ಜೆರ್ರಿ ಲೀ ಹಾಲ್ನೆಸ್ ಅವರೊಂದಿಗೆ ಭಾರತದ ಅಧಿಕಾರಿ
ಎಕ್ಸ್ ಚಿತ್ರ
ನವದೆಹಲಿ: ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್‌ನಲ್ಲಿ ಚಿನ್ನದ ಪದಕ ವಿಜೇತರಾದ ಎಲೇನ್ ಥಾಂಪ್ಸನ್ ಹಾಗೂ ನೆಸ್ಟಾ ಕಾರ್ಟರ್ ಅವರ ತರಬೇತುದಾರ ಜೆರ್ರಿ ಲೀ ಹಾಲ್ನೆಸ್ ಅವರು ಭಾರತದ 400ಮೀ ವನಿತೆಯರ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.
ಕೇರಳದ ತಿರುವನಂತರಪುರದಲ್ಲಿರುವ ಲಕ್ಷ್ಮಿಬಾಯಿ ರಾಷ್ಟ್ರೀಯ ದೈಹಿಕ ಶಿಕ್ಷಣ ಕಾಲೇಜಿಗೆ ಇತ್ತೀಚೆಗೆ ಭೇಟಿ ನೀಡಿದ ಹಾಲ್ನೆಸ್ ಅವರು ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್ (NCoE) ಸೇರಿದರು.
‘ಲೆವಲ್ 5 ಕೋಚ್ ಆದ ಹಾಲ್ನೆಸ್ ಅವರು ವಿಶ್ವದರ್ಜೆಯ ತರಬೇತುದಾರರಾಗಿದ್ದು, NCoE ಸೇರಿದ್ದಾರೆ. ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಜಯಿಸಿದ ಜಮೈಕಾದ ಅತ್ಯುತ್ತಮ ಕ್ರೀಡಾಪಟುಗಳಿಗೆ ತರಬೇತಿ ನೀಡಿದ್ದಾರೆ. ತಿರುವನಂತಪುರದಲ್ಲಿರುವ ಕೇಂದ್ರದಲ್ಲಿ ತರಬೇತಿ ಪಡೆಯಲಿರುವ 400ಮೀ. ಹಾಗೂ 400ಮೀ. ಹರ್ಡಲ್ಸ್‌ನಲ್ಲಿ ಆಡಲಿರುವ ವನಿತೆಯರಿಗೆ ಇವರು ತರಬೇತಿ ನೀಡಲಿದ್ದಾರೆ’ ಎಂದು ಭಾರತೀಯ ಅಥ್ಲೆಟಿಕ್ಸ್‌ನ ಮುಖ್ಯ ಕೋಚ್ ರಾಧಾಕೃಷ್ಣನ್ ನಾಯರ್ ತಿಳಿಸಿದ್ದಾರೆ.
65 ವರ್ಷದ ಹಾಲ್ನೆಸ್ ಅವರ ಗುತ್ತಿಗೆಯು 2026ರವರೆಗೂ ಇದೆ. ನಂತರ ಇದನ್ನು ವಿಸ್ತರಿಸಲು ಅವಕಾಶವಿದೆ. ಹಿಮಾ ದಾಸ್, ಶುಭಾ ವೆಂಕಟೇಸನ್ ರುಪಾಲ್, ಕಿರಣ್ ಪಹಲ್ ಹಾಗೂ ವಿದ್ಯಾ ರಾಮರಾಜ್ ಅವರಂಥ ಅಥ್ಲೀಟ್‌ಗಳು ಹಾಲ್ನೆಸ್ ಅವರಿಂದ ತರಬೇತಿ ಪಡೆಯಲಿದ್ದಾರೆ. ಭಾರತದ ವನಿತೆಯರ ತಂಡಕ್ಕೆ ಈವರೆಗೂ ಸ್ತಾಶುಕ್ ವಲೇರಿ ತರಬೇತುದಾರರಾಗಿದ್ದರು.
‘ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ 400ಮೀ. ವನಿತೆಯರ ತಂಡ ಉತ್ತಮ ಸಾಧನೆ ತೋರಿಲ್ಲ. ಭಾರತೀಯ ಕ್ರೀಡಾ ಪ್ರಾಧಿಕಾರವು ವಲೇರಿ ಅವರ ಗುತ್ತಿಗೆ ನವೀಕರಣಕ್ಕೆ ನಿರಾಕರಿಸಿತು ಮತ್ತು ಹೊಸ ಕೋಚ್ ನೇಮಕಕ್ಕೆ ನಿರ್ಧರಿಸಿತ್ತು. ಹೀಗಾಗಿ ಪ್ಯಾರಿಸ್ ಒಲಿಂಪಿಕ್ಸ್ ನಂತರ ವಲೇರಿ ನಿರ್ಗಮಿಸಿದ್ದರು. 2025ರಲ್ಲಿ ಏಷ್ಯನ್ ಕ್ರೀಡಾಕೂಟ, ವಿಶ್ವ ರಿಲೇ ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗಳು ಇವೆ. ಇಂಥ ಸಂದರ್ಭದಲ್ಲಿ ವಿಶ್ವ ದರ್ಜೆಯ ತರಬೇತುದಾರ ಹಾಲ್ನೆಸ್ ಅವರು ತಂಡ ಸೇರಿರುವುದು ಉತ್ಸಾಹವನ್ನು ಇಮ್ಮಡಿಗೊಳಿಸಿದೆ’ ಎಂದು ನಾಯರ್ ಹೇಳಿದ್ದಾರೆ.
ಅಥ್ಲೆಟಿಕ್ಸ್‌ನಲ್ಲಿ ಹಾಲ್ನೆಸ್ ಅವರ ಸೇರ್ಪಡೆಯ ಬೆನ್ನಲ್ಲೇ, ಜಾವೆಲಿನ್ ಎಸೆತ ತಂಡಕ್ಕೆ ಕೋಚ್ ಆಗಿ ರಷ್ಯಾದ ಸರ್ಗಿ ಮಕರೋವ್ ಅಲೆಕ್ಸಾಂಡ್ರೊವಿಚ್ ಸೇರಿದ್ದಾರೆ. ಎರಡು ಒಲಿಂಪಿಕ್ಸ್ ಪದಕ ಪಡೆದಿರುವ ಭಾರತದ ನೀರಜ್ ಚೋಪ್ರಾ ಅವರು ತಮ್ಮ ಕೋಚ್ ಜಾನ್ ಝೆಲೆಂಝ್ಸಿ ಅವರಿಂದಲೇ ತರಬೇತಿ ಪಡೆಯಲಿದ್ದಾರೆ ಎಂದೆನ್ನಲಾಗಿದೆ. ಝೆಲೆಂಝ್ಸಿ ಅವರು ಒಲಿಂಪಿಕ್ಸ್‌ನಲ್ಲಿ ಮೂರು ಬಾರಿ ಚಿನ್ನದ ಪದಕ ಗೆದ್ದಿದ್ದಾರೆ. ಜತೆಗೆ ವಿಶ್ವ ದಾಖಲೆ ಹೊಂದಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಹಾಲ್ನೆಸ್ ಅವರು ಜಮೈಕಾದ ತರಬೇತುದಾರರ ತಂಡದಲ್ಲಿದ್ದರು. ಎಲೇನ್ ಥಾಂಪ್ಸನ್, ನೆಸ್ಟಾ ಕಾರ್ಟರ್, ಶೆರೋನ್ ಸಿಂಪ್ಸನ್ ಹಾಗೂ ನಟೊಯಾ ಗೋಲ್ ಅವರಿಗೆ ತರಬೇತಿ ನೀಡಿದ್ದಾರೆ. ಥಾಂಪ್ಸನ್ ಅವರು ಕ್ರಮವಾಗಿ 2016 ಹಾಗೂ 2020ರ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 100ಮೀ. ಹಾಗೂ 200ಮೀ. ಓಟದಲ್ಲಿ ಚಿನ್ನ ಗೆದ್ದಿದ್ದಾರೆ. 2022ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 100ಮೀ ಓಟದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಹಾಲ್ನೆಸ್ ಅವರು ಸಂಯುಕ್ತ ಅರಬ್ ಎಮಿರೇಟ್ಸ್ ಹಾಗೂ ಕೇಮನ್ ಐಲ್ಯಾಂಡ್ ತಂಡಕ್ಕೂ ತರಬೇತುದಾರರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.