ADVERTISEMENT

ಅಮೆರಿಕ ಓಪನ್ ಟೆನಿಸ್‌: 23ನೇ ಗ್ರ್ಯಾನ್‌ಸ್ಲಾಮ್‌ನತ್ತ ನಡಾಲ್‌ ಚಿತ್ತ

ಮೆಡ್ವೆಡೆವ್‌ಗೆ ಅಗ್ರ ಶ್ರೇಯಾಂಕ

ಏಜೆನ್ಸೀಸ್
Published 28 ಆಗಸ್ಟ್ 2022, 16:33 IST
Last Updated 28 ಆಗಸ್ಟ್ 2022, 16:33 IST
ರಫೆಲ್‌ ನಡಾಲ್ –ಎಎಫ್‌ಪಿ ಚಿತ್ರ
ರಫೆಲ್‌ ನಡಾಲ್ –ಎಎಫ್‌ಪಿ ಚಿತ್ರ   

ನ್ಯೂಯಾರ್ಕ್‌: ಋತುವಿನ ಕೊನೆಯ ಗ್ರ್ಯಾನ್‌ಸ್ಲಾಂ ಅಮೆರಿಕ ಓಪನ್‌ ಟೆನಿಸ್ ಟೂರ್ನಿ ಸೋಮವಾರ ಆರಂಭವಾಗಲಿದ್ದು, ಸ್ಪೇನ್‌ನ ರಫೆಲ್‌ ನಡಾಲ್‌ ಅವರು ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ 23ನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ.

ಈ ಬಾರಿ ನಡಾಲ್‌ ಅವರ ಪ್ರಶಸ್ತಿಗೆ ಅಡ್ಡಿಯಾಗಲು ಸರ್ಬಿಯದ ನೊವಾಕ್‌ ಜೊಕೊವಿಚ್‌ ಇಲ್ಲ. ಕೋವಿಡ್ ಲಸಿಕೆ ಪಡೆಯದೇ ಇರುವುದರಿಂದ ಜೊಕೊವಿಚ್‌ ಅವರು ಟೂರ್ನಿಯಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದಾರೆ.

36 ವರ್ಷದ ನಡಾಲ್‌ ಈ ಬಾರಿ ಪೂರ್ಣ ಫಿಟ್‌ ಆಗದೆಯೇ ನ್ಯೂಯಾರ್ಕ್‌ಗೆ ಬಂದಿಳಿದಿದ್ದಾರೆ. ಹೊಟ್ಟೆಯ ಸ್ನಾಯು ಸೆಳೆತದ ಕಾರಣ ವಿಂಬಲ್ಡನ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಹಿಂದೆ ಸರಿದಿದ್ದ ಅವರು, ಇನ್ನೂ ಪೂರ್ಣವಾಗಿ ಚೇತರಿಸಿಕೊಂಡಿಲ್ಲ. ವಿಂಬಲ್ಡನ್‌ ಬಳಿಕ ಸಿನ್ಸಿನಾಟಿ ಟೂರ್ನಿಯಲ್ಲಿ ಮಾತ್ರ ಆಡಿದ್ದರು. ಅಲ್ಲಿ ಮೊದಲ ಸುತ್ತಿನಲ್ಲೇ ಸೋಲು ಎದುರಾಗಿತ್ತು.

ADVERTISEMENT

ನಡಾಲ್‌ ಇಲ್ಲಿ ಐದನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. ಅವರು 2010, 2013, 2017 ಮತ್ತು 2019 ರಲ್ಲಿ ಚಾಂಪಿಯನ್‌ ಆಗಿದ್ದರು.

‘ಸಿನ್ಸಿನಾಟಿ ಟೂರ್ನಿಯಲ್ಲಿ ನಾನು ಪೂರ್ಣ ಸಾಮರ್ಥ್ಯದೊಂದಿಗೆ ಆಡಿರಲಿಲ್ಲ. ಗಾಯ ಮರುಕಳಿಸದಂತೆ ಎಚ್ಚರವಹಿಸಿದ್ದೆ. ಇದೀಗ ಪೂರ್ಣ ಫಿಟ್‌ ಆಗಿದ್ದು, ಅಮೆರಿಕ ಓಪನ್‌ ಟೂರ್ನಿಗೆ ತಕ್ಕ ತಯಾರಿ ನಡೆಸಿದ್ದೇನೆ’ ಎಂದು ನಡಾಲ್‌ ಹೇಳಿದ್ದಾರೆ.

ನಡಾಲ್‌ ಇಲ್ಲಿ ಚಾಂಪಿಯನ್‌ ಆದರೆ ವಿಶ್ವ ರ‍್ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಲಿದ್ದಾರೆ. ಇಲ್ಲಿ ಅಗ್ರಶ್ರೇಯಾಂಕ ಹೊಂದಿರುವ ರಷ್ಯಾದ ಡೇನಿಯಲ್‌ ಮೆಡ್ವೆಡೆವ್‌ ಅವರು ನಡಾಲ್‌ಗೆ ಪ್ರಬಲ ಸವಾಲಾಗಿ ಪರಿಣಮಿಸಿದ್ದಾರೆ.

ಮೆಡ್ವೆಡೆವ್‌ ಅವರು ವಿಂಬಲ್ಡನ್‌ ಟೂರ್ನಿಯಲ್ಲಿ ಆಡಿರಲಿಲ್ಲ. ಉಕ್ರೇನ್‌ನ ಮೇಲಿನ ದಾಳಿಯ ಕಾರಣ ರಷ್ಯಾದ ಸ್ಪರ್ಧಿಗಳು ವಿಂಬಲ್ಡನ್‌ನಲ್ಲಿ ಆಡುವುದಕ್ಕೆ ನಿರ್ಬಂಧ ಹೇರಲಾಗಿತ್ತು.

ಸ್ಪೇನ್‌ನ ಯುವ ಆಟಗಾರ ಕಾರ್ಲೊಸ್‌ ಅಲ್ಕರಾಜ್‌, ಗ್ರೀಸ್‌ನ ಸ್ಟೆಫಾನೊಸ್‌ ಸಿಸಿಪಸ್‌, ನಾರ್ವೆಯ ಕ್ಯಾಸ್ಪರ್‌ ರೂಡ್‌ ಅವರೂ ಅಚ್ಚರಿಯ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಆಟಗಾರ್ತಿ ಇಗಾ ಸ್ವೆಟೆಕ್‌ ಅಲ್ಲದೆ ನವೊಮಿ ಒಸಾಕ, ಕಳೆದ ಬಾರಿಯ ಚಾಂಪಿಯನ್‌ ಎಮಾ ರಡುಕಾನು, ಪೌಲಾ ಬಡೊಸಾ ಮತ್ತು ಆನ್ಸ್‌ ಜಬೇರ್‌ ಅವರು ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿಗಳು ಎನಿಸಿಕೊಂಡಿದ್ದಾರೆ.

ಸೆರೆನಾಗೆ ಕೊನೆಯ ಗ್ರ್ಯಾನ್‌ಸ್ಲಾಮ್

ಮಹಿಳಾ ಟೆನಿಸ್‌ನ ದಿಗ್ಗಜ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಅವರಿಗೆ ಇದು ಕೊನೆಯ ಟೂರ್ನಿ ಎನಿಸಿದೆ. ಅಮೆರಿಕ ಓ‍ಪನ್‌ ಬಳಿಕ ನಿವೃತ್ತಿಯಾಗುವುದಾಗಿ ಅವರು ಈ ಹಿಂದೆಯೇ ಪ್ರಕಟಿಸಿದ್ದರು. 27 ವರ್ಷಗಳ ಅವರ ವೃತ್ತಿಪರ ಟೆನಿಸ್‌ ಜೀವನ ಈ ಟೂರ್ನಿಯೊಂದಿಗೆ ಕೊನೆಗೊಳ್ಳಲಿದೆ.

ಸೆರೆನಾ 1999 ರಲ್ಲಿ ತಮ್ಮ 17ನೇ ವಯಸ್ಸಿನಲ್ಲಿ ಇಲ್ಲಿ ಚಾಂಪಿಯನ್‌ ಆಗಿದ್ದರು. ಅಲ್ಲಿಂದ ಇದುವರೆಗೆ 23 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಅತಿಹೆಚ್ಚು ಗ್ರ್ಯಾನ್‌ಸ್ಲಾಮ್ ಗೆದ್ದ ದಾಖಲೆ ಮಾರ್ಗರೆಟ್‌ ಕೋರ್ಟ್‌ (24) ಅವರ ಹೆಸರಲ್ಲಿದೆ.

40 ವರ್ಷದ ಸೆರೆನಾ ಮೊದಲ ಸುತ್ತಿನಲ್ಲಿ ಮಾಂಟೆನೆಗ್ರೊದ ಡಂಕಾ ಕೊವಿನಿಚ್‌ ಅವರ ಸವಾಲನ್ನು ಎದುರಿಸುವರು. ಸೆರೆನಾ ಆಡಲಿರುವ ಪಂದ್ಯದ ಎಲ್ಲ ಟಿಕೆಟ್‌ಗಳೂ ‘ಸೋಲ್ಡ್‌ ಔಟ್‌’ ಆಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.