ADVERTISEMENT

ಪುಟಿನ್‌ರ ‘ಬ್ಲ್ಯಾಕ್‌ ಬೆಲ್ಟ್‌’ ಕಸಿದ ಟೇಕ್ವಾಂಡೊ: ಉಕ್ರೇನ್ ಮೇಲೆ ದಾಳಿಗೆ ಖಂಡನೆ

ಏಜೆನ್ಸೀಸ್
Published 1 ಮಾರ್ಚ್ 2022, 7:53 IST
Last Updated 1 ಮಾರ್ಚ್ 2022, 7:53 IST
ವ್ಲಾಡಿಮಿರ್‌ ಪುಟಿನ್‌
ವ್ಲಾಡಿಮಿರ್‌ ಪುಟಿನ್‌    

ಹಾಂಕಾಂಗ್‌: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಪ್ರದಾನ ಮಾಡಲಾಗಿದ್ದ ಟೇಕ್ವಾಂಡೊ ‘ಬ್ಲ್ಯಾಕ್‌ ಬೆಲ್ಟ್‌’ ಯನ್ನು ಅಂತರರಾಷ್ಟ್ರೀಯ ವಿಶ್ವ ಟೇಕ್ವಾಂಡೊ ಸೋಮವಾರ ಹಿಂಪಡೆದುಕೊಂಡಿದೆ.

ಮಾಸ್ಕೋದ ಕ್ರಮಗಳು ಕ್ರೀಡೆಯ ದೃಷ್ಟಿಕೋನಕ್ಕೆ ವಿರುದ್ಧವಾಗಿವೆ. ‘ದಿಗ್ವಿಜಯಕ್ಕಿಂತಲೂ ಶಾಂತಿ ಹೆಚ್ಚು ಅಮೂಲ್ಯವಾದದ್ದು’ ಎಂದು ಅದು ಅಭಿಪ್ರಾಯಪಟ್ಟಿದೆ.

‘2013ರ ನವೆಂಬರ್‌ನಲ್ಲಿ ವ್ಲಾಡಿಮಿರ್ ಪುಟಿನ್ ಅವರಿಗೆ ಪ್ರದಾನ ಮಾಡಿದ್ದ 9ನೇ ‘ಡಾನ್ ಬ್ಲ್ಯಾಕ್ ಬೆಲ್ಟ್’ ಅನ್ನು ಹಿಂಪಡೆಯಲು ವಿಶ್ವ ಟೇಕ್ವಾಂಡೊ ನಿರ್ಧರಿಸಿದೆ" ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ADVERTISEMENT

ಅಧಿಕೃತ ಟೇಕ್ವಾಂಡೊ ಕಾರ್ಯಕ್ರಮಗಳಲ್ಲಿ ರಷ್ಯಾ ಮತ್ತು ಬೆಲರೂಸ್‌ಗಳನ್ನು ಸೇರಿಸಿಕೊಳ್ಳುವುದಿಲ್ಲ ಎಂದು ಅದು ತಿಳಿಸಿದೆ.

ಉಕ್ರೇನ್‌ ಮೇಲಿನ ಅತಿಕ್ರಮಣದ ಪರಿಣಾಮವಾಗಿ ರಷ್ಯಾ ವಿರುದ್ಧ ವಿಶ್ವಸಮುದಾಯ ಹಲವು ನಿರ್ಬಂಧಗಳನ್ನು ವಿಧಿಸಿದೆ.

ಅಂತರರಾಷ್ಟ್ರೀಯ ಫುಟ್‌ಬಾಲ್‌ನ ಜಾಗತಿಕ ಮಂಡಳಿಯಾಗಿರುವ ಫಿಫಾ, ರಷ್ಯಾವನ್ನು ಒಕ್ಕೂಟದಿಂದ ಹೊರಹಾಕಿದ್ದು, ಈ ವರ್ಷ ಕತಾರ್‌ನಲ್ಲಿ ನಡೆಯಲಿರುವ ವಿಶ್ವಕಪ್‌ ಟೂರ್ನಿಯ ಅರ್ಹತಾ ಪಂದ್ಯಗಳಿಂದ ದೂರವಿಟ್ಟಿದೆ. ರಷ್ಯಾ ಹಾಗೂ ಅದರ ಮಿತ್ರ ರಾಷ್ಟ್ರ ಬೆಲರೂಸ್‌ ಅನ್ನು ಅಂತರರಾಷ್ಟ್ರೀಯ ರಗ್ಬಿ ಕ್ರೀಡೆಯಿಂದ ಅಮಾನತು ಮಾಡಲಾಗಿದೆ ಎಂದು ವಿಶ್ವ ರಗ್ಬಿ ಒಕ್ಕೂಟ ಪ್ರಕಟಿಸಿದೆ.

‘ವಿಶ್ವ ಟೇಕ್ವಾಂಡೊ ಉಕ್ರೇನ್ ಜನರೊಂದಿಗಿದೆ. ಈ ಯುದ್ಧದ ಶಾಂತಿಯುತ ಅಂತ್ಯವನ್ನು ನಾವು ನಿರೀಕ್ಷಿಸುತ್ತೇವೆ’ ಎಂದು ಅದು ಹೇಳಿದೆ.

ಪುಟಿನ್ ಟೇಕ್ವಾಂಡೊ ಪಟುವಲ್ಲ. ಬದಲಿಗೆ ಮತ್ತೊಂದು ಸಮರ ಕಲೆಯಾದ ಜೂಡೋದಲ್ಲಿ ಪರಿಣತರು. ಅಂತರರಾಷ್ಟ್ರೀಯ ಜೂಡೋ ಫೆಡರೇಶನ್‌ಗೆ ಗೌರವ ಅಧ್ಯಕ್ಷರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.