ಆ್ಯಪಲ್ ಕಂಪನಿಯ ಅತ್ಯಂತ ತೆಳುವಾದ ಹಾಗೂ ಹಗುರವಾದ ಐಫೋನ್ ಏರ್
Apple
ಇತ್ತೀಚೆಗೆ ಬಹುತೇಕರಿಗೆ ಸ್ಲಿಮ್ ಆಗುವುದು ಫ್ಯಾಶನ್ ಆಗಿಬಿಟ್ಟಿದೆ. ಇದು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನೂ ಬಿಟ್ಟಿಲ್ಲ. ಸ್ಯಾಮ್‌ಸಂಗ್, ಟೆಕ್‌ನೋ ಮುಂತಾದ ಕಂಪನಿಗಳ ಅಲ್ಟ್ರಾ ಸ್ಲಿಮ್ ಫೋನ್‌ಗಳು ಈಗಾಗಲೇ ಜನರ ಗಮನ ಸೆಳೆದಿದ್ದರೆ, ಆ್ಯಪಲ್ ಕಳೆದ ತಿಂಗಳಲ್ಲಿ ಬಿಡುಗಡೆ ಮಾಡಿದ ಐಫೋನ್ 17 ಸರಣಿಯಲ್ಲಿ 'ಐಫೋನ್ ಏರ್' ಎಂಬ ತೆಳುವಾದ ಫೋನ್ ಈ ಟ್ರೆಂಡ್‌ಗೆ ತಾಜಾ ಸೇರ್ಪಡೆ. ಐಫೋನ್ ಸರಣಿಯಲ್ಲಿ ಐಫೋನ್ ಪ್ಲಸ್ ಮಾದರಿಯ ಬದಲಾಗಿ ಈ ವರ್ಷ ಪರಿಚಯಗೊಂಡಿರುವುದು ಐಫೋನ್ ಏರ್ ಎಂಬ ತೆಳ್ಳಗಿನ ಮತ್ತು ಹಗುರವಾದ ಫೋನ್. ಎರಡು ವಾರ ಅದನ್ನು ಬಳಸಿ ನೋಡಿದ ಬಳಿಕ, ಅದರ ವೈಶಿಷ್ಟ್ಯಗಳು, ಹಣಕ್ಕೆ ತಕ್ಕ ಮೌಲ್ಯವೇ ಮುಂತಾದ ಮಾಹಿತಿ ಇಲ್ಲಿದೆ.
ಕೈಯಲ್ಲಿ ಹಿಡಿದಾಕ್ಷಣ ಇದರ ಗಾತ್ರವೂ, ತೂಕವೂ ಅನುಭವಕ್ಕೆ ಬರುತ್ತದೆ. ಕಾರ್ಯಾಚರಣೆಯ ವೇಗಕ್ಕಾಗಿ ದಪ್ಪನೆಯ, ಹೆಚ್ಚು ತೂಕದ ಫೋನ್‌ಗಳನ್ನೇ ನೆಚ್ಚಿಕೊಂಡಿದ್ದವರಿಗೆ ಈ ಐಫೋನ್ ಏರ್ ನಿರಾಳತೆಯ ಅನುಭವ ನೀಡುತ್ತದೆ. ನೋಡುವುದಕ್ಕೂ ಆಕರ್ಷಕವಾಗಿದೆ. 6.5 ಇಂಚಿನ ಸೂಪರ್ ರೆಟಿನಾ XDR ಡಿಸ್‌ಪ್ಲೇ ಇರುವ ಫೋನ್‌ಗೆ ಸಿರಾಮಿಕ್ ಶೀಲ್ಡ್ ರಕ್ಷಣೆ ಇದೆ. ಲೋಹದಿಂದ ಮಾಡಿದ ಚೌಕಟ್ಟು ಇದ್ದು, ಹಿಂಭಾಗದಲ್ಲಿ ಅಕ್ಷರಶಃ ಎದ್ದು ಕಾಣಿಸುತ್ತಿರುವ ಕ್ಯಾಮೆರಾ ಲೆನ್ಸ್ ಗಮನ ಸೆಳೆಯುತ್ತದೆ. ಇದರಲ್ಲಿ ಸಿಮ್ ಕಾರ್ಡ್ ಇರುವುದಿಲ್ಲ. ಬದಲಾಗಿ ಎಲೆಕ್ಟ್ರಾನಿಕ್ ಸಿಮ್ ಕಾರ್ಡ್‌ಗೆ (ಇ-ಸಿಮ್) ಮಾತ್ರ ಅವಕಾಶವಿದೆ. ಅಂದರೆ, ಅಂತರ್-ನಿರ್ಮಿತವಾಗಿ, ತಂತ್ರಾಂಶದ ಮೂಲಕ ಸಿಮ್ ಕಾರ್ಡ್ ಅನ್ನು ಅಳವಡಿಸಬಹುದು. ಇದು ಇ-ಸಿಮ್ ಮಾತ್ರವೇ ಇರುವ ಆ್ಯಪಲ್ ಕಂಪನಿಯ ಮೊದಲ ಐಫೋನ್. ಅಂದರೆ, ಫಿಸಿಕಲ್ ಸಿಮ್ ಕಾರ್ಡ್‌ಗಳನ್ನು ಬಳಸಲಾಗುವುದಿಲ್ಲ. ಎರಡು ಕೂಡ ಇ-ಸಿಮ್ ಬೇಕಾಗುತ್ತದೆ.
ತೆಳ್ಳಗಿನ ಫೋನ್‌ಗಾಗಿ ಬ್ಯಾಟರಿಯೂ ಸ್ಲಿಮ್ ಇರಬೇಕಾಗುತ್ತದೆ. ಸಿಮ್ ಕಾರ್ಡ್ ಸ್ಲಾಟ್ ಇಲ್ಲದಿರುವುದು ಕೂಡ ಈ ಫೋನನ್ನು ಅಲ್ಟ್ರಾ-ಸ್ಲಿಮ್ ಮಾಡುವಲ್ಲಿ ನೆರವಾಗಿದೆ. ಜೊತೆಗೆ ಹಿಂಭಾಗದಲ್ಲಿರುವ ಪ್ರಧಾನ ಕ್ಯಾಮೆರಾದಲ್ಲಿ ಒಂದು ಲೆನ್ಸ್ ಮಾತ್ರ ಇದೆ. ಫೋನ್ ಗಾತ್ರ ಕಿರಿದಾಗಿಸುವಲ್ಲಿ ಇದರ ಪಾತ್ರವೂ ಗಮನಾರ್ಹ. ಹಿಂಭಾಗದಲ್ಲಿ ಕ್ಯಾಮೆರಾ ಲೆನ್ಸ್ ಇರುವ ಉಬ್ಬಿದ ಭಾಗದಲ್ಲೇ ಪ್ರೊಸೆಸರ್ ಕೂಡ ಇರಿಸಲಾಗಿದ್ದು, ಫೋನ್ ಗಾತ್ರವನ್ನು ತೆಳುವಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.
ವಿಶೇಷವಾಗಿ ಗಮನ ಸೆಳೆಯುವುದೆಂದರೆ ಇದಕ್ಕೆ ಕಳೆದ ವರ್ಷ ಬಿಡುಗಡೆಯಾಗಿದ್ದ ಐಫೋನ್ 16ಇ ಮಾದರಿಯಲ್ಲಿರುವಂತೆ ಒಂದೇ ಒಂದು ಪ್ರಧಾನ ಕ್ಯಾಮೆರಾ ಲೆನ್ಸ್ ಇದೆ. ಆದರೆ, ಒಳಗಿರುವ ಯಂತ್ರಾಂಶ-ತಂತ್ರಾಂಶಗಳ ಸಂಗಮದೊಂದಿಗೆ ಗುಣಮಟ್ಟದ ಚಿತ್ರಗಳು ಸೆರೆಯಾಗುತ್ತವೆ ಎಂಬುದು ಹಲವು ಚಿತ್ರಗಳನ್ನು ಸೆರೆಹಿಡಿದಾಗ ಗಮನಕ್ಕೆ ಬಂತು. ವಿಶೇಷವಾಗಿ, ಇದರ ಎ19 ಪ್ರೊ ಚಿಪ್, ಉತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿದು, ಚಿತ್ರವನ್ನು ಅತ್ಯುತ್ತಮ ಗುಣಮಟ್ಟಕ್ಕೆ ಸಂಸ್ಕರಿಸುವಲ್ಲಿ ಲೆನ್ಸ್‌ಗೆ ಪೂರಕವಾಗಿ ಕೆಲಸ ಮಾಡುತ್ತದೆ.
ಐಫೋನ್ ಏರ್‌ನ 48 ಮೆಗಾಪಿಕ್ಸೆಲ್ ಸಾಮರ್ಥ್ಯದ ಹಿಂಭಾಗದ (ಪ್ರಧಾನ) ಕ್ಯಾಮೆರಾದಲ್ಲಿ 2x ಆಪ್ಟಿಕಲ್ ಝೂಮ್ ವ್ಯವಸ್ಥೆ ಇದೆ. ಈ ಝೂಮ್ ಬಳಸಿದರೆ ಚಿತ್ರಗಳ ಗುಣಮಟ್ಟಕ್ಕೇನೂ ಕೊರತೆಯಿಲ್ಲ. ಜೊತೆಗೆ, 10 ಪಟ್ಟು (10x) ಡಿಜಿಟಲ್ ಝೂಮ್ ಕೂಡ ಮಾಡಬಹುದು. ಇದರಲ್ಲಿನ ಚಿತ್ರಗಳು ಝೂಮ್ ಹೆಚ್ಚು ಮಾಡಿದಷ್ಟೂ, ಡಿಜಿಟಲ್ ಝೂಮ್ ಆಗಿರುವುದರಿಂದಾಗಿ ಶಾರ್ಪ್‌ನೆಸ್ ಸಾಮಾನ್ಯವಾಗಿ ಕಡಿಮೆ ಇರುತ್ತದೆ. ಬಣ್ಣಗಳ ಸೆರೆಹಿಡಿಯುವಿಕೆಯಲ್ಲಿ ಯಾವುದೇ ಕೊರತೆ ಕಾಣಲಿಲ್ಲ. ಆದರೆ ಬೇರೆ ಐಫೋನ್‌ಗಳಲ್ಲಿರುವಂತೆ ಫೋಟೊ ಸೆರೆಹಿಡಿಯಲು ಪೂರ್ವನಿಗದಿತ ಮೋಡ್‌ಗಳು ಇಲ್ಲ. ಸಹಜ ಬೆಳಕಿರುವಲ್ಲಿ ಅತ್ಯುತ್ತಮ ಚಿತ್ರಗಳು ಸೆರೆಯಾಗಿವೆ. ಮ್ಯಾಕ್ರೋ ಲೆನ್ಸ್ ಇಲ್ಲದಿರುವುದರಿಂದ ತೀರಾ ಸಮೀಪದಿಂದ, ಉದಾಹರಣೆಗೆ ಹೂವಿನ ಎಸಳು, ಮುಂತಾದವುಗಳ ಚಿತ್ರ ಸೆರೆಹಿಡಿಯಲು ಮಿತಿ ಇದೆ.
ಐಒಎಸ್ 26 ಕಾರ್ಯಾಚರಣಾ ವ್ಯವಸ್ಥೆಯ ಹೊಸ ವಿನ್ಯಾಸವು, ಕ್ಯಾಮೆರಾದಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿದೆ. ಮುಖ್ಯವಾಗಿ, ಫೋಟೊ ಹಾಗೂ ವಿಡಿಯೊ ಎಂಬ ಎರಡು ಬಟನ್‌ಗಳು ಮಾತ್ರ ಗೋಚರಿಸುತ್ತದೆ. ನಂತರ ಸ್ವೈಪ್ ಮಾಡಿದಾಗಲಷ್ಟೇ ಒಳಗಿರುವ ಪೋರ್ಟ್ರೇಟ್, ಪನೋರಮಾ, ಟೈಮ್-ಲ್ಯಾಪ್ಸ್, ಸ್ಲೋಮೋಷನ್ ಮೋಡ್‌ಗಳು ಕಾಣಿಸುತ್ತವೆ.
ಇದಲ್ಲದೆ, 18 ಮೆಗಾಪಿಕ್ಸೆಲ್ ಸೆಲ್ಫಿ (ಮುಂಭಾಗದ) ಕ್ಯಾಮೆರಾ ಲೆನ್ಸ್ ಸ್ಕ್ರೀನ್‌ನ ಬಹುತೇಕ ಮಧ್ಯಭಾಗದಲ್ಲಿರುವುದು ಅಗಲವಾದ ಕೋನದಲ್ಲಿ (ಸ್ನೇಹಿತರ ಜೊತೆ) ಗ್ರೂಪ್ ಸೆಲ್ಫಿ ತೆಗೆಯಲು ಅನುಕೂಲಕರವಾಗಿದೆ. ಇದರಲ್ಲಿಯೂ ಆಟೋ-ಝೂಮ್ ವ್ಯವಸ್ಥೆ ಇರುವುದು ಗಮನಾರ್ಹ ಸಂಗತಿ. ಒಟ್ಟಿನಲ್ಲಿ ಎರಡೂ ಕ್ಯಾಮೆರಾಗಳಲ್ಲಿ ಸೆರೆಯಾದ ಚಿತ್ರಗಳ ಗುಣಮಟ್ಟ ಚೆನ್ನಾಗಿಯೇ ಇದೆ.
ಕರೆ, ವಾಟ್ಸ್ಆ್ಯಪ್, ಒಂದೆರಡು ಗಂಟೆ ವಿಡಿಯೊ ನೋಡುವುದು, ಸೋಷಿಯಲ್ ಮೀಡಿಯಾ ಬಳಕೆ ಸೇರಿದಂತೆ ಸಾಮಾನ್ಯ ಬಳಕೆಯಲ್ಲಿ ಒಂದು ದಿನದ ಬ್ಯಾಟರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಇದಲ್ಲದೆ, ಆ್ಯಪಲ್ ಮ್ಯಾಗ್‌ಸೇಫ್ ಬ್ಯಾಟರಿಯನ್ನೂ ಒದಗಿಸುತ್ತಿದೆ. ಬೆಲೆ ಸುಮಾರು ₹12 ಸಾವಿರ ಇದ್ದು, ಪ್ರತ್ಯೇಕವಾಗಿ ಖರೀದಿಸಬೇಕಾಗುತ್ತದೆ. ಇದು ಪವರ್ ಬ್ಯಾಂಕ್‌ನಂತೆ ಕೆಲಸ ಮಾಡುತ್ತದೆ ಮತ್ತು ಐಫೋನ್ ಏರ್ ಹಿಂಭಾಗದಲ್ಲಿ ಗಟ್ಟಿಯಾಗಿ ಅಂಟಿಕೊಳ್ಳುತ್ತದೆ. ಇದು ಐಫೋನ್ ಏರ್‌ಗಾಗಿಯೇ ಸಿದ್ಧಪಡಿಸಲಾದ ಬ್ಯಾಟರಿ.
ಹೊಸದಾಗಿ ಬಿಡುಗಡೆಯಾಗಿರುವ ಐಒಎಸ್ 26 ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಐಫೋನ್ ಏರ್ ಕೆಲಸ ಮಾಡುತ್ತದೆ. ಆಕರ್ಷಕವಾದ ಫ್ಲೂಯಿಡ್ ವಿನ್ಯಾಸವು (ಐಕಾನ್‌ಗಳು ನೀರೊಳಗೆ ಎದ್ದು ಬಂದಂತೆ ಭಾಸವಾಗುತ್ತದೆ) ಗಮನ ಸೆಳೆಯುತ್ತದೆ. ಇದರಲ್ಲಿರುವ ಎ19 ಪ್ರೊ ಚಿಪ್ ಈ ಸಾಧನವನ್ನು ವೇಗವಾಗಿ ಮತ್ತು ಸುಲಲಿತವಾಗಿ ಕೆಲಸ ನಿರ್ವಹಿಸುವಂತೆ ಮಾಡುತ್ತದೆ. ಬೆಲೆ 256GB ಸ್ಟೋರೇಜ್ ಮಾದರಿಗೆ ₹1,19,900, 512GB ಮಾದರಿಗೆ ₹1,39,900.00 ಹಾಗೂ 1ಟಿಬಿ ಸ್ಟೋರೇಜ್ ಮಾದರಿಗೆ ₹1,59,900.00. ಐಫೋನ್ ಪ್ರೊ ಮ್ಯಾಕ್ಸ್‌ನಂತೆ ದೊಡ್ಡ ಸ್ಕ್ರೀನ್ ಇರುವ, ಹಗುರವಾದ ಮತ್ತು ತೆಳ್ಳಗಿರುವ ಆದರೂ ಶಕ್ತಿಶಾಲಿಯಾಗಿರುವ ಐಫೋನ್ ಬೇಕು ಎಂದುಕೊಳ್ಳುವವರಿಗೆ ಐಫೋನ್ ಏರ್ ಇಷ್ಟವಾಗಬಲ್ಲದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.