ADVERTISEMENT

ಟ್ರಂಪ್‌ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಖಾತೆ ಮರುಸ್ಥಾಪಿಸಲಾಗುವುದು: ಮೆಟಾ

ಐಎಎನ್ಎಸ್
Published 26 ಜನವರಿ 2023, 2:09 IST
Last Updated 26 ಜನವರಿ 2023, 2:09 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್   

ಸ್ಯಾನ್‌ ಫ್ರಾನ್ಸಿಸ್ಕೊ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳನ್ನು ಮುಂದಿನ ಕೆಲವು ವಾರಗಳಲ್ಲಿ ಮರುಸ್ಥಾಪಿಸುವುದಾಗಿ ಮೆಟಾ ಘೋಷಿಸಿದೆ.

ಈ ಕುರಿತು ಮೆಟಾದ ಜಾಗತಿಕ ವ್ಯವಹಾರಗಳ ಅಧ್ಯಕ್ಷ ಮೆಟಾ ನಿಕ್ ಕ್ಲೆಗ್ ಅವರು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2021ರ ಜನವರಿ 6ರಂದು ಕ್ಯಾಪಿಟಲ್ ಭವನದ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಕ್ಕಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫೇಸ್‌ಬುಕ್ ಖಾತೆಯನ್ನು ಎರಡು ವರ್ಷಗಳ ಕಾಲ ಅಮಾನತಿನಲ್ಲಿಡಲಾಗಿತ್ತು.

ADVERTISEMENT

‘ಕಠಿಣ ಸಂದರ್ಭಗಳಲ್ಲಿ ಖಾತೆಗಳನ್ನು ಅಮಾನತುಗೊಳಿಸುವಂತಹ ಅಸಾಧಾರಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಕ್ಲೆಗ್ ತಿಳಿಸಿದ್ದಾರೆ.

‘ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಮ್ ಬಳಕೆದಾರರಂತೆ ಟ್ರಂಪ್ ಅವರು ಕೂಡ ಮಾನದಂಡಗಳಿಗೆ ಒಳಪಟ್ಟಿರುತ್ತಾರೆ. ನಿಯಮಗಳನ್ನು ಉಲ್ಲಂಘಿಸಿದರೆ ಎಲ್ಲರಂತೆಯೇ ಅವರಿಗೆ ದಂಡ ತೆರಬೇಕಾಗುತ್ತದೆ. ಮುಂದಿನ ವಾರಗಳಲ್ಲಿ ಟ್ರಂಪ್ ಅವರ ಖಾತೆಗಳನ್ನು ಮರುಸ್ಥಾಪಿಸಲಾಗುವುದು. ಜತೆಗೆ, ಪುನರಾವರ್ತಿತ ಅಪರಾಧಗಳನ್ನು ತಡೆಯಲು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುವುದು’ ಎಂದು ಕ್ಲೆಗ್ ಹೇಳಿದ್ದಾರೆ.

‘ಖಾತೆಗಳನ್ನು ಅಮಾನತಿನಲ್ಲಿಡುವ ವಿಚಾರವಾಗಿ ನಾವು ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ತೀವ್ರವಾಗಿ ಟೀಕಿಸಲಾಗುತ್ತದೆ ಎಂದು ನಮಗೆ ತಿಳಿದಿದೆ. ಜನರು ಇದು ಸರಿಯಾದ ನಿರ್ಧಾರವೇ ಎಂಬುದರ ಬಗ್ಗೆ ಭಿನ್ನಾಭಿಪ್ರಾಯ ಹೊಂದಿರುತ್ತಾರೆ. ಆದರೆ, ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ’ ಎಂದು ಕ್ಲೆಗ್ ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.