ADVERTISEMENT

ಲೋಕಸಭೆ ಚುನಾವಣೆ: ‘ಕೈ’ಗೆ ಸಿಕ್ಕೀತೇ ಮತಗಂಟಿನ ಗ್ಯಾರಂಟಿ

ವೈ.ಗ.ಜಗದೀಶ್‌
Published 12 ಏಪ್ರಿಲ್ 2024, 23:30 IST
Last Updated 12 ಏಪ್ರಿಲ್ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಕರ್ನಾಟಕದ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ಘೋಷಿಸಿದ್ದ ‘ಪಂಚ ಗ್ಯಾರಂಟಿ’ ದೊಡ್ಡ ಸದ್ದು ಮಾಡಿತ್ತು. ‘ಗ್ಯಾರಂಟಿ’ಗಳ ಬಗ್ಗೆ ಟೀಕೆ ಮಾಡುತ್ತಲೇ ಇರುವ ಬಿಜೆಪಿಯವರು ಈಗ ‘ಮೋದಿ ಗ್ಯಾರಂಟಿ’ಯ ಅಸ್ತ್ರ ಹೂಡಿದ್ದಾರೆ. ಈ ಬೆನ್ನಲ್ಲೇ, ಗ್ಯಾರಂಟಿಗಳು ಕಾಂಗ್ರೆಸ್‌ಗೆ ಮತಗಂಟನ್ನು ಕೊಡಲಿದೆಯೇ ಎಂಬ ಚರ್ಚೆಯೂ ಶುರುವಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ವಿಜಯ ಸಾಧಿಸಲು ‘ಗ್ಯಾರಂಟಿ’ ಒಂದೇ ಕಾರಣವಲ್ಲ; ಚುನಾವಣೆ ಪ್ರಣಾಳಿಕೆಯಲ್ಲಿನ ಆಮಿಷ, ಅಧಿಕಾರ ದಕ್ಕಿಸಿಕೊಂಡ ಬಳಿಕ ಜಾರಿಯಾಗುವ ಬಗ್ಗೆ ಜನರಿಗೆ ನಂಬಿಕೆ ಇರುವುದಿಲ್ಲ. ಆಡಳಿತಾರೂಢ ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪವನ್ನೇ ಬಳಸಿ, ಕಾಂಗ್ರೆಸ್ ನಡೆಸಿದ ಅಭಿಯಾನ, ಮತದಾರರಲ್ಲಿ ಇದ್ದಿರಬಹುದಾದ ಆಡಳಿತವಿರೋಧಿ ಮನಃಸ್ಥಿತಿ, ಬಿ.ಎಸ್‌. ಯಡಿಯೂರಪ್ಪ ಅವರನ್ನು ಬಿಜೆಪಿ ಕಡೆಗಣಿಸಿದ್ದು ಆ ಪಕ್ಷದ ಸೋಲಿಗೆ ಪ್ರಮುಖ ಕಾರಣಗಳು ಆಗಿರಬಹುದು. ಈ ಎಲ್ಲದರ ಜತೆಗೆ ಗ್ಯಾರಂಟಿಗಳೂ ಕಾಂಗ್ರೆಸ್‌ ಕೈಹಿಡಿದು, ಅಧಿಕಾರದ ಗದ್ದುಗೆಗೆ ಕೂರಿಸಿದವು.

ADVERTISEMENT

ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಘೋಷಿಸಿದ ‘ಗ್ಯಾರಂಟಿ’ಗಳ ಬಗ್ಗೆ ಬಿಜೆಪಿ ಕಟು ಟೀಕೆ ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿಯವರು, ಕರ್ನಾಟಕದಲ್ಲಿ ಚುನಾವಣೆ ಪ್ರಚಾರ ನಡೆಸಿದ ವೇಳೆ, ‘ಮೇ ತಿಂಗಳ ಬಳಿಕ ಕಾಂಗ್ರೆಸ್‌ ಗ್ಯಾರಂಟಿಗಳಿಗೆ ವಾರಂಟಿ ಇರುವುದಿಲ್ಲ. ಇಂತಹ ಉಚಿತ ಕೊಡುಗೆಗಳಿಂದ ದೇಶ–ರಾಜ್ಯಗಳ ಆರ್ಥಿಕತೆ ದಿವಾಳಿಯಾಗಲಿದೆ’ ಎಂದು ಹೇಳಿದ್ದರು. ಆದರೆ, ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ, ಚುನಾವಣೆ ಪ್ರಣಾಳಿಕೆಯಲ್ಲಿ ಹಲವು ‘ಉಚಿತ’ ಕೊಡುಗೆಗಳನ್ನು ಘೋಷಿಸಿತ್ತು. ಕರ್ನಾಟಕದ ಚುನಾವಣೆ ಬಳಿಕ ನಡೆದ ವಿವಿಧ ರಾಜ್ಯಗಳ ಚುನಾವಣೆ ವೇಳೆ, ಬಿಜೆಪಿ ಅನೇಕ ಉಚಿತ ಕೊಡುಗೆಗಳ ಘೋಷಿಸಿತ್ತು. ಲೋಕಸಭೆ ಚುನಾವಣೆ ಆರಂಭವಾಗುವುದಕ್ಕೆ ಮುನ್ನ ಪ್ರತಿನಿತ್ಯವೂ ‘ಮೋದಿ ಗ್ಯಾರಂಟಿ’ಯ ಜಾಹೀರಾತುಗಳು ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದವು.

ಹಾಗಂತ ಈ ನೇರ ನಗದು ನೀಡುವುದನ್ನು ಮೊದಲು ಆರಂಭಿಸಿದ್ದು ಕಾಂಗ್ರೆಸ್ ಅಲ್ಲ. 2016ರಲ್ಲಿ ಮೋದಿ ಸರ್ಕಾರ ಘೋಷಿಸಿದ ‘ಉಜ್ವಲ’ ಎಂಬ ಜನಪ್ರಿಯ ಯೋಜನೆಯಡಿ ಪ್ರತಿ ಸಿಲಿಂಡರ್‌ಗೆ ₹300 ಸಹಾಯಧನ ಘೋಷಣೆ ಮಾಡಲಾಗಿತ್ತು. 2019ರ ಲೋಕಸಭೆ ಚುನಾವಣೆಗೆ ಮುನ್ನ ಘೋಷಿಸಿದ ‘ಕಿಸಾನ್ ಸಮ್ಮಾನ್‌’ ಯೋಜನೆಯಡಿ ಪ್ರತಿ ರೈತ ಕುಟುಂಬಕ್ಕೆ ವಾರ್ಷಿಕ ₹6 ಸಾವಿರ ನೀಡಲಾಗುತ್ತಿದೆ. ಇದು ನೇರ ನಗದು ನೀಡುವ ಯೋಜನೆಗಳೇ ಆಗಿವೆ.

ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಛಲತೊಟ್ಟ ಕಾಂಗ್ರೆಸ್‌ ನಾಯಕರು ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದರು. ಅದರಲ್ಲೂ ಮಹಿಳಾ ಕೇಂದ್ರಿತ ಯೋಜನೆಗಳಾದ ‘ಗೃಹಲಕ್ಷ್ಮಿ’ ಮತ್ತು ‘ಶಕ್ತಿ’ಯೋಜನೆಗಳು ಮಹಿಳೆಯರ ಮತ ಸೆಳೆಯುವಲ್ಲಿ ಯಶಸ್ವಿಯಾದಂತೆ ಕಾಣಿಸುತ್ತವೆ. ಅದರಲ್ಲೂ ಕೋವಿಡೋತ್ತರ ಆರ್ಥಿಕ ಸಂಕಷ್ಟದಲ್ಲಿದ್ದ ಜನರಿಗೆ, ಅದರಲ್ಲೂ ಮಹಿಳೆಯರಿಗೆ ನೆರವಿಗೆ ನಿಂತವು. ‘ಇವೆಲ್ಲವೂ ಜನರನ್ನು ಸ್ವಾವಲಂಬನೆ ಮತ್ತು ಸ್ವಾಭಿಮಾನ ತಂದುಕೊಡುವ ಯೋಜನೆಗಳಾಗಿದ್ದು, ಈ ಬಾರಿಯೂ ತಮ್ಮ ಪಕ್ಷದ ಕೈಹಿಡಿಯಲಿವೆ’ ಎಂಬ ವಿಶ್ವಾಸ ಕಾಂಗ್ರೆಸ್ ನಾಯಕರದ್ದಾಗಿದೆ.

ಚುನಾವಣೆಯಲ್ಲಿ ಉಚಿತ ಕೊಡುಗೆಗಳನ್ನೂ ಘೋಷಿಸಿಯೂ ಗೆಲ್ಲಲಾಗದ ಬಿಜೆಪಿ ನಾಯಕರು ‘ಗ್ಯಾರಂಟಿ’ಗಳನ್ನು ಹೀಗಳೆಯುತ್ತಲೇ ಬಂದಿದ್ದಾರೆ. ಗ್ಯಾರಂಟಿ ಜಾರಿಯೇ ಆಗಿಲ್ಲ; ಬಿಟ್ಟಿಭಾಗ್ಯದಿಂದ ಸರ್ಕಾರ ದಿವಾಳಿಯಾಗಿದೆ ಎಂದು ಟೀಕಿಸುತ್ತಲೇ ಬಂದಿದ್ದಾರೆ. ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ, ಗ್ಯಾರಂಟಿಗಳು ಕಾಂಗ್ರೆಸ್‌ ಕೈಹಿಡಿದಿವೆ ಎಂಬುದು ಮನವರಿಕೆಯಾಗಿದ್ದರಿಂದ ಬಿಜೆಪಿ ನಾಯಕರು, ಅದನ್ನೇ ಟೀಕಾ ವಿಷಯವಾಗಿ ಮಾಡಿಕೊಂಡಿದ್ದಾರೆ.

ವಿಧಾನಸಭೆ ಚುನಾವಣೆಗೆ ಮುನ್ನ ಘೋಷಣೆಯಾಗಿದ್ದ ‘ಗ್ಯಾರಂಟಿ’ಗಳು ಈಗ ಜಾರಿಯಲ್ಲಿವೆ. ಸರ್ಕಾರ ಹೇಳುತ್ತಿರುವ ಅಂಕಿ ಅಂಶಕ್ಕೂ, ವಾಸ್ತವ ಅಂಕಿ ಅಂಶಕ್ಕೂ ವ್ಯತ್ಯಾಸ ಇರಬಹುದು. ಆದರೆ, ಶಕ್ತಿಯೋಜನೆಯಡಿ ಬಸ್ಸುಗಳಲ್ಲಿ ಮಹಿಳೆಯರು ಉಚಿತವಾಗಿ ಓಡಾಡುತ್ತಲೇ ಇದ್ದಾರೆ. ವಿದ್ಯುತ್ ಬಿಲ್ ಕಟ್ಟುವ ತಾಪತ್ರಯ ಬಹುತೇಕ ಕುಟುಂಬಗಳಿಗೆ ತಪ್ಪಿದೆ. ಇದು ‘ಮತ’ವಾಗಬಹುದೆಂಬ ಆತಂಕ ಬಿಜೆಪಿಯವರಿಗೂ ಇದೆ. ಈ ಕುರಿತು ಪ್ರತಿಕ್ರಿಯಿಸಿದ್ದ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರು, ‘ಮಹಿಳಾ ಮತಗಳು ಕಾಂಗ್ರೆಸ್‌ಗೆ ಬೀಳುವುದಿಲ್ಲ. ಮಹಿಳೆಯರು ಬಿಜೆಪಿ ಜತೆಗೆ ಇದ್ದಾರೆ’ ಎಂದು ಹೇಳಿದ್ದುಂಟು.

ಪತ್ರಿಕಾಗೋಷ್ಠಿ ನಡೆಸಿದ್ದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ. ಮಂಜುಳಾ, ‘ರಾಜ್ಯದಲ್ಲಿ ಕಾಂಗ್ರೆಸ್‌ ಹೆಚ್ಚಿನ ಸ್ಥಾನ ಗೆಲ್ಲದೇ ಇದ್ದರೆ ಗ್ಯಾರಂಟಿಗಳು ನಿಂತುಹೋಗುತ್ತವೆ ಎಂದು ಕಾಂಗ್ರೆಸ್‌ನವರು ‌ ಮತದಾರರನ್ನು ಬೆದರಿಸುತ್ತಿದ್ದಾರೆ’ ಎಂದು ಹೇಳಿದ್ದರು. ‘ಗ್ಯಾರಂಟಿ ಕಾರ್ಡ್‌ಗಳನ್ನು ಹಂಚುವುದಕ್ಕೆ ತಡೆಯೊಡ್ಡಬೇಕು’ ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಕೊಟ್ಟಿದೆ. ಅಂದರೆ, ಗ್ಯಾರಂಟಿಗಳು ಕಾಂಗ್ರೆಸ್‌ಗೆ ಅಲ್ಪಮಟ್ಟಿಗೆ ವರವಾಗಬಹುದೆಂಬ ಲೆಕ್ಕಾಚಾರ ಇದರ ಹಿಂದಿದೆ ಎಂಬುದು ಸ್ಪಷ್ಟ.

ಹಾಗಂತ, ಜನಪ್ರಿಯ–ಜನಪರ ಯೋಜನೆಗಳು ಮತವಾಗಿ ಪರಿವರ್ತಿತವಾಗುತ್ತವೆ ಎಂಬುದಕ್ಕೆ ಆಧಾರಗಳೇನು ಸಿಗುವುದಿಲ್ಲ. ಅತ್ಯುತ್ತಮ ಆಡಳಿತ ನೀಡಿದವರು ಚುನಾವಣೆಯಲ್ಲಿ ಸೋತಿದ್ದುಂಟು. 2018ರಲ್ಲಿ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಸೇರಿದಂತೆ ಹಲವು ‘ಭಾಗ್ಯ’ಗಳನ್ನು ಕೊಟ್ಟಿದ್ದರೂ ಕಾಂಗ್ರೆಸ್‌ ಅನ್ನು ಜನ ಮರು ಆಯ್ಕೆ ಮಾಡಲಿಲ್ಲ. ಮತದಾನದ ಆಸುಪಾಸು ಘಟಿಸುವ ವಿದ್ಯಮಾನಗಳು, ರಾಜಕೀಯ ಲೆಕ್ಕಾಚಾರಗಳು, ರಾಷ್ಟ್ರೀಯ ವಿಚಾರಗಳು ಲೋಕಸಭೆ ಚುನಾವಣೆಯಲ್ಲಿ ಪರಿಣಾಮ ಬೀರುವ ಅಂಶಗಳಾಗಿವೆ. ಇವುಗಳ ಮಧ್ಯೆಯೂ ಗ್ಯಾರಂಟಿಯ ಲಾಭ ಕಾಂಗ್ರೆಸ್‌ಗೆ ದಕ್ಕೀತೇ ಎಂಬ ಕುತೂಹಲವಂತೂ ಇದೆ.

ಪಂಚ ಗ್ಯಾರಂಟಿ

ಅನ್ನ ಭಾಗ್ಯ– 2 ಕೋಟಿ ಕುಟುಂಬ

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಪ್ರತಿ ತಿಂಗಳು 10 ಕೆ.ಜಿ. ಅಕ್ಕಿ ವಿತರಿಸುವ ವಾಗ್ದಾನ. ಬೇಡಿಕೆಗೆ ತಕ್ಕಷ್ಟು ಅಕ್ಕಿ ಸಿಗದೇ ಇರುವುದರಿಂದ 5 ಕೆ.ಜಿ ಅಕ್ಕಿ, ಉಳಿದ 5 ಕೆ.ಜಿ. ಲೆಕ್ಕದಲ್ಲಿ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ.

**

ಗೃಹ ಜ್ಯೋತಿ– 1.23 ಕೋಟಿ ಕುಟುಂಬ

ಪ್ರತಿತಿಂಗಳು ಗರಿಷ್ಠ 200 ಯೂನಿಟ್‌ವರೆಗೆ ಗೃಹ ಬಳಕೆಗೆ ಬಳಸುವ ವಿದ್ಯುತ್ ಉಚಿತ. ನೋಂದಾಯಿಸಿಕೊಂಡವರಿಗೆ ಮಾತ್ರ ಸೌಲಭ್ಯ. ಸರಾಸರಿ ಬಳಕೆ ಆಧರಿಸಿ, ಉಚಿತ ವಿದ್ಯುತ್ ಪ್ರಮಾಣ ನಿಗದಿ

**

ಗೃಹ ಲಕ್ಷ್ಮಿ– 87.58 ಲಕ್ಷ ಫಲಾನುಭವಿಗಳು

ಪ್ರತಿ ಕುಟುಂಬದ ಯಜಮಾನಿಗೆ ತಿಂಗಳಿಗೆ ₹2 ಸಾವಿರ ನೀಡುವ ಯೋಜನೆ.

**

ಶಕ್ತಿಯೋಜನೆ; ಪ್ರತಿದಿನ ಸರಾಸರಿ 65 ಲಕ್ಷ ಪ್ರಯಾಣಿಕರು

ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು, ಯುವತಿಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ. ಈ ಯೋಜನೆ ಶುರುವಾಗುವ ಮೊದಲು ಪ್ರತಿದಿನ ಸರಾಸರಿ 84 ಲಕ್ಷ ಜನ ಓಡಾಡುತ್ತಿದ್ದರು. ಈಗ ಪ್ರತಿನಿತ್ಯ ಓಡಾಡುವವರ ಸಂಖ್ಯೆ 1.08 ಕೋಟಿಗೆ ತಲುಪಿದೆ. ಈ ಪೈಕಿ ಶೇ 59ರಷ್ಟು ಮಹಿಳೆಯರಿದ್ದಾರೆ.

**

ಯುವ ನಿಧಿ– 4.7 ಲಕ್ಷ ಫಲಾನುಭವಿಗಳು

ವಿದ್ಯಾಭ್ಯಾಸ ಮುಗಿದು ಆರು ತಿಂಗಳಾದರೂ ಉದ್ಯೋಗ ಸಿಗದವರಿಗೆ 24 ತಿಂಗಳ ಕಾಲ ಯುವ ನಿಧಿ ನೀಡಲಾಗುತ್ತಿದೆ. ಡಿಪ್ಲೊಮಾ ಪಾಸಾದವರಿಗೆ ತಿಂಗಳಿಗೆ ₹1,500 ಹಾಗೂ ಪದವೀಧರರಿಗೆ ₹3 ಸಾವಿರ ಸಿಗಲಿದೆ.

ಸರ್ಕಾರದ ವಿವಿಧ ಇಲಾಖೆಗಳ ಮಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.