
ಭತ್ತದ ಗದ್ದೆಯಲ್ಲಿ ಭತ್ತ ನಾಟಿ ಮಾಡುವುದರಲ್ಲಿ ನಿರತರಾಗಿರುವ ಮಹಿಳಾ ಕಾರ್ಮಿಕರು
ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ
ತೋಟಗಾರಿಕಾ ಬೆಳೆಗಳಿಗೆ ಶೇ 100ರಷ್ಟು ಸಬ್ಸಿಡಿ! ಇಲ್ಲಿದೆ ಸಂಪೂರ್ಣ ಮಾಹಿತಿನಮ್ಮದು ಕೃಷಿ ಪ್ರಧಾನ ದೇಶ. ದೇಶದಲ್ಲಿ ಶೇ 50ಕ್ಕಿಂತ ಹೆಚ್ಚು ಮಂದಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕವೂ ಇದಕ್ಕೆ ಹೊರತಲ್ಲ. ರಾಜ್ಯದಲ್ಲಿ ಬೇಸಿಗೆಯು ಒಂದು ಪ್ರಮುಖ ಹಂಗಾಮು ಆಗಿದ್ದು, ನೀರಾವರಿ ಅನುಕೂಲ ಮತ್ತು ಮಣ್ಣಿನ ಗುಣಕ್ಕೆ ತಕ್ಕಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತದೆ.
ನಮ್ಮ ಬೇಸಿಗೆ ಹಂಗಾಮಿನಲ್ಲಿ ಕೈಗೊಳ್ಳಬಹುದಾದ ಬೆಳೆ ಪದ್ಧತಿಗಳೆಂದರೆ, ಉತ್ತರ ಕರ್ನಾಟಕ ಭಾಗವು ಹಿಂಗಾರು ಬೆಳೆ ಕೇಂದ್ರವಾಗಿರುತ್ತದೆ. ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿನಲ್ಲಿ ಬಿತ್ತನೆ ಮಾಡಿ... ಜನವರಿ, ಫೆಬ್ರುವರಿ ಅಥವಾ ಮಾರ್ಚ್‌ವರೆಗೂ ಬೇರೆ ಬೇರೆ ಬೆಳೆಗಳನ್ನು ಬೆಳೆಯಬಹುದಾಗಿರುತ್ತದೆ. ಈ ಭಾಗದಲ್ಲಿ ಬೇಸಿಗೆ ಹಂಗಾಮು ಬರುವುದಿಲ್ಲ. ಸ್ವಲ್ಪ ತಡವಾದ ಬೇಸಿಗೆಯಲ್ಲಿ (ಪೂರ್ವ ಮುಂಗಾರು) ದ್ವಿದಳ ಜಾತಿಗೆ ಸೇರಿದ ಬೆಳೆಗಳನ್ನು ಬೆಳೆಯಬಹುದು. ಉಳಿದಂತೆ ದಕ್ಷಿಣ ಕರ್ನಾಟಕ ಪ್ರದೇಶಕ್ಕೆ ಬರುವುದಾದರೆ, ಕಾವೇರಿ ಅಚ್ಚುಕಟ್ಟು ಪ್ರದೇಶ, ಕೆರೆ ಅಚ್ಚುಕಟ್ಟು ಪ್ರದೇಶ ಮತ್ತು ಬಯಲುಸೀಮೆಯಲ್ಲಿ ಅಂತರ್ಜಲ ಆಧಾರಿತ ಬೋರ್‌ವೆಲ್ ನೀರಾವರಿ ಆಧಾರಿತ ಪ್ರದೇಶಗಳಲ್ಲಿ ಏಕದಳ ಧಾನ್ಯ, ವಿವಿಧ ಬಗೆಯ ತರಕಾರಿ ಬೆಳೆಗಳನ್ನು ಬೆಳೆಯಬಹುದು.
ದಕ್ಷಿಣ ಕರ್ನಾಟಕ ಭಾಗವನ್ನು ಕೇಂದ್ರೀಕರಿಸಿ ಹೇಳುವುದಾದರೆ ಬೇಸಿಗೆ ಹಂಗಾಮಿನಲ್ಲಿ ಪ್ರಮುಖವಾಗಿ ಬೆಳೆಯುವಂತಹ ಬೆಳೆಗಳೆಂದರೆ ಮೊದಲಿಗೆ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತವನ್ನು ರೈತ ಬಾಂಧವರು ಸಾಮಾನ್ಯವಾಗಿ ಬೆಳೆಯುತ್ತಾರೆ. ಎರಡನೆಯದ್ದು ಕಡಿಮೆ ನೀರಾವರಿ ಇರುವಂತಹ ಪ್ರದೇಶದಲ್ಲಿ (ನೀರಿನ ಲಭ್ಯತೆ ಕಡಿಮೆ ಇರುವ ಪ್ರದೇಶ) ರಾಗಿಯನ್ನು ಬಿತ್ತನೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಸಂಕ್ರಾಂತಿಯ ನಂತರ ಬೆಳೆ ಬಿತ್ತನೆ ಕಾರ್ಯಗಳನ್ನು ಕೈಗೊಳ್ಳುವ ಸಾಧ್ಯತೆ ಇರುತ್ತದೆ. ಫೆಬ್ರುವರಿ ಕೊನೆವರೆಗೂ ಬಿತ್ತನೆ ಕಾರ್ಯ ನಡೆಯುತ್ತದೆ.
ಭತ್ತ ಮತ್ತು ರಾಗಿಯನ್ನು ಬಿತ್ತನೆ ಮಾಡುವುದಾದರೆ... ಬೇಸಿಗೆ ಹಂಗಾಮಿನಲ್ಲಿ ಬಿತ್ತನೆ ಮಾಡುವ ಬೆಳೆಗೆ ಕೆಲವು ಬೇಸಾಯದ ಕ್ರಮಗಳನ್ನು ಅನುಸರಿಸುವುದು ಸೂಕ್ತ. ಅದರಲ್ಲಿ ನಾವು ಆಯ್ಕೆ ಮಾಡುವಂತಹ ತಳಿ ಬಹುಮುಖ್ಯವಾಗುತ್ತದೆ. ತಳಿಗೆ ಬೇಸಿಗೆ ಹಂಗಾಮಿನಲ್ಲಿ ನೀರಿನ ಕೊರತೆ ಕಂಡುಬರುವ ಸಾಧ್ಯತೆ ಇರುತ್ತದೆ. ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿರುವುದರಿಂದ ನೀರಿನ ಬೇಡಿಕೆ ಜಾಸ್ತಿ ಇರುತ್ತದೆ. ಆ ಕಾರಣದಿಂದ ಅಲ್ಪಾವಧಿ ತಳಿ ಅಥವಾ ಮಧ್ಯಮಾವಧಿ ತಳಿಗೆ ಒತ್ತು ನೀಡುವುದು ಉತ್ತಮ.
ರಾಗಿ ಬಿತ್ತನೆ ಮಾಡುವುದಾದರೆ ಸಂಕ್ರಾಂತಿಯ ನಂತರ ಚಳಿ ಇದ್ದಂತ ಸಂದರ್ಭದಲ್ಲಿ ಮೊಳಕೆ ಬರುವ ಪ್ರಮಾಣ ಕಡಿಮೆ ಇರುತ್ತದೆ. ಹಾಗಾಗಿ ಚಳಿ ಕಡಿಮೆಯಾದ ಬಳಿಕ (ಫೆಬ್ರುವರಿಯಲ್ಲಿ) ಮಧ್ಯಮಾವಧಿ ತಳಿಗಳಾದ ಕೆಎಂಆರ್ 322 ಕೆಎಂಆರ್ 630, ಕೆಎಂಆರ್ 301, ಜಿಪಿಯು 28 ತಳಿಗಳನ್ನು ಬಿತ್ತನೆ ಮಾಡುವುದು ಸೂಕ್ತ.
ಇನ್ನೂ ಭತ್ತದಲ್ಲಿ ಸಾಕಷ್ಟು ಹೈಬ್ರಿಡ್ ತಳಿಗಳು ಬಂದಿವೆ. ಅಲ್ಪಾವಧಿ ಮತ್ತು ಮಧ್ಯಮಾವಧಿ ತಳಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ.
ಉತ್ತರ ಕರ್ನಾಟಕ ಭಾಗದಲ್ಲಿ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಹೆಸರು, ಉದ್ದು, ಸೋಯಾ ಬಿತ್ತನೆ ಮಾಡಬಹುದು. ಮೈಸೂರು ಭಾಗದಲ್ಲಿ ಮುಖ್ಯವಾಗಿ ನಂಜನಗೂಡು ಸುತ್ತಮುತ್ತ ದ್ವಿದಳ ಧಾನ್ಯಗಳನ್ನು ಹೇರಳವಾಗಿ ಬಿತ್ತನೆ ಮಾಡಲಾಗುತ್ತದೆ. ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಚಾಮರಾಜನಗರ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಆರಂಭವಾಗುತ್ತದೆ. ಗುಂಡ್ಲುಪೇಟೆ ಭಾಗದಲ್ಲಿ ಹತ್ತಿ ಮತ್ತು ತೊಗರಿಯನ್ನು ಬೇಗ ಬಿತ್ತನೆ ಮಾಡಲಾಗುತ್ತದೆ.
ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಭಾಗ ಎರಡನ್ನು ಗಮನಿಸುವುದಾದರೆ ಕಬ್ಬನ್ನು ಸಾಮಾನ್ಯವಾಗಿ ಜನವರಿ ಮತ್ತು ಫೆಬ್ರುವರಿಯಲ್ಲಿ ನಾಟಿ ಮಾಡುವಂತಹ ಸಾಧ್ಯತೆ ಇರುತ್ತದೆ. ನೀರಾವರಿ ಇರುವಂತಹ ರೈತರು ಫೆಬ್ರುವರಿಯಲ್ಲಿ ಕಬ್ಬನ್ನು ನಾಟಿ ಮಾಡುವುದು ಸೂಕ್ತ. ರಾಜ್ಯದ ಬಹುತೇಕ ಭಾಗಗಳಲ್ಲಿ ಬೇಸಿಗೆಯಲ್ಲಿ ರಕ್ಷಣಾತ್ಮಕ ನೀರಾವರಿ ಸೌಲಭ್ಯವನ್ನು ಒದಗಿಸುವ ಮೂಲಕ ಶೇಂಗಾವನ್ನು ಬೆಳೆಯಬಹುದು. ಇದರಿಂದ ರೈತರು ಉತ್ತಮ ಆದಾಯ ಗಳಿಸಬಹುದು.
ಬೇಸಿಗೆ ಹಂಗಾಮಿನಲ್ಲಿ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ತರಕಾರಿಗಳನ್ನು (ಆಲೂಗಡ್ಡೆ, ಟೊಮೆಟೊ, ಬೀನ್ಸ್, ಕ್ಯಾರೆಟ್, ಬೀಟ್‌ರೂಟ್, ಎಲೆಕೋಸು, ಹೂಕೋಸು, ಬದನೆಕಾಯಿ, ಬೆಂಡೆಕಾಯಿ, ಹಿರೇಕಾಯಿ, ಸೌತೆಕಾಯಿ, ತೊಂಡೆಕಾಯಿ... ಇತ್ಯಾದಿ) ಹೆಚ್ಚಾಗಿ ಬೆಳೆಯಲಾಗುತ್ತದೆ. ಇದರ ಜೊತೆಗೆ ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಮುಸುಕಿನ ಜೋಳವನ್ನು ಸಹ ಬೆಳೆಯಲಾಗುತ್ತದೆ. ಮುಸುಕಿನ ಜೋಳವನ್ನು ಬೆಳೆಯುವಂತಹ ರೈತರು ನಿತ್ಯಶ್ರೀ, ಹೇಮಾ, ಎನ್‌ಎಎಚ್ 2045 ತಳಿಗಳನ್ನು ಬಳಸಿಕೊಂಡು ಬೇಸಾಯ ಕ್ರಮಗಳನ್ನು ಅನುಸರಿಸಬಹುದು.
* ಜನವರಿ ಮತ್ತು ಫೆಬ್ರುವರಿಯಲ್ಲಿ ಚಳಿ ಇರುವುದರಿಂದ ಕೆಲವು ದಿನಗಳ ಬಳಿಕ (ಚಳಿ ಕಡಿಮೆ ಆದ ಮೇಲೆ) ಬಿತ್ತನೆ ಮಾಡುವುದು ಸೂಕ್ತ. ಏಕೆಂದರೆ ಚಳಿಗಾಲದಲ್ಲಿ ಮೊಳಕೆ ಹೊಡೆಯುವ ಸಾಧ್ಯತೆ ಕಡಿಮೆ. ಮೊಳಕೆ ಕಡಿಮೆಯಾದರೆ ಸಸ್ಯಗಳ ಸಂಖ್ಯೆ, ಇಳುವರಿಯು ಕುಂಠಿತವಾಗುತ್ತದೆ.
* ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ. ನೀರು ನಿರ್ವಹಣೆಯಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಹೆಚ್ಚಿನ ಅಂತರದಲ್ಲಿ ನೀರನ್ನು ಹರಿಸುವ ಬದಲು ಅಲ್ಪ ಪ್ರಮಾಣದಲ್ಲಿ ತೆಳುವಾದ ನೀರನ್ನು ಹರಿಸುವುದು ಸೂಕ್ತ ಮತ್ತು ಕಡಿಮೆ ಅಂತರದಲ್ಲಿ ನೀರನ್ನು ಹರಿಸುವುದಕ್ಕೆ ಒತ್ತು ನೀಡಬೇಕು. ಯಾವ ರೈತರಿಗೆ ಪಂಪ್ ಮಾಡುವ ಮೂಲಕ ನೀರನ್ನು ಹರಿಸಲು ಸಾಧ್ಯವಾಗುತ್ತದೆಯೋ ಅಂತವರು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಸೂಕ್ತ.
* ಬೆಳೆಗಳಿಗೆ ಸಾರಜನಕ, ರಂಜಕ, ಪೊಟ್ಯಾಷ್ ಪೋಷಕಾಂಶಗಳನ್ನು ಶಿಫಾರಸಿನ ಪ್ರಮಾಣದಲ್ಲಿ ಸಮಗ್ರ ಪೋಷಕಾಂಶ ನಿರ್ವಹಣೆ ಮಾಡಬೇಕು. ಬೇಸಿಗೆ ಹಂಗಾಮಿನಲ್ಲಿ ಪೊಟ್ಯಾಷ್ ಪೋಷಕಾಂಶವನ್ನು ಹೆಚ್ಚಾಗಿ ಬಳಸಬೇಕು. ಏಕೆಂದರೆ ಬೆಳೆಗೆ ಬರ ನಿರೋಧಕ ಶಕ್ತಿ ಮತ್ತು ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಈ ರೀತಿಯ ಸುಧಾರಿತ ಕ್ರಮಗಳನ್ನು ಅನುಸರಿಸಬಹುದು. ಬೇಸಿಗೆ ಹಂಗಾಮಿನಲ್ಲಿ ಸಾಮಾನ್ಯವಾಗಿ ಎಲ್ಲಾ ಬೆಳೆಗಳಲ್ಲೂ ಇಳುವರಿಯ ಮಟ್ಟ ಜಾಸ್ತಿ ಇರುತ್ತದೆ. ಇದರಿಂದ ರೈತರು ಹೆಚ್ಚಿನ ಆದಾಯ ಗಳಿಸಬಹುದು ಎನ್ನುತ್ತಾರೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಂ.ಎನ್. ತಿಮ್ಮೇಗೌಡ.
ಮೇ 8ರೊಳಗೆ ಪೂರ್ವ ಮುಂಗಾರು ಬೆಳೆಗಳ ಬಿತ್ತನೆ: ರಾಜ್ಯದ ಕೃಷಿ ವಲಯವನ್ನು ಮಣ್ಣು, ಬೆಳೆ ಮತ್ತು ಮಳೆಯನ್ನು ಆಧರಿಸಿ 10 ವಲಯಗಳನ್ನಾಗಿ ವಿಗಂಡಿಸಲಾಗಿದೆ. ಪೂರ್ವ ಮುಂಗಾರನಲ್ಲಿ ಶೇ 8ರಿಂದ 10ರಷ್ಟು ಮಳೆ ಬರುತ್ತದೆ. ಹಾಸನ, ಚಿತ್ರದುರ್ಗ, ತುಮಕೂರು, ರಾಮನಗರ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಎಳ್ಳು, ಉದ್ದು, ಹೆಸರು ಬಿತ್ತನೆ ಮಾಡುವುದು ವಾಡಿಕೆ. ಚಾಮರಾಜನಗರ ಜಿಲ್ಲೆ ಹತ್ತಿ ಮತ್ತು ಸೂರ್ಯಕಾಂತಿ, ಬಿಳಿ ಜೋಳವನ್ನು (Sorghum) ಹೆಚ್ಚಾಗಿ ಬೆಳೆಯಲಾಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಏಪ್ರಿಲ್‌ನಲ್ಲಿ ಹತ್ತಿ, ಬಿಳಿ ಜೋಳ ಮತ್ತು ಮೇಯಲ್ಲಿ ತೊಗರಿ, ಅಲಸಂದೆ ಬಿತ್ತನೆ ಮಾಡಲಾಗುತ್ತದೆ. ಒಟ್ಟಾರೆ ರಾಜ್ಯದಲ್ಲಿ ಮೇ 8ರೊಳಗೆ ಪೂರ್ವ ಮುಂಗಾರು ಬೆಳೆಗಳನ್ನು ಬಿತ್ತನೆ ಮಾಡಬೇಕು ಎನ್ನುತ್ತಾರೆ ಕೃಷಿ ತಜ್ಞ ಬೋರಯ್ಯ.
ತರಕಾರಿಗಳು
ಭತ್ತ ಮತ್ತು ರಾಗಿ ಬೆಳೆ
ಮುಸುಕಿನ ಜೋಳ
ಸೂರ್ಯಕಾಂತಿ
ತೊಗರಿ ಬೆಳೆ
ಹತ್ತಿ
ಹೆಸರು ಬೆಳೆ
ಉದ್ದು ಬೆಳೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.