ಗೆಲುವಿನ ಸಂಭ್ರಮದಲ್ಲಿ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್
ಇಂಡಿಯನ್ ವೆಲ್ಸ್ (ಅಮೆರಿಕ): ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಅವರು ಇಂಡಿಯನ್ ವೆಲ್ಸ್ ಎಟಿಪಿ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಹಾಕಿದರು.
ಗುರುವಾರ ನಡೆದ ಎಂಟರ ಘಟ್ಟದ ಹಣಾಹಣಿಯಲ್ಲಿ ಎರಡನೇ ಶ್ರೇಯಾಂಕದ ಸ್ಪೇನ್ ಆಟಗಾರ 6-3, 7-6 (7/4)ರಿಂದ ಅರ್ಜೆಂಟೀನಾದ ಫ್ರಾನ್ಸಿಸ್ಕೊ ಸೆರುಂಡೊಲೊ ಅವರನ್ನು ಹಿಮ್ಮೆಟ್ಟಿಸಿದರು.
2023 ಮತ್ತು 2024ರಲ್ಲಿ ಪ್ರಶಸ್ತಿ ಗೆದ್ದಿರುವ 21 ವರ್ಷ ವಯಸ್ಸಿನ ಅಲ್ಕರಾಜ್ ಮತ್ತೆ ಚಾಂಪಿಯನ್ ಆದರೆ ಸತತ ಮೂರು ಇಂಡಿಯನ್ ವೆಲ್ಸ್ ಪ್ರಶಸ್ತಿಗಳನ್ನು ಗೆದ್ದ ವಿಶ್ವದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವರು. ಈ ಮೊದಲು ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ (2004–2006) ಮತ್ತು ಸರ್ಬಿಯಾದ ನೊವಾಕ್ ಜೊಕೊವಿಚ್ (2014–2016) ಹ್ಯಾಟ್ರಿಕ್ ಸಾಧನೆ ಮಾಡಿದ್ದರು.
ಸೆಮಿಫೈನಲ್‌ನಲ್ಲಿ ಅಲ್ಕರಾಜ್‌ಗೆ ಬ್ರಿಟನ್‌ನ ಜ್ಯಾಕ್ ಡ್ರೇಪರ್ ಎದುರಾಳಿಯಾಗಿದ್ದಾರೆ. ಡ್ರೇಪರ್ ಇದೇ ಮೊದಲ ಬಾರಿ ಎಟಿಪಿ 1000ರಲ್ಲಿ ನಾಲ್ಕರ ಘಟ್ಟ ತಲುಪಿದ್ದಾರೆ. 13ನೇ ಶ್ರೇಯಾಂಕದ ಅವರು ಕ್ವಾರ್ಟರ್ ಫೈನಲ್‌ನಲ್ಲಿ 6-4, 7-5ರಿಂದ 11ನೇ ಶ್ರೇಯಾಂಕದ ಬೆನ್ ಶೆಲ್ಡನ್ (ಅಮೆರಿಕ) ಅವರನ್ನು ಸೋಲಿಸಿದರು.
ಕಳೆದ ಎರಡು ಆವೃತ್ತಿಗಳ ರನ್ನರ್ ಅಪ್ ಡೇನಿಯಲ್ ಮೆಡ್ವೆಡೆವ್ (ರಷ್ಯಾ) ಅವರು ಮತ್ತೊಂದು ಪಂದ್ಯದಲ್ಲಿ 6-4, 2-6, 7-6 (9/7) ರಿಂದ 20ನೇ ಶ್ರೇಯಾಂಕದ ಆರ್ಥರ್ ಫಿಲ್ಸ್ (ಫ್ರಾನ್ಸ್) ಅವರನ್ನು ಸೋಲಿಸಿ ಸೆಮಿಫೈನಲ್ ತಲುಪಿದರು. ಐದನೇ ಶ್ರೇಯಾಂಕದ ಮೆಡ್ವೆಡೆವ್ ಮುಂದಿನ ಸುತ್ತಿನಲ್ಲಿ ಡೆನ್ಮಾರ್ಕ್‌ನ ಹೋಲ್ಗರ್ ರೂನ್ ಅವರನ್ನು ಎದುರಿಸುವರು. ರೂನ್ 5-7, 6-0, 6-3 ರಿಂದ ನೆದರ್ಲೆಂಡ್ಸ್‌ನ ಟ್ಯಾಲನ್ ಗ್ರಿಕ್ಸ್‌ಪೂರ್ ಅವರನ್ನು ಮಣಿಸಿದರು.
ಶ್ವಾಂಟೆಕ್, ಸಬಲೆಂಕಾ ಮುನ್ನಡೆ: ವಿಶ್ವದ ಅಗ್ರಮಾನ್ಯ ಆಟಗಾರ್ತಿ ಅರಿನಾ ಸಬಲೆಂಕಾ ಮತ್ತು ಹಾಲಿ ಚಾಂಪಿಯನ್ ಇಗಾ ಶ್ವಾಂಟೆಕ್ ಅವರು ಮಹಿಳಾ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ತಲುಪಿದರು.
ಅಗ್ರ ಶ್ರೇಯಾಂಕದ ಬೆಲಾರೂಸ್‌ನ ಸಬಲೆಂಕಾ 6-2, 6-3ರಿಂದ ಲಿಯುಡ್ಮಿಲಾ ಸ್ಯಾಮ್ಸೊನೊವಾ (ರಷ್ಯಾ) ಅವರನ್ನು ಸೋಲಿಸಿದರು. ಇಲ್ಲಿ ಚೊಚ್ಚಲ ಕಿರೀಟವನ್ನು ಎದುರು ನೋಡುತ್ತಿರುವ ಸಬಲೆಂಕಾ ನಾಲ್ಕರ ಘಟ್ಟದಲ್ಲಿ ಅಮೆರಿಕದ ಮ್ಯಾಡಿಸನ್ ಕೀಸ್ ಅವರನ್ನು ಎದುರಿಸಲಿದ್ದಾರೆ.
ಕೀಸ್ ಅವರು 6–1, 6–1ರಿಂದ ಬೆಲಿಂಡಾ ಬೆನ್ಸಿಕ್ (ಸ್ವಿಟ್ಜರ್ಲೆಂಡ್) ಅವರನ್ನು ಹಿಮ್ಮೆಟ್ಟಿಸಿದರು. ಕೀಸ್ ಅವರು ಜನವರಿಯಲ್ಲಿ ಆಸ್ಟ್ರೇಲಿಯಾ ಓಪನ್ ಫೈನಲ್‌ನಲ್ಲಿ ಸಬಲೆಂಕಾ ಅವರನ್ನು ಸೋಲಿಸಿ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗೆ ಮುತ್ತಿಕ್ಕಿದ್ದರು.
ಎರಡನೇ ಶ್ರೇಯಾಂಕದ ಶ್ವಾಂಟೆಕ್ 6-3, 6-3ರಿಂದ ಪ್ಯಾರಿಸ್ ಒಲಿಂಪಿಕ್ಸ್ ಚಾಂಪಿಯನ್ ಝೆಂಗ್ ಕ್ವಿನ್ವೆನ್ (ಚೀನಾ) ಅವರನ್ನು ಸೋಲಿಸಿದರು. ಸತತ ನಾಲ್ಕನೇ ಬಾರಿ ಇಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ಅವರಿಗೆ ರಷ್ಯಾದ ಮಿಯೆರಾ ಆಂಡ್ರೀವಾ ಮುಂದಿನ ಎದುರಾಳಿಯಾಗಿದ್ದಾರೆ. ಮಿಯೆರಾ ಅವರು ಮತ್ತೊಂದು ಪಂದ್ಯದಲ್ಲಿ 7-5, 6-3ರಿಂದ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಅವರನ್ನು ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.