ವಿಶಾಖಪಟ್ಟಣ: ಆರಂಭದ ತೀವ್ರ ಹಿನ್ನಡೆಯಿಂದ ಒತ್ತಡಕ್ಕೆ ಸಿಲುಕಿದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ ತನ್ನ ಎರಡನೇ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಎದುರು ಏಳು ಅಂಕಗಳಿಂದ ಸೋಲನುಭವಿಸಿತು. ಇದು ಬೆಂಗಳೂರಿನ ತಂಡಕ್ಕೆ ಎರಡನೇ ಸೋಲು.
ವಿಶ್ವನಾಥ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 34-41 ಅಂಕಗಳಿಂದ ಡೆಲ್ಲಿಗೆ ಶರಣಾಯಿತು. ಬುಲ್ಸ್ ಪರ ರೇಡರ್ ಆಶಿಶ್ ಮಲಿಕ್ (8 ಅಂಕ) ಮತ್ತು ಆಲ್‌ರೌಂಡರ್ ಅಲಿರೇಜಾ ಮಿರ್ಜಾಯನ್ (10 ಅಂಕ) ಹೊರತುಪಡಿಸಿ ಉಳಿದವರಿಂದ ಗಮನಾರ್ಹ ಪ್ರದರ್ಶನ ಮೂಡಿಬರಲಿಲ್ಲ.
ದಬಾಂಗ್ ಡೆಲ್ಲಿ ತಂಡದ ಪರ ಸ್ಟಾರ್ ರೇಡರ್ ಆಶು ಮಲಿಕ್ (15 ಅಂಕ) ಮಿಂಚಿದರೆ,
ನೀರಜ್ ನರ್ವಾಲ್ (7 ಅಂಕ) ಅವರಿಗೆ ಬೆಂಬಲ ನೀಡಿದರು.
ಆರಂಭದ 30 ನಿಮಿಷಗಳ ನಂತರ 17-34 ರಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದ ಬೆಂಗಳೂರು ಮರುಹೋರಾಟ ಸಂಘಟಿಸಿ ಎದುರಾಳಿ ತಂಡಕ್ಕೆ ಆತಂಕ ಮೂಡಿಸಿತು. ಆದರೆ ಆ ಲಯವನ್ನು ಕೊನೆಯವರೆಗೆ ಮುಂದುವರಿಸಲು ಸಾಧ್ಯವಾಗಲಿಲ್ಲ. ಕೊನೆಯ ನಿಮಿಷ ಇದ್ದಾಗ ಹಿನ್ನಡೆಯನ್ನು 29-39ರಲ್ಲಿ ತಗ್ಗಿಸಲಷ್ಟೇ ಸಾಧ್ಯವಾಯಿತು.
ಪೂರ್ವಾರ್ಧದಲ್ಲಿ ಮೂರು ಟ್ಯಾಕಲ್ ಹಾಗೂ ಎಂಟು ರೇಡಿಂಗ್ ಅಂಕ ಕಲೆಹಾಕಿದ ಬುಲ್ಸ್, ಉತ್ತರಾರ್ಧದಲ್ಲಿ 13 ಟ್ಯಾಕಲ್ ಜತೆಗೆ 20 ರೇಡಿಂಗ್ ಅಂಕ ಗಳಿಸಿ ಪರಿಣಾಮಕಾರಿಯಾಗಿ ಪ್ರತಿಹೋರಾಟ ಸಂಘಟಿಸಿತು.
ಆಟದ 25ನೇ ನಿಮಿಷ ಅಲಿರೇಜಾ ಡೆಲ್ಲಿ ತಂಡದ ಟ್ಯಾಕಲ್‌ಗೆ ಒಳಗಾದ ಕಾರಣ ಬುಲ್ಸ್ ಎರಡನೇ ಬಾರಿ ಆಲೌಟ್ ಬಲೆಗೆ ಸಿಲುಕಿ 13-28 ರಲ್ಲಿ ಹಿನ್ನಡೆಗೆ ಒಳಗಾಯಿತು. ಇದು
ಸಹಜವಾಗಿ ಬೆಂಗಳೂರು ತಂಡದ ಮೇಲಿನ ಒತ್ತಡವನ್ನು ಇಮ್ಮಡಿಗೊಳಿಸಿತು.
ಇದಕ್ಕೂ ಮುನ್ನ ಸಮನ್ವಯತೆ ಕೊರತೆಯಿಂದಾಗಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲಗೊಂಡ ಬೆಂಗಳೂರು ಬುಲ್ಸ್ ಪಂದ್ಯದ ಮೊದಲಾರ್ಧದ ಅಂತ್ಯಕ್ಕೆ 11-21ರಲ್ಲಿ ಹಿನ್ನಡೆ ಅನುಭವಿಸಿತು. ತನ್ನ ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ಧ ವೀರೋಚಿತ ಟೈ ಸಾಧಿಸಿದ ಹೊರತಾಗಿಯೂ ಹೊಸದಾಗಿ ಪರಿಚಯಿಸಲಾದ ಟೈಬ್ರೇಕರ್‌ನಲ್ಲಿ ಎರಡು ಅಂಕಗಳಿಂದ ಪರಾಭವಗೊಂಡಿದ್ದ ಬುಲ್ಸ್ ತಂಡ ಪುಟಿದೇಳುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಿತು. ಆದರೆ ಪಂದ್ಯದ ಆರಂಭದಿಂದಲೇ ಸ್ಟಾರ್ ರೇಡರ್ ಆಶು ಮಲಿಕ್ ಆಕ್ರಮಣಕಾರಿ ದಾಳಿ ನಡೆಸಿದರು.
ಬೆಂಗಳೂರು ಬುಲ್ಸ್ ತನ್ನ ಮುಂದಿನ ಪಂದ್ಯವನ್ನು ಸೆಪ್ಟೆಂಬರ್ 5ರಂದು ಯು ಮುಂಬಾ ಎದುರು ಆಡಲಿದೆ.
ಜೈಪುರಕ್ಕೆ ಜಯ
ಅಂತಿಮ ಕ್ಷಣದವರೆಗೂ ತೀವ್ರ ಪೈಪೋಟಿ ಕಂಡ ದಿನದ ಎರಡನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು 39–36ರಿಂದ ಬಲಿಷ್ಠ ಪಾಟ್ನ ಪೈರೇಟ್ಸ್ ತಂಡವನ್ನು ಮಣಿಸಿತು.
ಜೈಪುರ ಪರ ನಿತಿನ್ ಕುಮಾರ್ 13 ರೇಡಿಂಗ್ಸ್ ಪಾಯಿಂಟ್ಸ್ ಪಡೆದರೆ, ಅಲಿ ಸಮದಿ ಚೌಬ್ತರಶ್ (8) ಅವರಿಗೆ ಉತ್ತಮ ಬೆಂಬಲ ನೀಡಿದರು. ರೆಝಾ ಮೀರ್‌ಬಘೇರಿ ಮೂರು ಟ್ಯಾಕಲ್ ಪಾಯಿಂಟ್ಸ್ ಪಡೆದು ಮಿಂಚಿದರು.
ಪಂದ್ಯದಲ್ಲಿ ಒಮ್ಮೆಯೂ ಆಲೌಟ್ ಆಗದಿದ್ದರೂ, ಮೂರು ಅಂಕಗಳ ಅಂತರದಲ್ಲಿ ಪಾಟ್ನಾ ಸೋಲನುಭವಿಸಿತು. ಪೈರೇಟ್ಸ್‌ನ ಮಣಿಂದರ್ ಸಿಂಗ್ (15), ಸುಧಾಕರ್ ಎಂ. (9) ಹಾಗೂ ಅಯಾನ್ ಲೋಚಬ್ (6) ರೇಡಿಂಗ್ಸ್‌ನಲ್ಲಿ ಪ್ರಾಬಲ್ಯ ಮೆರೆದರಾದರೂ, ಟ್ಯಾಕಲ್ ವಿಭಾಗದ ವೈಫಲ್ಯ ಅನುಭವಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.