ADVERTISEMENT

ರೀಲ್ಸ್ ನೋಡುತ್ತಾರೆ, ವೈಯಕ್ತಿಕ ಫೋಟೊ ಹಂಚಿಕೊಳ್ಳುವುದಿಲ್ಲ: Gen z ಏಕೆ ಹೀಗೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಡಿಸೆಂಬರ್ 2025, 10:46 IST
Last Updated 25 ಡಿಸೆಂಬರ್ 2025, 10:46 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಸಾಮಾಜಿಕ ಜಾಲಾತಾಣಗಳು ಜೀವನದ ಭಾಗ ಎನ್ನುವಂತಾಗಿವೆ. ದಿನ ಬೆಳಗಾದರೆ ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಸ್ಕ್ರೋಲ್‌ ಮಾಡಿಯೇ ಮುಂದಿನ ಕೆಲಸ. ದೈನಂದಿನ ಚಟುವಟಿಕೆ, ತಾವು ಮಾಡಿದ ‘ಹೆಮ್ಮೆಯ’ ಕೆಲಸ ಎಲ್ಲವನ್ನೂ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಲೈಕ್ಸ್, ಕಮಂಟ್‌ಗಳ ಬಗ್ಗೆ ಕುತೂಹಲ ಹುಟ್ಟಿಸಿಕೊಳ್ಳುವುದು ಸಹಜವಾಗಿದೆ.

ಈ ಸಾಮಾಜಿಕ ಜಾಲತಾಣವೆಂಬ ಸಾಗರದಲ್ಲಿ ಟ್ರೆಂಡ್‌ ಬದಲಾದಂತೆ ಬಳಕೆದಾರರೂ ಬದಲಾಗುತ್ತಾರೆ. ಇನ್ನೊಬ್ಬರನ್ನು ನೋಡಿ ಪ್ರಭಾವಿತರಾಗಿ ಮೆಚ್ಚುಗೆಗೆ ಪೋಸ್ಟ್‌ ಹಂಚಿಕೊಳ್ಳುವವರೂ ಇದ್ದಾರೆ. ಇವೆಲ್ಲದರ ನಡುವೆ ಈಗಿನ ಜೆನ್‌ ಝೀ (Gen z) ಪೀಳಿಗೆಯ ಯುವ ಜನತೆ ಮಾತ್ರ ಆನ್‌ಲೈನ್‌ನಲ್ಲಿ ಇದ್ದರೂ ಪೋಸ್ಟ್‌ ಹಂಚಿಕೊಳ್ಳದೆ ಕೊಂಚ ಭಿನ್ನ ಎನಿಸುತ್ತಾರೆ.

ADVERTISEMENT

ಜೆನ್‌ ಝೀಗಳು ಸದಾ ಆನ್‌ಲೈನ್‌ನಲ್ಲಿ ಇದ್ದು, ಗಂಟೆಗಟ್ಟಲೆ ರೀಲ್ಸ್ ಸ್ಕ್ರೋಲ್‌ ಮಾಡುತ್ತಿದ್ದರೂ ಖಾಸಗಿ ಮಾಹಿತಿ, ಫೋಟೊಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತಿಲ್ಲ, ಇನ್ನೂ ಕೆಲವರು ಯಾವುದೇ ಪೋಸ್ಟ್‌ಗಳನ್ನೂ ಹಂಚಿಕೊಳ್ಳುತ್ತಿಲ್ಲ ಎನ್ನುವುದು ಇತ್ತೀಚೆಗೆ ಅಧ್ಯಯನವೊಂದು ಬಹಿರಂಗಪಡಿಸಿದೆ.

50 ದೇಶಗಳಲ್ಲಿ ಎರಡೂವರೆ ಲಕ್ಷ ಆನ್‌ಲೈನ್‌ ಬಳಕೆದಾರರನ್ನು ಒಳಗೊಂಡು ನಡೆದ ಸಮೀಕ್ಷೆಯಲ್ಲಿ ಶೇ 10ರಷ್ಟು ಜನರು ಸಾಮಾಜಿಕ ಜಾಲತಾಣಗಳ ಬಳಕೆಯಿಂದ ದೂರವುಳಿಯುತ್ತಿದ್ದಾರೆ ಎನ್ನುವುದು ‘ದಿ ಫೈನಾನ್ಷಿಯಲ್ ಟೈಮ್ಸ್‌’ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ತಿಳಿದುಬಂದಿದೆ.

ಸಾಮಾಜಿಕ ಜಾಲತಾಣಗಳಿಂದ ದೂರವಿರುವವರು ‘ಡಿಜಿಟಲ್‌ ಫಾಸ್ಟಿಂಗ್‌’ ಎಂದು ಕರೆದುಕೊಳ್ಳುವಂತೆ, ಖಾಸಗಿ ಫೋಟೋಗಳನ್ನು ಪೋಸ್ಟ್‌ ಮಾಡದಿರುವುದನ್ನು ಅಥವಾ ಯಾವುದೇ ಪೋಸ್ಟ್‌ಗಳನ್ನು ಹಂಚಿಕೊಳ್ಳದಿರುವುದಕ್ಕೆ ‘ಝೀರೋ ಪೋಸ್ಟಿಂಗ್‌’ ಎಂದು ಕರೆಯಲಾಗುತ್ತಿದೆ.

ಕಾರಣವೇನು?
ಸಾಮಾಜಿಕ ಜಾಲತಾಣ ಸುರಕ್ಷಿತವಲ್ಲ ಎಂಬುದನ್ನು ಜೆನ್‌ ಝೀಗಳು ಅರಿತುಕೊಂಡಿದ್ದಾರೆ. ಕಮೆಂಟ್‌ಗಳು, ಇತರರ ಮಾತುಗಳು ಮಾನಸಿಕ ನೆಮ್ಮದಿಗೆ ಧಕ್ಕೆಯುಂಟು ಮಾಡುತ್ತದೆ ಎನ್ನುವುದು ಅವರ ಭಾವನೆ.

ಇವು ಮಾತ್ರವಲ್ಲದೆ, ನಕಲಿ ಖಾತೆಗಳ ಹಾವಳಿ, ಡಿಜಿಟಲ್‌ ವಂಚನೆ, ಫೋಟೊ ಮಾರ್ಫಿಂಗ್‌ನಂತಹ ಭಯಗಳು ಹೆಚ್ಚು. ಟ್ರೆಂಡ್ ದಿನವೂ ಬದಲಾಗುತ್ತಿರುವುದಕ್ಕೆ ದೈನಂದಿನ ಜವಾಬ್ದಾರಿಗಳ ನಡುವೆ ಹೊಸ ರೀಲ್ಸ್, ವಿಡಿಯೊ ಮಾಡಿ ಪೋಸ್ಟ್ ಮಾಡಲು ಸಾಧ್ಯವಾಗದೇ ಇರಬಹುದು. ಇತರರಿಗೆ ಹೋಲಿಕೆ ಮಾಡುವ ಮನಸ್ಥಿತಿ ಬೆಳೆಯಬಹುದು, ಮಾನಸಿಕ ಒತ್ತಡ ಉಂಟಾಗಬಹುದು ಎನ್ನುವ ಕಾರಣಕ್ಕೆ ಈ ಗೋಜಲು ಬೇಡವೆಂದು ಜೆನ್‌ ಝೀ ಜನರೇಷನ್‌ ಪೋಸ್ಟ್‌ ಹಂಚಿಕೊಳ್ಳುವುದರಿಂದ ದೂರ ಉಳಿಯುತ್ತಿದೆ ಎನ್ನುವುದು ತಿಳಿದುಬಂದಿದೆ.

ಹಾಗೆಂದು ಜೆನ್‌ ಝೀಗಳು ಸಾಮಾಜಿಕ ಜಾಲತಾಣದ ಬಳಕೆಯೇನೂ ಕಡಿಮೆ ಮಾಡಿಲ್ಲ
ಖಾಸಗಿ ಮಾಹಿತಿಯ ಬದಲು ನಿಸರ್ಗ, ಹವ್ಯಾಸ, ತಾವು ನೋಡಿದ ಜಾಗದ ವಿಭಿನ್ನ ಫೋಟೊಗಳು, ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಫೋಟೊ, ವಿಡಿಯೊಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತಾರೆ.

ಹೊಸ ಕಲಿಕೆಯತ್ತ ಗಮನ
ಆನ್‌ಲೈನ್‌ ಪ್ರಪಂಚದಲ್ಲಿ ಸಕ್ರಿಯರಾಗಿರುವ ಜೆನ್‌ ಝೀ ಗಳು ಹೊಸ ಕಲಿಕೆಯತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ ಎನ್ನುವುದು ಗಮನಾರ್ಹ ಸಂಗತಿ. ಚಿತ್ರಕಲೆ, ಹೊಲಿಗೆ, ಉಲ್ಲನ್‌ ಕಲಾತ್ಮಕತೆ... ಹೀಗೆ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಹೊಸದನ್ನು ಕಲಿಯಲು ಇಂಟರ್‌ನೆಟ್‌ಅನ್ನು ಬಳಸುತ್ತಿದ್ದಾರೆ. ಇನ್ನೂ ಕೆಲವರು ಓದು, ಸುತ್ತಾಟ, ಸ್ನೇಹಿತರ ಬಳಗ ಎಂದು ತಮ್ಮದೇ ಲೋಕದಲ್ಲಿ ಬೆಳೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.