ADVERTISEMENT

ರೈತರಿಗೆ ಶೇ 50ರಷ್ಟು ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್: ಅರ್ಜಿ ಸಲ್ಲಿಕೆ ಹೇಗೆ?

ದೀಪಕ್ ಎನ್.
Published 30 ಜನವರಿ 2026, 8:07 IST
Last Updated 30 ಜನವರಿ 2026, 8:07 IST
<div class="paragraphs"><p>ರೈತರೊಬ್ಬರು ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡುತ್ತಿರುವ ದೃಶ್ಯ</p></div>

ರೈತರೊಬ್ಬರು ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡುತ್ತಿರುವ ದೃಶ್ಯ

   

ದೇಶದ ರೈತರು ಅಧುನಿಕ ತಂತ್ರಜ್ಞಾನವನ್ನು ಬಳಸುವ ಮೂಲಕ ಸ್ವಾವಲಂಬಿಗಳಾಗಬೇಕು ಎಂಬುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯಾಗಿದೆ. ಆದ್ದರಿಂದಲೇ ರೈತರಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ.

ಸ್ವಂತ ಟ್ರ್ಯಾಕ್ಟರ್ ಇರಬೇಕು ಎಂಬುದು ಪ್ರತಿಯೊಬ್ಬ ರೈತನ ಕನಸಾಗಿದೆ. ಆದರೆ, ಆ ಕನಸನ್ನು ನನಸಾಗಿಸುವುದಕ್ಕೆ ಹಣ ಹೇಗೆ ಹೊಂದಿಸಬೇಕು ಎಂಬುದು ಹಲವರಿಗೆ ಚಿಂತೆಯಾಗಿದೆ. ಆದರೆ, ಇನ್ನು ಮೇಲೆ ಆ ಚಿಂತೆ ಬೇಡ. ನಿಮ್ಮ ಟ್ರ್ಯಾಕ್ಟರ್ ಕನಸನ್ನು ನನಸು ಮಾಡಲು ಕೇಂದ್ರ ಸರ್ಕಾರವೇ ಸಹಾಯ ಮಾಡುತ್ತದೆ. ಟ್ರ್ಯಾಕ್ಟರ್ ಖರೀದಿಸುವುದಕ್ಕೆ ಬರೋಬರಿ ಶೇಕಡ 50ರಷ್ಟು ಸಬ್ಸಿಡಿ (ಸಹಾಯಧನ) ನೀಡುತ್ತಿದೆ. ಅಂದರೆ ₹10 ಲಕ್ಷದ ಟ್ರ್ಯಾಕ್ಟರ್ ನಿಮಗೆ ಕೇವಲ ₹5 ಲಕ್ಷಕ್ಕೆ ಸಿಗುತ್ತದೆ.

ADVERTISEMENT

ಹೌದು, ಈ ಯೋಜನೆಯ ಹೆಸರೇ ಕಿಸಾನ್ ಟ್ರ್ಯಾಕ್ಟರ್ ಯೋಜನೆ. ರೈತರ ಕೆಲಸವನ್ನು ಸುಲಭ ಮಾಡುವುದಕ್ಕೆ ಮತ್ತು ರೈತರ ಮೇಲಿನ ಸಾಲದ ಹೊರೆಯನ್ನು ತಗ್ಗಿಸುವ ಸಲುವಾಗಿ ಕೇಂದ್ರ ಸರ್ಕಾರವು ‘ಕಿಸಾನ್ ಟ್ರಾಕ್ಟರ್ ಯೋಜನೆ’ಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಟ್ರಾಕ್ಟರ್ ಖರೀದಿಸಲು ಹಣಕಾಸಿನ ನೆರವು ಒದಗಿಸುತ್ತಿದೆ. ಎಲ್ಲ ವರ್ಗದ ರೈತರು ಈ ಯೋಜನೆಯ ಲಾಭ ಪಡೆಯಬಹುದು.

ಏನಿದು ಕಿಸಾನ್‌ ಟ್ರ್ಯಾಕ್ಟರ್ ಯೋಜನೆ...

ಕಿಸಾನ್ ಟ್ರ್ಯಾಕ್ಟರ್ ಯೋಜನೆಯು ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಒಂದು ಪ್ರಮುಖ ಯೋಜನೆಯಾಗಿದ್ದು, ರೈತರಿಗೆ ಆಧುನಿಕ ಕೃಷಿ ಉಪಕರಣಗಳನ್ನು ಸುಲಭವಾಗಿ ಒದಗಿಸುವ ಗುರಿಯನ್ನು ಹೊಂದಿದೆ. ಕೃಷಿ ಯಾಂತ್ರೀಕರಣದ ಉಪ-ಮಿಷನ್ (ಎಸ್ಎಂಎಎಂ) ಅಡಿಯಲ್ಲಿ ‘ಕಿಸಾನ್ ಟ್ರ್ಯಾಕ್ಟರ್ ಯೋಜನೆ’ಯನ್ನು ಜಾರಿ ಮಾಡಲಾಗಿದ್ದು, ಇದೊಂದು ಉಪ ಯೋಜನೆಯಾಗಿದೆ.

ಈ ಯೋಜನೆಯಡಿ ಟ್ರ್ಯಾಕ್ಟರ್ ಮತ್ತು ಇತರ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಸರ್ಕಾರವು ರೈತರಿಗೆ ಆರ್ಥಿಕ ನೆರವು ನೀಡುತ್ತದೆ. ಈ ಯೋಜನೆಯಡಿ, ಅರ್ಹ ರೈತರು ಹೊಸ ಟ್ರ್ಯಾಕ್ಟರ್‌ ಅನ್ನು ಆನ್‌ರೋಡ್ ಬೆಲೆಯ ಮೇಲೆ ಶೇಕಡ 50ರಷ್ಟು ಸಬ್ಸಿಡಿ ಪಡೆಯಬಹುದು. ಈ ಯೋಜನೆಯು ಸಣ್ಣ ಮತ್ತು ಅತಿ ಸಣ್ಣ ರೈತರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿ, ಕೃಷಿ ಕ್ಷೇತ್ರದಲ್ಲಿ ಉತ್ಪಾದಕತೆಯನ್ನು ಹೆಚ್ಚಿಸಲು ಯಾಂತ್ರಿಕೃತ ಉಪಕರಣಗಳ ಬಳಕೆಯನ್ನು ಉತ್ತೇಜಿಸುತ್ತದೆ.

ಯೋಜನೆಯಿಂದ ಆಗುವ ಲಾಭವೇನು?

* ಶೇಕಡ 50ರಷ್ಟು ಸಬ್ಸಿಡಿ: ರೈತರು ಟ್ರ್ಯಾಕ್ಟರ್‌ ಅನ್ನು ಆನ್‌ರೋಡ್ ಬೆಲೆಯ ಮೇಲೆ ಶೇಕಡ 50ರಷ್ಟು ಸಬ್ಸಿಡಿ (ಸಹಾಯಧನ) ಪಡೆಯಬಹುದು.

* ಮಧ್ಯವರ್ತಿಗಳ ಕಾಟವಿಲ್ಲ: ಸರ್ಕಾರದ ಅಥವಾ ಯಾವುದೇ ಯೋಜನೆ ಆಗಲಿ ಮಧ್ಯವರ್ತಿಗಳ ಕಾಟ ತುಂಬಾನೇ ಇರುತ್ತದೆ. ಫಲಾನುಭವಿಗಳಿಗೆ ಸಿಗಬೇಕಾದ ಪ್ರಯೋಜನದಲ್ಲಿ ಬಹುಪಾಲು ಮಧ್ಯವರ್ತಿಗಳ ಕೈ ಸೇರುತ್ತದೆ. ಆದರೆ, ಕಿಸಾನ್ ಟ್ರಾಕ್ಟರ್ ಯೋಜನೆಯಲ್ಲಿ ಮಧ್ಯವರ್ತಿಗಳ ಕಾಟ ಇರುವುದಿಲ್ಲ. ಸಬ್ಸಿಡಿಯನ್ನು ನೇರವಾಗಿ ಬಿಡುಗಡೆ ಆದೇಶ ಮೂಲಕವೇ ನೀಡಲಾಗುತ್ತದೆ.

* ಹೆಚ್ಚು ಪಾರದರ್ಶಕತೆ: ಸಬ್ಸಿಡಿಯನ್ನು ಬಿಡುಗಡೆ ಆದೇಶ ಮೂಲಕ ನೇರವಾಗಿ ನೀಡುವುದರಿಂದ ಈ ಯೋಜನೆಯು ತ್ವರಿತ ಮತ್ತು ಪಾರದರ್ಶಕ ಪ್ರಕ್ರಿಯೆಯನ್ನು ಖಚಿತಪಡಿಸುತ್ತದೆ.

* ಸಾಲ ಸೌಲಭ್ಯ: ಉಳಿದ ವೆಚ್ಚಕ್ಕಾಗಿ ಬ್ಯಾಂಕ್ ಸಾಲ ಸೌಲಭ್ಯವನ್ನು ಪಡೆಯಲು ಸಹ ಈ ಯೋಜನೆ ಅನುಕೂಲ ಮಾಡಿಕೊಡುತ್ತದೆ.

* ಉತ್ಪಾದಕತೆ ಹೆಚ್ಚಳ: ಆಧುನಿಕ ಯಂತ್ರೋಪಕರಣಗಳಿಂದ ಉಳುಮೆ, ಬಿತ್ತನೆ ಮತ್ತು ಕಟಾವು ಮುಂತಾದ ಕಾರ್ಯಗಳು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಯುವುದರಿಂದ ಬೆಳೆಯ ಇಳುವರಿ ಸುಧಾರಿಸುತ್ತದೆ.

* ಜಾತಿ ನಿರ್ಬಂಧ ಇಲ್ಲ: ಈ ಯೋಜನೆಯು ಸಾಮಾನ್ಯ, ಒಬಿಸಿ, ಎಸ್‌ಸಿ ಮತ್ತು ಎಸ್‌ಟಿ ವರ್ಗದ ಎಲ್ಲ ರೈತರಿಗೂ ಮುಕ್ತವಾಗಿದೆ.

* ಯಾರಿಗೆ ಆದ್ಯತೆ: ಉಪಕರಣಗಳ ಹೆಚ್ಚಿನ ವೆಚ್ಚದಿಂದ ತೊಂದರೆಪಡುತ್ತಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ, ಹಾಗೆಯೇ ಮಹಿಳಾ ರೈತರಿಗೆ ಆದ್ಯತೆ ನೀಡಲಾಗುತ್ತದೆ.

ಅರ್ಹತೆಗಳು...

* ಅರ್ಜಿ ಸಲ್ಲಿಸುವವರು ಭಾರತದ ಪ್ರಜೆಯಾಗಿರಬೇಕು.

* ರೈತರ ವಾರ್ಷಿಕ ಆದಾಯವು ₹2 ಲಕ್ಷಕ್ಕಿಂತ ಕಡಿಮೆ ಇರಬೇಕು.

* ಅರ್ಜಿದಾರರು ಈ ಹಿಂದೆ ಟ್ರ್ಯಾಕ್ಟರ್ ಸಬ್ಸಿಡಿಯನ್ನು ಪಡೆದಿರಬಾರದು.

* ಒಂದು ಕುಟುಂಬಕ್ಕೆ ಈ ಯೋಜನೆಯಡಿಯಲ್ಲಿ ಒಂದು ಟ್ರ್ಯಾಕ್ಟರ್ ಸಬ್ಸಿಡಿ ಮಾತ್ರ ಸಿಗುತ್ತದೆ.

* ಅರ್ಜಿದಾರರು ಅಧಿಕೃತ ಭೂ ದಾಖಲೆಗಳು ಅಥವಾ ಕೃಷಿ ಮಾಲೀಕತ್ವದ ಪುರಾವೆಯನ್ನು ಹೊಂದಿರಬೇಕು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

* ಆಧಾರ್ ಕಾರ್ಡ್

* ಭೂ ಮಾಲೀಕತ್ವದ ಪುರಾವೆ (ಪಹಣಿ ಅಥವಾ ಆರ್‌ಟಿಸಿ)

* ಬ್ಯಾಂಕ್ ಪಾಸ್‌ಬುಕ್

* ನಿವಾಸ ಪ್ರಮಾಣ ಪತ್ರ

* ತೆಗೆದುಕೊಳ್ಳಲು ಇಚ್ಚಿಸುವ ಟ್ರಾಕ್ಟರ್‌ನ ದರಪಟ್ಟಿ (ಕೊಟೇಶನ್)

* ಪಾಸ್‌ಪೋರ್ಟ್ ಸೈಜ್ ಫೋಟೊ

ಅರ್ಜಿ ಸಲ್ಲಿಸುವುದು ಹೇಗೆ?

ಕೇಂದ್ರ ಸರ್ಕಾರದ ಕಿಸಾನ್‌ ಟ್ರ್ಯಾಕ್ಟರ್ ಯೋಜನೆಗೆ ನೀವು ಅನ್‌ಲೈನ್ ಮತ್ತು ಆಪ್‌ಲೈನ್‌ ವಿಧಾನದ ಮೂಲಕ ಅರ್ಜಿ ಸಲ್ಲಿಸಬಹುದು.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಹಂತಗಳು ಈ ಕೆಳಗಿನಂತಿವೆ

ಆನ್‌ಲೈನ್ ನೋಂದಣಿ: ಮೊದಲಿಗೆ, ಕೃಷಿ ಯಾಂತ್ರೀಕರಣ ಮತ್ತು ತಂತ್ರಜ್ಞಾನಕ್ಕಾಗಿ ಡಿಜಿಟಲ್ ವೇದಿಕೆ https://agrimachinery.nic.in/ ಪೋರ್ಟಲ್‌ಗೆ ಭೇಟಿ ನೀಡಿ. (ರಾಜ್ಯದ ಕೃಷಿ ಇಲಾಖೆಯ ಪೋರ್ಟಲ್ https://kkisan.karnataka.gov.in ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದೆ). ಅಲ್ಲಿ ಹೊಸ ರೈತರ ನೋಂದಣಿ ಆಯ್ಕೆಯನ್ನು ಆರಿಸಿ.

ಇ-ಕೆವೈಸಿ ಪರಿಶೀಲನೆ: ನಿಮ್ಮ ಗುರುತನ್ನು ಪರಿಶೀಲಿಸಲು ಆಧಾರ್ ಸಂಖ್ಯೆಯನ್ನು ಬಳಸಿ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಲಾಗಿನ್ ಸ್ವೀಕೃತಿ: ಯಶಸ್ವಿ ಪರಿಶೀಲನೆಯ ನಂತರ ನಿಮಗೆ ಒಂದು ಅಪ್ಲಿಕೇಶನ್ ಐಡಿ ಮತ್ತು ಪಾಸ್‌ವರ್ಡ್ ದೊರೆಯುತ್ತದೆ. (ಇದನ್ನು ಸುರಕ್ಷಿತವಾಗಿ ಇರಿಸಿಕೊಳ್ಳಿ).

ವಿವರಗಳ ಭರ್ತಿ: ಅಪ್ಲಿಕೇಶನ್ ಐಡಿ ಬಳಸಿ ಪೋರ್ಟಲ್‌ಗೆ ಲಾಗಿನ್ ಮಾಡಿ. ನಿಮ್ಮ ಮೂಲ ವಿವರಗಳಾದ ಬ್ಯಾಂಕ್ ಖಾತೆ ಮಾಹಿತಿ, ಭೂ ದಾಖಲೆಗಳು ಮತ್ತು ಇತರ ಅಗತ್ಯ ಮಾಹಿತಿಗಳನ್ನು ನಮೂದಿಸಿ. ಕೇಳಲಾದ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.

ಯೋಜನೆಗೆ ಅರ್ಜಿ ಸಲ್ಲಿಸಿ: ಪೋರ್ಟಲ್‌ನಲ್ಲಿ ಟ್ರ್ಯಾಕ್ಟರ್ ಸಹಾಯಧನ ಯೋಜನೆಗೆ ಅರ್ಜಿ ಸಲ್ಲಿಸುವ ಆಯ್ಕೆಯನ್ನು ಆರಿಸಿ. ಅರ್ಜಿಯನ್ನು ಸಲ್ಲಿಸಿದ ನಂತರ, ನೀವು ಟ್ರ್ಯಾಕಿಂಗ್ ಉದ್ದೇಶಗಳಿಗಾಗಿ ಅಪ್ಲಿಕೇಶನ್ ಐಡಿ ಒಂದನ್ನು ಪಡೆಯುತ್ತೀರಿ. ಇದನ್ನು ಇಟ್ಟುಕೊಂಡು ಅರ್ಜಿಯ ಸ್ಟೇಟಸ್ ಚೆಕ್ ಮಾಡಬಹುದು.

ಆಫ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ

ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದ ರೈತರು ಸ್ಥಳೀಯ ಸೇವಾ ಕೇಂದ್ರಕ್ಕೆ (ಸಿಎಸ್‌ಸಿ) ಅಥವಾ ಕೃಷಿ ಇಲಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

* ಕಿಸಾನ್ ಟ್ರ್ಯಾಕ್ಟರ್ ಯೋಜನೆಯ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಬೇಕು.

* ಎಲ್ಲಾ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಮತ್ತು ಅವುಗಳನ್ನು ಸಂಬಂಧಪಟ್ಟ ಅಧಿಕಾರಿಗೆ ಸಲ್ಲಿಸಬೇಕು.

* ದಾಖಲೆಗಳ ಪರಿಶೀಲನೆ ಸೇರಿದಂತೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಬ್ಸಿಡಿ ಅನುಮೋದನೆಯನ್ನು ನೀಡಲಾಗುತ್ತದೆ.

ಸರ್ಕಾರದ ಈ ಯೋಜನೆ ರೈತರಿಗೆ ವರದಾನ ಎಂದರೆ ತಪ್ಪಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.