
ನವದೆಹಲಿ: ಅನುಭವಿ ಭರತ್ ಹೂಡಾ ಅವರ ಅಮೋಘ ರೇಡಿಂಗ್ ಬಲದಿಂದ ತೆಲುಗು ಟೈಟನ್ಸ್ ತಂಡವು ಮಂಗಳವಾರ ಪ್ರೊ ಕಬಡ್ಡಿ ಲೀಗ್‌ನ ಮೂರನೇ ಎಲಿಮಿನೇಟರ್ ಪಂದ್ಯದಲ್ಲಿ 46–39ರಿಂದ ಪಟ್ನಾ ಪೈರೇಟ್ಸ್ ತಂಡವನ್ನು ಮಣಿಸಿತು.
ಟೈಟನ್ಸ್ ತಂಡವು ಬುಧವಾರ ನಡೆಯುವ ಎರಡನೇ ಕ್ವಾಲಿಫೈಯರ್‌ನಲ್ಲಿ ಪುಣೇರಿ ಪಲ್ಟನ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡವು ಶುಕ್ರವಾರ ದಬಂಗ್ ಡೆಲ್ಲಿ ತಂಡದೊಂದಿಗೆ ಪ್ರಶಸ್ತಿಗಾಗಿ ಸೆಣಸಾಡಲಿದೆ. ಪಟ್ನಾ ತಂಡವು ಮೊದಲ ಕ್ವಾಲಿಫೈಯರ್‌ನಲ್ಲಿ ದಬಂಗ್ ವಿರುದ್ಧ ಸೋತಿತ್ತು.
ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೈಟನ್ಸ್ ತಂಡವು 2 ಅಂಕಗಳ (22–20) ಮುನ್ನಡೆ ಪಡೆದಿತ್ತು. ಉತ್ತರಾರ್ಧದಲ್ಲೂ ಚುರುಕಿನ ಆಟವಾಡಿದ ಟೈಟನ್ಸ್ ಪಾರಮ್ಯ ಮೆರೆಯಿತು. 17 ಟಚ್ ಪಾಯಿಂಟ್ಸ್ ಮತ್ತು 6 ಬೋನಸ್ ಸೇರಿದಂತೆ 23 ಪಾಯಿಂಟ್ಸ್ ಗಳಿಸಿದ ಭರತ್ ಗೆಲುವಿನ ರೂವಾರಿಯಾದರು. ಅವರು ಹಾಲಿ ಆವೃತ್ತಿಯಲ್ಲಿ 224 ಅಂಕ (20 ಪಂದ್ಯ) ಕಲೆಹಾಕಿದರು.
ಪಟ್ನಾ ತಂಡದ ಪರ ಅಯನ್ ಲೋಚಬ್ 22 ಅಂಕ (20 ಟಚ್ ಪಾಯಿಂಟ್ಸ್+ 2 ಬೋನಸ್) ಗಳಿಸಿ ಏಕಾಂಗಿ ಹೋರಾಟ ನಡೆಸಿದರು. ಅವರು ಹಾಲಿ ಆವೃತ್ತಿಯಲ್ಲಿ 324 ಪಾಯಿಂಟ್ಸ್ (22 ಪಂದ್ಯ) ಸೇರಿದಂತೆ ಪ್ರೊ ಕಬಡ್ಡಿ ಲೀಗ್‌ನಲ್ಲಿ 500 ಅಂಕಗಳ ಮೈಲುಗಲ್ಲು ತಲುಪಿದರು. ಅವರಿಗೆ ಉಳಿದ ಆಟಗಾರರಿಂದ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಈ ಸೋಲಿನೊಂದಿಗೆ ಪಟ್ನಾ ತಂಡದ ಸತತ ಎಂಟು ಪಂದ್ಯಗಳ ಗೆಲುವಿನ ಸರಪಳಿ ತುಂಡಾಯಿತು. ಜೊತೆಗೆ ಹಾಲಿ ಟೂರ್ನಿಯಿಂದಲೂ ಹೊರಬಿತ್ತು.
ಮೂರು ಬಾರಿಯ ಚಾಂಪಿಯನ್ ಪಟ್ನಾ ತಂಡವು ಲೀಗ್ ಹಂತದಲ್ಲಿ ಕೊನೆಯ ಐದು ಪಂದ್ಯಗಳನ್ನು ಸತತವಾಗಿ ಗೆದ್ದು ಏಳನೇ ಸ್ಥಾನದೊಂದಿಗೆ ಪ್ಲೇ ಆಫ್‌ಗೆ ಅರ್ಹತೆ ಪಡೆದಿತ್ತು. ಪ್ಲೇ ಆಫ್‌ನಲ್ಲೂ ಸತತ ಮೂರು ಪಂದ್ಯಗಳನ್ನು ಜಯಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.