ADVERTISEMENT

ಆ ಭೀಕರ ವಿಮಾನ ದುರಂತದಲ್ಲಿ ಆತನೊಬ್ಬ ಬದುಕಿದ್ದೇಗೆ? ‘ಮೃತ್ಯುಂಜಯ’ ಹೇಳಿದ್ದೇನು?

Ahmedabad Plane crash: ಬದುಕುಳಿದ ವಿಶ್ವಾಸ್‌ಕುಮಾರ್ ರಮೇಶ್ ಅವರ ಭಯಾನಕ ಅನುಭವದ ಮಾತುಗಳು.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜೂನ್ 2025, 11:47 IST
Last Updated 13 ಜೂನ್ 2025, 11:47 IST
<div class="paragraphs"><p>ವಿಶ್ವಾಸ್‌ಕುಮಾರ್ ರಮೇಶ್</p></div>

ವಿಶ್ವಾಸ್‌ಕುಮಾರ್ ರಮೇಶ್

   

ಬೆಂಗಳೂರು: ‘ನಾನು ಹೇಗೆ ಇಂತಹ ಮಹಾ ದುರಂತದಿಂದ ಬದುಕಿದೆನೋ ನನಗೆ ಗೊತ್ತಾಗುತ್ತಿಲ್ಲ, ಕಣ್ ಮುಚ್ಚಿ ಕಣ್ಣು ತೆರೆಯುವುದರಲ್ಲಿ ಎಲ್ಲವೂ ನಡೆದು ಹೋಗಿಬಿಟ್ಟಿತ್ತು..‘

ಇದು ಅಹಮದಾಬಾದ್ ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ವಿಶ್ವಾಸ್‌ಕುಮಾರ್ ರಮೇಶ್ ಅವರ ಭಯಾನಕ ಅನುಭವದ ಮಾತುಗಳು.

ADVERTISEMENT

ಅಹಮದಾಬಾದ್‌ನ ಸಿವಿಲ್ ಹಾಸ್ಪಿಟಲ್‌ನಲ್ಲಿ ಬಿಗಿ ಭದ್ರತೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಶ್ವಾಸ್‌ಕುಮಾರ್ ಅವರನ್ನು ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಬಳಿಕ ದೂರದರ್ಶನ ವಾಹಿನಿ ಜೊತೆ ಮಾತನಾಡಿರುವ ಭಾರತ ಮೂಲದ ಇಂಗ್ಲೆಂಡ್ ಪ್ರಜೆ ವಿಶ್ವಾಸ್‌ಕುಮಾರ್ ಅವರು, ‘ನನ್ನ ಕಣ್ ಮುಂದೆಯೇ ಎಲ್ಲವೂ ನಡೆದು ಹೋಯಿತು, ನಾನು ಸತ್ತೇ ಹೋದೆ ಎಂದುಕೊಂಡಿದ್ದೆ. ಆಮೇಲೆ ನೋಡಿದರೆ ನಾನು ಹೇಗೆ ಬದುಕಿದೆನೋ ಎಂಬುದು ನನಗೆ ಗೊತ್ತಾಗುತ್ತಿಲ್ಲ’ ಎಂದು ಆ ಭೀಕರ ಘಟನೆಯ ನೋವನ್ನು ಗದ್ಗದಿತರಾಗಿ ಹೇಳಿದ್ದಾರೆ.

‘ನಾನು ಬಿಜಿನೆಸ್ ಕ್ಲಾಸ್‌ನ ಹಿಂಬದಿಯ ಎಕಾನಮಿ ಕ್ಲಾಸ್‌ನ 11ಎ ಸೀಟ್‌ನ ತುರ್ತು ನಿರ್ಗಮನದ ದ್ವಾರದ ಬಳಿ ಕೂತಿದ್ದೆ. ವಿಮಾನ ಟೇಕ್ ಆಫ್ ಆದ ನಂತರ ಕೆಲವೇ ಸೆಕೆಂಡುಗಳಲ್ಲಿ ಅಲುಗಾಡಲು ಆರಂಭವಾಯಿತು. ಎಲ್ಲರೂ ಚೀರಾಡಲು ಶುರು ಮಾಡಿದರು. ವಿಮಾನ ನಿಯಂತ್ರಣ ಕಳೆದುಕೊಂಡು ಯಾವುದೋ ಕಟ್ಟಡಕ್ಕೆ ಜೋರಾಗಿ ಅಪ್ಪಳಿಸಿಕೊಂಡು ನುಗ್ಗಿತು. ತಕ್ಷಣವೇ ಬೆಂಕಿ ಹೊತ್ತಿಕೊಂಡಿತು. ಆಗ ನಾನು ಸೀಟ್ ಬೆಲ್ಟ್‌ ತೆಗೆದಿದ್ದೆ. ಕ್ಷಣಾರ್ಧದಲ್ಲೇ ನಾನು ಕುಳಿತಿದ್ದ ವಿಮಾನದ ಭಾಗ ಕಟ್ಟಡದ ನೆಲಮಹಡಿಗೆ ಹೋಗಿ ಬಿದ್ದಿತು. ನಾನು ಗೋಡೆಯ ಆಚೆ ಹೋಗಿ ಬಿದ್ದಿದ್ದರಿಂದ ಮುಂದೆ ಭಾರಿ ಪ್ರಮಾಣದ ಬೆಂಕಿ ಹೊತ್ತಿಕೊಂಡಿತ್ತು. ಓಡಿಹೋಗಲು ಹಿಂದೆ ಜಾಗವಿತ್ತು. ತಕ್ಷಣವೇ ಭಾರಿ ಕಷ್ಟಪಟ್ಟು ದೂರ ಓಡಿ ಬಂದೆ. ನನ್ನ ಬಳಿ ಕೂತಿದ್ದ ಅಂಕಲ್, ಆಂಟಿ ಬೆಂಕಿಯಲ್ಲಿ ಹೊತ್ತಿ ಉರಿದರು’ ಎಂದು 40 ವರ್ಷದ ವಿಶ್ವಾಸ್‌ಕುಮಾರ್ ಎದೆ ಝಲ್ಲೆನಿಸುವ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

ಘಟನೆ ನಡೆದ ಸ್ಥಳವನ್ನು ಮಹಜರು ಮಾಡಿದ ಮೇಲೆ ಹಾಗೂ ಫೋಟೊ, ವಿಡಿಯೊಗಳನ್ನು ಪರಿಶೀಲಿಸಿದ ಮೇಲೆ ವಿಶ್ವಾಸ್‌ಕುಮಾರ್ ಹೇಳಿಕೆಯನ್ನು ದೃಢಪಡಿಸುತ್ತವೆ ಎಂದು ಎನ್‌ಡಿಟಿವಿ ಸುದ್ದಿವಾಹಿನಿ ಹೇಳಿದೆ.

‘ವಿಮಾನದ ಬಾಲ ಮತ್ತು ಮಧ್ಯಭಾಗ ಸ್ಫೋಟ ಸಂಭವಿಸಿದ ತಕ್ಷಣವೇ ಛಿದ್ರ ಛಿದ್ರವಾಗಿ ಹೊತ್ತಿ ಉರಿದಿವೆ. ಆದರೆ, ವಿಶ್ವಾಸ್‌ಕುಮಾರ್ ಕೂತಿದ್ದ ಮುಂದಿನ ಸ್ವಲ್ಪ ಭಾಗಕ್ಕೆ ಬೆಂಕಿ ಹೊತ್ತಿಕೊಳ್ಳುವ ಮುನ್ನ ಮುರಿದು ಬಿದ್ದಿರುವುದು ಪತ್ತೆಯಾಗಿದೆ’ ಎಂದು ಹೇಳಿದೆ.

ಆದರೆ, ಸೀಟ್ ನಂಬರ್ 11ಜೆ ನಲ್ಲಿ ಕೂತಿದ್ದ ವಿಶ್ವಾಸ್‌ಕುಮಾರ್ ಅವರ ಸಹೋದರನಿಗೆ ವಿಶ್ವಾಸ್‌ಕುಮಾರ್ ರೀತಿ ಅದೃಷ್ಟ ಇರಲಿಲ್ಲ ಎನಿಸುತ್ತದೆ. ಹಾಗಾಗಿ ಅವರು ದುರಂತದಲ್ಲಿ ಪ್ರಾಣ ಬಿಟ್ಟಿದ್ದಾರೆ.

ವಿಶ್ವಾಸ್‌ಕುಮಾರ್ ಅವರು ಲಂಡನ್‌ನಲ್ಲಿ ಉದ್ಯಮಿಯಾಗಿದ್ದಾರೆ. ಕೆಲಸದ ಸಲುವಾಗಿ ಅಹಮದಾಬಾದ್‌ಗೆ ಬಂದಿದ್ದ ಅವರು ಸಹೋದರನ ಜೊತೆ ವಾಪಸ್ ಲಂಡನ್‌ಗೆ ಹೊರಟಿದ್ದರು.

ನಿನ್ನೆ ಅಹಮದಾಬಾದ್‌ನ ಸರ್ದಾರ್ ವಲ್ಲಾಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನತ್ತ ಹೊರಟಿದ್ದ ಏರ್‌ ಇಂಡಿಯಾ 171 ಬೋಯಿಂಗ್ ವಿಮಾನ, ಮಧ್ಯಾಹ್ನ 1.38 ಕ್ಕೆ ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ನಿಯಂತ್ರಣ ಕಳೆದುಕೊಂಡು ವಿಮಾನ ನಿಲ್ದಾಣದ ದಕ್ಷಿಣ ತುದಿಯ ಬಳಿಯಿದ್ದ ಮೇಘಾನಿ ನಗರದ ಬಿ.ಜೆ. ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಕಟ್ಟಡಗಳ ಮೇಲೆ ಸ್ಪೋಟಗೊಂಡಿತ್ತು. ಪರಿಣಾಮವಾಗಿ ಸಿಬ್ಬಂದಿ ಸೇರಿ 241 ಜನ ಮೃತಪಟ್ಟಿದ್ದಾರೆ. ಅದರಲ್ಲಿ ವಿಶ್ವಾಸ್‌ಕುಮಾರ್ ಮಾತ್ರ ಉಳಿದಿರುವುದು ಎಲ್ಲರಿಗೂ ಆಶ್ಚರ್ಯ ತರಿಸಿದ್ದು ಅವರನ್ನು ಮೃತ್ಯುಂಜಯ ಎಂದು ಬಣ್ಣಿಸುತ್ತಿದ್ದಾರೆ.

ಭಾರಿ ಇಂಧನ ತುಂಬಿದ್ದ ದೊಡ್ಡ ವಿಮಾನ ಅಪಘಾತದಿಂದ ಮೆಡಿಕಲ್ ಕಾಲೇಜಿನ ಹಾಸ್ಟೆಲ್‌ಗಳಲ್ಲಿನ ಹಲವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಆದರೆ, ಎಷ್ಟು ಜನ ಮೃತಪಟ್ಟಿದ್ದಾರೆ? ಎಷ್ಟು ಜನರಿಗೆ ಗಾಯಗಳಾಗಿವೆ? ಎಂಬ ನಿಖರ ಮಾಹಿತಿಯನ್ನು ಸಂಬಂಧಿಸಿದವರು ಇನ್ನೂ ಒದಗಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.