
ನವದೆಹಲಿ: ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ನಡೆಯುತ್ತಿರುವ ಈ ಬಾರಿಯ ಟಿ20 ವಿಶ್ವಕಪ್ ಆವೃತ್ತಿಯು, ಟೂರ್ನಿಯ ಇತಿಹಾಸದಲ್ಲೇ ಅತಿಹೆಚ್ಚು ವೀಕ್ಷಣೆ ಪಡೆದ ಆವೃತ್ತಿಯಾಗಿದೆ ಎಂದು ಐಸಿಸಿ ಮುಖ್ಯಸ್ಥ ಜಯ್ ಶಾ ಅವರು ಬುಧವಾರ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಟೂರ್ನಿಗೂ ಮೊದಲೇ, ಈ ಆವೃತ್ತಿಯನ್ನು ಜಾಗತಿಕಗೊಳಿಸುವ ಹಾಗೂ ವೀಕ್ಷಕರಿಗೆ ಸುಲಭವಾಗಿ ಲಭ್ಯವಾಗುವಂತೆ ಐಸಿಸಿ ಹಲವು ಕ್ರಮಗಳನ್ನು ತೆಗೆದುಕೊಂಡಿತ್ತು. ಈ ಬಾರಿಯ ಟೂರ್ನಿಯನ್ನುಇದುವರೆಗೂ 50 ಕೋಟಿಗೂ ಅಧಿಕ ಜನರು ವೀಕ್ಷಿಸಿದ್ದಾರೆ. ಇದು ಟಿ20 ವಿಶ್ವಕಪ್‌ನ ನೇರಪ್ರಸಾರದಲ್ಲಿನ ದಾಖಲೆಯಾಗಿದೆ. ರೋಚಕ ಪಂದ್ಯಗಳು ಹಾಗೂ ಡಿಜಿಟಲ್ ಬಳಕೆದಾರರು ಹೆಚ್ಚಾಗಿರುವ ಕಾರಣ ಐಸಿಸಿ ತನ್ನ ಗುರಿಯನ್ನು ತಲುಪಿದೆ‘ ಎಂದು ಹೇಳಿದ್ದಾರೆ.
‘ಟಿ20 ವಿಶ್ವಕಪ್ ಟೂರ್ನಿಯು ಡಿಜಿಟಲ್ ಪ್ರಸಾರದಲ್ಲೂ ದಾಖಲೆ ಬರೆದಿದೆ. ಇದುವರೆಗೂ ಜಿಯೊ ಹಾಟ್‌ಸ್ಟಾರ್‌ನಲ್ಲಿ 6.05 ಕೋಟಿ ವೀಕ್ಷಣೆಯಾಗಿದೆ. ನಾಕೌಟ್ ಪಂದ್ಯಗಳು ಶುರುವಾಗಲಿದ್ದು, ಭಾರತೀಯ ಅಭಿಮಾನಿಗಳ ಸಹಾಯದಿಂದ ಟೂರ್ನಿಯ ವೀಕ್ಷಣೆಯಲ್ಲಿ ಇನ್ನೂ ಹಲವು ದಾಖಲೆಗಳು ಆಗಲಿವೆ’ ಎಂದು ಹೇಳಿದ್ದಾರೆ.
2026ರ ಟಿ20 ವಿಶ್ವಕಪ್‌ನ ಎರಡು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಕ್ಕೂ ಮುನ್ನವೇ, 2024ರಲ್ಲಿ ಅಮೆರಿಕದಲ್ಲಿ ನಡೆದ ಕೊನೆಯ ಆವೃತ್ತಿಯ ವೀಕ್ಷಕರ ಸಂಖ್ಯೆಯ ದಾಖಲೆಯನ್ನು ಮುರಿದಿದೆ.
ಐಸಿಸಿ ಪಂದ್ಯಾವಳಿಗಳಲ್ಲಿ 2025ರ ಚಾಂಪಿಯನ್ಸ್ ಟ್ರೋಫಿಯು ಅತಿಹೆಚ್ಚು ವೀಕ್ಷಣೆ ಪಡೆದ ಟೂರ್ನಿಯಾಗಿತ್ತು. 25,000 ಕೋಟಿ ನಿಮಿಷಗಳ ವೀಕ್ಷಣೆ ಹಾಗೂ ಟಿವಿಯಲ್ಲಿ 12.2 ಕೋಟಿ ವೀಕ್ಷಣೆಯಾಗಿತ್ತು.
ಫೆ.7ರಂದು ಆರಂಭವಾಗಿದ್ದ ಟಿ20 ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳು ಭಾಗವಹಿಸಿದ್ದವು. ಮಾ.4ರಿಂದ ಸೆಮಿಫೈನಲ್ ಆರಂಭವಾಗಲಿದ್ದು ಭಾರತ, ನ್ಯೂಜಿಲೆಂಡ್, ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಕಣದಲ್ಲಿವೆ. ಮಾ.8ರಂದು ಫೈನಲ್ ಪಂದ್ಯ ಜರುಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.