ರಾಯಿಟರ್ಸ್ ಚಿತ್ರ
ಕ್ಯಾಲಿಫೋರ್ನಿಯಾ: ಚೀನಾದ ಅಗ್ಗದ, ಓಪನ್ ಸೋರ್ಸ್ ಕೋಡ್ ಹೊಂದಿರುವ ಕೃತಕ ಬುದ್ಧಿಮತ್ತೆ ತಂತ್ರಾಂಶ ಡೀಪ್‌ಸೀಕ್‌ನತ್ತ ಇಡೀ ಜಗ್ಗತ್ತೇ ನಿಬ್ಬೆರಗಾಗಿ ನೋಡುತ್ತಿದೆ. ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ಎನ್‌ವಿಡಿಯಾ ಸೇರಿದಂತೆ ಪ್ರಮುಖ ಕಂಪನಿಗಳು ಮಾರುಕಟ್ಟೆಯಲ್ಲಿ ಹಣ ಕಳೆದುಕೊಂಡಿವೆ. ಇಂಥ ಹೊಸ ಕ್ಷೇತ್ರದಲ್ಲಿ ಸ್ಪರ್ಧೆಗಳು ಸಹಜ ಎಂದು ಮೈಕ್ರೊಸಾಫ್ಟ್ ಮತ್ತು ಮೆಟಾ ಕಂಪನಿಗಳ ಸಿಇಒ ಹೇಳಿದ್ದಾರೆ.
ಸದ್ಯ ಇರುವ ಕೃತಕ ಬುದ್ಧಿಮತ್ತೆ ಮಾದರಿಗಳಿಗಿಂತ ಅಗ್ಗ, ಹೆಚ್ಚು ವೇಗ ಹಾಗೂ ನಿಖರವಾಗಿ ಕೆಲಸ ಮಾಡುವ ಸಾಮರ್ಥ್ಯ ಡೀಪ್‌ಸೀಕ್‌ಗೆ ಇದೆ ಎಂದು ಕಂಪನಿ ಹೇಳಿಕೊಂಡಿದೆ. ಆದರೆ, ಬೆಳೆಯುತ್ತಿರುವ ಕಾರ್ಪೊರೇಟ್ ಬೇಡಿಕೆಗಳನ್ನು ಪೂರೈಸಲು ಕಂಪ್ಯೂಟರ್‌ಗಳ ಬೃಹತ್ ಜಾಲವನ್ನು ಹೊಂದುವುದು ಅತ್ಯಗತ್ಯ ಎಂದು ಅಮೆರಿಕ ಮೂಲದ ಕಂಪನಿಗಳ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.
ಮೆಟಾ ಸಿಇಒ ಮಾರ್ಕ್ ಝುಕರ್‌ಬರ್ಗ್ ಪ್ರತಿಕ್ರಿಯಿಸಿ, ‘ಬಂಡವಾಳ ವೆಚ್ಚದಲ್ಲಿ ಹೆಚ್ಚು ಹಣ ಹೂಡುವುದು ಹಾಗೂ ಮೂಲಸೌಕರ್ಯ ಕಲ್ಪಿಸುವುದು ಉದ್ಯಮದ ಒಂದು ತಂತ್ರವಾಗಿದೆ’ ಎಂದಿದ್ದಾರೆ.
ಮೈಕ್ರೊಸಾಫ್ಟ್ ಸಿಇಒ ಸತ್ಯಾ ನಾದೆಲ್ಲಾ ಪ್ರತಿಕ್ರಿಯಿಸಿ, ‘ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಲು ಬೃಹತ್ ತಂತ್ರಜ್ಞಾನದ ಸಾಮರ್ಥ್ಯವನ್ನು ಹೊಂದಲು ಬಂಡವಾಳ ಹೂಡಿಕೆ ಅಗತ್ಯ. ಕೃತಕ ಬುದ್ಧಿಮತ್ತೆಯ ಕಾರ್ಯಕ್ಷಮತೆ ಹಾಗೂ ಬಳಕೆ ಹೆಚ್ಚಾಗುತ್ತಿದೆ. ಭವಿಷ್ಯದಲ್ಲಿ ಇದಕ್ಕೆ ಇನ್ನಷ್ಟು ಬೇಡಿಕೆ ಹೆಚ್ಚಲಿದೆ’ ಎಂದಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಕೃತಕ ಬುದ್ಧಿಮತ್ತೆ ಕ್ಷೇತ್ರಕ್ಕಾಗಿ ಮೈಕ್ರೊಸಾಫ್ಟ್ ಕಂಪನಿಯು ₹7 ಲಕ್ಷ ಕೋಟಿ ಹೂಡಿಕೆ ಮಾಡಿದೆ. ಮೆಟಾ ಕಂಪನಿಯು ₹ 5.5 ಲಕ್ಷ ಕೋಟಿ ಹೂಡಿಕೆ ಮಾಡಿದೆ. ಮತ್ತೊಂದೆಡೆ ಸಂಚಲನ ಮೂಡಿಸಿರುವ ಚೀನಾದ ಡೀಪ್‌ಸೀಕ್ ಕಂಪನಿಯು ತನ್ನ ಕೃತಕ ಬುದ್ಧಿಮತ್ತೆ ಮಾದರಿಯ ಅಭಿವೃದ್ಧಿಗೆ ₹52 ಕೋಟಿಯಷ್ಟು ಮಾತ್ರ ಖರ್ಚಾಗಿದೆ ಎಂದು ಹೇಳಿರುವುದು ಜಗತ್ತಿನ ಗಮನ ಸೆಳೆದಿತ್ತು. ಇದೇ ಕಾರಣಕ್ಕಾಗಿ ಪ್ರಮುಖ ಕಂಪನಿಗಳ ಷೇರುಗಳು ಕುಸಿತ ದಾಖಲಿಸಿದ್ದವು.
ಚಾಟ್‌ಜಿಪಿಟಿ ಅಭಿವೃದ್ಧಿಪಡಿಸಿದ ಓಪನ್‌ಎಐನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಮೈಕ್ರೊಸಾಫ್ಟ್‌ನ ಷೇರು ಮೌಲ್ಯವು ಶೇ 5ರಷ್ಟು ಕುಸಿತ ಕಂಡಿದೆ. ಅಜೂರ್ ಕ್ಲೌಡ್ ವ್ಯವಹಾರದಲ್ಲಿ ಪ್ರಸಕ್ತ ತ್ರೈಮಾಸಿಕದಲ್ಲಿ ನಿರೀಕ್ಷೆಯಷ್ಟು ಲಾಭವಾಗಲಿಲ್ಲ ಎಂಬ ಕಂಪನಿ ಹೇಳಿಕೆಯೂ ಈ ನಷ್ಟಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.