ADVERTISEMENT

ಕ್ಯಾಂಡಿಡೇಟ್ಸ್ ಟೂರ್ನಿಗೆ ಭಾರತದ ಗ್ರ್ಯಾಂಡ್‌ಮಾಸ್ಟರ್‌ ಪ್ರಜ್ಞಾನಂದ ಅರ್ಹತೆ

ಪಿಟಿಐ
Published 9 ಡಿಸೆಂಬರ್ 2025, 14:26 IST
Last Updated 9 ಡಿಸೆಂಬರ್ 2025, 14:26 IST
ಪ್ರಜ್ಞಾನಂದ
ಪ್ರಜ್ಞಾನಂದ   

ಬೆಂಗಳೂರು: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಆರ್‌.ಪ್ರಜ್ಞಾನಂದ ಅವರು ಮುಂದಿನ ಮಾರ್ಚ್‌–ಏಪ್ರಿಲ್‌ನಲ್ಲಿ ನಡೆಯಲಿರುವ ಫಿಡೆ ಕ್ಯಾಂಡಿಡೇಟ್ಸ್‌ ಟೂರ್ನಿಗೆ ಅರ್ಹತೆ ಪಡೆದಿದ್ದಾರೆ. ಚೆನ್ನೈನ ಆಟಗಾರ ಓಪನ್ ವಿಭಾಗದಲ್ಲಿ 2026ರ ಟೂರ್ನಿಗೆ ಅರ್ಹತೆ ಪಡೆದ ಭಾರತದ ಏಕಮಾತ್ರ ಆಟಗಾರ ಎನಿಸಿದ್ದಾರೆ.

2025ರ ಫಿಡೆ ಸರ್ಕೀಟ್‌ ಟೂರ್ನಿಗಳಲ್ಲಿ ತೋರಿದ ಉತ್ತಮ ಸಾಧನೆಯಿಂದಾಗಿ 20 ವರ್ಷ ವಯಸ್ಸಿನ ಪ್ರಜ್ಞಾನಂದ ಅವರು ಸೈಪ್ರಸ್‌ನಲ್ಲಿ ನಡೆಯಲಿರುವ ಕ್ಯಾಂಡಿಡೇಟ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ. ವಿವಿಧ ಮಾನದಂಡಗಳಿಂದ ಆಯ್ಕೆಯಾಗುವ ಎಂಟು ಮಂದಿ ಮಾತ್ರ ಈ ಟೂರ್ನಿಯಲ್ಲಿ ಆಡುವ ಅವಕಾಶ ಪಡೆಯುತ್ತಾರೆ.

ಈ ವರ್ಷ ನಾಲ್ಕು ಪ್ರಮುಖ ಟೂರ್ನಿಗಳಲ್ಲಿ (ಟಾಟಾ ಸ್ಟೀಲ್ ಮಾಸ್ಟರ್ಸ್‌, ಸೂಪರ್‌ಬೆಟ್‌, ಉಝ್‌ಚೆಸ್‌ ಕಪ್‌, ಲಂಡನ್‌ ಚೆಸ್‌ ಕ್ಲಾಸಿಕ್‌) ಗೆದ್ದಿರುವ ಪ್ರಜ್ಞಾನಂದ ಎರಡರಲ್ಲಿ (ಸ್ಟೆಪಾನ್‌ ಅವಗ್ಯಾನ್‌ ಮೆಮೋರಿಯಲ್ ಮತ್ತು 12ನೇ ಸಿಂಕ್‌ಫೀಲ್ಡ್‌ ಕಪ್‌ ಟೂರ್ನಿ) ರನ್ನರ್ ಅಪ್‌ ಆಗಿದ್ದರು. ಅವರು 115.17 ಫಿಡೆ ಸರ್ಕೀಟ್‌ ಪಾಯಿಂಟ್ಸ್‌ ಪಡೆದಿದ್ದಾರೆ. ಅವರ ಸಮೀಪದ ಎದುರಾಳಿಯಾದ ಉಜ್ಬೇಕಿಸ್ತಾನದ ನಾದಿರ್ಬೆಕ್ ಅಬ್ದುಸತ್ತಾರೋವ್ 71.61 ಪಾಯಿಂಟ್ಸ್ ಗಳಿಸಿದ್ದು, ಪ್ರಜ್ಞಾನಂದ ಅವರನ್ನು ಹಿಂದೆಹಾಕುವುದು ಸಾಧ್ಯವಿರಲಿಲ್ಲ. ಹೀಗಾಗಿ ಕ್ಯಾಂಡಿಡೇಟ್ಸ್‌ಗೆ ಏಳನೇಯವರಾಗಿ ಅರ್ಹತೆ ಪಡೆದರು.

ADVERTISEMENT

ಈ ಬಾರಿಯ ಕ್ಯಾಂಡಿಡೇಟ್ಸ್‌ ಟೂರ್ನಿಯು ದಾಖಲೆಯ 10 ಲಕ್ಷ ಯುರೊ (ಸುಮಾರು ₹10.50 ಕೋಟಿ) ಬಹುಮಾನ ಹಣ ಹೊಂದಿದೆ. ಆಯ್ಕೆಯಾಗಿರುವ ಏಳು ಮಂದಿಯ ಹೆಸರನ್ನು ಫಿಡೆ ಎಕ್ಸ್‌ನಲ್ಲಿ ಪ್ರಕಟಿಸಿದೆ.

ಆಯ್ಕೆಯಾಗಿರುವ ಏಳು ಮಂದಿಯ ವಿವರ:

1. ಅಮೆರಿಕದ ಫ್ಯಾಬಿಯಾನೊ ಕರುವಾನ (2024ರ ಫಿಡೆ ಸರ್ಕೀಟ್‌ನಲ್ಲಿ ಅಗ್ರಸ್ಥಾನ)

2. ನೆದರ್ಲೆಂಡ್ಸ್‌ನ ಅನೀಶ್‌ ಗಿರಿ (ಫಿಡೆ ಗ್ರ್ಯಾಂಡ್‌ಸ್ವಿಸ್‌ ವಿಜೇತ)

3. ಜರ್ಮನಿಯ ಮಥಾಯಸ್‌ ಬ್ಲೂಬಮ್ (ಫಿಡೆ ಗ್ರ್ಯಾಂಡ್‌ ಸ್ವಿಸ್‌ ರನ್ನರ್ ಅಪ್‌)

4. ಉಜ್ಬೇಕಿಸ್ತಾನದ ಜಾವೊಖಿರ್ ಸಿಂಧರೋವ್ (ವಿಶ್ವಕಪ್ ಓಪನ್ ವಿಭಾಗ ವಿಜೇತ)

5. ಚೀನಾದ ವೀ ಯಿ (ವಿಶ್ವಕಪ್ ರನ್ನರ್ ಅಪ್‌)

6. ರಷ್ಯಾದ ಆ್ಯಂಡ್ರಿ ಇಸಿಪೆಂಕೊ (ವಿಶ್ವಕಪ್ ಮೂರನೇ ಸ್ಥಾನ)

7. ಭಾರತದ ಪ್ರಜ್ಞಾನಂದ (2025ರ ಫಿಡೆ ಸರ್ಕೀಟ್‌ ಅಗ್ರಸ್ಥಾನ)

2025ರ ಆಗಸ್ಟ್ 1 ರಿಂದ 2026ರ ಜನವರಿ 1ರವರೆಗಿನ ಆರು ತಿಂಗಳ ಅವಧಿಯಲ್ಲಿ ಗರಿಷ್ಠ ಸರಾಸರಿ ರೇಟಿಂಗ್ ಗಳಿಸುವ ಆಟಗಾರ ಎಂಟನೇ ಆಟಗಾರನಾಗಿ ಅರ್ಹತೆ ಪಡೆಯಲಿದ್ದಾರೆ.

ಭಾರತದ ಮೂವರು: ಮಹಿಳೆಯರ ಕ್ಯಾಂಡಿಡೇಟ್ಸ್‌ ಮಹಿಳೆಯರ ವಿಭಾಗದಲ್ಲಿ ಈ ಬಾರಿ ಭಾರತದಿಂದ ಮೂವರು ಕಣಕ್ಕಿಳಿಯಲಿದ್ದಾರೆ. ವಿಶ್ವಕಪ್‌ ಗೆದ್ದ ಆಧಾರದಲ್ಲಿ ದಿವ್ಯಾ ದೇಶಮುಖ್ ಮತ್ತು ರನ್ನರ್ ಅಪ್ ಆಗಿದ್ದ ಕೋನೇರು ಹಂಪಿ ಅರ್ಹತೆ ಪಡೆದಿದ್ದಾರೆ. ಇವರ ಜೊತೆಗೆ ಫಿಡೆ ಮಹಿಳಾ ಗ್ರ್ಯಾಂಡ್‌ ಸ್ವಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಆಧಾರದಲ್ಲಿ ವೈಶಾಲಿ ಆರ್‌. (ಪ್ರಜ್ಞಾನಂದ ಅವರ ಅಕ್ಕ) ಕೂಡ ಅರ್ಹತೆ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.