ADVERTISEMENT

Sunita, Butch return: ಸುಯೂಜ್‌ಗೆ ಸಾಕು 3.5; ಸ್ಪೇಸ್‌ಎಕ್ಸ್‌ಗೆ ಏಕೆ 17 ಗಂಟೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಮಾರ್ಚ್ 2025, 14:20 IST
Last Updated 19 ಮಾರ್ಚ್ 2025, 14:20 IST
<div class="paragraphs"><p>ಎಕ್ಸ್ ಚಿತ್ರ</p></div>
   

ಎಕ್ಸ್ ಚಿತ್ರ

ಫ್ಲೊರಿಡಾ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 286 ದಿನಗಳನ್ನು ಕಳೆದ ನಂತರ, ಗಗನಯಾನಿಗಳಾದ ಸುನಿತಾ ವಿಲಿಯಮ್ಸ್‌ ಹಾಗೂ ಬುಚ್ ವಿಲ್‌ಮೋರ್ ಅವರು ಬುಧವಾರ ನಸುಕಿನಲ್ಲಿ ಫ್ಲೊರಿಡಾದ ಕರಾವಳಿ ಬಂದಿಳಿದಿದ್ದಾರೆ.

2024ರ ಜೂನ್‌ನಲ್ಲಿ ಬೋಯಿಂಗ್ ಸ್ಟಾರ್‌ಲೈನ್ ಕ್ಯಾಪ್ಸೂಲ್‌ನಲ್ಲಿ ತೆರಳಿದ್ದ ಇವರು, ನಂತರ ತಾಂತ್ರಿಕ ಸಮಸ್ಯೆಯಿಂದ ಅಲ್ಲಿಯೇ ಉಳಿಯುವಂತಾಯಿತು. ಗಗನಯಾನಿಗಳನ್ನು ಮರಳಿ ಭೂಮಿಗೆ ಕರೆತರಲು ಸ್ಪೇಸ್‌ಎಕ್ಸ್‌ ಡ್ರ್ಯಾಗನ್‌ ನೆರವು ಪಡೆಯಲು ನಾಸಾ ನಿರ್ಧರಿಸಿತು. ಹೀಗೆ ಮಂಗಳವಾರ ಬೆಳಿಗ್ಗೆ ಬಾಹ್ಯಾಕಾಶ ನಿಲ್ದಾಣದಿಂದ ಹೊರಟ ಈ ನೌಕೆ, ಬರೋಬ್ಬರಿ 17 ಗಂಟೆಗಳ ಪ್ರಯಾಣದ ನಂತರ ಬುಧವಾರ ನುಸಕಿನ 3:27ರ ಸುಮಾರಿಗೆ ಬಂದಿಳಿಯಿತು.

ADVERTISEMENT

ಬಾಹ್ಯಾಕಾಶ ನಿಲ್ದಾಣದಿಂದ ರಷ್ಯಾದ ಸುಯೂಜ್‌ 3.5 ಗಂಟೆಯಲ್ಲೇ ಭೂಮಿಗೆ ಮರಳುವ ಸಾಮರ್ಥ್ಯ ಹೊಂದಿದೆ. ಆದರೆ ಸ್ಪೇಸ್‌ಎಕ್ಸ್‌ ಡ್ರ್ಯಾಗನ್ ಕ್ಯಾಪ್ಸೂಲ್‌ ಏಕೆ 17 ಗಂಟೆ ತೆಗೆದುಕೊಂಡಿತು ಎಂಬ ಪ್ರಶ್ನೆ ಕೇಳಿಬಂದಿದೆ. ಇಲ್ಲಿ ಒಳಗಿರುವ ಗಗನಯಾನಿಗಳ ಸುರಕ್ಷತೆ, ಕ್ಯಾಪ್ಸೂಲ್ ಗುರುತಿಸಿದ ಸ್ಥಳದಲ್ಲೇ ನಿಖರವಾಗಿ ಇಳಿಯುವಂತೆ ಮಾಡುವುದರ ಜತೆಗೆ ಹಲವು ಯೋಜನಾಬದ್ಧ ಕ್ರಮಗಳಿಂದಾಗಿ ಇಷ್ಟು ದೀರ್ಘ ಕಾಲ ತೆಗೆದುಕೊಂಡಿದೆ ಎಂದು ತಜ್ಞರು ಹೇಳಿದ್ದಾರೆ

ಸ್ಪೇಸ್‌ಎಕ್ಸ್ ಡ್ರ್ಯಾಗನ್‌ಗೆ ಹೆಚ್ಚು ಸಮಯ ಏಕೆ?

  • ಭೂಮಿಯಿಂದ 420 ಕಿ.ಮೀ. ದೂರದಲ್ಲಿರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಕಕ್ಷೆಯಲ್ಲಿ ಪ್ರತಿ ಗಂಟೆಗೆ 28 ಸಾವಿರ ಕಿ.ಮೀ. ವೇಗದಲ್ಲಿ ಪರಿಭ್ರಮಿಸುತ್ತಿದೆ. 

  • ಈ ಹಂತದಲ್ಲಿ ಭೂಮಿ ಮೇಲೆ ನಿರ್ದಿಷ್ಟ ಸ್ಥಳದಲ್ಲಿ ಕ್ಯಾಪ್ಸೂಲ್‌ ಬಂದಿಳಿಯಬೇಕೆಂದರೆ ಹೊರಡುವ ಸ್ಥಳ ಮತ್ತು ಸಮಯ ಕರಾರುವಕ್ಕಾಗಿರಬೇಕು. 

  • ಭೂಮಿಯ ವಾತಾವರಣದಲ್ಲಿ ನೌಕೆಯ ವೇಗ ತಗ್ಗಿಸಲು ದಹನ ಕ್ರಿಯೆ ಆರಂಭಿಸುವುದು ಹಾಗೂ ನಿಗಧಿತ ಸ್ಥಳದಲ್ಲಿ ಇಳಿಯಲು ಯೋಜನೆ ಅಗತ್ಯ.

  • ಸೂಯೂಜ್‌ ಕ್ಷಿಪಣಿಯಂತೆ ನೇರವಾಗಿ ಭೂಮಿಗೆ ಬಂದಿಳಿಯಲಿದೆ. ಆದರೆ ಡ್ರ್ಯಾಗನ್‌ ಅತ್ಯಂತ ನಾಜೂಕಾಗಿ ಭೂಮಿಯ ವಾತಾವರಣದಲ್ಲಿ ತೇಲುತ್ತಾ, ಕರಾರುವಕ್ಕಾದ ಸ್ಥಳದಲ್ಲೇ ಬಂದಿಳಿದಿದೆ.

  • ಭೂಮಿಯ ವಾತಾವರಣ ಪ್ರವೇಶಿಸುವ ಸಂದರ್ಭದಲ್ಲಿ ಉಂಟಾಗುವ ಘರ್ಷಣೆಯಿಂದಾಗಿ ಕ್ಯಾಪ್ಸೂಲ್‌ ಅತ್ಯಂತ ಹೆಚ್ಚಿನ ಉಷ್ಣವನ್ನು ಎದುರಿಸಬೇಕು. ಇದನ್ನು ತಗ್ಗಿಸಿ ಒತ್ತಡ ರಹಿತವಾಗಿ ಗಗನಯಾನಿಗಳು ಭೂಮಿಗೆ ಮರುಳುವಂತ ವ್ಯವಸ್ಥೆ ಡ್ರ್ಯಾಗನ್‌ನಲ್ಲಿ ಅಳವಡಿಸಲಾಗಿತ್ತು.

  • ಬಹು ಎತ್ತರದಲ್ಲಿ ಪ್ಯಾರಾಚೂಟ್‌ಗಳು ಸರಿಯಾದ ಸಮಯಕ್ಕೆ ತೆರದುಕೊಳ್ಳುವುದರಿಂದ ನೌಕೆಯು ನಿಧಾನವಾಗಿ ಬಂದಿಳಿಯಲು ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲಾಗಿತ್ತು.

  • ನೌಕೆಯು ಇಳಿಯುವ ಸ್ಥಳದ ಆಯ್ಕೆಯೂ ಯೋಜನಾಬದ್ಧವಾಗಿತ್ತು. ಉತ್ತಮ ಹವಾಮಾನ, ಸಮುದ್ರದಲ್ಲಿ ಹೆಚ್ಚಿನ ಏರಿಳಿತವಿಲ್ಲದ ಸಂದರ್ಭ ಮತ್ತು ಗಗನಯಾನಿಗಳನ್ನು ಕರೆತರುವ ಹಡಗು ನಿಲ್ಲಬೇಕಾದ ಸ್ಥಳ... ಹೀಗೆ ಪ್ರತಿಯೊಂದನ್ನೂ ಸೂಕ್ತ ಲೆಕ್ಕಾಚಾರದಂತೆಯೇ ನಿರ್ವಹಿಸಲಾಗಿತ್ತು.

  • ಪೂರ್ವ ನಿರ್ಧಾರಿತ ಸ್ಥಳದಲ್ಲಿ ಪೂರಕ ವಾತಾವರಣ ಇಲ್ಲದಿದ್ದಲ್ಲಿ, ಮುಂದಿನ ಆದೇಶದವರೆಗೂ ಕಕ್ಷೆಯಲ್ಲೇ ಕ್ಯಾಪ್ಸೂಲ್‌ ತಂಗುವಂತೆ ವಿನ್ಯಾಸ ಮಾಡಲಾಗಿತ್ತು.

2003ರ ಫೆಬ್ರುವರಿ 1ರಂದು ಸಂಭವಿಸಿದ ಬಾಹ್ಯಾಕಾಶದ ದುರ್ಘಟನೆಯಲ್ಲಿ ಭಾರತದ ಸಂಜಾತೆ ಕಲ್ಪನಾ ಚಾವ್ಲಾ ಅವರು ಮೃತಪಟ್ಟರು. ಇಂಥ ಘಟನೆ ಭವಿಷ್ಯದಲ್ಲಿ ಮರುಕಳಿಸದಂತೆ ಎಚ್ಚರ ವಹಿಸಿದ ನಾಸಾ, ಈ ಬಾರಿ ಸ್ಪೇಸ್‌ಎಕ್ಸ್‌ನ ನೆರವು ಪಡೆದಿತ್ತು. ಗಗನಯಾನಿಗಳನ್ನು ಸುರಕ್ಷಿತವಾಗಿ ಭೂಮಿಗೆ ಕರೆತರಬೇಕೆಂಬ ಸಂಕಲ್ಪ ಮಾಡಿದ ಪರಿಣಾಮ ಹಲವು ಎಚ್ಚರಿಕೆಯನ್ನು ತೆಗೆದುಕೊಳ್ಳಲಾಗಿತ್ತು. ಇದರಿಂದಾಗಿ ಗಗನಯಾನಿಗಳು ಸುದೀರ್ಘ 17 ಗಂಟೆಗಳ ಪ್ರಯಾಣ ಕೈಗೊಳ್ಳಬೇಕಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.