ADVERTISEMENT

ಕಿಮೋಥೆರಪಿ ವೇಳೆ ಸಂದರ್ಶನಕ್ಕೆ ಹಾಜರಾದ ಕ್ಯಾನ್ಸರ್‌ ಪೀಡಿತ ವ್ಯಕ್ತಿ: ಫೋಟೊ ವೈರಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಏಪ್ರಿಲ್ 2022, 2:44 IST
Last Updated 27 ಏಪ್ರಿಲ್ 2022, 2:44 IST
ಸಂದರ್ಶನಕ್ಕೆ ಹಾಜರಾಗಿರುವ ಅರ್ಶ್ ನಂದನ್ ಪ್ರಸಾದ್ (ಲಿಂಕ್ಡ್‌ಇನ್‌ ಚಿತ್ರ)
ಸಂದರ್ಶನಕ್ಕೆ ಹಾಜರಾಗಿರುವ ಅರ್ಶ್ ನಂದನ್ ಪ್ರಸಾದ್ (ಲಿಂಕ್ಡ್‌ಇನ್‌ ಚಿತ್ರ)   

ನವದೆಹಲಿ: ಕ್ಯಾನ್ಸರ್‌ ಪೀಡಿತ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ದಾಖಲಾಗಿ ಕಿಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಆನ್‌ಲೈನ್ ಮೂಲಕ ಉದ್ಯೋಗಕ್ಕಾಗಿ ಸಂದರ್ಶನಕ್ಕೆ ಹಾಜರಾಗುವ ಮೂಲಕ ಗಮನ ಸೆಳೆದಿದ್ದಾರೆ.

ಐಟಿ ವೃತ್ತಿಪರ ಅರ್ಶ್ ನಂದನ್ ಪ್ರಸಾದ್ ಅವರು ಸಕ್ರಿಯವಾಗಿ ಉದ್ಯೋಗ ಹುಡುಕುತ್ತಿರುವ ಲಕ್ಷಾಂತರ ಜನರಲ್ಲಿ ಒಬ್ಬರು. ಕ್ಯಾನ್ಸರ್‌ನಿಂದ ಬಳಲುತ್ತಿರುವ ಪ್ರಸಾದ್, ಕೀಮೋಥೆರಪಿಗೆ ಒಳಗಾಗಿದ್ದಾರೆ.

ಆಸ್ಪತ್ರೆ ಬೆಡ್‌ ಮೇಲೆ ಕುಳಿತು ವೈದ್ಯಕೀಯ ಗೌನ್‌ ಧರಿಸಿರುವ ಪ್ರಸಾದ್, ಲಿಂಕ್ಡ್‌ಇನ್‌ನಲ್ಲಿ ಸಂದರ್ಶನಕ್ಕೆ ಹಾಜರಾಗಿದ್ದಾರೆ.

ADVERTISEMENT

‘ನಾನು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದೇನೆ ಎಂದು ಕಂಪನಿಯ ಆಯ್ಕೆದಾರರಿಗೆ ತಿಳಿಯುತ್ತದೆ. ಅವರ ಅಭಿವ್ಯಕ್ತಿಯಲ್ಲಿನ ಬದಲಾವಣೆಯನ್ನು ನಾನು ನೋಡುತ್ತೇನೆ. ನನಗೆ ನಿಮ್ಮ ಸಹಾನುಭೂತಿ ಅಗತ್ಯವಿಲ್ಲ! ನನ್ನನ್ನು ನಾನು ಸಾಬೀತುಪಡಿಸಿಕೊಳ್ಳಲು ಸಂದರ್ಶನಕ್ಕೆ ಹಾಜರಾಗಿದ್ದೇನೆ. ಕೀಮೋಥೆರಪಿ ಸಮಯದಲ್ಲಿ ನಾನು ಸಂದರ್ಶನವನ್ನು ನೀಡುತ್ತಿರುವ ಇತ್ತೀಚಿನ ಚಿತ್ರ’ ಎಂದು ಪ್ರಸಾದ್ ಅವರ ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಸಾದ್ ಅವರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ.

ಲಿಂಕ್ಡ್‌ಇನ್‌ನಲ್ಲಿ ಈ ಪೋಸ್ಟ್‌ ಅನ್ನು 80 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. 3 ಸಾವಿರಕ್ಕೂ ಅಧಿಕ ಮಂದಿ ಕಾಮೆಂಟ್‌ ಮಾಡಿದ್ದಾರೆ.

ಪ್ರಸಾದ್‌ ಪೋಸ್ಟ್‌ಗೆ ನೀಲೇಶ್ ಸ್ಪಂದನೆ:ಪ್ರಸಾದ್ ಅವರ ಮಾತುಗಳು ಮಹಾರಾಷ್ಟ್ರ ಮೂಲದ ಟೆಕ್ ಕಂಪನಿ ಅಪ್ಲೈಡ್ ಕ್ಲೌಡ್ ಕಂಪ್ಯೂಟಿಂಗ್‌ನ ಸಿಇಒ ನೀಲೇಶ್ ಸತ್ಪುಟೆ ಅವರ ಗಮನ ಸೆಳೆದಿದೆ.

ಅಪ್ಲೈಡ್ ಕ್ಲೌಡ್ ಕಂಪನಿಯ ಮುಖ್ಯಸ್ಥರು ಪ್ರಸಾದ್ ಅವರ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಪ್ರಸಾದ್ ಅವರು ಬಯಸಿದಾಗ ಉದ್ಯೋಗಕ್ಕೆ ಸೇರ್ಪಡೆಯಾಗಬಹುದು. ಅವರಿಗೆ ಯಾವುದೇ ಸಂದರ್ಶನ ಇರುವುದಿಲ್ಲ ಎಂದು ನೀಲೇಶ್ ಹೇಳಿದ್ದಾರೆ.

‘ಹಾಯ್ ಅರ್ಶ್! ನೀವು ಪರಾಕ್ರಮಿ. ನಿಮ್ಮ ಚಿಕಿತ್ಸೆಯ ಸಮಯದಲ್ಲಿ ಸಂದರ್ಶನಗಳಿಗೆ ಹಾಜರಾಗುವುದನ್ನು ನಿಲ್ಲಿಸಿ. ನಿಮ್ಮ ದಾಖಲೆಗಳನ್ನು ನಾನು ಪರಿಶೀಲಿಸಿದ್ದೇನೆ. ನೀವು ಯಾವಾಗ ಬೇಕಾದರೂ ನಮ್ಮ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳಬಹುದು. ಯಾವುದೇ ಸಂದರ್ಶನ ಇರುವುದಿಲ್ಲ’ ಎಂದು ನೀಲೇಶ್ ಪ್ರತಿಕ್ರಿಯಿಸಿದ್ದಾರೆ.

ನೀಲೇಶ್ ಸ್ಪಂದನೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀಲೇಶ್ ಅವರನ್ನು ವ್ಯಕ್ತಿಯೊಬ್ಬರು ‘ಅತ್ಯಂತ ಸುಂದರ ಮಾನವ’ ಎಂದು ಕರೆದರೆ, ಇನ್ನೊಬ್ಬರು ‘ಜಗತ್ತಿಗೆ ನೀಲೇಶ್ ಅವರಂತಹ ಹೆಚ್ಚಿನ ನಾಯಕರು ಅಗತ್ಯವಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.