ವಾರ್ಸಾ (ಪೋಲೆಂಡ್): ಗ್ರ್ಯಾಂಡ್‌ಮಾಸ್ಟರ್ ಆರ್.ಪ್ರಜ್ಞಾನಂದ ಅವರು ಆರಂಭದ ಹಿನ್ನಡೆಯ ಬಳಿಕ ಅಮೋಘ ರೀತಿ ಪುಟಿದೆದ್ದು, ಸೂಪರ್‌ಬೆಟ್ ರ್‍ಯಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಟೂರ್ನಿಯ ಬ್ಲಿಟ್ಜ್ ವಿಭಾಗದ ಮೊದಲ ಅರ್ಧಭಾಗ ಮುಗಿದಾಗ ಎರಡನೇ ಸ್ಥಾನಕ್ಕೆ ಏರಿದ್ದಾರೆ.
ಈ ಟೂರ್ನಿಯು ಗ್ರ್ಯಾಂಡ್ ಚೆಸ್ ಟೂರ್‌ನ ಭಾಗವಾಗಿದೆ. ಮೊದಲ ಎರಡು ದಿನ ರ್‍ಯಾಪಿಡ್ ವಿಭಾಗದ ಬಹುತೇಕ ಅವಧಿಯಲ್ಲಿ ಹಿನ್ನಡೆ ಕಂಡಿದ್ದ ಪ್ರಜ್ಞಾನಂದ ನಂತರದ ಎರಡೂ ದಿನ ಉತ್ತಮ ಪ್ರದರ್ಶನ ನೀಡಿದ್ದಾರೆ. ವಿಶೇಷವಾಗಿ ಬ್ಲಿಟ್ಜ್‌ನಲ್ಲಿ ತಮ್ಮ ಪರಿಣತಿ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ. 9 ಪಂದ್ಯಗಳಿಂದ 5.5 ಅಂಕ ಸಂಗ್ರಹಿಸಿದ್ದಾರೆ. ಒಟ್ಟರೆ ಎರಡೂ ವಿಭಾಗಗಳಿಂದ (ರ್‍ಯಾಪಿಡ್ ಮತ್ತು ಬ್ಲಿಟ್ಜ್) ಅವರು 15.5 ಅಂಕ ಗಳಿಸಿದ್ದಾರೆ.
ಸ್ಲೊವೇನಿಯದ ವ್ಲಾದಿಮಿರ್ ಫೆಡೊಸೀವ್ (9 ಸುತ್ತುಗಳಿಂದ 8) ಅವರು ಬ್ಲಿಟ್ಜ್‌ನಲ್ಲಿ ಅಮೋಘ ಪ್ರದರ್ಶನದೊಡನೆ ಅಗ್ರಸ್ಥಾನಕ್ಕೇರಿದರು. ಒಟ್ಟು (ರ‍್ಯಾಪಿಡ್+ ಬ್ಲಿಟ್ಜ್‌ನಲ್ಲಿ) 19 ಅಂಕ ಅವರ ಖಾತೆಯಲ್ಲಿದೆ. ಅವರು ಎರಡನೇ ಸ್ಥಾನದಲ್ಲಿರುವ ಪ್ರಜ್ಞಾನಂದ ಅವರಿಗಿಂತ 3.5 ಅಂಕಗಳ ಲೀಡ್ ಹೊಂದಿದ್ದಾರೆ.
ಬ್ಲಿಟ್ಜ್‌ನಲ್ಲಿ ಪ್ರತಿ ಆಟ ಐದು ನಿಮಿಷಗಳ ಅವಧಿ ಹೊಂದಿರುತ್ತದೆ. ಫೆಡೊಸೀವ್ ಅವರು ಅಂತಿಮ ದಿನ 9 ಸುತ್ತುಗಳಿಂದ 4.5 ಅಂಕ ಗಳಿಸಿದರೆ, ಕಿರೀಟ ಅವರ ಪಾಲಾಗಲಿದೆ.
ಮೊದಲು ರುಮೇನಿಯಾದ ಡೇಕ್ ಬೊಗ್ದಾನ್ ಡೇನಿಯಲ್ ಮತ್ತು ಅಮೆರಿಕದ ಲೆವೊನ್ ಅರೋನಿಯನ್ ಅವರಿಗೆ ಸೋತ ಪ್ರಜ್ಞಾನಂದ ನಂತರ ಗಮನಾರ್ಹ ಚೇತರಿಕೆ ಕಂಡರು. ಭಾರತದ ಆಟಗಾರ ಫ್ರಾನ್ಸ್‌ನ ಅಲಿರೇಝಾ ಫಿರೋಝ್‌ಜಾ ಮತ್ತು ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಅವರನ್ನು ಮಣಿಸಿದರು. ನಂತರದ ಮೂರು ಸುತ್ತುಗಳಲ್ಲಿ ಮಾಜಿ ವಿಶ್ವ ಚಾಂಪಿಯನ್ ವ್ಯಾಸೆಲಿನ್ ಟೊಪಲೋವ್, ಅರವಿಂದ್ ಚಿದಂಬರಮ್ ಮತ್ತು ಡೇವಿಡ್ ಗಾವ್ರಿಲೆಸ್ಕು ಅವರನ್ನು ಸೋಲಿಸಿದರು.
ರ್‍ಯಾಪಿಡ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅರವಿಂದ್ ಚಿದಂಬರಂ ಇಲ್ಲಿ 9 ಸುತ್ತುಗಳಿಂದ 3.5 ಅಂಕ ಅಷ್ಟೇ ಸಂಗ್ರಹಿಸಲು ಶಕ್ತರಾದರು.
ಬ್ಲಿಟ್ಜ್‌ನಲ್ಲಿ ಮೊದಲ ನಾಲ್ಕು ಸುತ್ತುಗಳಿಂದ 2.5 ಅಂಕ ಗಳಿಸಿದ್ದ ಚಿದಂಬರಂ ನಂತರ ಐದು ಸುತ್ತುಗಳಿಂದ ಬರೇ ಒಂದು ಅಂಕ ಗಳಿಸಿದರು. ಅವರು ಅರೋನಿಯನ್, ಲಗ್ರಾವ್ ಅವರೊಂದಿಗೆ ಒಟ್ಟು 14.5 ಪಾಯಿಂಟ್ಸ್ ಗಳಿಸಿ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.