ನಾಸಾ ಸ್ಪೇಕ್ಸ್‌ಎಕ್ಸ್ ಡ್ರ್ಯಾಗನ್ ಸ್ಪೇಸ್‌ಕ್ರಾಫ್ಟ್ ಕ್ರ್ಯೂ10 ಉಡ್ಡಯನ
(ಚಿತ್ರ ಕೃಪೆ: X@NASA)
ವಾಷಿಂಗ್ಟನ್: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) ಸಿಲುಕಿಕೊಂಡಿರುವ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಭೂಮಿಗೆ ವಾಪಸ್ ಕರೆತರಲು ಸ್ಪೇಸ್‌ಎಕ್ಸ್ ನೆರವಿನಿಂದ ನಾಸಾ ಕಾರ್ಯಾಚರಣೆಯನ್ನು ಆರಂಭಿಸಿದೆ.
ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಶುಕ್ರವಾರ ಸಂಜೆ ಸ್ಥಳೀಯ ಕಾಲಮಾನ 7.03ಕ್ಕೆ ಸರಿಯಾಗಿ ಸ್ಪೇಸ್‌ಎಕ್ಸ್‌ನ ಫಾಲ್ಕನ್-9 ರಾಕೆಟ್ ಆಗಸದತ್ತ ಚಿಮ್ಮಿತು.
ಈ ಸಂಬಂಧ ನಾಸಾ ಹಾಗೂ ಸ್ಪೇಸ್‌ಎಕ್ಸ್ ಮಾಹಿತಿ ಹಾಗೂ ವಿಡಿಯೊವನ್ನು ಹಂಚಿಕೊಂಡಿದೆ. ನಾಸಾದ ಸ್ಪೇಕ್ಸ್‌ಎಕ್ಸ್ ಡ್ರ್ಯಾಗನ್ ಸ್ಪೇಸ್‌ಕ್ರಾಫ್ಟ್ ಕ್ರ್ಯೂ10 ಉಡ್ಡಯನ ಯಶಸ್ವಿಯಾಗಿದೆ ಎಂದು ನಾಸಾ ಘೋಷಿಸಿದೆ.
ಈ ಮಿಷನ್‌ನಲ್ಲಿ ನಾಲ್ವರು ಗಗನಯಾನಿಗಳನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾಗಿದೆ. ಈ ಮೊದಲು ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಉಡ್ಡಯನ ವಿಳಂಬಗೊಂಡಿತ್ತು.
ಕಳೆದ ವರ್ಷ ಜೂನ್ 5ರಂದು, ಬೋಯಿಂಗ್ ಸಂಸ್ಥೆಯ ಸ್ಟಾರ್‌ಲೈನರ್ ಗಗನನೌಕೆಯಲ್ಲಿ ಸುನಿತಾ ಹಾಗೂ ವಿಲ್ಮೋರ್ ಅವರು ಐಎಸ್‌ಎಸ್‌ನತ್ತ ಪ್ರಯಾಣ ಬೆಳೆಸಿದ್ದರು. 8 ದಿನಗಳ ನಂತರ ಅವರು ಭೂಮಿಗೆ ಮರಳಬೇಕಿತ್ತು. ಆದರೆ, ಗಗನನೌಕೆಯಲ್ಲಿ ಕಂಡುಬಂದ ತಾಂತ್ರಿಕ ದೋಷದಿಂದಾಗಿ ಸಾಧ್ಯವಾಗಿಲ್ಲ.
ಬಳಿಕ ಉದ್ಯಮಿ ಇಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್‌ನ ಗಗನನೌಕೆಯಲ್ಲಿ ಮರಳಿ ಭೂಮಿಗೆ ಕರೆತರಲು ನಾಸಾ ಸಿದ್ಧತೆ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.