ADVERTISEMENT

'ಚಕ್ ದೇ ಇಂಡಿಯಾ'; ಹಾಕಿ ಇಂಡಿಯಾದ ಯಶಸ್ಸಿನ ಹಿಂದಿನ ರೂವಾರಿ ಯಾರು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಆಗಸ್ಟ್ 2021, 7:46 IST
Last Updated 2 ಆಗಸ್ಟ್ 2021, 7:46 IST
ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ (ಎಡಬದಿಯಲ್ಲಿ) ಮತ್ತು ಪುರುಷ ಹಾಕಿ ತಂಡದ ನಾಯಕ ಮನಪ್ರೀತ್ ಸಿಂಗ್ (ಬಲಭಾಗದಲ್ಲಿ) ಜೊತೆಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್.
ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ (ಎಡಬದಿಯಲ್ಲಿ) ಮತ್ತು ಪುರುಷ ಹಾಕಿ ತಂಡದ ನಾಯಕ ಮನಪ್ರೀತ್ ಸಿಂಗ್ (ಬಲಭಾಗದಲ್ಲಿ) ಜೊತೆಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್.   

ನವದೆಹಲಿ: ಯಾವುದೇ ಕ್ರೀಡೆಯ ಏಳಿಗೆಯಲ್ಲಿ ಹಲವು ಅಂಶಗಳು ಅಡಗಿರುತ್ತದೆ. ದೇಶದಲ್ಲಿ ಕ್ರಿಕೆಟ್‌ಗೆ ದೊರಕುವ ಜನಪ್ರಿಯತೆ, ಪ್ರಾಯೋಜಕತ್ವ ಬೇರೆ ಯಾವ ಕ್ರೀಡೆಗೂ ದೊರಕುವುದಿಲ್ಲ ಎಂಬುದು ಅಷ್ಟೇ ಸತ್ಯ. ಹಾಗಿರುವಾಗ ಭಾರತದ ಪುರುಷ ಹಾಗೂ ಮಹಿಳಾ ಹಾಕಿ ತಂಡಗಳ ಇತ್ತೀಚಿನ ಪ್ರಗತಿಯಲ್ಲಿ ಒಡಿಶಾ ಸರ್ಕಾರದ ಪಾತ್ರ ಅಷ್ಟಿಷ್ಟಲ್ಲ.

ಜಪಾನ್‌ನ ಟೋಕಿಯೊದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ಕಳೆದ ಐದು ದಶಕಗಳಲ್ಲೇ ಭಾರತದ ಪುರುಷರ ಹಾಗೂ ಮಹಿಳಾ ಹಾಕಿ ತಂಡಗಳು ಸೆಮಿಫೈನಲ್ ಪ್ರವೇಶಿಸಿದ ಐತಿಹಾಸಿಕ ಸಾಧನೆ ಮಾಡಿವೆ.

ವಿಶ್ವದರ್ಜೆಯ ಮೂಲಸೌಕರ್ಯ ವೃದ್ಧಿ, ಆಟಗಾರರಿಗೆ ಬೇಕಾದ ಪ್ರೋತ್ಸಾಹ ನೀಡಿದಾಗಲೇ ಕ್ರೀಡೆ ಅಭಿವೃದ್ಧಿಯಾಗಲು ಸಾಧ್ಯ. ಆ ಮೂಲಕ ದೇಶದ ಕ್ರೀಡಾಪಟುಗಳು ಜಗತ್ತಿನಲ್ಲಿ ಉನ್ನತಿ ಪಡೆಯುತ್ತಾರೆ.

ADVERTISEMENT

ಈ ನಿಟ್ಟಿನಲ್ಲಿ 'ಮಾತು ಕಡಿಮೆ ಕೆಲಸ ಹೆಚ್ಚು' ಎಂಬ ತತ್ವವನ್ನು ಪಾಲಿಸಿಕೊಂಡು ಬಂದಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್, ಕಳೆದ ಕೆಲವು ವರ್ಷಗಳಲ್ಲಿ ಹಾಕಿ ಕ್ರೀಡೆಗೆ ನೀಡಿರುವ ಬೆಂಬಲ ನಿಜಕ್ಕೂ ಮೆಚ್ಚುವಂತದ್ದು. ಹಾಗಾಗಿ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿ ಕ್ರೀಡೆಯ ಶ್ರೇಯಸ್ಸು ಒಡಿಶಾ ಮುಖ್ಯಮಂತ್ರಿ ಹಾಗೂ ಅವರ ಸರ್ಕಾರಕ್ಕೂ ಸಲ್ಲಬೇಕು.

ಇವೆಲ್ಲವೂ ಆರಂಭವಾಗಿವಾಗಿರುವುದು 2018ರಲ್ಲಿ. ಅಂದು ಸಹಾರಾ ಇಂಡಿಯಾದಿಂದ ಭಾರತದ ಪುರುಷ ಹಾಗೂ ಮಹಿಳಾ ಹಾಕಿ ತಂಡದ ಪ್ರಾಯೋಜಕತ್ವವನ್ನು ವಹಿಸಿದ ಒಡಿಶಾ, ಬೇರೆ ಯಾವ ರಾಜ್ಯವೂ ಯೋಚಿಸದ ರೀತಿಯಲ್ಲಿ ರಾಷ್ಟ್ರೀಯ ಕ್ರೀಡೆಗೆ ಉತ್ತೇಜನವನ್ನು ನೀಡಿತ್ತು.

ಮುಂದಿನ ಐದು ವರ್ಷಗಳಿಗೆ ಅಂದಾಜು 150 ಕೋಟಿ ರೂಪಾಯಿಗಳಿಗೆ ಪ್ರಾಯೋಜಕತ್ವ ಒಪ್ಪಂದಕ್ಕೆ ಸಹಿ ಹಾಕಿತ್ತು. ಒಡಿಶಾ ಸರ್ಕಾರವು ಹಾಕಿ ಇಂಡಿಯಾ ಜೊತೆ ಸೇರಿಕೊಂಡು ಭುವನೇಶ್ವರದಲ್ಲಿ ಪ್ರಮುಖ ಟೂರ್ನಿಗಳನ್ನು ಆಯೋಜಿಸುವ ಮೂಲಕ ಮತ್ತೆ ಹಾಕಿಯಲ್ಲಿ ವಿಶ್ವದ ಗಮನ ಸೆಳೆಯಿತು. ಇದರಲ್ಲಿ ಪುರುಷರ ವಿಶ್ವಕಪ್, ವಿಶ್ವ ಲೀಗ್, ಪ್ರೊ-ಲೀಗ್, ಒಲಿಂಪಿಕ್ ಅರ್ಹತಾ ಪಂದ್ಯಾವಳಿಗಳು ಸೇರಿವೆ.

ಇಂದು ಭಾರತದ ಪುರುಷರ ಹಾಗೂ ಮಹಿಳಾ ತಂಡವು ಒಲಿಂಪಿಕ್ಸ್‌ನಲ್ಲಿ ಅಂತಿಮ ನಾಲ್ಕರ ಘಟ್ಟವನ್ನು ತಲುಪಿದಾಗ ಅಭಿನಂದಿಸಿದ ಮುಂಚೂಣಿಯ ಗಣ್ಯರ ಸಾಲಿನಲ್ಲಿ ಒಡಿಶಾ ಮುಖ್ಯಮಂತ್ರಿ ಓರ್ವರಾಗಿದ್ದಾರೆ. ಅಲ್ಲದೆ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಯಶಸ್ಸು ತರಲಿ ಎಂದು ಆಶಿಸಿದ್ದಾರೆ.

ಹಾಕಿ ಕ್ರೀಡೆಯಲ್ಲಿ ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದ ಅದರಲ್ಲೂ ಪಂಜಾಬ್‌ನಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸಿದೆ. ಅಲ್ಲದೆ ಭಾರತ ತಂಡಕ್ಕೆ ಅಪಾರ ಕೊಡುಗೆಯನ್ನು ಸಲ್ಲಿಸಿದೆ. ಹಾಗಿರುವಾಗ ಒಡಿಶಾ ಆರ್ಥಿಕವಾಗಿ ಸದೃಢವಾಗಿರದಿದ್ದರೂ ದೇಶದ ಹಾಕಿ ಕ್ರೀಡೆಯನ್ನು ಪ್ರೋತ್ಸಾಹಿಸಲು ಒಡಿಶಾ ಸರ್ಕಾರ ಕೈಗೊಂಡಿರುವ ಕ್ರಮವು ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ:

ಪುರುಷರ ಹಾಕಿ ತಂಡದ ಉಪನಾಯಕ ಬೀರೇಂದ್ರ ಲಾಕ್ರಾ, ಮಹಿಳಾ ತಂಡದಲ್ಲಿ ದೀಪ್ ಗ್ರೇಸ್ ಎಕ್ಕಾ ಸೇರಿದಂತೆ ಪ್ರಮುಖ ಆಟಗಾರರು ಒಡಿಶಾ ಮೂಲದವರಾಗಿದ್ದಾರೆ. ಆ ಮೂಲಕವೂ ದೇಶದ ಹಾಕಿ ಕ್ರೀಡೆಯಲ್ಲಿ ಒಡಿಶಾ ಮಹತ್ತರ ಪಾತ್ರ ವಹಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.