ADVERTISEMENT

CCNA2 Gene Therapy: ಹೃದಯದ ರಿಪೇರಿ!

ಅಮೃತೇಶ್ವರಿ ಬಿ.
Published 12 ನವೆಂಬರ್ 2025, 0:30 IST
Last Updated 12 ನವೆಂಬರ್ 2025, 0:30 IST
   
ಶಸ್ತ್ರಚಿಕಿತ್ಸೆಯನ್ನು ಮಾಡಿಯೋ, ಬಾಹ್ಯ ಸಾಧನಗಳ ಸಹಾಯದಿಂದಲೋ ಹೃದಯವನ್ನು ಕೆಲ ದಿನಗಳವರೆಗೆ ಕಾರ್ಯನಿರ್ವಹಿಸುವಂತೆ ಮಾಡಬಹುದು. ಈಗ ಹೃದಯದಲ್ಲಿ ಕೋಶಗಳ ವಿಭಜನೆಯನ್ನೇ ಮರಳಿಸಬಹುದಾಗಿದೆ. ಇದರಿಂದ ರೋಗಲಕ್ಷಣಗಳನ್ನು ನಿಯಂತ್ರಿಸುವುದರ ಜತೆಗೆ ಹೃದಯವನ್ನೇ ‘ರಿಪೇರಿ’ ಮಾಡಬಹುದು!

ಶಸ್ತ್ರಚಿಕಿತ್ಸೆಯನ್ನು ಮಾಡಿ ಬೇಡವಾದ ಅಂಗಾಂಶಗಳನ್ನು ಕತ್ತರಿಸಿ, ಯಾವುದೇ ಅಂಗವನ್ನು ದುರಸ್ತಿ ಮಾಡಿ ಪುನಃ ಕಾರ್ಯಪ್ರವೃತ್ತಿಗೊಳಿಸುವುದು ಈಗ ಸರ್ವೇ ಸಾಮಾನ್ಯವಾದ ವೈದ್ಯಕೀಯ ವಿಧಾನ. ಅಂತೆಯೇ ಹೃದಯವೂ ಹುಷಾರು ತಪ್ಪಿದಾಗ, ಶಸ್ತ್ರಚಿಕಿತ್ಸೆಯಿಂದ ಸರಿ ಮಾಡುವುದು, ಆಂಜಿಯೋಪ್ಲಾಸ್ಟಿ, ಸ್ಟೆಂಟನ್ನು ತೂರಿಸುವುದು, ಪೇಸ್‌ ಮೇಕರನ್ನು ಹಾಕಿಸುವುದು, ಸ್ಟೆಮ್‌ ಸೆಲ್‌ ಥೆರಪಿ, ಜೀನ್‌ ಥೆರಪಿ ಮೊದಲಾದ ವಿಧಾನಗಳಿಂದ ಹೃದಯವನ್ನು ರಿಪೇರಿ ಮಾಡುವುದರ ಬಗ್ಗೆ ನಾವು ತಿಳಿದಿದ್ದೇವೆ. ಇದ್ಯಾವುವೂ ಉಪಯೋಗಕ್ಕೆ ಬರದಾದಾಗ ಕೊನೆಯಲ್ಲಿ ಹೃದಯದ ದಾನಿಗಳಿದ್ದರೆ ಹೃದಯವನ್ನೇ ಬದಲಾಯಿಸಬಹುದು! ಇದು ತೀರಾ ಅಪರೂಪವಾಗಿ ಜರುಗುವಂತಹ ಉದಾಹರಣೆ. ಇವೆಲ್ಲಕ್ಕಿಂತಲೂ ಸುಲಭ ಹಾಗೂ ನವೀನವೆನಿಸುವ ತಂತ್ರವೊಂದನ್ನು ಪತ್ತೆ ಮಾಡಿದ್ದಾರೆ, ಅಮೆರಿಕಾದ ಮೌಂಟ್ ಸಿನಾಯ್‌ ಸ್ಕೂಲ್‌ ಆಫ್‌ ಮೆಡಿಸಿನ್‌ ಸಂಸ್ಥೆಯ ಸಂಶೋಧಕರಾದ ಡಾ. ಹೀನಾ ಚೌದ್ರಿ ಮತ್ತು ಸಂಗಡಿಗರು. ಅದುವೇ ಹೃದಯದ ಸ್ನಾಯುಗಳಲ್ಲಿರುವ ಕೋಶಗಳಿಗೆ ಮರುಜೀವ ಕೊಡುವುದು, ತನ್ಮೂಲಕ ಹೃದಯವನ್ನು ಪುನಶ್ಚೇತನಗೊಳಿಸುವುದು!

ಹೌದು. ಗರ್ಭಾವಸ್ಥೆಯಲ್ಲಿದ್ದಾಗ ಭ್ರೂಣವು ರೂಪುಗೊಳ್ಳುವ ಕಾರ್ಯವೈಖರಿಯೇ ವಿಭಿನ್ನ. ಇದು ಕೋಶಗಳ ವಿಭಜನೆ(ಸೆಲ್‌ ಡಿವಿಶನ್)‌ಯ ಮೂಲಕ ನಡೆಯುತ್ತದೆ. ಗರ್ಭಾವಸ್ಥೆಯಲ್ಲಿ ಕೋಶವಿಭಜನೆ ಅತ್ಯಂತ ಪ್ರಮುಖ ಹಾಗೂ ವಿಶಿಷ್ಟ ಪ್ರಕ್ರಿಯೆ. ಇಲ್ಲಿ ಪ್ರತಿಯೊಂದು ಅಂಗವೂ ಮೊದಲಿಗೆ ರೂಪುಗೊಂಡು ನಂತರ ಅದರ ಗಾತ್ರದಲ್ಲಿ ಬೆಳವಣಿಗೆಯಾಗುತ್ತದೆ. ಆಗ ಸಕ್ರಿಯವಾಗಿರುವ ಒಂದಿಷ್ಟು ಜೀನುಗಳು ಮಗು ಜನಿಸಿದ ನಂತರ ಸುಪ್ತಸ್ಥಿತಿಗೆ ತಲುಪಿಬಿಡುತ್ತವೆ. ಏಕೆಂದರೆ ನಂತರ ಬೇಕಿರುವುದು ಕೇವಲ ಗಾತ್ರದಲ್ಲಿ ದೊಡ್ಡದಾಗುವುದು ಮಾತ್ರ, ಅರ್ಥಾತ್‌ ಅಂಗಾಗಗಳ ಬೆಳವಣಿಗೆ ಮಾತ್ರ; ಇಲ್ಲಿ ಕೋಶವಿಭಜನೆಯ ಅವಶ್ಯಕತೆಯಿರುವುದಿಲ್ಲ. ಹಾಗಾಗಿ ಕೋಶವಿಭಜನೆಯಲ್ಲಿ ಪಾಲ್ಗೊಂಡಿದ್ದ ಜೀನುಗಳು ತಮ್ಮ ಕಾರ್ಯವನ್ನು ನಿಲ್ಲಿಸುತ್ತವೆ. ಅಂದರೆ ಕೋಶವಿಭಜನೆಯಾಗುವುದೂ ನಿಲ್ಲುತ್ತದೆ. ಈ ಜೀನನ್ನೇ ಮತ್ತೆ ಸಕ್ರಿಯಗೊಳಿಸಿಬಿಟ್ಟರೆ ಹೇಗೆ ? ಆಗ ಹೃದಯ ತನ್ನಷ್ಟಕ್ಕೆ ತಾನೇ ಪುನಶ್ಚೇತನಗೊಳ್ಳುತ್ತದೆ ಅಲ್ಲವೇ? ಇದು ಡಾ. ಚೌದ್ರಿ ಮತ್ತು ಸಂಗಡಿಗರ ಉಪಾಯ!

ಮನುಷ್ಯರಲ್ಲಿ, ಸ್ವಾಭಾವಿಕವಾಗಿರುವ ‘ಸೈಕ್ಲಿನ್‌ ಎ೨’ (ಸಿಸಿಎನ್‌ಎ೨) ಎನ್ನುವ ಜೀನ್‌, ಭ್ರೂಣದ ಜನನದ ನಂತರ ಕೆಲಸ ಮಾಡುವುದು ನಿಲ್ಲಿಸುತ್ತದೆ. ವಾಸ್ತವವಾಗಿ ಈ ಜೀನ್‌ ಹೊಸ ಕೋಶಗಳನ್ನು ರೂಪಿಸಬಲ್ಲದು ಮತ್ತು ಕೋಶಗಳ ಸ್ಥಿರತೆಯನ್ನೂ ಕಾಪಾಡಿ ಅಂಗಾಂಗಗಳ ರೀಜನರೇಷನ್‌ನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕೋಶಗಳ ಚಕ್ರವನ್ನು ನಿಯಂತ್ರಿಸುತ್ತದೆ, ಡಿಎನ್‌ಎ ರೆಪ್ಲಿಕೇಷನ್‌- ಡಿಎನ್ಎ ಪ್ರತಿಕೃತಿಯನ್ನು ನಿಯಂತ್ರಿಸಿ, ಅದರ ರಚನೆಯಲ್ಲಿ ದೋಷವುಂಟಾದಾಗ ಅದನ್ನು ದುರಸ್ತಿಗೊಳಿಸಬಲ್ಲದಂತೆ. ಹಾಗಾಗಿ ಈ ಜೀನನ್ನು ಮರಳಿ ಕಾರ್ಯಪ್ರವೃತ್ತಿಗೊಳಿಸಿದರೆ ಹೃದಯದ ಕೋಶಗಳನ್ನೂ (ಕಾರ್ಡಿಯೋಮಯೋಸೈಟುಗಳು) ರೂಪಿಸುತ್ತದೆ. ಆಗ ಹೃದಯಾಘಾತದ ನಂತರವೂ ಹೃದಯ ಸ್ವತಃ ತಾನೇ ರಿಪೇರಿ ಮಾಡಿಕೊಳ್ಳುವಂತೆ ಮಾಡಬಹುದಂತೆ!

ADVERTISEMENT

ಇದನ್ನು ಅನ್ವೇಷಣೆ ಮಾಡಲು ಮಾನವಹೃದಯವನ್ನೇ ಹೋಲುವ ಹಂದಿಯ ಹೃದಯದಲ್ಲಿ ಹೃದಯಾಘಾತದ ನಂತರ ಸಿಸಿಎನ್‌ಎ೨ ಜೀನುಗಳನ್ನು ಸಕ್ರಿಯಗೊಳಿಸಿದ್ದಾರೆ. ಆಗ ಹೃದಯದ ಕೋಶಗಳು ಮತ್ತೆ ರೂಪುಗೊಂಡು ಪುನಶ್ಚೇತನಗೊಂಡಿರುವುದನ್ನು ಖಾತರಿಪಡಿಸಿಕೊಂಡಿದ್ದಾರೆ! ನಂತರ ಮನುಷ್ಯನ ದೇಹಕ್ಕೆ ಸಮಂಜಸವಾದ ವಾಹಕ ವೈರಸ್ಸು (ಮಾರ್ಪಡಿಸಿದಂತಹ ಸೂಕ್ತ ವೈರಸ್ಸು) ಸುರಕ್ಷಿತವಾಗಿ ಹಾಗೂ ಪರಿಣಾಮಕಾರಿಯಾಗಿ ಮನುಷ್ಯನ ಹೃದಯದ ಕೋಶಗಳಲ್ಲಿ ಕೋಶವಿಭಜನೆಯನ್ನು ಪ್ರಚೋದಿಸಬಲ್ಲದು ಎನ್ನುವುದನ್ನು ಪತ್ತೆ ಮಾಡಿದ್ದಾರೆ.

ಹೃದಯಸಂಬಂಧಿ ಕಾಯಿಲೆಗಳು ಮನುಷ್ಯನ ಸಾವಿಗೆ ಅತಿ ಮುಖ್ಯ ಕಾರಣವಾಗಿದೆ. ಒಮ್ಮೆ ಹೃದಯಾಘಾತವಾದರೆ ಹೃದಯಕೋಶಗಳು ದುರ್ಬಲವಾಗಿಬಿಡುತ್ತವೆ. ಈಗಾಗಲೇ ಇರುವ ವೈದ್ಯಕೀಯ ತಂತ್ರಗಳಿಂದ ಶಸ್ತ್ರಚಿಕಿತ್ಸೆಯನ್ನು ಮಾಡಿಯೋ, ಬಾಹ್ಯ ಸಾಧನಗಳ ಸಹಾಯದಿಂದಲೋ ಹೃದಯವನ್ನು ಸ್ವಲ್ಪ ಮಟ್ಟಿಗೆ ಕೆಲವು ದಿನಗಳವರೆಗೆ ಕಾರ್ಯನಿರ್ವಹಿಸುವಂತೆ ಮಾಡಬಹುದೇ ಹೊರತು ಹೊಸ ಕೋಶಗಳನ್ನು ಬೆಳೆಯುವಂತೆ ಮಾಡುವ ಯಾವುದೇ ತಂತ್ರಗಳು ಇರಲಿಲ್ಲ. ಹಾಗಾಗಿ, ಕಾರ್ಯ ನಿಲ್ಲಿಸಿ ಸುಪ್ತಸ್ಥಿತಿಯಲ್ಲಿರುವ ಹೃದಯದ ಕೋಶದಲ್ಲಿರುವ ಸಿಸಿಎನ್‌ಎ೨ ಜೀನುಗಳನ್ನು ಎಚ್ಚರಿಸಿದರೆ ಬೆಳೆದ ಹೃದಯದಲ್ಲಿ ಕೋಶಗಳ ವಿಭಜನೆಯನ್ನು ಮರಳಿಸಬಹುದು. ಆ ಮೂಲಕ ರೋಗಲಕ್ಷಣಗಳನ್ನು ನಿಯಂತ್ರಿಸುವುದು ಮಾತ್ರವಲ್ಲದೇ ಹೃದಯವನ್ನೇ ರಿಪೇರಿ ಮಾಡಬಹುದು ಎನ್ನುವುದು ಸಂಶೋಧಕರ ಆಶಯ.

ಇದಕ್ಕಾಗಿ ಸಂಶೋಧಕರು ಒಂದು ವಾಹಕ ವೈರಸ್ಸನ್ನು ಸಿದ್ದಪಡಿಸಿ ಅದರೊಳಗೆ ಸಿಸಿಎನ್‌ಎ೨ ಜೀನನ್ನು ಇರಿಸಿ ಒಂದು ಆರೋಗ್ಯವಾಗಿರುವ ವಯಸ್ಕ ದಾನಿ ಹೃದಯಕ್ಕೆ ಸೇರಿಸಿದ್ದಾರೆ. ನಂತರ ಹೃದಯ ಕೋಶಗಳು ಯಶಸ್ವಿಯಾಗಿ ವಿಭಜನೆಯಾಗುತ್ತಿರುವುದನ್ನು ನೋಡಿದ್ದಾರೆ. ಈ ಸಮಯದಲ್ಲಿ ಅವುಗಳ ಕಾರ್ಯ ಹಾಗೂ ರಚನೆಯಲ್ಲಿ ಯಾವುಧೇ ರೀತಿಯ ವ್ಯತ್ಯಾಸಗಳು ಆಗದಿರುವುದನ್ನೂ ಗಮನಿಸಿದ್ದಾರೆ! ಮುಂದುವರೆದು ಈ ಪರೀಕ್ಷೆಗೆ 21, 41 ಹಾಗೂ 55 ವರ್ಷ ವಯಸ್ಸಿನ ದಾನಿ ಹೃದಯಗಳನ್ನು ಅಧ್ಯಯನ ಮಾಡಿದ್ದಾರೆ. ‘ಸೈಕ್ಲಿನ್‌ ಎ೨’ ಚಿಕಿತ್ಸೆಯು ಹಾಗೂ 55 ವಯಸ್ಸಿನ ಹೃದಯಗಳಲ್ಲಿ ಸುಲಭವಾಗಿ ಹೃದಯಕೋಶಗಳ ವಿಭಜನೆಯನ್ನು ಪ್ರಚೋದಿಸಿತ್ತಂತೆ. ಆದರೆ 21 ವರ್ಷದ ಹೃದಯದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲವಂತೆ. ಅರ್ಥಾತ್‌ ಎಳೆವಯಸ್ಸಿನಲ್ಲಿ ಹೃದಯದಲ್ಲಿ ಸಿಸಿಎನ್ಎ2 ಜೀನುಗಳನ್ನು ಎಚ್ಚರಿಸಲು ಯಾವುದೇ ಬಾಹ್ಯ ಪ್ರಚೋದನೆಯ ಸಹಾಯ ಬೇಕಿರದೆ ಹೃದಯಕ್ಕೆ ತನ್ನಂತಾನೇ ಪುನಶ್ಚೇತನಗೊಳ್ಳಬಲ್ಲಂತಹ ಸಾಮರ್ಥ್ಯ ಇರುತ್ತದೆ. ಅಂತೂ ವಯಸ್ಸಾದರೂ ಹೃದಯವನ್ನು ಮಾತ್ರ ಎಳೆಯದಾಗಿರಿಸಿಕೊಳ್ಳುವುದು ಸಾಧ್ಯವಾಯಿತು!

ಇನ್ನು, ಪುನಶ್ಚೇತನಗೊಂಡು ಹೊಸದಾಗಿ ಹುಟ್ಟಿರುವ ಕೋಶ(ಡಾಟರ್‌ ಸೆಲ್)ಗಳಲ್ಲಿಯೂ ಅವುಗಳ ಕಾರ್ಯಶಕ್ತಿಯನ್ನು ಸೂಚಿಸುವ ಪ್ರೋಟೀನ್‌ನ ರಚನೆ ಹಾಗೂ ಕ್ಯಾಲ್ಶಿಯಂ ಆಕ್ಟಿವಿಟಿಯು (ಸ್ನಾಯು ಸಂಕೋಚನ ಹಾಗೂ ಒಂದು ಕೋಶದಿಂದ ಮತ್ತೊಂದು ಕೋಶಕ್ಕೆ ಕ್ಯಾಲ್ಶಿಯಂ ಅಯಾನುಗಳ ಚಲನೆ, ಇನ್ನೂ ಮುಂತಾದ ಕಾರ್ಯಗಳನ್ನು ನಿರ್ವಹಿಸುವ ಒಂದು ಪ್ರಮುಖ ಪ್ರಕ್ರಿಯೆ) ಸಹಜವಾಗಿಯೇ ಇದ್ದುವಂತೆ. ಹಾಗಾಗಿ ಎಲ್ಲ ಪರೀಕ್ಷೆಗಳೂ ಸಿಸಿಎನ್‌ಎ2 ಜೀನ್‌ ಹೃದಯದ ದುರಸ್ತಿ ಮಾಡಬಲ್ಲದು ಎಂಬುದನ್ನು ಸಾಬೀತುಪಡಿಸಿವೆ. ಇನ್ನೂ ಮುಖ್ಯವಾಗಿ ಈ ವಿಧಾನವು, ಹೊಸದಾಗಿ ರೂಪುಗೊಂಡ ಕೋಶಗಳನ್ನು ಅಪಕ್ವಗೊಳಿಸುವುದಿಲ್ಲ ಹಾಗೂ ಕಾಯಿಲೆಗಳಿಂದಾಗುವಂತೆ ಅಸಹಜವಾಗಿ ಹೃದಯದ ಅಂಗಾಂಶಗಳು ದಪ್ಪವಾಗುವಂತೆ ಮಾಡುವುದೂ ಇಲ್ಲವಂತೆ!

ಹೃದಯಸ್ತಂಭನದ ನಂತರವೂ ಮತ್ತೆ ಹೊಸ ಹೃದಯವನ್ನು ಪಡೆದುಕೊಳ್ಳುವ ಶಕ್ತಿಯನ್ನು ನೀಡುವ ಭರವಸೆಗೆ ಕಾರಣವಾಗಿರುವ ಈ ಸಂಶೋಧನೆ ನಿಜಕ್ಕೂ ಸಂತಸದ ಸಂಗತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.