ಬೇಟೆಯನ್ನು ತಿನ್ನುತ್ತಿದ್ದ ಸಿಂಹದ ಬಳಿ ಹೋಗಿ ವಿಡಿಯೊ ಮಾಡಿದ ವ್ಯಕ್ತಿ
ಭಾವನಗರ: ಸಿಂಹವೊಂದು ತನ್ನ ಬೇಟೆಯನ್ನು ಭಕ್ಷಿಸುತ್ತಿರುವಾಗ ಅದರ ಹತ್ತಿರ ಹೋಗಿ ವಿಡಿಯೊ ಮಾಡುತ್ತಿದ್ದ ವ್ಯಕ್ತಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ ಘಟನೆ ಗುಜರಾತ್‌ನ ಭವಾನಗರ ಜಿಲ್ಲೆಯಲ್ಲಿ ನಡೆದಿದೆ.
ಸಿಂಹ ಬೇಟೆಯನ್ನು ತಿನ್ನುವಾಗ ಅದರ ಹತ್ತಿರ ಹೋಗಿ ತೊಂದರೆ ನೀಡಿದ ಕಾರಣ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಿ ಸಿಂಹದ ಬಳಿ ತೆರಳುತ್ತಿರುವ ವಿಡಿಯೊ ಹರಿದಾಡಿದೆ.
ಹಸುವಿನ ಮೃತದೇಹವನ್ನು ತಿನ್ನುತ್ತಿರುವ ಸಿಂಹದ ಬಳಿ ಮೊಬೈಲ್ ಹಿಡಿದ ವ್ಯಕ್ತಿಯೊಬ್ಬ ಹೋಗಿದ್ದಾನೆ. ಅದನ್ನು ನೋಡಿ ಸಿಂಹ ಆ ವ್ಯಕ್ತಿಯತ್ತ ಧಾವಿಸಿದೆ. ಈ ದೃಶ್ಯವನ್ನು ಸೆರೆಹಿಡಿಯುತ್ತ ದೂರದಲ್ಲಿದ್ದ ಕೆಲವರು ಕಿರುಚಿದ್ದಾರೆ. ಆ ವ್ಯಕ್ತಿ ಹಿಂದೆ ಹೋದಾಗ ಸಿಂಹ ವಾಪಸ್ ಹೋಗಿರುವ ದೃಶ್ಯ ವಿಡಿಯೊದಲ್ಲಿದೆ.
ವಿಡಿಯೊ ಹರಿದಾಡುತ್ತಿದ್ದಂತೆ ಎಚ್ಚೆತ್ತ ಅರಣ್ಯ ಇಲಾಖೆ ತನಿಖೆಗೆ ಆದೇಶಿಸಿತ್ತು. ತನಿಖೆಯ ವೇಳೆ ವ್ಯಕ್ತಿ ಸಿಂಹಕ್ಕೆ ತೊಂದರೆ ನೀಡಿದ್ದು ಕಂಡು ಬಂದ ಕಾರಣ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸಂಬಂಧಿತ ಸೆಕ್ಷನ್‌ನಡಿ ಆತನ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಬಳಿಕ ತಲಜಾ ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯದಲ್ಲಿ ಆತನ ಜಾಮೀನು ಅರ್ಜಿ ವಜಾಗೊಂಡಿದ್ದು, ಜೈಲಿಗೆ ಕಳುಹಿಸಲಾಗಿದೆ ಎಂದು ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.