ADVERTISEMENT

ಐಪಿಎಲ್‌: ಆರ್‌ಸಿಬಿಗೆ ಸೋಲು, ಅಭಿಮಾನಿಗಳನ್ನು ಛೇಡಿಸುತ್ತಿರುವ ಮೀಮ್‌ಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಸೆಪ್ಟೆಂಬರ್ 2021, 4:36 IST
Last Updated 21 ಸೆಪ್ಟೆಂಬರ್ 2021, 4:36 IST
ಆರ್‌ಸಿಬಿ ಎದುರು ಗೆಲುವು ಪಡೆದ ಕೆಕೆಆರ್‌ ತಂಡದ ಆಟಗಾರರಿಗೆ ವಿರಾಟ್‌ ಕೊಹ್ಲಿ ಅಭಿನಂದಿಸುತ್ತಿರುವುದು
ಆರ್‌ಸಿಬಿ ಎದುರು ಗೆಲುವು ಪಡೆದ ಕೆಕೆಆರ್‌ ತಂಡದ ಆಟಗಾರರಿಗೆ ವಿರಾಟ್‌ ಕೊಹ್ಲಿ ಅಭಿನಂದಿಸುತ್ತಿರುವುದು   

ಬೆಂಗಳೂರು: ಐಪಿಎಲ್‌ ಆರಂಭದಿಂದಲೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಮೇಲಿನ ಅಭಿಮಾನ ಬಿಡದೆ ಮುಂದುವರಿದವರಲ್ಲಿ ಅನೇಕರು ನಿನ್ನೆ ತಂಡದ ಆಟಕ್ಕೆ ಬೇಸರ ಪಟ್ಟಿದ್ದಾರೆ. ಕೊಹ್ಲಿ ಬಳಗದ ಕಳಪೆ ಬ್ಯಾಟಿಂಗ್‌ಗೆ ಆರ್‌ಸಿಬಿ ಅಭಿಮಾನಿಗಳು ಸಿಟ್ಟಾದರೆ, ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್‌) ಅಭಿಮಾನಿಗಳು ಮೀಮ್‌ಗಳ ಮೂಲಕ ಅವರನ್ನು ಮತ್ತಷ್ಟು ಕಾಡಿದ್ದಾರೆ.

2021ರ ಐಪಿಎಲ್‌ ಪುನರಾರಂಭವಾಗಿದ್ದು, ಕೆಕೆಆರ್‌ ಎದುರು ಆರ್‌ಸಿಬಿ ಹೀನಾಯ ಸೋಲು ಅನುಭವಿಸಿದೆ. ಇಡೀ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು 92 ಒಟ್ಟುಗೂಡಿಸುವಲ್ಲಿ ಸಾಕಾಗಿ ಹೋದರು. ಕೇವಲ ನಾಲ್ಕು ಆಟಗಾರರು ಮಾತ್ರವೇ ಎರಡಂಕಿಯ ರನ್‌ ದಾಖಲಿಸಿದರು. ಆರ್‌ಸಿಬಿ ನೀಡಿದ ಗುರಿಯನ್ನು ಕೆಕೆಆರ್‌ ಕೇವಲ ಹತ್ತು ಓವರ್‌ಗಳಲ್ಲೇ ಪೂರೈಸಿ, ಒಂಬತ್ತು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

ಆರ್‌ಸಿಬಿಯ ಸ್ಟಾರ್‌ ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ಸ್‌ ಐಪಿಎಲ್‌ನಲ್ಲಿ ಆರನೇ ಬಾರಿಗೆ ಶೂನ್ಯ ರನ್‌ ಗಳಿಕೆಯೊಂದಿಗೆ ಹೊರ ನಡೆದರು. ತಂಡ ನಾಯಕ, ವಿರಾಟ್‌ ಕೊಹ್ಲಿ ತಮ್ಮ 200ನೇ ಪಂದ್ಯದಲ್ಲಿ ಕೇವಲ 5ರನ್‌ ಗಳಿಸಿದರು. ದೇವದತ್ತ ಪಡಿಕ್ಕಲ್ ದಾಖಲಿಸಿದ 22 ರನ್‌ ತಂಡದಲ್ಲಿ ಗರಿಷ್ಠ ರನ್‌ ಆಗಿ ಉಳಿಯಿತು. ಆರ್‌ಸಿಬಿ ಈ ಹಿಂದೆ ಕೆಕೆಆರ್ ವಿರುದ್ಧವೇ 2017ರಲ್ಲಿ 49 ಹಾಗೂ 2008ರಲ್ಲಿ 82 ರನ್ನಿಗೆ ಆಲೌಟ್ ಆಗಿತ್ತು.

ADVERTISEMENT

ಅಲ್ಪಮೊತ್ತದ ಗುರಿ ಬೆನ್ನಟ್ಟಿದ ಕೋಲ್ಕತ್ತ ತಂಡವು 10 ಓವರ್‌ಗಳಲ್ಲಿ 1 ವಿಕೆಟ್‌ಗೆ 94 ರನ್ ಗಳಿಸಿ ಜಯಭೇರಿ ಬಾರಿಸಿತು. ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್ (48 ರನ್) ಮತ್ತು ವೆಂಕಟೇಶ್ ಅಯ್ಯರ್ (ಔಟಾಗದೇ 41) ತಂಡವನ್ನು ಗೆಲುವಿನ ದಡ ಸೇರಿಸಿದರು.

ಕೊಹ್ಲಿ, ಎಬಿಡಿ ಔಟ್‌ ಅಗುತ್ತಿದ್ದಂತೆ ಶುರುವಾದ ಮೀಮ್‌ಗಳು; ಸಾಮಾಜಿಕ ಮಾಧ್ಯಮಗಳಲ್ಲಿ ಇನ್ನೂ ಮುಂದುವರಿಯುತ್ತಿವೆ. 'ಈಗ ಆರ್‌ಸಿಬಿ ಅಭಿಮಾನಿಗಳ ಸ್ಥಿತಿ' ಎಂಬ ಬರಹ ಹೊತ್ತ ಭಿನ್ನ ಮೀಮ್‌ಗಳು ಭಾರೀ ಸದ್ದು ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.