ಬೆಂಗಳೂರು: ಹೊಸ ಕೋಚ್, ಹೊಸ ಆಟಗಾರರು ಮತ್ತು ಹೊಸ ಹುರುಪಿನೊಂದಿಗೆ ಬೆಂಗಳೂರು ಬುಲ್ಸ್ ತಂಡವು 12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. 2018ರ ಚಾಂಪಿಯನ್ ತಂಡ ಇದೇ 29ರಂದು ಪುಣೇರಿ ಪಲ್ಟನ್ ವಿರುದ್ಧ ಅಭಿಯಾನ ಆರಂಭಿಸಲಿದೆ.
2019ರ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ಮತ್ತು 2023ರ ಚಾಂಪಿಯನ್ ಪುಣೇರಿ ಪಲ್ಟನ್ ತಂಡಗಳ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕನ್ನಡಿಗ ಬಿ.ಸಿ. ರಮೇಶ್ ಆರು ವರ್ಷಗಳ ಬಳಿಕ ತನ್ನ ತವರು ಬೆಂಗಳೂರು ತಂಡಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅನುಭವಿ ಕೋಚ್ ರಮೇಶ್ ಗರಡಿಯಲ್ಲಿ ಪಳಗುತ್ತಿರುವ ಬುಲ್ಸ್ ತಂಡವು ಎರಡನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.
ಬುಲ್ಸ್ ತಂಡದ ಸಂಯೋಜನೆ, ತಂತ್ರಗಾರಿಕೆ, ಆಟಗಾರರ ಸಿದ್ಧತೆ ಕುರಿತು ಮಂಗಳವಾರ ವರ್ಚುವಲ್ ಮಾಧ್ಯಮ ಸಂವಾದದಲ್ಲಿ ರಮೇಶ್ ಮುಕ್ತವಾಗಿ ಮಾತನಾಡಿದರು.
‘ಕಳೆದ ಎರಡು ಆವೃತ್ತಿಗಳಲ್ಲಿ ಬೆಂಗಳೂರು ತಂಡದ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಹೀಗಾಗಿ, ಅನುಭವಿ ಆಟಗಾರರನ್ನು ಕೈಬಿಟ್ಟು, ಹೊಸ ಪ್ರತಿಭೆಗಳ ಮೇಲೆ ವಿಶ್ವಾಸವಿಟ್ಟು ತಂಡವನ್ನು ಸಂಯೋಜಿಸಲಾಗಿದೆ. 23 ವರ್ಷ ದಾಟಿದವರು ನಮ್ಮ ತಂಡದಲ್ಲಿಲ್ಲ. ಪ್ರತಿ ಆವೃತ್ತಿಯಲ್ಲಿ ಅನುಭವಿಗಳಿಗಿಂತ ಹೊಸ ಆಟಗಾರರೇ ಮಿಂಚುತ್ತಿದ್ದಾರೆ. ಹೀಗಾಗಿ, ಬಿಸಿರಕ್ತದ ತರುಣರು ನನ್ನ ನಿರೀಕ್ಷೆ ಹುಸಿ ಮಾಡುವುದಿಲ್ಲ’ ಎಂದು ರಮೇಶ್ ವಿಶ್ವಾಸ ವ್ಯಕ್ತಪಡಿಸಿದರು.
‘ಇತರ ವಿಭಾಗಕ್ಕೆ ಹೋಲಿಸಿದರೆ ಬುಲ್ಸ್ ತಂಡದ ಟ್ಯಾಕಲ್ ವಿಭಾಗ ಬಲಿಷ್ಠವಾಗಿದೆ. ಅಂಕುಶ್ ರಾಥಿ, ಲಕ್ಕಿಕುಮಾರ್, ಸಂಜಯ್ ಮುಂತಾದ ಯಶಸ್ವಿ ಡಿಫೆಂಡರ್‌ಗಳು ಪಂದ್ಯದ ಸ್ಥಿತಿಗತಿಯನ್ನೇ ಬದಲಾಯಿಸುವ ತಾಕತ್ತು ಹೊಂದಿದ್ದಾರೆ. ರೈಡಿಂಗ್ ವಿಭಾಗದಲ್ಲಿ ಅನುಭವಿಗಳ ಕೊರತೆ ಇರುವುದು ನಿಜ. ಆದರೆ, ಉದಯೋನ್ಮುಖ ರೇಡರ್‌ಗಳಾದ ಆಕಾಶ್ ಶಿಂಧೆ, ಆಶಿಶ್ ಮಲಿಕ್, ಗಣೇಶ್, ಪಂಕಜ್ ಮೇಲೆ ಭರವಸೆಯಿದೆ. ಕಾರ್ನರ್ ಮತ್ತು ಕವರ್ಸ್‌ನಲ್ಲೂ ನಮ್ಮ ತಂಡ ಪ್ರಬಲವಾಗಿದೆ’ ಎಂದರು.
‘ಲೀಗ್ ಆರಂಭವಾದ ಬಳಿಕ ಬಹುತೇಕ ಕೋಚ್‌ಗಳು ಆಟಗಾರರಿಗೆ ವಿರಾಮ ನೀಡದೆ ತರಬೇತಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದರಿಂದಲೇ ಆಟಗಾರರು ಗಾಯಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ, ನಮ್ಮ ತಂಡದಲ್ಲಿ ಕೌಶಲ ತರಬೇತಿಗೆ ಒತ್ತು ನೀಡುತ್ತೇವೆ. ಆಟಗಾರನಿಗೆ ಫಿಟ್‌ನೆಸ್ ಜೊತೆಗೆ ಏಕಾಗ್ರತೆ, ವಿಶ್ರಾಂತಿಯೂ ಬೇಕಾಗುತ್ತದೆ. ದೈಹಿಕ ಶ್ರಮ ಬಯಸುವ ಈ ಕ್ರೀಡೆಯಲ್ಲಿ ಆಟಗಾರರು ಗಾಯಗೊಳ್ಳುವುದು ಸಹಜ. ಆದರೆ, ಅದು ಕನಿಷ್ಠ ಪ್ರಮಾಣದಲ್ಲಿ ಇರಬೇಕು ಎಂಬುದು ನಮ್ಮ ಯೋಚನೆ’ ಎಂದು ಹೇಳಿದರು.
‘ಬೆಂಗಳೂರಿಗೆ ಪಂದ್ಯದ ಆತಿಥ್ಯ ಸಿಗದಿರುವುದು ಕೊಂಚ ನಿರಾಸೆ ಮೂಡಿಸಿದೆ. ಆದರೆ, ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಪಂದ್ಯದಿಂದ ಪಂದ್ಯಕ್ಕೆ ತಂತ್ರಗಾರಿಕೆ ಬದಲಾಯಿಸಿಕೊಂಡು ಗೆಲುವು ಸಾಧಿಸುವತ್ತ ಗಮನ ಹರಿಸುತ್ತಿದ್ದೇವೆ. ಅಂತಿಮವಾಗಿ ಫಲಿತಾಂಶವೇ ನಿರ್ಣಾಯಕವಾಗುತ್ತದೆ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಈ ಬಾರಿ ತಂಡವು ಉತ್ತಮ ಪ್ರದರ್ಶನ ನೀಡಲಿದೆ’ ಎಂದು ಭರವಸೆಯ ಮಾತುಗಳನ್ನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.