ADVERTISEMENT

SpaDeX ನಿಗದಿತ ಕಕ್ಷೆ ಸೇರಿದ ಉಪಗ್ರಹ;ಇನ್ನೊಂದು ಮೈಲಿಗಲ್ಲಿನತ್ತ ಇಸ್ರೊ ದೃಷ್ಟಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2024, 2:47 IST
Last Updated 31 ಡಿಸೆಂಬರ್ 2024, 2:47 IST
<div class="paragraphs"><p>ಇಸ್ರೊ ಸ್ಪೇಡೆಕ್ಸ್‌ ಯೋಜನೆ</p></div>

ಇಸ್ರೊ ಸ್ಪೇಡೆಕ್ಸ್‌ ಯೋಜನೆ

   

(ಪಿಟಿಐ ಚಿತ್ರ)

ಶ್ರೀಹರಿಕೋಟಾ: 'ಸ್ಪೇಡೆಕ್ಸ್‌-ಎ' ಹಾಗೂ ಸ್ಪೇಡೆಕ್ಸ್‌-ಬಿ' ಎಂಬ ಎರಡು ಉಪಗ್ರಹವನ್ನು ಹೊತ್ತೊಯ್ದಿರುವ ಪಿಎಸ್‌‌ಎಲ್‌ವಿ-ಸಿ60 ರಾಕೆಟ್ ನಿಗದಿತ ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಘೋಷಿಸಿದೆ.

ADVERTISEMENT

ಭವಿಷ್ಯದ ಯೋಜನೆಗಳಲ್ಲಿ ನಿರ್ಣಾಯಕ ತಂತ್ರಜ್ಞಾನ ಎಂದೇ ಇದನ್ನು ಪರಿಗಣಿಸಲಾಗಿದ್ದು, ಎರಡು ಉಪಗ್ರಹಗಳು ಯಶಸ್ವಿಯಾಗಿ ಬೇರ್ಪಟ್ಟಿವೆ ಎಂದು ಇಸ್ರೊ ತಿಳಿಸಿದೆ. ಈ ಸಂಬಂಧ ವಿಡಿಯೊವನ್ನು ಹಂಚಿಕೊಂಡಿದೆ.

ಇದರೊಂದಿಗೆ ಮಹತ್ತರ ಸಾಧನೆ ಮಾಡಿರುವ ಇಸ್ರೊ, ಈಗ ಮಗದೊಂದು ಮೈಲಿಗಲ್ಲಿನತ್ತ ದೃಷ್ಟಿ ಹಾಯಿಸಿದೆ.

ಬಾಹ್ಯಕಾಶ ಡಾಕಿಂಗ್ ಪರೀಕ್ಷೆ ಕುರಿತು ಮಾಹಿತಿ ನೀಡಿರುವ ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್, 'ಇನ್ನೊಂದು ವಾರದಲ್ಲಿ ಜನವರಿ 7ರ ವೇಳೆಗೆ ಡಾಕಿಂಗ್ ಪ್ರಕ್ರಿಯೆ ನಡೆಯುವ ನಿರೀಕ್ಷೆಯಿದೆ' ಎಂದು ತಿಳಿಸಿದ್ದಾರೆ.

'ಆನ್‌ಬೋರ್ಡ್ ಕ್ಯಾಮೆರಾದದಿಂದ ಡಾಕಿಂಗ್ ಪ್ರಕ್ರಿಯೆಗಳ ಚಿತ್ರಗಳನ್ನು ಪ್ರಸಾರ ಮಾಡುವುದು ಸೇರಿದಂತೆ ಡಾಕಿಂಗ್‌ನ ಎಲ್ಲ ಚಟುವಟಿಕೆಗಳನ್ನು ಬೆಂಗಳೂರಿನ ಇಸ್ರೊ ಕೇಂದ್ರದಿಂದ ಅದನ್ನು ವೀಕ್ಷಿಸಲು ಸಾಧ್ಯವಾಗಲಿದೆ' ಎಂದು ಅವರು ಹೇಳಿದ್ದಾರೆ.

'ಪಿಎಸ್‌ಎಲ್‌ವಿ-ಸಿ60 ರಾಕೆಟ್ 220ಕೆ.ಜಿ ತೂಕದ ಎರಡು ಸ್ಪೇಡೆಕ್ಸ್ ಉಪಗ್ರಹ ಮತ್ತು 24 ಪೇಲೋಡ್‌ಗಳನ್ನು ಹೊಂದಿರುವ ಪಿಒಇಎಂ-4 ಅನ್ನು ನಿಗದಿತ ಕಕ್ಷೆಗೆ ಸೇರಿಸಿದೆ' ಎಂದು ಅವರು ಮಾಹಿತಿ ನೀಡಿದ್ದಾರೆ.

'ಇದು ಹೆಮ್ಮೆಯ ಕ್ಷಣ. ಸಂಶೋಧನಾ ಮತ್ತು ಅಧ್ಯಯನದ ಮಹತ್ತರ ಯೋಜನೆ ಇದಾಗಿದೆ' ಎಂದು ಅವರು ತಿಳಿಸಿದ್ದಾರೆ.

ಕಕ್ಷೆಯಲ್ಲಿ ಬಾಹ್ಯಾಕಾಶ ನೌಕೆಗಳ 'ಡಾಕಿಂಗ್‌' ಮತ್ತು 'ಅನ್‌ಡಾಕಿಂಗ್' ನಡೆಸುವ ಸಾಮರ್ಥ್ಯವನ್ನು ಪ್ರದರ್ಶಿಸುವ ಮಹತ್ತರ ಯೋಜನೆ ಇದಾಗಿದೆ. ಅಮೆರಿಕ, ರಷ್ಯಾ ಮತ್ತು ಚೀನಾ ಮಾತ್ರ ಬಾಹ್ಯಾಕಾಶ ನೌಕೆಗಳ 'ಡಾಕಿಂಗ್' ತಂತ್ರಜ್ಞಾನವನ್ನು ಹೊಂದಿರುವ ದೇಶಗಳಾಗಿವೆ. ಈ ಸಾಲಿಗೆ ಭಾರತ ಸೇರ್ಪಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.