ADVERTISEMENT

ಟಾಟಾದ ಸೂಪರ್ ಆ್ಯಪ್ 'ನ್ಯೂ' ಏ.7ಕ್ಕೆ ಬಿಡುಗಡೆ; ಅಮೆಜಾನ್, ಜಿಯೊಗೆ ಪೈಪೋಟಿ?

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2022, 3:29 IST
Last Updated 4 ಏಪ್ರಿಲ್ 2022, 3:29 IST
ಟಾಟಾದ ಸೂಪರ್ ಆ್ಯಪ್ 'ನ್ಯೂ'
ಟಾಟಾದ ಸೂಪರ್ ಆ್ಯಪ್ 'ನ್ಯೂ'    

ನವದೆಹಲಿ: ಖರೀದಿ ಮತ್ತು ಪಾವತಿಗೆ ಬಳಕೆ ಮಾಡಬಹುದಾದ ಸೂಪರ್‌ ಆ್ಯಪ್‌ ಅನ್ನು ಟಾಟಾ ಗ್ರೂಪ್‌ ಅಭಿವೃದ್ಧಿ ಪಡಿಸಿದೆ. 'ನ್ಯೂ' (Neu) ಎಂದು ಹೆಸರಿಸಲಾಗಿರುವ ಆ್ಯಪ್‌ ಏಪ್ರಿಲ್‌ 7ರಂದು ಬಿಡುಗಡೆ ಮಾಡುವುದಾಗಿ ಪ್ರಕಟಿಸಿದೆ.

'ಏಪ್ರಿಲ್‌ 7ರಂದು ನಮ್ಮೊಂದಿಗೆ ನಿಮ್ಮ ಹೊಸ ಪಯಣವನ್ನು ಆರಂಭಿಸಿ..' ಎಂದು ಕಂಪನಿ ಹೇಳಿದೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲೂ ನ್ಯೂ ಆ್ಯಪ್‌ ಡೌನ್‌ಲೋಡ್‌ಗೆ ಸಿಗಲಿದೆ.

ಮೊಬೈಲ್‌ ಆ್ಯಪ್‌ಗಳ ಮೂಲಕ ಅಗತ್ಯ ವಸ್ತುಗಳ ಖರೀದಿ ಮತ್ತು ಪಾವತಿ ಡಿಜಿಟಲ್‌ ಆರ್ಥಿಕ ವ್ಯವಸ್ಥೆಯು ದೇಶದಲ್ಲಿ ವೃದ್ಧಿಸುತ್ತಿದೆ. ಅಮೆಜಾನ್‌ ಮತ್ತು ಜಿಯೊ ಪ್ಲಾಟ್‌ಫಾರ್ಮ್‌ಗಳ ಆ್ಯಪ್‌ಗಳಿಗೆ ಸಡ್ಡು ಹೊಡೆಯಲು ಟಾಟಾ 'ನ್ಯೂ' ಹಲವು ವಿಶೇಷತೆಗಳೊಂದಿಗೆ ಹೊರ ಬರುತ್ತಿರುವುದಾಗಿ ವರದಿಯಾಗಿದೆ.

ADVERTISEMENT

ಆ್ಯಪ್‌ ಬಳಕೆದಾರರಿಗೆ ಖರೀದಿಯ ಮೇಲೆ ಹಲವು ರಿವಾರ್ಡ್‌ಗಳು, ವಿಶೇಷ ಕೊಡುಗೆಗಳು, ಪ್ರಯೋಜನಗಳು ಸಿಗಲಿವೆ. ಒಂದೇ ಆ್ಯಪ್‌ನಲ್ಲಿ ಎಲ್ಲ ವಸ್ತುಗಳ ಖರೀದಿ ಮತ್ತು ಪಾವತಿ ಮಾಡಬಹುದು ಎಂದು ಕಂಪನಿ ಹೇಳಿದೆ.

ಪರೀಕ್ಷಾರ್ಥವಾಗಿ ಟಾಟಾ ಗ್ರೂಪ್‌ 'ನ್ಯೂ' ಆ್ಯಪ್‌ ಅನ್ನು ತಮ್ಮ ಉದ್ಯೋಗಿಗಳಿಗೆ ಬಳಸಲು ಅವಕಾಶ ನೀಡಿತ್ತು. ಬಿಗ್‌ಬ್ಯಾಸ್ಕೆಟ್‌ ಮತ್ತು 1ಎಂಜಿ ಸೇರಿದಂತೆ ಟಾಟಾ ಹೂಡಿಕೆ ಇರುವ ಇತರೆ ಆ್ಯಪ್‌ಗಳಲ್ಲಿ ನೀಡಲಾಗುವ ಕೊಡುಗೆಗಳನ್ನು 'ನ್ಯೂಕಾಯಿನ್ಸ್‌'ಗೆ ಸೇರಿಸಲು ಉದ್ದೇಶಿಸಿದೆ.

ದಿನಸಿ, ಎಲೆಕ್ಟ್ರಾನಿಕ್‌ ಸಾಧನಗಳ ಖರೀದಿಯಿಂದ ಹಿಡಿದು ವಿಮಾನಗಳ ಟಿಕೆಟ್‌ ಬುಕ್ಕಿಂಗ್‌, ಹೊಟೇಲ್‌ಗಳ ಬುಕ್ಕಿಂಗ್‌, ಬಿಲ್‌ ಪಾವತಿ ಸೇರಿದಂತೆ ಎಲ್ಲವೂ 'ನ್ಯೂ' ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿದೆ.

ಈಗಾಗಲೇ ಅಮೆಜಾನ್‌, ಪೇಟಿಎಂ ಹಾಗೂ ರಿಲಯನ್ಸ್‌ ಜಿಯೊ ಒಂದೇ ಆ್ಯಪ್‌ ಅಡಿಯಲ್ಲಿ ಪಾವತಿ, ಬುಕ್ಕಿಂಗ್‌, ದಿನಸಿ ಖರೀದಿ ಹಾಗೂ ಮನರಂಜನೆ ಕಾರ್ಯಕ್ರಮಗಳ ವೀಕ್ಷಣೆಯ ಸೇವೆಗಳನ್ನೂ ಪೂರೈಸುತ್ತಿವೆ. ರಿಲಯನ್ಸ್‌ ಇಂಡಸ್ಟ್ರೀಸ್‌ನ ಜಿಯೊಮಾರ್ಟ್‌ ಸಹ ಸೂಪರ್‌ ಆ್ಯಪ್‌ ಮೂಲಕ ವಹಿವಾಟಿಗೆ ಸಿದ್ಧತೆ ನಡೆಸಿದೆ.

ಭಾರತದಲ್ಲಿ ಗ್ರಾಹಕರ ಬಳಕೆ ಆಧಾರಿತ ಡಿಜಿಟಲ್‌ ಆರ್ಥಿಕತೆಯು 2030ರ ವೇಳೆಗೆ 800 ಬಿಲಿಯನ್‌ (₹60.77 ಲಕ್ಷ ಕೋಟಿ) ತಲುಪುವುದಾಗಿ ರೆಡ್‌ಸೀರ್‌ ಮಾರುಕಟ್ಟೆ ಸಂಶೋಧನಾ ಸಂಸ್ಥೆಯು ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.