ADVERTISEMENT

ವಾಯು ಎಐ, ಆಕರ್ಷಕ ಪ್ರೀಮಿಯಂ ವಿನ್ಯಾಸ: ಫ್ಲ್ಯಾಗ್‌ಶಿಪ್‌ಗೆ ಸಮನಾದ ಲಾವಾ ಅಗ್ನಿ-4

ಅವಿನಾಶ್ ಬಿ.
Published 24 ನವೆಂಬರ್ 2025, 13:30 IST
Last Updated 24 ನವೆಂಬರ್ 2025, 13:30 IST
<div class="paragraphs"><p>ಲಾವಾದ ಪ್ರೀಮಿಯಂ ವೈಶಿಷ್ಟ್ಯಗಳ ಅಗ್ನಿ-4 ಹಾಗೂ ವಾಯು ಎಐ ಲಾಂಛನ - ನಾಯಿಮರಿ</p></div>

ಲಾವಾದ ಪ್ರೀಮಿಯಂ ವೈಶಿಷ್ಟ್ಯಗಳ ಅಗ್ನಿ-4 ಹಾಗೂ ವಾಯು ಎಐ ಲಾಂಛನ - ನಾಯಿಮರಿ

   

Lava

ಚೀನಾ ಹಾಗೂ ಇತರ ದೇಶಗಳ ಸ್ಮಾರ್ಟ್ ಫೋನ್‌ಗಳ ಹಾವಳಿಯ ನಡುವೆಯೂ ತನ್ನತನ ಉಳಿಸಿಕೊಂಡಿರುವ ಭಾರತೀಯ ಕಂಪನಿ ಲಾವಾ, ಅತ್ಯಾಧುನಿಕ ಸೌಕರ್ಯಗಳಿರುವ ಆಂಡ್ರಾಯ್ಡ್ ಸ್ಮಾರ್ಟ್ ಫೋನನ್ನು ಕಳೆದ ವಾರ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕಳೆದ ವರ್ಷದ ಅಗ್ನಿ 3 ಸರಣಿಯ ಮುಂದಿನ ಆವೃತ್ತಿಯಾಗಿ ಲಾವಾ ಅಗ್ನಿ-4 ಎಂಬ ಆಕರ್ಷಕ ಮತ್ತು ಅಷ್ಟೇ ಅತ್ಯಾಧುನಿಕ ತಂತ್ರಜ್ಞಾನಗಳಿರುವ ಮತ್ತು ಯಾವುದೇ ಬ್ಲಾಟ್‌ವೇರ್‌ಗಳಿಲ್ಲದ ಸ್ಮಾರ್ಟ್ ಫೋನನ್ನು ಒಂದು ವಾರ ಬಳಸಿ ನೋಡಿದಾಗ ಕಂಡುಬಂದ ಅಂಶಗಳು ಇಲ್ಲಿವೆ.

ADVERTISEMENT

ಪ್ರಮುಖ ವೈಶಿಷ್ಟ್ಯಗಳು

  • ಕ್ಯೂಟ್ ಆಗಿರುವ ಎಐ ನಾಯಿಮರಿಯ ಆನಿಮೇಶನ್

  • ಪ್ರೀಮಿಯಂ ಮೆಟಲ್ ಫ್ರೇಮ್

  • ವಾಯು ಎಐ ಎಂಬ ಕೃತಕ ಬುದ್ಧಿಮತ್ತೆ ಸಹಾಯಕ

  • ಪ್ರಧಾನ ಕ್ಯಾಮೆರಾ ಮಾಡ್ಯೂಲ್ ಮಧ್ಯಭಾಗದಲ್ಲಿ ಆಕರ್ಷಕವಾಗಿ ಜೋಡಿಸಲ್ಪಟ್ಟಿವೆ

  • ಗಣಿತ ಟೀಚರ್, ಇಂಗ್ಲಿಷ್ ಟೀಚರ್ ಸಹಿತ ಅತ್ಯಾಧುನಿಕ ಎಐ ವೈಶಿಷ್ಟ್ಯಗಳು

  • 66W ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯಿರುವ 5000mAh ಬ್ಯಾಟರಿ

  • 50 ಮೆಗಾಪಿಕ್ಸೆಲ್ ಪ್ರಧಾನ ಮತ್ತು ಸೆಲ್ಫಿ ಕ್ಯಾಮೆರಾಗಳು

ವಿನ್ಯಾಸ

ಲಾವಾ ಫೋನ್ ಎಂದಾಕ್ಷಣ ಇದು ಸಾಮಾನ್ಯವಾಗಿರಬಹುದು ಅಂತಂದುಕೊಂಡೇ ಇದನ್ನು ಕೈಗೆತ್ತಿಕೊಂಡಾಗ, ಏನೋ ವಿಶೇಷತೆ ಇದೆ ಅನ್ನಿಸಿತು. ಹೌದು. ಅಲ್ಯೂಮೀನಿಯಂ ಫ್ರೇಮ್ ಇರುವ ಅಗ್ನಿ-4 ಫೋನ್ ಕೈಗೆತ್ತಿಕೊಂಡಾಗ, ಸುಮಾರು ₹50-60 ಸಾವಿರಕ್ಕೂ ಹೆಚ್ಚು ಬೆಲೆಯ ಪ್ರೀಮಿಯಂ ಫೋನನ್ನೇ ಕೈಗೆತ್ತಿಕೊಂಡ ಅನುಭವವಾಯಿತು. ಆಕರ್ಷಕ ವಿನ್ಯಾಸ, ಒಂದಿಷ್ಟು ತೂಕ ಜೊತೆಗೆ, ಅದರಲ್ಲಿರುವ ಎಐ ವೈಶಿಷ್ಟ್ಯ - ಇವೆಲ್ಲವೂ ತಕ್ಷಣಕ್ಕೆ ಗಮನ ಸೆಳೆದ ಅಂಶಗಳು.

ಮಧ್ಯಮ ದರ್ಜೆಯ ಬಜೆಟ್‌ನ ಲಾವಾ ಅಗ್ನಿ 4 ಆಂಡ್ರಾಯ್ಡ್ ಸ್ಮಾರ್ಟ್ ಫೋನ್, ನೋಡಲು ಆಕರ್ಷಕವಾಗಿದ್ದು, ಕೃತಕ ಬುದ್ಧಿಮತ್ತೆ (ಎಐ) ವೈಶಿಷ್ಟ್ಯಗಳ ಸೇರ್ಪಡೆಯೊಂದಿಗೆ ಗಮನ ಸೆಳೆಯುತ್ತದೆ. ವಿನ್ಯಾಸ, ಕಾರ್ಯನಿರ್ವಹಣೆಯ ಉನ್ನತೀಕರಣದೊಂದಿಗೆ, ಯಾವುದೇ ಬ್ಲಾಟ್‌ವೇರ್‌ಗಳಿಂದ ಸ್ವಚ್ಛ ಕಾರ್ಯಾಚರಣಾ ವ್ಯವಸ್ಥೆಯು ಇದರ ಪ್ಲಸ್ ಪಾಯಿಂಟ್. ಜೊತೆಗೆ, ಗಟ್ಟಿಯಾಗಿಯೂ ಇದೆ.

8ಜಿಬಿ RAM 256ಜಿಬಿ ಆಂತರಿಕ ಮೆಮೊರಿ ಇರುವ ಏಕೈಕ ಮಾದರಿಯನ್ನು ಲಾವಾ ಅಗ್ನಿ–4 ಆವೃತ್ತಿಯು ಹೊಂದಿದೆ. ಇದರ ಪರಿಚಯಾತ್ಮಕ ಬೆಲೆ ₹22,999 (ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಲ್ಲಿ ದೊರೆಯುವ ಕೊಡುಗೆಗಳ ಸಹಿತವಾಗಿ). ನವೆಂಬರ್ 25ರಿಂದ ಇದು ಅಮೆಜಾನ್ ತಾಣದಲ್ಲಿ ಖರೀದಿಗೆ ಲಭ್ಯವಿದ್ದು, ಫ್ಯಾಂಟಮ್ ಬ್ಲ್ಯಾಕ್ (ಕಪ್ಪು) ಮತ್ತು ಲೂನಾರ್ ಮಿಸ್ಟ್ (ಮಂಜಿನ ಬಣ್ಣ) ಬಣ್ಣಗಳಲ್ಲಿ ದೊರೆಯುತ್ತದೆ.

ವೈಶಿಷ್ಟ್ಯಗಳು, ತಂತ್ರಾಂಶಗಳು

6.67 ಇಂಚಿನ ಫ್ಲ್ಯಾಟ್ AMOLED ಪ್ಯಾನೆಲ್ ಇರುವ ಸ್ಕ್ರೀನ್‌ಗೆ 120Hz ರಿಫ್ರೆಶ್ ರೇಟ್ ಇರುವುದರಿಂದಾಗಿ, ನ್ಯಾವಿಗೇಶನ್ ಅತ್ಯಂತ ಸುಲಲಿತವಾಗಿ ಗೋಚರಿಸುತ್ತದೆ. ಅಲ್ಯೂಮೀನಿಯಂ ಲೋಹದ ಚೌಕಟ್ಟು ಇದ್ದು, ಕೇವಲ 1.77ಮಿಮೀ ಬೆಝೆಲ್ (ಸ್ಕ್ರೀನ್ ಸುತ್ತಲಿನ ಖಾಲಿ ಜಾಗ) ಇದೆ. ಹಿಂಭಾಗದಲ್ಲಿ ಬೆರಳಚ್ಚಿನ ಕಲೆ ಮೂಡದ ಮತ್ತು ಸುಲಭವಾಗಿ ಕೈಯಿಂದ ಜಾರದ ಮೇಲ್ಮೈಯಿರುವ ಗಾಜಿನ ಕವಚವಿದೆ.

ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಮೂಲಕ ನೀರು-ನಿರೋಧಕ ರಕ್ಷಣೆಯಿದ್ದು, ಐಪಿ64 ರೇಟಿಂಗ್ ಇರುವ ದೂಳು ಮತ್ತು ಜಲನಿರೋಧಕತೆ ಪಡೆದಿದೆ. ವಿಶೇಷವೆಂದರೆ, ಒದ್ದೆಯಾದ ಕೈಗಳಿಂದ ಅಥವಾ ಎಣ್ಣೆಯ ಪಸೆಯಿರುವ ಕೈಯಿಂದ ಮುಟ್ಟಿದರೂ ಸ್ಕ್ರೀನ್ ಸರಿಯಾಗಿ ಕಾರ್ಯಾಚರಿಸಬಲ್ಲ ವೆಟ್ ಟಚ್ ಕಂಟ್ರೋಲ್ ಎಂಬ ವೈಶಿಷ್ಟ್ಯ ಇದರಲ್ಲಿದೆ.

ಮೀಡಿಯಾಟೆಕ್ ಡೈಮೆನ್ಸಿಟಿ 8350 ಚಿಪ್‌ಸೆಟ್ ಮೂಲಕ ಸಶಕ್ತವಾಗಿರುವ ಈ ಫೋನ್‌ನಲ್ಲಿ 8ಜಿಬಿ RAM ಇದ್ದು, ಗೇಮಿಂಗ್, ವಿಡಿಯೊ ಪ್ಲೇ ಅಥವಾ ಎಡಿಟ್ ಮಾಡುವುದನ್ನು ಅತ್ಯಂತ ಸುಲಲಿತವಾಗಿಸಿದೆ.

ಬ್ಯಾಟರಿ

5000mAh ಸಾಮರ್ಥ್ಯದ ಬ್ಯಾಟರಿ, ಸಾಮಾನ್ಯ ಕೆಲಸಕಾರ್ಯಗಳ ಸಂದರ್ಭದಲ್ಲಿ ಒಂದು ದಿನಕ್ಕೆ ಯಾವುದೇ ಸಮಸ್ಯೆಯಾಗಿಲ್ಲ. ಇಷ್ಟಲ್ಲದೆ, ಬಾಕ್ಸ್‌ನಲ್ಲೇ ಇರುವ 66W ವೇಗದ ಚಾರ್ಜರ್ (ಟೈಪ್ ಸಿ ಪೋರ್ಟ್) ಮೂಲಕ, ಕೇವಲ ಇಪ್ಪತ್ತು ನಿಮಿಷಗಳೊಳಗೆ ಶೇ 50ರಷ್ಟು ಚಾರ್ಜ್ ಆಗುವುದು ವಿಶೇಷ.

ಕ್ಯಾಮೆರಾಗಳು

ಇದರ ಮತ್ತೊಂದು ವಿಶೇಷವೆಂದರೆ ಎರಡು ಲೆನ್ಸ್‌ಗಳುಳ್ಳ ಉಬ್ಬಿದ, ಆಕರ್ಷಕವಾದ ಪ್ಯಾನೆಲ್‌ನಲ್ಲಿರುವ ಪ್ರಧಾನ ಕ್ಯಾಮೆರಾ. 50 ಮೆಗಾಪಿಕ್ಸೆಲ್‌ನ ಪ್ರಧಾನ ಸೆನ್ಸರ್ ಹಾಗೂ 8 ಮೆಗಾಪಿಕ್ಸೆಲ್‌ನ ಅಲ್ಟ್ರಾವೈಡ್ ಆ್ಯಂಗಲ್ ಸೆನ್ಸರ್ ಲೆನ್ಸುಗಳು ಫೋಟೊ, ವಿಡಿಯೊಗಳನ್ನು ಉತ್ತಮವಾಗಿ ಸೆರೆಹಿಡಿಯುತ್ತವೆ. ಮುಂಭಾಗದಲ್ಲಿ ಕೂಡ 50 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಇದ್ದು, ಸೆಲ್ಫಿ ಮತ್ತು ವಿಡಿಯೊ ಕರೆಗಳ ಸಂದರ್ಭದಲ್ಲಿ ಕುಲುಕಾಡಿದರೂ ಸ್ವಲ್ಪ ಮಟ್ಟಿಗೆ ಸರಿಮಾಡಬಲ್ಲ ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ ವ್ಯವಸ್ಥೆಯಿದೆ. 4ಕೆ ಸಾಮರ್ಥ್ಯದಲ್ಲಿ ವಿಡಿಯೊ ರೆಕಾರ್ಡ್ ಮಾಡಬಹುದಾಗಿದೆ.

ಎಐ ವೈಶಿಷ್ಟ್ಯಗಳು

ಹಲವು ಪ್ರಖ್ಯಾತ ಕಂಪನಿಗಳ ಫ್ಲ್ಯಾಗ್‌ಶಿಪ್ ಫೋನ್‌ಗಳಲ್ಲಿರುವ ಕೃತಕ ಬುದ್ಧಿಮತ್ತೆಯ ವೈಶಿಷ್ಟ್ಯಗಳು ಇದರಲ್ಲಿರುವುದು ಗಮನಾರ್ಹ. ಲಾವಾ ಅಗ್ನಿ 4ರಲ್ಲಿ ವಾಯು ಎಐ ಹೆಸರಿನಲ್ಲಿ ಕೃತಕ ಬುದ್ಧಿಮತ್ತೆ ವ್ಯವಸ್ಥೆಯಿದ್ದು, ನಾವು ಬಾಯಿ ಮಾತಿನಲ್ಲೇ ಸಿಸ್ಟಂ ಅನ್ನು ನಿಯಂತ್ರಿಸಬಹುದು ಮತ್ತು ಹಲವು ಎಐ ಏಜೆಂಟ್‌ಗಳೊಂದಿಗೆ ಸಂವಹನ ನಡೆಸಿ ನಮಗೆ ಬೇಕಾದ ವಿಷಯವನ್ನು ಪಡೆಯಬಹುದಾಗಿದೆ. ಎಐ ಗಣಿತ ಟೀಚರ್, ಎಐ ಇಂಗ್ಲಿಷ್ ಟೀಚರ್, ಎಐ ಫೋಟೊ ಎಡಿಟಿಂಗ್ ಮತ್ತು ಚಿತ್ರ ರಚಿಸುವ ಸಹಾಯಕರು ಇಲ್ಲಿದ್ದಾರೆ. ಎಐ ಕರೆ ಸಾರಾಂಶ ಮತ್ತು ಜ್ಯೋತಿಷ್ಯಾಧಾರಿತ ಭವಿಷ್ಯ ಹೇಳುವ ವೈಶಿಷ್ಟ್ಯವೂ ಇದರಲ್ಲಿ ಅಡಕವಾಗಿದೆ. ಗೂಗಲ್‌ನ 'ಸರ್ಕಲ್ ಟು ಸರ್ಚ್' (ಒಂದು ಚಿತ್ರದಲ್ಲಿ ನಿರ್ದಿಷ್ಟ ವಸ್ತುವಿನ ಮೇಲೆ ಬೆರಳಿನಿಂದ ವೃತ್ತ ಎಳೆದರೆ, ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹುಡುಕಿ ಒದಗಿಸುವ) ವ್ಯವಸ್ಥೆಯೂ ಇದೆ. ಜೊತೆಗೆ, ಈಗ ಸಾಮಾನ್ಯವಾಗಿಬಿಟ್ಟಿರುವ ಆ್ಯಕ್ಷನ್ ಬಟನ್ ಇದರ ಒಂದು ಪಾರ್ಶ್ವದಲ್ಲಿದ್ದು, ಅದಕ್ಕೆ ನಮಗೆ ಬೇಕಾದ ಆ್ಯಪ್ ಅನ್ನು ನಾವು ನಿಯೋಜಿಸಬಹುದು.

ವಾಯು ಎಐ ಕೆಲಸ ಮಾಡುವುದು ಸ್ಕ್ರೀನ್ ತೆರೆದಾಗಲೇ ಅದರ ಮೇಲೆ ಕಾಣಿಸಿಕೊಳ್ಳುವ ಮುದ್ದಾದ ನಾಯಿಮರಿಯ ಆನಿಮೇಶನ್ ಮೂಲಕ. ಅದನ್ನು ಒತ್ತಿ ಹಿಡಿದು ಏನಾದರೂ ಹೇಳಿದರೆ ಕೇಳಿಸಿಕೊಂಡು ನಮ್ಮ ಕೆಲಸ ಮಾಡಿಕೊಡುತ್ತದೆ. ಏನೂ ಹೇಳದಿದ್ದರೆ ನಿದ್ದೆ ಮಾಡುತ್ತದೆ. ಇದಂತೂ ಅತ್ಯಂತ ಇಷ್ಟವಾಗಬಲ್ಲ ಮುದ್ದಾದ ವೈಶಿಷ್ಟ್ಯ.

ಗಮನಿಸಬೇಕಾದ ಮತ್ತೊಂದು ವೈಶಿಷ್ಟ್ಯವೆಂದರೆ, ಸ್ಕ್ರೀನ್ ಅನ್‌ಲಾಕ್ ಮಾಡಲು ಸ್ಕ್ರೀನ್ ಮೇಲೆಯೇ ಫಿಂಗರ್ ಪ್ರಿಂಟ್ ಸೆನ್ಸರ್ ಇದ್ದು, ಫೇಸ್ ಅನ್‌ಲಾಕ್ ವ್ಯವಸ್ಥೆಯೂ ಇದೆ. ಇದಲ್ಲದೆ, ಕಳವು-ನಿರೋಧಕ ಎಚ್ಚರಿಕೆಯ ವ್ಯವಸ್ಥೆ ಇದೆ. ಇದರೊಂದಿಗೆ, ಬೇರೆಯವರು ನಮ್ಮ ಸ್ಕ್ರೀನ್ ಕದ್ದು ನೋಡದಂತೆ (ಇಡೀ ಸ್ಕ್ರೀನ್‌ನಲ್ಲಿ ನಮಗೆ ಬೇಕಾದ ವಿಷಯವನ್ನು ಮಾತ್ರ ಕಾಣಿಸುವಂತೆ ಮಾಡಿ, ಮೇಲೆ-ಕೆಳಗಿರುವ ಉಳಿದ ಭಾಗಗಳನ್ನು ಮರೆಮಾಡುವ)ವ್ಯವಸ್ಥೆ ಇದರ ವಿಶೇಷತೆ.

ಬೆಲೆಗೆ ತಕ್ಕ ಮೌಲ್ಯ ಈ ಫೋನ್‌ನಲ್ಲಿದೆ ಎಂದು ಹೇಳಬಹುದು. ಇದಕ್ಕೂ ಹೆಚ್ಚಿನದಾಗಿ, ಭಾರತೀಯ ಕಂಪನಿಯೊಂದು ಮೊಬೈಲ್ ತಯಾರಿಸಿ ವಿದೇಶಿ ಮಾರುಕಟ್ಟೆಗಳಿಗೂ ಮಾರಲು ಹೊರಟಿರುವುದು! ಈ ಸ್ಫರ್ಧಾಯುಗದಲ್ಲಿ ಭಾರತೀಯತೆಯ ಸೆಂಟಿಮೆಂಟ್‌ನೊಂದಿಗೆ ಇಷ್ಟು ದೀರ್ಘ ಕಾಲ ಲಾವಾ ಮೊಬೈಲ್ ಕಂಪನಿಯು ಗ್ರಾಹಕರ ವಿಶ್ವಾಸ ಉಳಿಸಿಕೊಂಡಿದೆ ಎಂಬುದು ಗಮನಿಸಬೇಕಾದ ವಿಚಾರ. ಇದರ ಜೊತೆಗೆ, ಒಂದು ವರ್ಷದ ವಾರಂಟಿ ಅವಧಿಯಲ್ಲಿ ಕಂಪನಿಯವರೇ ಮನೆಗೆ ಬಂದು ತಯಾರಿಕೆಗೆ ಸಂಬಂಧಿಸಿದ ಯಾವುದಾದರೂ ಸಮಸ್ಯೆಗಳೆದುರಾದರೆ ದುರಸ್ತಿ ಮಾಡಿಕೊಡುತ್ತಾರೆ, ಉಚಿತವಾಗಿ.

ಆಂಡ್ರಾಯ್ಡ್ 15 ಕಾರ್ಯಾಚರಣಾ ವ್ಯವಸ್ಥೆಯೊಂದಿಗೆ ಮೂರು ವರ್ಷಗಳ ಅಪ್‌ಗ್ರೇಡ್ ಹಾಗೂ 4 ವರ್ಷಗಳ ಸುರಕ್ಷತಾ ಅಪ್‌ಡೇಟ್‌ಗಳನ್ನು ಒದಗಿಸುವುದಾಗಿ ಲಾವಾ ಭರವಸೆ ನೀಡಿದೆ. 25 ಸಾವಿರದೊಳಗೆ ಈ ವೈಶಿಷ್ಟ್ಯಗಳಿರುವ, ಆಕರ್ಷಕ ವಿನ್ಯಾಸದ ಹಾಗೂ ಗಟ್ಟಿಯಾಗಿರುವ ಭಾರತೀಯ ಪ್ರೀಮಿಯಂ ಫೋನ್ ಇದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.