
ಮನೆಯಲ್ಲಿ ಮುಟ್ಟಿದ ಕಡೆಯಲ್ಲೆಲ್ಲಾ ಸಿಗುವ ವಸ್ತುಗಳು ಪ್ಲಾಸ್ಟಿಕ್ ಉತ್ಪನ್ನಗಳು! ಇನ್ನು ಹೊರಗಡೆಯಂತೂ ಪ್ಲಾಸ್ಟಿಕ್ ಕಾಣದ ಜಾಗವೇ ಇಲ್ಲ. ಜಗತ್ತು ಎದುರಿಸುತ್ತಿರುವ ಹಲವಾರು ಭಯಂಕರ ಸಮಸ್ಯೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಕೂಡ ಒಂದು. ನಮ್ಮ ಭೂಮಿಯ ಮೇಲೆ ಪ್ರತಿ ವರ್ಷ ಸುಮಾರು 400 ದಶಲಕ್ಷ ಟನ್ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತದೆ. ಅವೆಲ್ಲವೂ ಮಾನವ ನಿರ್ಮಿತವೇ. ಇಷ್ಟು ದೊಡ್ಡ ರಾಶಿಯ ತ್ಯಾಜ್ಯದಲ್ಲಿ ಪುನರ್ಬಳಕೆಯಾಗುವುದು ಕೇವಲ ಶೇ 50ರಷ್ಟು ಮಾತ್ರ, ಉಳಿದರ್ಧ ಭಾಗವನ್ನು ನಾವು ಒಮ್ಮೆ ಬಳಸಿ ಎಸೆದುಬಿಡುತ್ತೇವೆ; ಪರಿಸರದಲ್ಲಿ ಅದು ಹಾಗೆಯೇ ಉಳಿದುಬಿಡುತ್ತದೆ.
ನಮಗೆ ಈಗಾಗಲೇ ತಿಳಿದಿರುವ ಹಾಗೆ ಪ್ಲಾಸ್ಟಿಕ್ ಅನ್ನು ಪೆಟ್ರೋಲಿಯಂ ಮೂಲದಿಂದ ತಯಾರಿಸಲಾಗುತ್ತದೆ; ಪಾಲಿ ಪ್ರೊಪಲೀನ್ ಹಾಗೂ ಪಾಲಿ ಇಥಲೀನ್ – ಇವೇ ಪ್ಲಾಸ್ಟಿಕ್‌ನ ಮೂಲ. ಪ್ಲಾಸ್ಟಿಕ್ ಬೇಗ ಮಣ್ಣಿನಲ್ಲಿ ಕರಗುವ ವಸ್ತುವಲ್ಲ; ಎಂದರೆ ಇದು ‘ನಾನ್–ಬಯೋಡಿಗ್ರೆಡೆಬಲ್’. ಏನಾದರೂ ಇದರ ಸಂಯೋಜನೆಯು ಜೈವಿಕವಾಗಿ ವಿಘಟನೆಯು ಆಗಬೇಕೆಂದರೆ ನೂರಾರು ವರ್ಷಗಳು ಬೇಕು. ಹೀಗಾಗಿ ನಾವು ಇದನ್ನು ಬಳಸಿ, ಬಿಸಾಡಿದ ಮೇಲೆ ಮಣ್ಣಿನಲ್ಲಿ ಕರಗಿ ಗೊಬ್ಬರವಾಗದೆ ಇದು ನೆಲ, ಜಲ, ಸಾಗರ, ಪರ್ವತ, ಹಾಗೂ ಆಹಾರ ಸರಪಣಿಗಳಲ್ಲಿ ಸೇರಿಕೊಂಡು ಪರಿಸರಮಾಲಿನ್ಯಕ್ಕೆ ಕಾರಣವಾಗುತ್ತದೆ. ಭಾರತದಲ್ಲಿ ಪ್ರತಿವರ್ಷ 3.5 ದಶಲಕ್ಷ ಟನ್ ಪ್ಲಾಸ್ಟಿಕ್ ಬಳಕೆಯಾಗುತ್ತದೆ; ಅದರಲ್ಲಿ ಕೇವಲ ಶೇ 30ರಷ್ಟು ಮಾತ್ರವೇ ಪುನರ್ಬಳಕೆಯಾಗುವುದು. ಪ್ಲಾಸ್ಟಿಕ್ ಮಾಲಿನ್ಯವನ್ನು ತಪ್ಪಿಸಲು, ಪ್ಲಾಸ್ಟಿಕ್‌ನ ಪರ್ಯಾಯವೂ ಪರಿಸರಸ್ನೇಹಿಯೂ ಆದ ವಸ್ತುವಿನ ಹುಡುಕಾಟವಂತೂ ದಶಕಗಳಿಂದ ನಡೆಯುತ್ತಿದೆ. ಅದರ ಫಲವೇ ‘ಪಾಲಿ ಲ್ಯಾಕ್ಟಿಕ್ ಆ್ಯಸಿಡ್’ - ಪಿಎಲ್ಎ.
'ಪಿಎಲ್‌ಎ" ಇದೊಂದು ಜೈವಿಕ ಪ್ಲಾಸ್ಟಿಕ್. ಇದರ ರಾಸಾಯನಿಕ ಸೂತ್ರ - (C3H4O2)n. ಇದರ ಮೆಲ್ಟಿಂಗ್ ಪಾಯಿಂಟ್ 150-160 ಡಿಗ್ರಿ ಸೆಲ್ಸಿಯಸ್. ಜಗತ್ತಿನಲ್ಲಿ ತಯಾರಾಗುತ್ತಿರುವ ಎಲ್ಲ ಜೈವಿಕ ಪ್ಲಾಸ್ಟಿಕ್‌ಗಳಿಗಿಂತಲೂ ಪಿಎಲ್‌ಎ ಬಹಳ ಜನಪ್ರಿಯ. ಇದನ್ನು ಸಾವಯವ ಮೂಲದಿಂದ ತಯಾರಿಸಲಾಗುತ್ತದೆ. ಇದಕ್ಕೆ ಬೇಕಾಗುವ ಕಚ್ಚಾ ವಸ್ತುಗಳೆಂದರೆ ಪಿಷ್ಟ, ಕಬ್ಬು ಅಥವಾ ಮರಗೆಣಸು. ಇದನ್ನು ಸಕ್ಕರೆಯ ಕಾರ್ಖಾನೆಗಳಲ್ಲಿ ಉಪ–ಉತ್ಪನ್ನವಾಗಿಯೂ ತಯಾರಿಸುತ್ತಾರೆ. ಪಾಲಿ ಲ್ಯಾಕ್ಟಿಕ್ ಆ್ಯಸಿಡ್ ತಯಾರಿಸುವ ವಿಧಾನವೆಂದರೆ, (1) ಕಬ್ಬು ಅಥವಾ ಮೆಕ್ಕೆಜೋಳದಿಂದ ಸಕ್ಕರೆಯ ಉತ್ಪಾದನೆ; (2) ಸಕ್ಕರೆಯನ್ನು ಹದುವಿಕೆಗೆ ಒಳಪಡಿಸಿ ಲ್ಯಾಕ್ಟಿಕ್ ಎಸಿಡ್ ಆಗಿ ಪರಿವರ್ತಿಸುವುದು; (3) ಲ್ಯಾಕ್ಟಿಕ್ ಎಸಿಡ್‌ನಿಂದ ಪಾಲಿಮರ್‌ನ್ನು ತಯಾರಿಸುವುದು. ಹೀಗೆ ತಯಾರಾದ ಉತ್ಪನ್ನವು ಪ್ಲಾಸ್ಟಿಕ್ ತರಹದ್ದೇ ಗುಣವನ್ನು ಹೊಂದಿರುತ್ತದೆ. ಅದರಷ್ಟು ಹೆಚ್ಚು ತಾಪಮಾನವನ್ನು ಎದುರಿಸುವ ಕ್ಷಮತೆ ಇಲ್ಲದೇ ಇರುವುದು ಇದರ ನ್ಯೂನತೆ ಎನ್ನಬಹುದು. ಇದು ಜೈವಿಕ ವಿಘಟನೆಯ ವಸ್ತುವಾಗಿದ್ದು, ನಿರ್ದಿಷ್ಟ ವಾತಾವರಣವನ್ನು ಸೃಷ್ಟಿಸಿ ನಿರ್ವಹಿಸಿದರೆ ಬೇಗನೆ ಮಿಶ್ರ ಗೊಬ್ಬರವಾಗಿ ಪರಿವರ್ತನೆಯಾಗಬಲ್ಲದು. ಪಿಎಲ್ಎ ಬಳಕೆಯಿಂದ ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಯಬಹುದು. ಅಷ್ಟೇ ಅಲ್ಲ, ಇದರ ತಯಾರಿಕೆಯಲ್ಲಿ ಹಾಗೂ ಬಳಕೆಯಲ್ಲಿ ಹೊರಸೂಸುವ ‘ಇಂಗಾಲದ ಮುದ್ರೆ’ಯೂ (ಕಾರ್ಬನ್ ಫೂಟ್‌ಪ್ರಿಂಟ್) ಪ್ಲಾಸ್ಟಿಕ್‌ಗಿಂತ ಕಡಿಮೆ ಎನ್ನುವುದು ಗಮನೀಯ ಅಂಶ.
ಪಿಎಲ್‌ಎಯ ಆವಿಷ್ಕಾರವು ಇಂದು ನಿನ್ನೆಯದಲ್ಲ; ಇದರ ಇತಿಹಾಸವನ್ನು ಹುಡುಕುತ್ತಹೋದರೆ ಅದು 1932ಕ್ಕೆ ಹೋಗಿ ನಿಲ್ಲುತ್ತದೆ. ‘ಡ್ಯುಪೊಂಟ್’ ಎನ್ನುವ ರಾಸಾಯನಿಕ ವಸ್ತುಗಳನ್ನು ತಯಾರಿಸುವ ಕಂಪನಿಯಲ್ಲಿಯ ರಸಾಯನಶಾಸ್ತ್ರಜ್ಞ ವ್ಯಾಲೆಸ್ ಕ್ಯಾರೊಡರ್ಸ್ ಇದರ ಸಂಶೋಧಕ. ಈ ವಿಜ್ಞಾನಿಯೇ ನೈಲಾನ್‌ನನ್ನು ಕಂಡುಹಿಡಿದಿದ್ದು. ಆದರೆ ಅವರು ಇದನ್ನು ಮಾರುಕಟ್ಟೆಗೆ ಸಿದ್ಧಪಡಿಸಿರಲಿಲ್ಲ. ನಂತರ 1980ರ ವೇಳೆಗೆ ಪ್ಯಾಟ್ರಿಕ್ ಗ್ರಬ್ಬರ್ ಎನ್ನುವವರು ಈ ತಂತ್ರಜ್ಞಾನವನ್ನು ಮಾರುಕಟ್ಟೆಗೆ, ಎಂದರೆ ಮಾಸ್ ಪ್ರೊಡಕ್ಷನ್ ಅಥವಾ ದೊಡ್ಡ ಮಟ್ಟದ ಉತ್ಪಾದನೆಗೆ ಬೇಕಾಗುವ ಹಾಗೆ ಅಭಿವೃದ್ಧಿ ಪಡಿಸಿದರು. ಇವರ ಈ ಸಾಧನೆಯೇ ‘ನೇಚರ್ ವರ್ಕ್ಸ್ ಎಲ್ಎಲ್‌ಸಿ’ ಎನ್ನುವ ಕಂಪನಿಯ ಬೆನ್ನೆಲುಬು. ಇಂದು ಜಗತ್ತಿನಲ್ಲಿ ಅತಿ ಹೆಚ್ಚು ಪಿಎಲ್‌ಎಯನ್ನು ಉತ್ಪಾದಿಸುವ ಕಂಪನಿಯೇ ನೇಚರ್ ವರ್ಕ್ಸ್.
ಪ್ಯಾಕೇಜಿಂಗ್, ವೈದ್ಯಕೀಯ, ಔಷಧಿಗಳ ತಯಾರಿಕೆ, ಬಟ್ಟೆ, 3ಡಿ ಪ್ರಿಂಟಿಂಗ್, ಕೃಷಿಕ್ಷೇತ್ರದಲ್ಲಿ ಪಿಎಲ್‌ಎಯ ಬಳಕೆ ಬಹಳ ಆಶಾದಾಯಕವಾಗಿದೆ. ಪಿಎಲ್‌ಎಯಿಂದ ತಯಾರಾಗುತ್ತಿರುವ ವಸ್ತುಗಳಲ್ಲಿ ಬಾಟಲಿಗಳು, ಆಹಾರದ ಪೊಟ್ಟಣಗಳು, ಕೈಚೀಲಗಳು, ವಸ್ತ್ರಗಳು – ಇವು ಕೆಲವೊಂದು ಉದಾಹರಣೆಗಳು ಮಾತ್ರ. ಜಗತ್ತಿನಲ್ಲಿ ಹಲವಾರು ಕಂಪನಿಗಳು ಪಿಎಲ್‌ಎ ಉತ್ಪನ್ನಗಳನ್ನು ತಯಾರಿಸುತ್ತಿವೆ; ಭಾರತವೂ ಈ ಓಟದ ಸ್ಪರ್ಧೆಯಲ್ಲಿ ಹಿಂದಿಲ್ಲ. ಎಲ್ಲರೂ ಆದಷ್ಟು ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಪಿಎಲ್‌ಎ ಉತ್ಪನ್ನಗಳನ್ನು ಹೊರತರಲು, ಆ ತಂತ್ರಜ್ಞಾನವನ್ನು ಕೈಗೂಡಿಸಿಕೊಳ್ಳಲು ನಿರತರಾಗಿದ್ದಾರೆ. ಇಂದು ಇದರ ಲಭ್ಯತೆಯು ಕಡಿಮೆ ಆಗಿರುವುದರಿಂದಾಗಿ ಸಾಮಾನ್ಯ ಪ್ಲಾಸ್ಟಿಕ್‌ಗಿಂತ ಇದರ ಬೆಲೆಯು ಶೇ 25-30ರಷ್ಟು ಹೆಚ್ಚು. ಮುಂದೆ ಇದು ದೊಡ್ಡ ಮಟ್ಟದ ಬಳಕೆಗೆ ಸಿದ್ಧವಾಗಿ, ಅದೇ ಪ್ರಮಾಣದಲ್ಲಿ ಉತ್ಪಾದನೆಯೂ ನಡೆದಾಗ ಆಗ ಅದರ ಬೆಲೆ ಪ್ಲಾಸ್ಟಿಕ್‌ಗಿಂತಲೂ ಕಡಿಮೆಯಾಗಬಹುದು.
ಪ್ಲಾಸ್ಟಿಕ್ ಸಂಶೋಧನೆಯಾಗಿದ್ದು 1862ರಲ್ಲಿ. ಅದನ್ನು ಸಂಶೋಧಿಸಿದ್ದು ಬ್ರಿಟಿಷ್ ವಿಜ್ಞಾನಿ ಅಲೆಕ್ಸಾಂಡರ್ ಪಾರ್ಕ್ಸ್. ಇವತ್ತಿನ ಹಾಗೆ ಅದು ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸಿ ತಯಾರಿಸಿದ ಪ್ಲಾಸ್ಟಿಕ್ ಆಗಿರಲಿಲ್ಲ; ಅದನ್ನು ಸೆಲ್ಯುಲೋಸ್‌ನಿಂದ ಉತ್ಪಾದಿಸಲಾಗಿತ್ತು. ಇವತ್ತು ನಾವು ಬಳಸುವ ಪ್ಲಾಸ್ಟಿಕ್ ಸಂಶೋಧನೆಯಾಗಿದ್ದು 1907ರಲ್ಲಿ. ಲಿಯೋ ಬೇಕಲ್ಯಾಂಡ್ ಎನ್ನುವಾತನು ಮೊದಲಬಾರಿಗೆ ಬ್ಯಾಕೆಲೈಟ್‌ನ್ನು ಪೆಟ್ರೋಕೆಮಿಕಲ್ಸ್ ಬಳಸಿ ತಯಾರಿಸಿದ್ದ. ನವೀನ ಬಗೆಯ ಬೈಯೊಪ್ಲಾಸ್ಟಿಕ್ ಆಗಿರುವ ಪಿಎಲ್‌ಎ ಪಾಲಿಮರ್‌ನ ಒಂದು ರೂಪ. ಎಲ್ಲಿಯವರೆಗೆ ಪ್ಲಾಸ್ಟಿಕ್ ಇಷ್ಟೊಂದು ಸಮಸ್ಯೆಗಳನ್ನು ತರಬಲ್ಲದೆನ್ನುವುದು ಗೊತ್ತಾಗಲಿಲ್ಲವೋ ಅಲ್ಲಿಯ ತನಕ ನಮಗೇನೂ ಸಮಸ್ಯೆ ಇರಲಿಲ್ಲ.
ಕೃತಕ ಪ್ಲಾಸ್ಟಿಕ್ ಸಮಸ್ಯೆಯಾಗಲು ಮುಖ್ಯ ಕಾರಣ ಇದು ಪೆಟ್ರೋಲಿಯಂ ಉತ್ಪನ್ನ; ಅದರ ರಾಸಾಯನಿಕ ಸಂಯೋಜನೆಯಿಂದಾಗಿ ಬೇಗ ಮಣ್ಣಿನಲ್ಲಿ ಸೇರುವುದಿಲ್ಲ. ಮಣ್ಣಿಗೆ ಸೇರಬೇಕು, ಗೊಬ್ಬರವಾಗಬೇಕು ಎಂದರೆ ಮೊದಲು ಜೈವಿಕವಾಗಿ ವಿಘಟನೆಯಾಗಬೇಕು. ಹಾಗಾಗಲು ಸೂಕ್ಷ್ಮಜೀವಿಗಳು ಆ ವಸ್ತುವಿನಲ್ಲಿನ ಇಂಗಾಲದ ಪದಾರ್ಥಗಳನ್ನು ಸೇವಿಸುವುದು ಅತ್ಯಗತ್ಯ. ಕೃತಕ ಪ್ಲಾಸ್ಟಿಕ್‌ನಲ್ಲಿ ಕಾರ್ಬನ್ ಇದ್ದರೂ ಅದು ಸುಲಭವಾಗಿ ಸೂಕ್ಷ್ಮಜೀವಾಣುಗಳ ಆಹಾರವಾಗುವುದಿಲ್ಲ. ಹೀಗಾಗಿ ಅದು ಸಾವಿರಾರು ವರ್ಷಗಳ ಕಾಲ ನಮ್ಮ ನಡುವೆ ತಾಜ್ಯದ ರೂಪದಲ್ಲಿ ಹಾಗೆಯೇ ಉಳಿದುಬಿಡುತ್ತದೆ. ಹೀಗಾಗಿ ಮನುಷ್ಯ ಮತ್ತೆ ಜೈವಿಕ ಪ್ಲಾಸ್ಟಿಕ್‌ಗೆ ಮೋರೆ ಹೋಗುತ್ತಿದ್ದಾನೆ. ಹತ್ತೊಂಬತ್ತನೆಯ ಶತಮಾನದಲ್ಲಿ ಅವಿಷ್ಕಾರವಾದ ಸೆಲ್ಯುಲೋಸ್ ಮೂಲದ ಪ್ಲಾಸ್ಟಿಕ್ ಹಾಗೂ ಇಪ್ಪತ್ತೊಂದನೇ ಶತಮಾನದಲ್ಲಿ ಆಸಕ್ತಿ ಮೂಡಿಸಿರುವ ಪಾಲಿ ಲ್ಯಾಕ್ಟಿಕ್ ಆ್ಯಸಿಡ್‌ನಿಂದ ಉತ್ಪಾದನೆಯಾಗುವ ಪ್ಲಾಸ್ಟಿಕ್ – ಎರಡನ್ನೂ ನೋಡಿದಾಗ ನಾವು ಒಂದು ಪರಿಪೂರ್ಣ ವೃತ್ತವನ್ನು ಸುತ್ತಿ ಬಂದಿದ್ದೇವೆ ಎಂದೆನಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.