ಡೈರಿಮಿಲ್ಕ್ ಜಾಹೀರಾತಿನ ದೃಶ್ಯ
ಬೆಂಗಳೂರು: ಹೊಸ ಶಿಕ್ಷಣ ನೀತಿಯ ತ್ರಿಭಾಷಾ ಸೂತ್ರ, ದ್ರಾವಿಡ ಭಾಷೆಗಳ ಕಡೆಗಣನೆಯ ಆರೋಪ, ಹಿಂದಿ ಹೇರಿಕೆ ಹೀಗೆಲ್ಲಾ ವಿವಾಗಳು ತಲೆ ಎತ್ತಿರುವ ಹೊತ್ತಿಗೆ, ಚಾಕೊಲೇಟ್ ತಯಾರಿಕಾ ಕಂಪನಿ ಡೈರಿಮಿಲ್ಕ್‌ನ ಇತ್ತೀಚಿನ ಜಾಹೀರಾತು ಚರ್ಚೆಯನ್ನು ಹುಟ್ಟುಹಾಕಿದೆ.
ಕೇವಲ ಹಿಂದಿ ಭಾಷೆಯನ್ನಷ್ಟೇ ಬಲ್ಲ ನೆರೆಹೊರೆಯ ಮಹಿಳೆಯರ ಒಂದು ಗುಂಪು ಒಂದೆಡೆ ಹರಟುತ್ತಿದೆ. ಈ ಗುಂಪಿಗೆ ಚೆನ್ನೈನಿಂದ ಬಂದ ಮಹಿಳೆಯೊಬ್ಬರು ಹೊಸಬರು. ತನಗೆ ತಿಳಿದಿರುವ ಅತ್ಯಲ್ಪ ಹಿಂದಿ ಪದಗಳನ್ನೇ ಬಳಸಿ, ಅವರು ಈ ಮಹಿಳೆಯರೊಂದಿಗೆ ಸಂವಾದ ನಡೆಸಲು ಯತ್ನಿಸುತ್ತಾರೆ. ಅದು ಕಷ್ಟವೆನಿಸಿ, ತಾನು ಗುಂಪಿನಿಂದ ಹೊರಗೇ ಉಳಿಯುತ್ತೇನೆ ಎಂಬ ಅಭದ್ರತಾ ಭಾವ ಅವರನ್ನು ಆವರಿಸುತ್ತದೆ.
ಆಗಲೇ ಹಿಂದಿ ಭಾಷೆ ಬಲ್ಲ ಗುಂಪಿನ ಒಬ್ಬ ಮಹಿಳೆ, ಚೆನ್ನೈನ ಮಹಿಳೆಯ ಈ ಅಸ್ವಸ್ಥತೆ ಗ್ರಹಿಸುತ್ತಾರೆ. ತಕ್ಷಣವೇ ಅವರು ತಮಗೆ ಗೊತ್ತಿರುವ ಹರಕು ಮುರುಕು ಇಂಗ್ಲಿಷ್‌ನಲ್ಲೇ ಸಂಭಾಷಣೆ ಆರಂಭಿಸುತ್ತಾರೆ. ಗುಂಪಿನ ಇತರರೂ ತಮಗೆ ತಿಳಿದಿರುವ ಒಂದೊಂದೇ ಇಂಗ್ಲಿಷ್ ಪದ ಬಳಸಿ ಸಂಭಾಷಣೆ ನಡೆಸುತ್ತಾ, ಚೆನ್ನೈ ಮಹಿಳೆಯ ಅಭದ್ರತಾ ಭಾವ ದೂರಗೊಳಿಸುತ್ತಾರೆ. ಇದೇ ವೇಳೆ ಡೈರಿ ಮಿಲ್ಕ್‌ನ ಚಾಕೊಲೇಟ್ ನೀಡಿ ಅವರನ್ನು ಗುಂಪಿನ ಸದಸ್ಯೆಯರು ಸ್ವಾಗತಿಸಿದರೆ, ಅದರಲ್ಲಿ ಒಂದೊಂದು ತುಂಡನ್ನು ಹಂಚಿಕೊಂಡು ಎಲ್ಲರೂ ಸಂಭ್ರಮಿಸುವುದು ಜಾಹೀರಾತಿನ ವಸ್ತುವಿಷಯ.
ಸಂತಸ ಹಂಚಿಕೊಳ್ಳಲು ಭಾಷೆ, ಗಡಿ ಮುಖ್ಯವೇ ಅಲ್ಲ, ಭಾವನೆ ಮುಖ್ಯ ಎಂದು ಕ್ಯಾಡ್‌ಬೆರಿ ಹೇಳುವ ಯತ್ನವನ್ನು ನಡೆಸಿದೆ. ಡೈರಿಮಿಲ್ಕ್‌ನ ಈ ನೂತನ ಜಾಹೀರಾತಿಗೆ ಪರ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
‘ಉತ್ತರ ಹಾಗೂ ದಕ್ಷಿಣ ಎಂಬ ಭಾಷಾ ರಾಜಕಾರಣ ನನಗೆ ಬೇಕಿಲ್ಲ. ಆದರೆ ಇದೊಂದು ಉತ್ತಮ ಅಭಿರುಚಿಯ ಜಾಹೀರಾತು. ಡೈರಿ ಮಿಲ್ಕ್ ಹಿಂದಿನಿಂದಲೂ ಆಯಾ ಕಾಲಘಟ್ಟಕ್ಕೆ ವಿಶೇಷವಾದದ್ದನ್ನೇ ನೀಡುತ್ತಾ ಬಂದಿದೆ’ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.
‘ಡೈರಿಮಿಲ್ಕ್ ನಮ್ಮೆದುರು ಕನ್ನಡಿಯೊಂದನ್ನು ಇಟ್ಟಿದೆ. ನಮಗೆ ಎಲ್ಲಾ ಭಾಷೆಗಳು ಸ್ವಲ್ಪವಷ್ಟೇ ಬಂದರೂ, ಎಲ್ಲರೂ ಎಲ್ಲವನ್ನೂ ಒಪ್ಪಿಕೊಂಡು, ಎಲ್ಲರೊಂದಿಗೂ ಖುಷಿಯಿಂದಲೇ ಬದುಕು ಸಾಗಿಸುತ್ತಿದ್ದೇವೆ’ ಎಂದು ಮತ್ತೊಬ್ಬರು ಈ ಜಾಹೀರಾತಿಗೆ ತಮ್ಮ ಪ್ರತಿಕ್ರಿಯೆ ದಾಖಲಿಸಿದ್ದಾರೆ.
ದಶಕಗಳಿಂದಲೂ ಭಾರತದಲ್ಲಿ ಭಾಷೆಗಳ ನಡುವಿನ ವಿವಾದ ಆಗಾಗ ತಲೆ ಎತ್ತುತ್ತಲೇ ಇರುತ್ತದೆ. ಇಂಡೊ ಆರ್ಯನ್ ಭಾಷೆಗಳಿಂದಾಗಿ ಉತ್ತರ ಮತ್ತು ದಕ್ಷಿಣ ಭಾರತ ಎಂದು ಭಾರತವನ್ನು ಎರಡು ಭಾಗವಾಗಿ ನೋಡುವ ಯತ್ನ ಆರಂಭವಾಯಿತು. ಹಿಂದಿ ಭಾಷೆಯ ಎದುರು ದಕ್ಷಿಣದ ದ್ರಾವಿಡ ಭಾಷೆಗಳಾದ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳ ಭಾಷಿಗರ ನಡುವೆ ಕಂದಕ ಸೃಷ್ಟಿಸುವ ಯತ್ನವೂ ನಡೆದಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.