಿಗೆ ಸುವರ್ಣ ವರ್ಷವನ್ನು ತರಲಿದೆ. ವಿಶಿ (ವಿಶ್ವನಾಥನ್ ಆನಂದ್) ಅವರ ನಂತರದ ಹಂತದ ಕ್ರೀಡಾಪಟುಗಳು ಪ್ರವರ್ಧಮಾನಕ್ಕೆ ಬರುತ್ತಿರುವುದು ಉತ್ತಮ ಸಂಗತಿ’ ಎಂದಿದ್ದಾರೆ.
‘ಭಾರತ ಎಂಬುದು ಅದ್ಭುತ ಪ್ರತಿಭೆಗಳಿರುವ ರಾಷ್ಟ್ರ. ಇಲ್ಲಿ ಚೆಸ್‌ಗೆ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳಲ್ಲೂ ಭವಿಷ್ಯ ಉಜ್ವಲವಾಗಿದೆ. ಈಗಿನ ಗುರಿ ತಲುಪಲಾಗಿದೆ. ಮುಂದೆ ಗುರಿಯನ್ನೇ ಹೆಚ್ಚಿಸಬೇಕಿದೆ. ಆ ಮೂಲಕ ಹೊಸ ಸಾಧನೆಗಳು ಹಾಗೂ ದಾಖಲೆಗಳು ನಿರ್ಮಾಣವಾಗಬೇಕಿವೆ. ಪ್ರತಿಯೊಬ್ಬರಿಗೂ ಅಭಿನಂದನೆಗಳು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.