ದಿ ವೆಡ್ಡಿಂಗ್ ಫಿಲ್ಮರ್
ಇನ್‌ಸ್ಟಾಗ್ರಾಂ ಚಿತ್ರ
ನವದೆಹಲಿ: ವಿವಾಹ ಸಮಾರಂಭಗಳ ಛಾಯಾಗ್ರಾಹಕರೊಬ್ಬರು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು ಒಂದು ಸಾಲಿನ ಒಕ್ಕಣೆಯು ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನ ಸ್ಥಿತಿಯ ಸಂದರ್ಭದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.
‘ದಿ ವೆಡ್ಡಿಂಗ್ ಫಿಲ್ಮರ್’ ಎಂಬ ಕಂಪನಿಯ ಇನ್‌ಸ್ಟಾಗ್ರಾಂ ಖಾತೆಯು ಒಟ್ಟು 2.58 ಲಕ್ಷ ಫಾಲೋವರ್‌ಗಳನ್ನು ಹೊಂದಿದೆ. ಇದರ ಮಾಲೀಕ ವಿಶಾಲ್ ಪಂಜಾಬಿ ಎಂಬುವವರು ತಮ್ಮದೇ ಮದುವೆ ಸಂದರ್ಭದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ತಮ್ಮ ಪತ್ನಿ ನಿಕ್ಕಿ ಕೃಷನ್ ಅವರ ಹಣೆಗೆ ಸಿಂಧೂರ ಹಚ್ಚುವ ಚಿತ್ರವಿದೆ. ಅದರ ಕೆಳಗೆ ‘ಸಿಂಧೂರ ಪ್ರೀತಿಗೆ ಮಾತ್ರ, ಯುದ್ಧಕ್ಕಲ್ಲ’ ಎಂದು ಬರೆದುಕೊಂಡಿದ್ದಾರೆ.
ಚಿತ್ರವು ಸಂಭ್ರಮ, ಸಂಪ್ರದಾಯ ಮತ್ತು ಪ್ರೀತಿಯನ್ನು ಪ್ರತಿಬಿಂಬಿಸುತ್ತಿದ್ದರೂ, ಅದರ ಒಕ್ಕಣೆಗೆ ಕೆಲವರು ಕಿಡಿಯಾಡಿದ್ದಾರೆ. ಅದರಲ್ಲೂ ಏ. 22ರ ಪೆಹಲ್ಗಾಮ್ ದಾಳಿಯ ನಂತರದಲ್ಲಿ ಪಾಕಿಸ್ತಾನದಲ್ಲಿ ನೆಲೆ ಹೊಂದಿರುವ ಭಯೋತ್ಪಾದಕರ ವಿರುದ್ಧ ಭಾರತ ಸಾರಿರುವ ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆ ಸಂದರ್ಭದಲ್ಲಿ ಈ ಒಕ್ಕಣೆಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಭಯೋತ್ಪಾದಕರ ದಾಳಿಯ ಸಂದರ್ಭದಲ್ಲಿ ತಮ್ಮವರನ್ನು ಕಳೆದುಕೊಂಡವರ ಕುರಿತು ವಿಶಾಲ್ ಅವರು ಅಸೂಕ್ಷ್ಮ ಹಾಗೂ ಅಗೌರವ ತೋರಿದ್ದಾರೆ’ ಎಂದು ಒಬ್ಬರು ಜರಿದಿದ್ದಾರೆ.
‘26 ಮಹಿಳೆಯರು ತಮ್ಮ ಪತಿಯರನ್ನು ಕಳೆದುಕೊಂಡಾಗ ಈ ಸಾಲುಗಳು ಎಲ್ಲಿದ್ದವು. ಗಡಿಯಾಚಿನವರ ಕುರಿತು ಅಷ್ಟೊಂದು ಕಾಳಜಿ ಇದ್ದರೆ ಅಲ್ಲಿಯೇ ಹೋಗಿ ನೆಲೆಸು’ ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ನಿಮ್ಮ ರೀಲ್ ಇಷ್ಟ ಆಯಿತು. ಆದರೆ ತಮ್ಮ ಕಣ್ಣೆದುರೇ ‘ಸಿಂಧೂರ’ ಕಳೆದುಕೊಂಡ ಆ ಹೆಣ್ಣುಮಕ್ಕಳ ಕುರಿತು ಒಮ್ಮೆ ಯೋಚಿಸಿ. ಈ ಪೋಸ್ಟ್‌ಗೆ ಕೆಲ ಪಾಕಿಸ್ತಾನಿಗಳು ಸಂತಸ ವ್ಯಕ್ತಪಡಿಸಿದ್ದನ್ನು ನೋಡಿದ್ದೇನೆ. ಅದೇನು ಅಚ್ಚರಿಯಲ್ಲ ಬಿಡಿ’ ಎಂದು ವಿಶಾಲ್ ಪೋಸ್ಟ್‌ಗೆ ಒಬ್ಬರು ಪ್ರತಿಕ್ರಿಯಿಸಿದ್ದಾರೆ.
‘ನೀವು ಯಾವುದೋ ಮೂರ್ಖರ ಪ್ರಪಂಚದಲ್ಲಿರಬೇಕು. ಅಲ್ಲಿ ಸಿದ್ಧಾಂತಗಳನ್ನು ಮಾತನಾಡುವುದು ಸುಲಭ. ನೀವು ಪ್ರಸ್ತಾಪಿಸಿರುವ ಆ ‘ಪ್ರೀತಿ’ಯನ್ನು ಹಲವರು ಬಹು ಕ್ರೂರವಾಗಿ ಕಳೆದುಕೊಂಡಿದ್ದಾರೆ. ಇದು ದೇಶದ್ರೋಹದ ಹೇಳಿಕೆಯಾಗಿದ್ದು, ಇವರ ವಿರುದ್ಧ ದೂರು ನೀಡಬೇಕು’ ಎಂದು ಮತ್ತೊಬ್ಬರು ಆಗ್ರಹಿಸಿದ್ದಾರೆ.
ಇಷ್ಟೆಲ್ಲಾ ಟೀಕೆಗಳ ನಡುವೆ ವಿಶಾಲ್ ಅವರ ಪೋಸ್ಟ್ ಕುರಿತು ಪ್ರತಿಕ್ರಿಯಿಸಿರುವ ಒಬ್ಬರು, ‘ಇಂಥದ್ದೊಂದು ಶಾಂತಿಯ ಬೋಧನೆಗೆ ಧನ್ಯವಾದಗಳು. ಬಹುಷಃ ಈ ಪೋಸ್ಟ್‌ಗಾಗಿ ನಿಮಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿರುತ್ತವೆ. ಹೀಗಿದ್ದರೂ ಈ ಮಾತು ಹೇಳಿದ್ದಕ್ಕೆ ಧನ್ಯವಾದಗಳು’ ಎಂದಿದ್ದಾರೆ.
‘ಮನುಕುಲ ಮತ್ತು ಪ್ರತಿಯೊಂದು ಮಗುವನ್ನೂ ದೇವರು ರಕ್ಷಿಸಲಿ. ಪ್ರತಿಯೊಬ್ಬರೂ ಸುರಕ್ಷಿತವಾಗಿರಲಿ. ಇಂಥ ಹೇಳಿಕೆ ನೀಡುವ ಒಬ್ಬರಾದರೂ ಇದ್ದಾರಲ್ಲ ಎಂಬುದಷ್ಟೇ ಸಂತಸ’ ಎಂದು ಮತ್ತೊಬ್ಬರು ವಿಶಾಲ್ ಅವರ ಪೋಸ್ಟ್ ಅನ್ನು ಬೆಂಬಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.