ADVERTISEMENT

ಕಳ್ಳತನ ಮತ್ತು ಮಿಸ್ ಆದ ಐಫೋನ್‌ ರಿಪೇರಿ ಮಾಡದಿರಲು ಆ್ಯಪಲ್ ಚಿಂತನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಮಾರ್ಚ್ 2022, 12:27 IST
Last Updated 31 ಮಾರ್ಚ್ 2022, 12:27 IST
ಆ್ಯಪಲ್ ಐಫೋನ್
ಆ್ಯಪಲ್ ಐಫೋನ್   

ಬೆಂಗಳೂರು: ಕಳವಾಗಿರುವ ಮತ್ತು ಕಳೆದುಹೋದ ಆ್ಯಪಲ್ ಐಫೋನ್ ಅನ್ನು ರಿಪೇರಿ ಮಾಡದೇ ಇರುವ ನಿರ್ಧಾರ ಕೈಗೊಳ್ಳಲು ಆ್ಯಪಲ್ ಮುಂದಾಗಿದೆ.

ಸರ್ವಿಸ್ ಪಾಲಿಸಿಯಲ್ಲಿ ಬದಲಾವಣೆ ಮಾಡುವ ಮೂಲಕ, ಆ್ಯಪಲ್ ಐಫೋನ್‌ಗಳ ರಿಪೇರಿ ವಿಚಾರದಲ್ಲಿ ಹೊಸ ನಿಯಮ ಜಾರಿಮಾಡುವ ಸಾಧ್ಯತೆಯಿದೆ.

ಮ್ಯಾಕ್‌ರೂಮರ್ಸ್ ವರದಿ ಮಾಡಿರುವಂತೆ, ಆ್ಯಪಲ್ ಸ್ಟೋರ್ ಮತ್ತು ಅಧಿಕೃತ ಸರ್ವಿಸ್ ಸೆಂಟರ್‌ಗಳಿಗೆ ನೀಡಿರುವ ಆಂತರಿಕ ಮಾಹಿತಿಯಲ್ಲಿ, ಮುಂದಿನ ದಿನಗಳಲ್ಲಿ ರಿಪೇರಿಗೆ ಬರುವ ಐಫೋನ್‌ಗಳು, ಕಳವಾಗಿರುವುದು ಮತ್ತು ಕಳೆದುಹೋಗಿದ್ದ ಬಗ್ಗೆ ಪತ್ತೆಯಾದರೆ, ಅವುಗಳನ್ನು ರಿಪೇರಿ ಮಾಡದಿರುವಂತೆ ಸೂಚಿಸಿದೆ.

ADVERTISEMENT

ಐಫೋನ್ ರಿಪೇರಿಗೂ ಮೊದಲು, ಸಿಬ್ಬಂದಿ, ಐಫೋನ್ IMEI ಸಂಖ್ಯೆಯನ್ನು GSMA ಡಿವೈಸ್ ರಿಜಿಸ್ಟರಿಯಲ್ಲಿ ಪರಿಶೀಲಿಸಿ, ತಾಳೆ ನೋಡಲಿದೆ. ಅದರಲ್ಲಿ ಕಳೆದುಹೋದ ಇಲ್ಲವೇ ಕಳವಾದ ಐಫೋನ್ ಎನ್ನುವುದು ಪತ್ತೆಯಾದರೆ, ಅದನ್ನು ರಿಪೇರಿ ಮಾಡದಿರಲು ಆ್ಯಪಲ್ ಕ್ರಮಕೈಗೊಳ್ಳಲಿದೆ.

ಅಲ್ಲದೆ, ಐಫೋನ್‌ನ ಯಾವುದಾದರೂ ಇಎಂಐ ಪಾವತಿ ಬಾಕಿಯಿದ್ದರೆ, ಟೆಲಿಕಾಂ ಬಿಲ್ ಉಳಿಸಿಕೊಂಡಿದ್ದರೆ, ಅದನ್ನು ರಿಪೇರಿ ಮಾಡದೇ ಇರುವ ಸಾಧ್ಯತೆಯಿದೆ.

ಆದರೆ, ಕೆಲವೊಂದು ಸಂದರ್ಭದಲ್ಲಿ ಬಳಕೆದಾರರು ಐಫೋನ್ ಆ್ಯಪಲ್ ಐಡಿ, ಪಾಸ್‌ವರ್ಡ್ ಮರೆತು ಲಾಕ್ ಆಗಿದ್ದರೆ, ಅದರ ಮಾಲೀಕತ್ವ ಹೊಂದಿರುವ ಕುರಿತು ಸೂಕ್ತ ದಾಖಲೆ ಒದಗಿಸಿದರೆ ಅವುಗಳನ್ನು ಪರಿಶೀಲಿಸಿ, ರಿಪೇರಿ ಮಾಡಿಕೊಡಲಿದೆ. ಐಫೋನ್ ಮರಳಿ ಮಾರಾಟ ಮಾಡುವಾಗಲೂ ಈ ಕ್ರಮವನ್ನು ಕಂಪನಿ ಕೈಗೊಳ್ಳಲಿದೆ.

ಇದರಿಂದಾಗಿ, ಕಳವಾದ ಐಫೋನ್ ಮಾರಾಟ ಮಾಡುವುದು ಮತ್ತು ಅಡ ಇರಿಸುವ ಸಂದರ್ಭದಲ್ಲೂ ಹೊಸ ನಿಯಮ ಅನ್ವಯವಾಗಲಿದ್ದು, ಅದರ ಪ್ರಕಾರ, ಮಾಲೀಕರಲ್ಲದವರು ಐಫೋನ್ ಮರು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಜತೆಗೆ ಸೆಕೆಂಡ್ ಹ್ಯಾಂಡ್ ಐಫೋನ್ ಖರೀದಿಸುವಾಗಲೂ, ಪರಿಶೀಲಿಸಿ, ನೈಜತೆಯನ್ನು ತಿಳಿದುಕೊಳ್ಳಲು ಈ ಕ್ರಮ ಅನುಕೂಲವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.