
‘ಪಿಂಕ್ ಪಾರ್ಕಿಂಗ್’ ವ್ಯವಸ್ಥೆ
ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರ ಪರಿಣಾಮ ಮನೆಯಿಂದ ಸ್ವಂತ ವಾಹನಗಳಲ್ಲಿ ಪ್ರಯಾಣಿಸಿದರೆ ಪಾರ್ಕಿಂಗ್ ಮಾಡುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಹಣ ಪಾವತಿಸಿ ರಸ್ತೆ ಬದಿ ಪಾರ್ಕಿಂಗ್ ಮಾಡಿದರೂ ವಾಹನಕ್ಕೆ ಭದ್ರತೆ ಇರದು. ಪಾರ್ಕಿಂಗ್ ಕಟ್ಟಡ, ಮಾಲ್‌ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯಿದ್ದರೂ ವಾಹನವನ್ನು ಸರಿಯಾಗಿ ಪಾರ್ಕ್ ಮಾಡಲು ಜಾಗ ಸಿಗುವುದೇ ದೊಡ್ಡ ಸವಾಲು ಎನ್ನುವಂತಾಗುತ್ತದೆ. ಅದರಲ್ಲೂ ಮಹಿಳೆಯರು, ಗರ್ಭಿಣಿಯರು ವಾಹನ ಚಲಾಯಿಸಿಕೊಂಡು ಹೋದರಂತೂ ವಾಹನ ಪಾರ್ಕ್ ಮಾಡುವುದೇ ತಲೆಬಿಸಿ.
ಅದಕ್ಕೆಂದೇ ನೆಕ್ಸಸ್ ಶಾಂತಿನಿಕೇತನ ಮಾಲ್‌ನಲ್ಲಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ‘ಪಿಂಕ್ ಪಾರ್ಕಿಂಗ್’ ಎಂದೇ ಕರೆಯಲಾಗುತ್ತಿದೆ. ಇದರಿಂದ ಮಹಿಳೆಯರು, ಗರ್ಭಿಣಿಯರು, ಮಕ್ಕಳೊಂದಿಗೆ ಬರುವ ತಾಯಂದಿರಿಗೆ ಅನುಕೂಲವಾಗುತ್ತಿದೆ.
ಗುಲಾಬಿ ಬಣ್ಣದ ಥೀಮ್‌ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಈ ಜಾಗದಲ್ಲಿ ಗೋಡೆಗಳ ಮೇಲೆಲ್ಲಾ ಹೂವು ಮುಡಿದ ಮಹಿಳೆಯರ ಹಾಗೂ ಬಣ್ಣ ಬಣ್ಣದ ಹೂವುಗಳನ್ನು ಸುಂದರವಾಗಿ ಚಿತ್ರಿಸಲಾಗಿದೆ. ಈ ಜಾಗದಲ್ಲಿ ಮಹಿಳೆಯರನ್ನು ಅಥವಾ ಗರ್ಭಿಣಿಯರನ್ನು ಹೊರತುಪಡಿಸಿ ಇನ್ಯಾರೂ ವಾಹನಗಳನ್ನು ಪಾರ್ಕ್ ಮಾಡುವಂತಿಲ್ಲ.
‘ಪಿಂಕ್ ಪಾರ್ಕಿಂಗ್’ ವ್ಯವಸ್ಥೆ
ಈ ಪಾರ್ಕಿಂಗ್‌ನ ಇನ್ನೊಂದು ವಿಶೇಷವೆಂದರೆ ಮಾಲ್ ಒಳಗೆ ಹೋಗುವ ದಾರಿ ಅಥವಾ ಲಿಫ್ಟ್/ಎಸ್ಕಲೇಟರ್ ಬಳಿಯೇ ಪಾರ್ಕಿಂಗ್ ಜಾಗ ಕಲ್ಪಿಸಲಾಗಿದೆ. ಹೀಗಾಗಿ ಮಹಿಳೆಯರು ವಾಹನವನ್ನು ಪಾರ್ಕ್ ಮಾಡಿ ಹೆಚ್ಚು ದೂರ ನಡೆಯುವ ಅಗತ್ಯವೂ ಇಲ್ಲ. ಪಾರ್ಕಿಂಗ್ ಮಾಡುವ ಒತ್ತಡವಾಗಲೀ, ನಂತರ ಮಾಲ್ ಒಳಗೆ ಹೋಗುವ ಅಥವಾ ಹೊರಗೆ ಬರುವ ಹಂತದಲ್ಲಿ ಗೊಂದಲವಿಲ್ಲದೆ ಸುಲಭವಾಗಿ ಓಡಾಡಬಹುದಾಗಿದೆ.
‘ಮಾಲ್‌ನಲ್ಲಿ ಮಹಿಳೆಯರ ಸುರಕ್ಷತೆಗೆ ಒತ್ತು ನೀಡಲಾಗಿದೆ. ಮಹಿಳೆಯರಿಗೆ ಗೌರವ ಸೂಚಕವಾಗಿಯೂ ಈ ಪಿಂಕ್ ಪಾರ್ಕಿಂಗ್ ಎನ್ನುವ ವಿನೂತನ ಹೆಜ್ಜೆ ಇರಿಸಲಾಗಿದೆ. ನೆಕ್ಸಸ್‌ನ ಎಲ್ಲಾ ಶಾಖೆಗಳಲ್ಲೂ ಈ ಪಿಂಕ್ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ’ ಎನ್ನುತ್ತಾರೆ ನೆಕ್ಸಸ್ ಶಾಂತಿನಿಕೇತನ ಮಾಲ್‌ನ ಹಿರಿಯ ವ್ಯವಸ್ಥಾಪಕ ಶಾಜಿ.
‘ಮಕ್ಕಳೊಂದಿಗೆ ಮಾಲ್‌ಗೆ ಬಂದಾಗ ವಾಹನ ನಿಲ್ಲಿಸಲು ಜಾಗ ಸಿಗದಿದ್ದರೆ ಕಷ್ಟವಾಗುತ್ತದೆ. ಅಲ್ಲದೆ ಗೊಂದಲವೂ ಜಾಸ್ತಿ. ಹೀಗೆ ಪಿಂಕ್ ಪಾರ್ಕಿಂಗ್ ವ್ಯವಸ್ಥೆಯಿದ್ದರೆ, ಆರಾಮವಾಗಿ ವಾಹನವನ್ನು ಪಾರ್ಕ್ ಮಾಡಬಹುದು’ ಎಂದು ಭೇಟಿ ನೀಡಿದ ಮಹಿಳೆಯೊಬ್ಬರು ಅಭಿಪ್ರಾಯ ಹಂಚಿಕೊಂಡರು.
ಸಾಮಾಜಿಕ ಜಾಲತಾಣಗಳಲ್ಲೂ ಪಿಂಕ್ ಪಾರ್ಕಿಂಗ್ ವ್ಯವಸ್ಥೆಯ ವಿಡಿಯೊ ವ್ಯಾಪಕವಾಗಿ ಹರಿದಾಡುತ್ತಿದೆ.
‘ಪಿಂಕ್ ಪಾರ್ಕಿಂಗ್’ ವ್ಯವಸ್ಥೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.