ADVERTISEMENT

ಟಿ20 ವಿಶ್ವಕಪ್: ವಿಂಡೀಸ್ ಬೀಸಾಟಕ್ಕೆ ವೇಗದ ಸವಾಲು

ಪಿಟಿಐ
Published 26 ಫೆಬ್ರುವರಿ 2026, 0:00 IST
Last Updated 26 ಫೆಬ್ರುವರಿ 2026, 0:00 IST
<div class="paragraphs"><p>ಶಿಮ್ರಾನ್‌ ಹೆಟ್ಮೆಯರ್‌</p></div>

ಶಿಮ್ರಾನ್‌ ಹೆಟ್ಮೆಯರ್‌

   

ಅಹಮದಾಬಾದ್: ಬೀಸಾಟವಾಡುವ ವೆಸ್ಟ್‌ ಇಂಡೀಸ್ ತಂಡದ ಸಾಮರ್ಥ್ಯಕ್ಕೆ ಗುರುವಾರ ದಕ್ಷಿಣ ಆಫ್ರಿಕಾ ತಂಡದಿಂದ ಸತ್ವಪರೀಕ್ಷೆ ಎದುರಾಗಲಿದೆ. ಟಿ20 ವಿಶ್ವಕಪ್ ಸೂಪರ್ ಎಂಟರ ಹಂತದಲ್ಲಿ ಅಜೇಯವಾಗಿರುವ ಈ ಎರಡು ತಂಡಗಳು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೆಮಿಫೈನಲ್ ಸ್ಥಾನಕ್ಕಾಗಿ ಹಣಾಹಣಿ ನಡೆಸಲಿವೆ.

ಫೇವರೀಟ್‌ ತಂಡವಾಗಿರುವ ಭಾರತ ವಿರುದ್ಧ ಇದೇ ಕ್ರೀಡಾಂಗಣದಲ್ಲಿ 76 ರನ್‌ಗಳ ಅಧಿಕಾರಯುತ ಗೆಲುವು ದಾಖಲಿಸಿರುವ ಏಡನ್ ಮರ್ಕರಂ ಪಡೆ ಈ ಪಂದ್ಯವನ್ನು ಆಡಲು ಇಳಿಯುತ್ತಿದೆ. ವೆಸ್ಟ್‌ ಇಂಡೀಸ್ ತಂಡ, ಮುಂಬೈನಲ್ಲಿ ನಡೆದ ಸೂಪರ್ ಎಂಟರ ಇನ್ನೊಂದು ಪಂದ್ಯದಲ್ಲಿ ಬ್ಯಾಟಿಂಗ್ ಪರಾಕ್ರಮ ಪ್ರದರ್ಶಿಸಿ ಜಿಂಬಾಬ್ವೆ ವಿರುದ್ಧ 107 ರನ್‌ಗಳ ದೊಡ್ಡ ಗೆಲುವು ಸಾಧಿಸಿದೆ.

ADVERTISEMENT

‘ಪವರ್‌ಹಿಟ್ಟರ್‌’ಗಳ ಪಡೆಯನ್ನೇ ಹೊಂದಿರುವ ವೆಸ್ಟ್ ಇಂಡೀಸ್ ತಂಡ ಕೆಲವೇ ಓವರುಗಳ ಅಂತರದಲ್ಲಿ ಪಂದ್ಯದ ದಿಕ್ಕನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ಆದರೆ ಸಮತೋಲನ ಹೊಂದಿರುವ ದಕ್ಷಿಣ ಆಫ್ರಿಕಾದ ದಾಳಿಯನ್ನು ಅದು ಹೇಗೆ ನಿಭಾಯಿಸಲಿದೆ ಎಂಬುದೇ ಕುತೂಹಲಕ್ಕೆ ಕಾರಣವಾಗಿದೆ. ಮಾರ್ಕೊ ಯಾನ್ಸೆನ್, ಕೇಶವ ಮಹಾರಾಜ್, ಕಗಿಸೊ ರಬಾಡ ಮತ್ತು ಲುಂಗಿ ಎನ್‌ಗಿಡಿ ಅವರನ್ನು ಹೊಂದಿರುವ ಹರಿಣಪಡೆಯು ಬೌಲಿಂಗ್ ವೈವಿಧ್ಯ ಹೊಂದಿದೆ.

ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಸಹ ಉತ್ತಮವಾಗಿದೆ. ಅನುಭವಿ ಡೇವಿಡ್‌ ಮಿಲ್ಲರ್ ಆಪತ್ಬಾಂಧವನ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಭಾರತ ವಿರುದ್ಧವೂ ಅವರು ನಿರ್ಣಾಯಕ ಆಟ ಆಡಿದ್ದರು.

ಮಧ್ಯಾಹ್ನದ ಪಂದ್ಯ:

ಈ ಹಿಂದೆ ಅಹಮದಾಬಾದಿನಲ್ಲಿ ಪಂದ್ಯಗಳು ರಾತ್ರಿ ನಡೆದಿದ್ದವು. ಈ ಪಂದ್ಯ ಮಧ್ಯಾಹ್ನ ನಿಗದಿಯಾಗಿರುವ ಕಾರಣ ಇಬ್ಬನಿಯ ಪಾತ್ರ ಎದುರಾಗದು. ದಕ್ಷಿಣ ಆಫ್ರಿಕಾ ತನ್ನ ಹೆಚ್ಚಿನ ಪಂದ್ಯಗಳನ್ನು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಡಿರುವುದು ಆ ತಂಡಕ್ಕೆ ಸ್ವಲ್ಪ ಅನುಕೂಲವಾಗಬಹುದು. 

ಭಾರತದ ಮೇಲೂ ಪರಿಣಾಮ:

ವೆಸ್ಟ್ ಇಂಡೀಸ್ ಈ ಪಂದ್ಯ ಗೆದ್ದರೆ ಭಾರತಕ್ಕೆ ಅದು ತಲೆನೋವು ತರಲಿದೆ. ಮಾತ್ರವಲ್ಲ, ವೆಸ್ಟ್‌ ಇಂಡೀಸ್ ತಂಡದ ಸೆಮಿಫೈನಲ್ ಹಾದಿ ತೆರೆಯಲಿದೆ. ಆ ಮೂಲಕ ದಕ್ಷಿಣ ಆಫ್ರಿಕಾ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಳ್ಳಲು ಜಿಂಬಾಬ್ವೆ ವಿರುದ್ಧ ಪಂದ್ಯದವರೆಗೆ ಕಾಯಬೇಕಾಗುತ್ತದೆ. ಈ ಸನ್ನಿವೇಶದಲ್ಲಿ ಭಾರತ ನಾಲ್ಕರ ಘಟ್ಟ ತಲುಪಬೇಕಾದರೆ, ವೆಸ್ಟ್‌ ಇಂಡೀಸ್ ಮತ್ತು ಜಿಂಬಾಬ್ವೆ ತಂಡಗಳನ್ನು ದೊಡ್ಡ ಅಂತರದಲ್ಲಿ ಸೋಲಿಸಲೇಬೇಕಾಗುತ್ತದೆ. ಒಟ್ಟಾರೆ ಲೆಕ್ಕಾಚಾರ ಗುರುವಾರದ ಪಂದ್ಯಗಳ ಬಳಿಕ ನಿರ್ಣಾಯಕ ಸ್ವರೂಪ ಪಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.