ಸಾಂದರ್ಭಿಕ ಚಿತ್ರ
ನವದೆಹಲಿ: ಭಾರತದ ಮೊದಲ ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ 7 ನ್ಯಾನೋಮೀಟರ್ ಕಂಪ್ಯೂಟರ್ ಚಿಪ್ (ಪ್ರೊಸೆಸರ್ ‘ಶಕ್ತಿ’) 2028ರ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐ.ಟಿ. ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
‘ಐಟಿ ಸರ್ವರ್‌ಗಳಲ್ಲಿ ಬಳಸಬಹುದಾದ ಚಿಪ್‌ಸೆಟ್ ಅನ್ನು ಭವಿಷ್ಯದಲ್ಲಿ ಸ್ಥಳೀಯವಾಗಿಯೇ ಉತ್ಪಾದಿಸಬಹುದು ಎಂದು ಐಐಟಿ ಮದ್ರಾಸ್ ತಂಡವು ತಿಳಿಸಿರುವುದಾಗಿ ವೈಷ್ಣವ್ ಅವರು ‘ಎಕ್ಸ್’ನಲ್ಲಿ ವಿಡಿಯೊ ಪೋಸ್ಟ್ ಮಾಡಿದ್ದಾರೆ.
2028ರ ವೇಳೆಗೆ ದೇಶದಲ್ಲಿ 7 nm ಚಿಪ್ ವಿನ್ಯಾಸ ಹಾಗೂ ವೇಫರ್ ಫ್ಯಾಬ್ರಿಕೇಶನ್ (ಚಿಪ್ ಉತ್ಪಾದನಾ ಘಟಕ) ಕಾರ್ಯಾಚರಣೆಗೆ ಸಿದ್ಧವಾಗಲಿದೆ ಎಂದು ವೈಷ್ಣವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ನಾವು 28 ನ್ಯಾನೋಮೀಟರ್‌ನಿಂದ 7 ನ್ಯಾನೋಮೀಟರ್ ಹಾದಿಯನ್ನು ಹಿಡಿಯುತ್ತೇವೆ. ಆದ್ದರಿಂದ ಭವಿಷ್ಯದಲ್ಲಿ ಇದನ್ನು ಸ್ಥಳೀಯವಾಗಿಯೇ ಉತ್ಪಾದಿಸಬಹುದಾಗಿದ್ದು, ಅದನ್ನು ಮಾಡೋಣ’ ಎಂದು ವೈಷ್ಣವ್ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.
ಹಣಕಾಸು, ಸಂವಹನ, ರಕ್ಷಣೆ ಮತ್ತು ಕಾರ್ಯತಂತ್ರದ ವಲಯಗಳಿಗೆ ಪ್ರೊಸೆಸರ್ ಅನ್ನು ಅಭಿವೃದ್ಧಿಪಡಿಸುತ್ತಿರುವ ಐಐಟಿ ಮದ್ರಾಸ್‌ನ ತಂಡವು, ಸದ್ಯ ಕಂಪ್ಯೂಟರ್ ಸರ್ವರ್‌ಗಳಲ್ಲಿನ ನಿಯೋಜನೆಯನ್ನು ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ.
ಪ್ರಸ್ತುತ ಮೊಬೈಲ್, ಕಂಪ್ಯೂಟರ್ ಮತ್ತು ಸರ್ವರ್‌ಗಳಂತಹ ಹೈಟೆಕ್ ಸಾಧನಗಳಲ್ಲಿ ಹೆಚ್ಚಾಗಿ 3 ನ್ಯಾನೋಮೀಟರ್ ಮತ್ತು 7 ನ್ಯಾನೋಮೀಟರ್‌ಗಳ ನಡುವಿನ ಗಾತ್ರದ ಚಿಪ್ ಅನ್ನು ಬಳಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.