ರಿಸ್ಬೇನ್: ವಿಶ್ವದ ಮಾಜಿ ಅಗ್ರಮಾನ್ಯ ಆಟಗಾರ ನೊವಾಕ್ ಜೊಕೊವಿಚ್ ಅವರು ಆಸ್ಟ್ರೇಲಿಯನ್ ಓಪನ್ ಸಿದ್ಧತೆಯ ಹಾದಿಯಲ್ಲಿ ಹಿನ್ನಡೆ ಕಂಡರು. ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್ ಟೂರ್ನಿಗೆ ಪೂರ್ವ ಭಾವಿಯಾಗಿ ನಡೆಯುತ್ತಿರುವ ಬ್ರಿಸ್ಬೇನ್ ಇಂಟರ್‌ನ್ಯಾಷನಲ್ ಟೆನಿಸ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಅವರು ಅಮೆರಿಕದ ‘ಲಂಬೂಜಿ’ ರೀಲಿ ಒಪೆಲ್ಕಾ ಎದುರು ನೇರ ಸೆಟ್‌ಗಳ ಸೋಲು ಕಂಡರು.
2.11 ಮೀಟರ್ (6 ಅಡಿ 11 ಇಂಚು) ಎತ್ತರದ ಒಪೆಲ್ಕಾ 7–6 (8–6), 6–3 ರಿಂದ 24 ಬಾರಿಯ ಗ್ರ್ಯಾನ್‌ಸ್ಲಾಮ್ ವಿಜೇತ ಸರ್ಬ್ ಆಟಗಾರನನ್ನು ಸೋಲಿಸಿದರು. ಆಸ್ಟ್ರೇಲಿಯನ್ ಓಪನ್ ಜನವರಿ 12ರಂದು ಆರಂಭವಾಗಲಿದೆ.
27 ವರ್ಷ ವಯಸ್ಸಿನ ಒಪೆಲ್ಕಾ ಈ ಹಿಂದೆ ವಿಶ್ವ ಕ್ರಮಾಂಕದಲ್ಲಿ 17ನೇ ಸ್ಥಾನದಲ್ಲಿದ್ದರು. ಆದರೆ ಪೃಷ್ಠ ಮತ್ತು ಮಣಿಕಟ್ಟಿನ ನೋವಿನಿಂದ ಎರಡು ವರ್ಷ ಆಟದಿಂದ ದೂರವುಳಿದಿದ್ದ ಅವರು ಕಳೆದ ವರ್ಷದ ಜುಲೈನಲ್ಲಿ ಪುನರಾಗಮನ ಮಾಡಿದ್ದರು. ಆದರೆ ತಮ್ಮ ಸರ್ವ್‌ಗಳು ಇನ್ನೂ ವೇಗ ಕಳೆದುಕೊಂಡಿಲ್ಲ ಎಂಬುದನ್ನು ಸೂಚಿಸು ವಂತೆ 16 ಏಸ್‌ಗಳನ್ನು ಹಾಕಿ ದರು. 1 ಗಂಟೆ 40 ನಿಮಿಷಗಳಲ್ಲಿ ಪಂದ್ಯ ತಮ್ಮದಾಗಿಸಿಕೊಂಡರು.
ಅವರು ಸೆಮಿಫೈನಲ್‌ನಲ್ಲಿ ಮತ್ತೊಬ್ಬ ಪ್ರಬಲ ಸರ್ವ್ ಆಟಗಾರ, ಫ್ರಾನ್ಸ್‌ನ ಗಿಯೊವನ್ನಿ ಪೆಟ್ಶಿ ಪೆರಿಕಾರ್ಡ್ ಅವರನ್ನು ಎದುರಿಸಲಿದ್ದಾರೆ. ಮೂರು ಪಂದ್ಯಗಳಲ್ಲಿ 75 ಏಸ್‌ಗಳನ್ನು ಸಿಡಿಸಿರುವ ಈ ಫ್ರೆಂಚ್ ಆಟಗಾರ ಎಂಟರ ಘಟ್ಟದ ಪಂದ್ಯದಲ್ಲಿ ಝೆಕ್ ಆಟಗಾರ ಯಾಕುಬ್ ಮೆನ್ಸಿಕ್ ಅವರನ್ನು 7–5, 7–6 (7/5) ರಿಂದ ಮಣಿಸಿದರು.
ಇನ್ನೊಂದು ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಹಾಗೂ ಎರಡನೇ ಶ್ರೇಯಾಂಕದ ಗ್ರಿಗೊರ್ ಡಿಮಿಟ್ರೋವ್, ಝೆಕ್ ಗಣರಾಜ್ಯದ ಜಿರಿ ಲೆಹೆಸ್ಕಾ ಅವರನ್ನು ಎದುರಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.