ADVERTISEMENT

ಇನ್ಫಿನಿಕ್ಸ್ ಹಾಟ್ 60 5G ಪ್ಲಸ್: ತೆಳು, ಹಗುರದ ಬಜೆಟ್ ಶ್ರೇಣಿಯ ಗೇಮಿಂಗ್ ಫೋನ್

ಅವಿನಾಶ್ ಬಿ.
Published 7 ಆಗಸ್ಟ್ 2025, 13:47 IST
Last Updated 7 ಆಗಸ್ಟ್ 2025, 13:47 IST
<div class="paragraphs"><p>ಇನ್ಫಿನಿಕ್ಸ್ ಹಾಟ್ 60 5ಜಿ ಪ್ಲಸ್ ಫೋನ್.</p></div>

ಇನ್ಫಿನಿಕ್ಸ್ ಹಾಟ್ 60 5ಜಿ ಪ್ಲಸ್ ಫೋನ್.

   

ಜುಲೈ ಮಧ್ಯಭಾಗದಲ್ಲಿ ಭಾರತದಲ್ಲಿ ಬಿಡುಗಡೆಯಾದ ಇನ್ಫಿನಿಕ್ಸ್ ಹಾಟ್ 60 5ಜಿ ಸ್ಮಾರ್ಟ್‌ಫೋನ್ ಒಂದೇ ಮಾದರಿಯಲ್ಲಿ (6ಜಿಬಿ+128ಜಿಬಿ) ದೊರೆಯುತ್ತಿದೆ. 6.7 ಇಂಚಿನ 120Hz ಡಿಸ್‌ಪ್ಲೇ, 5200mAh ಬ್ಯಾಟರಿ ಸಾಮರ್ಥ್ಯವಿರುವ ಬಜೆಟ್ ಬೆಲೆಯಲ್ಲಿ ಲಭ್ಯವಿರುವ ಈ ಫೋನನ್ನು ಎರಡು ವಾರ ಬಳಸಿ ನೋಡಿದಾಗ ಹೇಗನ್ನಿಸಿತು? ಇಲ್ಲಿದೆ ಮಾಹಿತಿ.

ವಿನ್ಯಾಸ, ಮೇಲ್ನೋಟ

ತೆಳು ಮತ್ತು ಹಗುರವಾಗಿರುವ ಇನ್ಫಿನಿಕ್ಸ್ ಹಾಟ್ 60 ಹೆಸರಿನ 5ಜಿ ಸ್ಮಾರ್ಟ್‌ಫೋನ್, 6.7 ಇಂಚು ಸ್ಕ್ರೀನ್ (ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ, 120 ರಿಫ್ರೆಶ್ ರೇಟ್) ಹೊಂದಿದ್ದು, 7.8ಮಿಮೀ ಸ್ಲಿಮ್ ಮತ್ತು 193 ಗ್ರಾಂ ತೂಕ ಹೊಂದಿದೆ. ಮೇಲ್ಬಾಗದಲ್ಲಿ ಪಂಚ್-ಹೋಲ್ ನಾಚ್ (notch) ಇದ್ದು, ಐಫೋನ್‌ನಲ್ಲಿರುವಂತೆಯೇ ಇದು ವಿಸ್ತಾರವಾಗುತ್ತದೆ. ಪಾರ್ಶ್ವ ಭಾಗದಲ್ಲಿ ಪವರ್ ಬಟನ್ ಮತ್ತು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಒಟ್ಟಿಗೇ ಇದ್ದರೆ, ಕೆಳ ಭಾಗದ ಮತ್ತೊಂದು ಸ್ವಿಚ್ ಗಮನ ಸೆಳೆಯುತ್ತದೆ. ಇದು ಎಐ ಸಹಾಯಕ ತಂತ್ರಾಂಶಕ್ಕೆ ಶಾರ್ಟ್‌ಕಟ್. ಈ ಬಟನ್ ಅನ್ನು ಬೇರೆ ಆ್ಯಪ್‌ಗಳಿಗೂ ಶಾರ್ಟ್‌ಕಟ್ ಆಗಿ ಹೊಂದಿಸಬಹುದಾಗಿದೆ. ಇದು ಕೂಡ ಐಫೋನ್‌ನಲ್ಲಿರುವ ಆ್ಯಕ್ಷನ್ ಬಟನ್ ಮಾದರಿಯಲ್ಲಿ ಕೆಲಸ ಮಾಡುತ್ತದೆ.

ADVERTISEMENT

ಪ್ಲಾಸ್ಟಿಕ್ ಚೌಕಟ್ಟು ಇದ್ದು, ಡ್ಯುಯಲ್ ನ್ಯಾನೋ ಸಿಮ್, ಹೈಬ್ರಿಡ್ ಮೈಕ್ರೋಎಸ್‌ಡಿ ಕಾರ್ಡ್ ಸ್ಲಾಟ್ ಇದೆ. ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ಲೆನ್ಸ್ ಮತ್ತು ಫ್ಲ್ಯಾಶ್ ಇದೆ. ಆಂಡ್ರಾಯ್ಡ್ 15 ಆಧಾರದಲ್ಲಿ XOS 15.1 ಕಾರ್ಯಾಚರಣಾ ವ್ಯವಸ್ಥೆಯಿದೆ. ಡೈಮೆನ್ಸಿಟಿ 7020 ಚಿಪ್‌ಸೆಟ್ ಇದ್ದು, ಫೋಲ್ಯಾಕ್ಸ್ ಎಂಬ ಎಐ ಅಸಿಸ್ಟೆಂಟ್ (ಧ್ವನಿ ಮೂಲಕ ಸಹಾಯ ಮಾಡುವ ತಂತ್ರಜ್ಞಾನ) ಅಡಕವಾಗಿದೆ. ಇದರೊಂದಿಗೆ ಕಡಿಮೆ ಬೆಲೆಯಲ್ಲಿ ಕೃತಕ ಬುದ್ಧಿಮತ್ತೆಯ ವೈಶಿಷ್ಟ್ಯವನ್ನು ಇನ್ಫಿನಿಕ್ಸ್ ಒದಗಿಸಿದೆ.

ಸಾರಾಂಶ

ಇನ್ಫಿನಿಕ್ಸ್ ಹಾಟ್ 60 5G+ ಫೋನ್‌ನ ಪ್ರಮುಖ ವೈಶಿಷ್ಟ್ಯಗಳು

  • ಡಿಸ್‌ಪ್ಲೇ: 6.7 ಇಂಚು IPS LCD, 720×1600 px, 120 Hz ರಿಫ್ರೆಶ್ ರೇಟ್

  • ಕಾರ್ಯಾಚರಣಾ ವ್ಯವಸ್ಥೆ: ಆಂಡ್ರಾಯ್ಡ್ 15 ಆಧಾರಿತ XOS 15.1

  • ಚಿಪ್‌ಸೆಟ್: ಮೀಡಿಯಾಟೆಕ್ ಡೈಮೆನ್ಸಿಟಿ 7020

  • ಮೆಮೊರಿ: 6 GB RAM, 128 GB ಮೆಮೊರಿ, ಹೈಬ್ರಿಡ್ ಮೈಕ್ರೋಎಸ್‌ಡಿ ಸ್ಲಾಟ್

  • ಪ್ರಧಾನ ಕ್ಯಾಮೆರಾ: 50 MP, ಡ್ಯುಯಲ್ LED ಫ್ಲ್ಯಾಶ್

  • ಸೆಲ್ಫಿ ಕ್ಯಾಮೆರಾ: 8 MP, LED ಫ್ಲ್ಯಾಶ್

  • ಬ್ಯಾಟರಿ: 5200 mAh, 18W ವೇಗದ ಚಾರ್ಜಿಂಗ್, 10W ರಿವರ್ಸ್ ಚಾರ್ಜಿಂಗ್ ವೇಗ

ಕ್ಯಾಮೆರಾ

ಪ್ರಧಾನವಾಗಿ ಮೂರು ಲೆನ್ಸ್‌ಗಳ ಕ್ಯಾಮೆರಾ ಹಿಂಭಾಗದಲ್ಲಿದ್ದು, 50 ಮೆಗಾಪಿಕ್ಸೆಲ್ ಸಾಮರ್ಥ್ಯದಲ್ಲಿ ಚಿತ್ರಗಳು ಸೆರೆಯಾಗುತ್ತವೆ. ಕಡಿಮೆ ಬೆಳಕಿರುವಲ್ಲಿ ಚಿತ್ರೀಕರಣಕ್ಕಾಗಿ ಡ್ಯುಯಲ್ ಫ್ಲ್ಯಾಶ್ ಇದೆ. ಉತ್ತಮ ಬೆಳಕಿರುವಲ್ಲಿ ಚಿತ್ರಗಳು ಸ್ಪಷ್ಟತೆಯಿಂದ ಸೆರೆಯಾಗಿವೆ. ಕತ್ತಲಲ್ಲಿ ಸೆರೆಯಾದ ಚಿತ್ರಗಳಲ್ಲಿ ಸ್ವಲ್ಪ ಸ್ಪಷ್ಟತೆ ಕಡಿಮೆಯಿತ್ತು. ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಮೂಲಕ, ವಿಡಿಯೊ ಚಾಟಿಂಗ್, ಮೀಟಿಂಗ್ ಮುಂತಾದವುಗಳಿಗೆ ಅನುಕೂಲವಿದೆ.

ಅಲ್ಟ್ರಾವೈಡ್ ಹಾಗೂ ಟೆಲಿಫೋಟೊ ಲೆನ್ಸ್ ಇಲ್ಲದಿದ್ದರೂ, ಇದರಲ್ಲಿರುವ ಎಐ ಕ್ಯಾಮೆರಾ ಮೋಡ್ ಬಳಸಿ, ಈ ಬೆಲೆಯ ಮಾದರಿಗೆ ಹೋಲಿಸಿದರೆ, ದೂರದ ಮತ್ತು ಹತ್ತಿರದ ವಸ್ತುಗಳ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಆಟೋ-ಫೋಕಸ್ ವ್ಯವಸ್ಥೆ ಇರುವುದು ವಿಶೇಷ. ಸ್ಲೋ-ಮೋಷನ್, ಟೈಮ್ ಲ್ಯಾಪ್ಸ್, ಪ್ರೋ, ಪನೋರಮ, ಡಾಕ್ಯುಮೆಂಟ್ಸ್ (ಯಾವುದಾದರೂ ಪತ್ರ, ದಾಖಲೆಗಳನ್ನು ಸೆರೆಹಿಡಿಯಲು), ಸ್ಕೈಶಾಪ್ ಮೋಡ್, ಸೂಪರ್ ನೈಟ್ ಮೋಡ್‌ಗಳಿವೆ. ಮುಖವನ್ನು ಫೋಕಸ್ ಮಾಡಿ, ಸುತ್ತಲಿನ ವಸ್ತುಗಳನ್ನೆಲ್ಲ ಮಸುಕಾಗಿಸುವ ಪೋರ್ಟ್ರೇಟ್ ಮೋಡ್ ಚೆನ್ನಾಗಿ ಕೆಲಸ ಮಾಡುತ್ತದೆ. ಇದರ ಜೊತೆಗೆ, AIGC ಪೋರ್ಟ್ರೇಟ್ ಮೋಡ್ ಇದ್ದು, ನಮ್ಮ ಮುಖವನ್ನು ಆಧರಿಸಿ ನಾಲ್ಕು ವೈವಿಧ್ಯಮಯ ಎಐ ಚಿತ್ರಗಳನ್ನು ತೆಗೆದುಕೊಡುತ್ತದೆ. ಇದು ವಿಶಿಷ್ಟವಾದುದು. ನಮ್ಮದೇ ಎಐ ಚಿತ್ರವನ್ನು ಸೃಷ್ಟಿಸಿದಂತೆ. ಮತ್ತೊಂದು ಗಮನಿಸಬೇಕಾದ ಮೋಡ್ ಎಂದರೆ, ಡ್ಯುಯಲ್ ವಿಡಿಯೊ. ಇದರಲ್ಲಿ ಮುಂಭಾಗದ ಹಾಗೂ ಹಿಂಭಾಗದ ಎರಡೂ ಕ್ಯಾಮೆರಾಗಳು ಏಕಕಾಲದಲ್ಲಿ ಆನ್ ಆಗುತ್ತವೆ. ವಾಟ್ಸ್ಆ್ಯಪ್‌ನಲ್ಲಿ ವಿಡಿಯೊ ಕಾಲ್ ಮಾಡಿದಂತೆ (ಎರಡೂ ವಿಂಡೊಗಳು ಕಾಣಿಸುವಂತೆ) ವಿಡಿಯೊ ರೆಕಾರ್ಡ್ ಮಾಡಲು ಇದು ಅನುಕೂಲಕರ.

3.5 ಮಿಮೀ ಜ್ಯಾಕ್ ಇದ್ದು, ಇಯರ್‌ಫೋನ್ ಮೂಲಕ ಧ್ವನಿ ಸ್ಪಷ್ಟವಾಗಿ ಕೇಳಿಸುತ್ತದೆ. ಬ್ಲೂಟೂತ್ ಮೂಲಕ ಇಯರ್‌ಫೋನ್ ಸಂಪರ್ಕಿಸಬಹುದಾಗಿದ್ದು, ಹಾಡು ಅಥವಾ ಸಂಗೀತದ ಬೀಟ್‌ಗಳು ಸ್ಪಷ್ಟವಾಗಿವೆ. ಕೆಲವು ಉಪಯುಕ್ತ ಆ್ಯಪ್‌ಗಳು ಅಂತರ್-ನಿರ್ಮಿತವಾಗಿ ಲಭ್ಯವಿದ್ದರೆ ಮತ್ತೆ ಕೆಲವು ಅನವಶ್ಯ ಆ್ಯಪ್‌ಗಳೂ ಇವೆ. ಗೂಗಲ್ ಪ್ಲೇಸ್ಟೋರ್ ಅಲ್ಲದೆ ಇನ್ಫಿನಿಕ್ಸ್ ಬಳಗದ್ದೇ ಆದ ಪಾಮ್ ಸ್ಟೋರ್‌ನಲ್ಲಿ ಲಭ್ಯವಿರುವ, ಉಪಯುಕ್ತ ಆ್ಯಪ್‌ಗಳನ್ನು ಅಳವಡಿಸಿಕೊಳ್ಳಬಹುದಾಗಿದೆ.

ಬ್ಯಾಟರಿ

ಗೇಮರ್‌ಗಳಿಗೆ, ಬ್ಯಾಟರಿ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವವರಿಗಾಗಿಯೇ ರೂಪಿಸಲಾಗಿರುವ ಈ ಫೋನ್, ಸಾಮಾನ್ಯ ಬಳಕೆಯಲ್ಲಂತೂ ಎರಡು ದಿನಗಳಿಗೆ ಯಾವುದೇ ಸಮಸ್ಯೆಯಿಲ್ಲದಂತೆ ಕೆಲಸ ಮಾಡಿದೆ. ಜಾಸ್ತಿ ಗೇಮಿಂಗ್ ಹಾಗೂ ವಿಡಿಯೊ ರೆಕಾರ್ಡಿಂಗ್ ಮಾಡುವಂತಿದ್ದರೂ 24 ಗಂಟೆಗಳ ಬ್ಯಾಟರಿ ಬಾಳಿಕೆಗೆ ಸಮಸ್ಯೆಯಿಲ್ಲ. 5200 mAh ಸಾಮರ್ಥ್ಯದ ಬ್ಯಾಟರಿ ಇದ್ದು, 18W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. ಇಷ್ಟಲ್ಲದೆ, ಇದರಲ್ಲಿರುವ ಬ್ಯಾಟರಿಯಿಂದ ಬೇರೆ ಸಾಧನಗಳನ್ನು (ಬೇರೆ ಫೋನ್, ಇಯರ್‌ಬಡ್ಸ್ ಇತ್ಯಾದಿ) ಕೂಡ ಚಾರ್ಜ್ ಮಾಡುವ ಅವಕಾಶವಿದ್ದು, 10W ವೇಗದಲ್ಲಿ ರಿವರ್ಸ್ ಚಾರ್ಜಿಂಗ್ ಸಾಧ್ಯವಾಗುತ್ತದೆ.

ಎಐ ವಿಶೇಷತೆ

ಇನ್ಫಿನಿಕ್ಸ್ ರೂಪಿಸಿದ ಕೃತಕ ಬುದ್ಧಿಮತ್ತೆ (ಇನ್ಫಿನಿಕ್ಸ್ ಎಐ) ತಂತ್ರಾಂಶಕ್ಕೆ ಪಾರ್ಶ್ವ ಭಾಗದಲ್ಲಿರುವ ವಿಶಿಷ್ಟ ಎಐ ಬಟನ್ ಮೂಲಕ ಪ್ರವೇಶ ಪಡೆಯಬಹುದು. ಈ ಬಟನ್ ಅನ್ನು ಕೆಲವು ಸೆಕೆಂಡುಗಳ ಕಾಲ ಒತ್ತಿ ಹಿಡಿದರೆ ಫೋಲ್ಯಾಕ್ಸ್ ಎಐ ಸಹಾಯಕ ತಂತ್ರಾಂಶದ ಮೂಲಕ ಸಾಕಷ್ಟು ಕೆಲಸಗಳನ್ನು (ಚಾಟ್‌ಜಿಪಿಟಿ, ಜೆಮಿನಿ ಮುಂತಾದವುಗಳಂತೆ) ಸಾಧಿಸಬಹುದು. ಈ ಬಟನ್ ಒತ್ತಿಹಿಡಿದು (ಇಂಟರ್ನೆಟ್ ಸಂಪರ್ಕ ಇರಬೇಕಾಗುತ್ತದೆ), ನಾವು ಹೇಳಿದ್ದನ್ನು ಆಲಿಸಿ ಸೂಕ್ತವಾಗಿ ಪ್ರತಿಕ್ರಿಯಿಸುತ್ತದೆ. ಬರೆಯಲು, ಟಿಪ್ಪಣಿ ಮಾಡಿಕೊಳ್ಳಲು, ರೆಕಾರ್ಡ್ ಮಾಡಲು, ಡಾಕ್ಯುಮೆಂಟ್‌ನಿಂದ ಸಾರಾಂಶ ಪಡೆಯಲು, ವಾಲ್ ಪೇಪರ್ ರಚಿಸುವುದೇ ಮುಂತಾದ ಎಐ ಕಾರ್ಯಗಳನ್ನು ಇದು ಕ್ಷಣಾರ್ಧದಲ್ಲಿ ಮಾಡಿಕೊಡುತ್ತದೆ. ಫೋಲ್ಯಾಕ್ಸ್ ಬದಲು, ಗೂಗಲ್ ಅಸಿಸ್ಟೆಂಟ್ ಅನ್ನೂ ಇದಕ್ಕೆ ಹೊಂದಿಸಬಹುದಾಗಿದೆ. ಎರಡು ಬಾರಿ ಪ್ರೆಸ್ ಮಾಡುವಾಗ ನಮಗೆ ಬೇರೆ ಯಾವುದೇ ಆ್ಯಪ್ ತೆರೆಯಬೇಕಾದರೆ, ಉದಾಹರಣೆಗೆ ಕ್ಯಾಮೆರಾ, ಧ್ವನಿ ರೆಕಾರ್ಡಿಂಗ್, ಫ್ಲ್ಯಾಶ್ ಲೈಟ್ ಮುಂತಾದವುಗಳನ್ನು ಈ ಬಟನ್‌ನ ಡಬಲ್-ಪ್ರೆಸ್ ಕಾರ್ಯಕ್ಕೆ ಹೊಂದಿಸಬಹುದು.

ಗಮನ ಸೆಳೆದ ವೈಶಿಷ್ಟ್ಯಗಳು

* ಕನ್ನಡ ಸಹಿತ ಹಲವಾರು ಭಾಷೆಗಳ ಕೀಬೋರ್ಡ್ ಅಂತರ್-ನಿರ್ಮಿತ.

* 6ಜಿಬಿ RAM ಇದ್ದು, ಮೆಮ್‌ಫ್ಯೂಶನ್ ತಂತ್ರಜ್ಞಾನದ ಮೂಲಕ ಇನ್ನೂ 6GB ಯಷ್ಟು ವರ್ಚುವಲ್ RAM ಸೇರಿಸಿಕೊಳ್ಳುವ ಅವಕಾಶ.

* ಫಿಂಗರ್‌ಪ್ರಿಂಟ್ ಬಟನ್ ಮೂಲಕ ಹಾಗೂ ಮುಖಚರ್ಯೆ ಮೂಲಕ ಅನ್‌ಲಾಕ್ ಮಾಡುವ ಆಯ್ಕೆ.

* ಸ್ಕ್ರೀನ್ ಮೇಲ್ಭಾಗದಲ್ಲಿ ಇತ್ತೀಚಿನ ಐಫೋನ್‌ನಲ್ಲಿರುವಂತೆ ಸಕ್ರಿಯ ಆ್ಯಪ್ ಬಗ್ಗೆ ಸೂಚನೆ ನೀಡುವ, ವಿಸ್ತಾರಗೊಳ್ಳುವ ಡೈನಮಿಕ್ ಐಲೆಂಡ್ ನಾಚ್ (ಸೆಲ್ಫಿ ಕ್ಯಾಮೆರಾ ಸುತ್ತ ತೇಲುವ ಖಾಲಿ ಜಾಗ - notch).

ಒಟ್ಟಿನಲ್ಲಿ ಇದೊಂದು ಬಜೆಟ್ ಶ್ರೇಣಿಯ ಉತ್ತಮ ಗೇಮಿಂಗ್ ಸ್ಮಾರ್ಟ್‌ಫೋನ್. ಜೊತೆಗೆ ಆಡಿಯೊ, ವಿಡಿಯೊ ಬಳಕೆಗೂ ಅನುಕೂಲಕರವಾಗಿದೆ. ದೀರ್ಘ ಬ್ಯಾಟರಿ ಬಾಳಿಕೆ, 120 Hz ರಿಫ್ರೆಶ್ ರೇಟ್ ಇರುವ ಸ್ಕ್ರೀನ್, ಹಗುರ ಮತ್ತು ತೆಳುವಾದ ಈ ಫೋನ್‌ನಲ್ಲಿ ಎಐ ಸೌಕರ್ಯವೂ ದೊರೆಯುತ್ತಿದೆ. ಇದರ ಬೆಲೆ ₹10,449.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.