ADVERTISEMENT

ಭಾರತೀಯ ಜೈಲು ಕಾಯುವ ಹೊಣೆ ಇನ್ನು ಎಂದೂ ಮಲಗದ AI ಗಾರ್ಡ್ ಗಳಿಗೆ !

ಗಿರೀಶ್ ಲಿಂಗಣ್ಣ
Published 16 ಡಿಸೆಂಬರ್ 2025, 10:20 IST
Last Updated 16 ಡಿಸೆಂಬರ್ 2025, 10:20 IST
<div class="paragraphs"><p>ಅಲೋಕ್‌ ಕುಮಾರ್‌ ( picture AI Image)</p></div>

ಅಲೋಕ್‌ ಕುಮಾರ್‌ ( picture AI Image)

   

ಕರ್ನಾಟಕದ ನೂತನ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಾಗಿ (ಡಿಜಿಪಿ) ಇತ್ತೀಚೆಗೆ ನೇಮಕಗೊಂಡಿರುವ ಅಲೋಕ್‌ ಕುಮಾರ್‌ ಅವರು ಯಾವುದೋ ವೈಜ್ಞಾನಿಕ ಕಥೆಯುಳ್ಳ ಸಿನಿಮಾದ ದೃಶ್ಯವೇನೋ ಎಂಬಂತೆ ಭಾಸವಾಗುವ ಹೊಸ ಘೋಷಣೆಯೊಂದನ್ನು ಮಾಡಿದ್ದಾರೆ.

ರಾಜ್ಯ ಕಾರಾಗೃಹ ಇಲಾಖೆ ಈಗಾಗಲೇ ಎಐ ಚಾಲಿತ ಒಳ ಪ್ರವೇಶ ಪತ್ತೆ ಹಚ್ಚುವ ವ್ಯವಸ್ಥೆಯನ್ನು ಜಾರಿಗೊಳಿಸುವ ಕುರಿತು ಆಲೋಚಿಸುತ್ತಿದ್ದು, ಅದನ್ನು ಪ್ರಾಯೋಗಿಕವಾಗಿ ಈಗಾಗಲೇ ಪ್ರಯತ್ನಿಸಲಾಗುತ್ತಿದೆ. ಹೀಗೆಂದರೆ ಏನು ಎಂದು ಆಲೋಚಿಸುವವರಿಗೆ ಸರಳವಾಗಿ ವಿವರಿಸಲು ಪ್ರಯತ್ನಿಸೋಣ. ಕೇವಲ ನಡೆಯುತ್ತಿರುವ ಘಟನೆಗಳನ್ನು ಸೆರೆಹಿಡಿಯುವ ಕ್ಯಾಮರಾಗಳ ಬದಲು, ಸ್ವತಃ ಆಲೋಚಿಸುವ, ವಿಶ್ಲೇಷಿಸುವ, ಮತ್ತು ಜೈಲಿನ ಆವರಣದಲ್ಲಿ ಏನಾದರೂ ಅಸಹಜ, ಅನುಮಾನಾಸ್ಪದ ಘಟನೆ ನಡೆದರೆ ಜೈಲಿನ ಅಧಿಕಾರಿಗಳಿಗೆ ಎಚ್ಚರಿಕೆ ಸಾಮರ್ಥ್ಯ ಹೊಂದಿರುವ ಕ್ಯಾಮೆರಾಗಳನ್ನು ಊಹಿಸಿಕೊಳ್ಳಿ. ಆದರೆ, ಈಗ ನಾವು ಕೇಳಿಕೊಳ್ಳಬೇಕಾದ ಸವಾಲೆಂದರೆ, ನಿಜಕ್ಕೂ ಈ ತಾಂತ್ರಿಕ ಅಭಿವೃದ್ಧಿ ಜೈಲುಗಳ ನಿರ್ವಹಣೆಯ ಮೇಲೆ ನಿಯಂತ್ರಣ ತರಬಲ್ಲದೇ? ಅಥವಾ ನಾವು ಇನ್ನೂ ಪರಿಗಣಿಸದಿರುವ ಹೊಸ ಸಂಕೀರ್ಣತೆಗಳನ್ನು ಸೃಷ್ಟಿಸಬಲ್ಲದೇ?

ADVERTISEMENT

ಇಂತಹ ಅಕ್ರಮ ಪ್ರವೇಶ ಪತ್ತೆ ಹಚ್ಚುವ ವ್ಯವಸ್ಥೆಗಳು ನಿಜಕ್ಕೂ ಏನು ಮಾಡುತ್ತವೆ ಎನ್ನುವುದನ್ನು ಇಲ್ಲಿ ಗಮನಿಸೋಣ. ಸಾಂಪ್ರದಾಯಿಕ ಸಿಸಿಟಿವಿ ಕ್ಯಾಮರಾಗಳು ತಮ್ಮ ನೇರಕ್ಕೆ ನಡೆಯುತ್ತಿರುವ ಎಲ್ಲ ಘಟನೆಗಳನ್ನು ತಮ್ಮ ಪಾಡಿಗೆ ಸೆರೆ ಹಿಡಿಯುತ್ತಿರುತ್ತವೆ. ಜೈಲಿನಲ್ಲಿ ನೂರಾರು ಖೈದಿಗಳು ನಿರಂತರವಾಗಿ ಅಲೆದಾಡುತ್ತಿರುವಾಗ, ಓರ್ವ ನಿರ್ವಾಹಕ ನಿಯಂತ್ರಣ ಕೊಠಡಿಯಲ್ಲಿ ಕುಳಿತು, ಹಲವಾರು ಪರದೆಗಳ ಮೇಲೆ ಮೂಡಿ ಬರುತ್ತಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ನಿರಂತರವಾಗಿ ಗಮನಿಸುತ್ತಾ, ಯಾರಾದರೂ ಏನಾದರೂ ತಪ್ಪು ಮಾಡುತ್ತಿದ್ದಾರೋ ಎಂದು ಗಮನಿಸುತ್ತಿರಬೇಕಾಗುತ್ತದೆ. ಇದು ನಿಜಕ್ಕೂ ಸುಸ್ತು ಮೂಡಿಸುವ ಕೆಲಸವಾಗಿದ್ದು, ಮಾನವ ಸಹಜ ತಪ್ಪುಗಳು ಇಲ್ಲಿ ಉಂಟಾಗುವ ಸಾಧ್ಯತೆಗಳು ಇರುತ್ತವೆ. ಅದಲ್ಲದೆ 24 ಗಂಟೆಯೂ ಹೀಗೆ ಕಣ್ಣಲ್ಲಿ ಕಣ್ಣಿಟ್ಟು ಕಾಯುವುದು ನಿಜಕ್ಕೂ ಸುಲಭವಲ್ಲ. ಆದರೆ, ಎಐ ಆಧಾರಿತ ವ್ಯವಸ್ಥೆಯಾದರೆ ಅದು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು, ನಿರಂತರವಾಗಿ ನೇರ ಪ್ರಸಾರದ ದೃಶ್ಯಾವಳಿಗಳನ್ನು ಗಮನಿಸುತ್ತಾ, ಅಸಹಜ ಚಟುವಟಿಕೆಗಳನ್ನು ಗುರುತಿಸಿ, ನಿಷಿದ್ಧ ವಸ್ತುಗಳನ್ನೂ ಗುರುತಿಸಿ, ತಕ್ಷಣವೇ ಜೈಲಿನ ಸಿಬ್ಬಂದಿಗಳನ್ನು ಎಚ್ಚರಿಸುತ್ತದೆ. ಇಷ್ಟೂ ಕೆಲಸಕ್ಕಾಗಿ ಯಾವ ಸಿಬ್ಬಂದಿಯೂ ದೃಶ್ಯಾವಳಿಗಳನ್ನು ನಿರಂತರವಾಗಿ ನೋಡುತ್ತಾ ಕೂರುವ ಅವಶ್ಯಕತೆಯಿಲ್ಲ. ಇದನ್ನು ಒಂದು ರೀತಿ ಚೂರೂ ಸುಸ್ತಿಲ್ಲದ, ಒಂದು ಕ್ಷಣವೂ ಕಣ್ಣು ಮಿಟುಕಿಸದ, ಗಮನ ಕಳೆದುಕೊಳ್ಳದ, ಯಾವೊಂದು ಮಾಹಿತಿಯನ್ನೂ ತಪ್ಪಿಸದ ಸಾವಿರಾರು ಕಾವಲುಗಾರರನ್ನು ಹೊಂದಿರುವುದಕ್ಕೆ ಹೋಲಿಸಬಹುದು.

ಹಾಗೆಂದು ಈ ತಂತ್ರಜ್ಞಾನ ಜಾಗತಿಕವಾಗಿ ಹೊಸದೇನಲ್ಲ. ಅಮೆರಿಕ ಈಗಾಗಲೇ ತನ್ನ ಹಲವು ರಾಜ್ಯಗಳ ಜೈಲುಗಳಲ್ಲಿ ಎಐ ಕಣ್ಗಾವಲಿನ ಪ್ರಯೋಗಗಳನ್ನು ನಡೆಸುತ್ತಿದೆ. ಇವುಗಳನ್ನು ಹೊಡೆದಾಟಗಳನ್ನು ಗುರುತಿಸಲು, ಖೈದಿಗಳ ಚಲನವಲನ ಗಮನಿಸಲು, ಮತ್ತು ಆಯುಧಗಳನ್ನು ಪತ್ತೆಹಚ್ಚಲು ಬಳಸಲಾಗುತ್ತದೆ. ಇನ್ನು ಯುನೈಟೆಡ್‌ ಕಿಂಗ್‌ಡಮ್‌ ಸಹ ಅತ್ಯಂತ ಭದ್ರತೆಯ ಜೈಲುಗಳಲ್ಲಿ ದುರ್ಬಲ ಕೈದಿಗಳ ಮೇಲೆ ಕಣ್ಣಿಡಲು ಮತ್ತು ಅವರ ವರ್ತನೆಯನ್ನು ಗಮನಿಸಿ, ಅವರು ಆತ್ಮಹತ್ಯೆಯಂತಹ ಕ್ರಮಕ್ಕೆ ಮುಂದಾಗದಂತೆ ತಡೆಯಲು ಇಂತಹ ವ್ಯವಸ್ಥೆಗಳನ್ನು ಜಾರಿಗೆ ತಂದಿದೆ. ತನ್ನ ತಾಂತ್ರಿಕ ಪ್ರಗತಿಗೆ ಹೆಸರಾಗಿರುವ ಸಿಂಗಾಪುರವೂ ಸಹ ತನ್ನ ಜೈಲುಗಳಲ್ಲಿ ಜನರ ಗುಂಪುಗೂಡುವಿಕೆಗಳನ್ನು ವಿಶ್ಲೇಷಿಸಿ, ಸಂಭಾವ್ಯ ದೊಂಬಿಗಳನ್ನು ಅವು ತೀವ್ರಗೊಳ್ಳುವ ಮೊದಲೇ ನಿಗ್ರಹಿಸಲು ಎಐ ಕ್ಯಾಮೆರಾಗಳನ್ನು ಬಳಸಲಾರಂಭಿಸಿದೆ. ಇನ್ನು ಭಾರತದ ನೆರೆ ರಾಷ್ಟ್ರವಾದ ಚೀನಾ ಸಹ ಮುಖ ಗುರುತು ಪತ್ತೆ (ಫೇಶಿಯಲ್‌ ರೆಕಗ್ನಿಷನ್)‌ ಮತ್ತು ವರ್ತನೆಯ ವಿಶ್ಲೇಷಣಾ ವ್ಯವಸ್ಥೆಗಳನ್ನು ತನ್ನ ಸುಧಾರಣಾ ಕೇಂದ್ರಗಳಲ್ಲಿ ವ್ಯಾಪಕವಾಗಿ ಬಳಸುತ್ತಿದೆ. ಆದರೆ, ಚೀನಾ ಅನುಸರಿಸುವ ವಿಧಾನ ಖಾಸಗಿತನದ ಧಕ್ಕೆಯಂತಹ ಆರೋಪಗಳನ್ನು ಎದುರಿಸುತ್ತಿದ್ದು, ಬಹಳಷ್ಟು ಪ್ರಜಾಪ್ರಭುತ್ವ ದೇಶಗಳು ಇಂತಹ ಕ್ರಮಗಳನ್ನು ಒಪ್ಪುವ ಸಾಧ್ಯತೆಗಳಿಲ್ಲ.

ಇಂತಹ ಕ್ರಮಗಳಿಂದ ಜೈಲಿನ ನಿರ್ವಹಣೆಗೆ ಲಭಿಸುವ ಲಾಭಗಳು ಮೇಲ್ನೋಟಕ್ಕೆ ಆಕರ್ಷಕವಾಗಿಯೇ ಕಾಣುತ್ತವೆ. ಓರ್ವ ಕೈದಿ ನಿರ್ಬಂಧಿತ ಸ್ಥಳಗಳ ಬಳಿ ಬರುತ್ತಿದ್ದಂತೆ, ಅಥವಾ ಜೈಲಿನ ತಡೆಗೋಡೆಗಳ ಬಳಿ ಅಥವಾ ಬೇಲಿಗಳ ಬಳಿ ಅನುಮಾನಾಸ್ಪದವಾಗಿ ನಡೆದಾಡುತ್ತಿದ್ದುದನ್ನು ಗಮನಿಸಿದರೆ, ಆತ ಜೈಲಿನಿಂದ ಪರಾರಿಯಾಗಲು ಯೋಚನೆ ಹಾಕಿಕೊಂಡಿದ್ದಾನೆ ಎನ್ನುವುದನ್ನು ತಿಳಿಯಲು ಸಾಧ್ಯವಾಗುತ್ತದೆ. ಜೈಲಿನಲ್ಲಿ ಖೈದಿಗಳ ನಡುವಿನ ಹೊಡೆದಾಟಗಳು ಇದ್ದಕ್ಕಿದ್ದಂತೆ ನಡೆಯುತ್ತವಾದರೂ, ಅವುಗಳನ್ನು ಆರಂಭಿಕ ಹಂತಗಳಲ್ಲೇ ಗುರುತಿಸಲು ಸಾಧ್ಯವಾಗುತ್ತದೆ. ಇದರಿಂದಾಗಿ ಹೊಡೆದಾಟಗಳು ತೀವ್ರವಾಗುವ ಮುನ್ನವೇ ಕಾವಲುಗಾರರಿಗೆ ಮಧ್ಯ ಪ್ರವೇಶಿಸಿ, ಹೊಡೆದಾಟ ತಡೆಗಟ್ಟಲು ಸಾಧ್ಯವಾಗುತ್ತದೆ. ಮೊಬೈಲ್‌ ಫೋನ್‌ಗಳು, ಆಯುಧಗಳು, ಅಥವಾ ಮಾದಕ ದ್ರವ್ಯಗಳಂತಹ ನಿಷೇಧಿತ ವಸ್ತುಗಳನ್ನು ಹೊಸ ಹೊಸ ವಿಧಾನಗಳನ್ನು ಅನುಸರಿಸಿ ಜೈಲಿನೊಳಗೆ ತರುವ ಪ್ರಯತ್ನ ನಡೆಸುವಾಗಲೂ ಎಐ ಜೈಲಿನ ಆವರಣದಲ್ಲಿ ಇರಬಾರದ ವಸ್ತುಗಳನ್ನು ತಕ್ಷಣವೇ ಗುರುತಿಸುವುದರಿಂದ ಅವುಗಳನ್ನು ಖೈದಿಗಳಿಗೆ ತಲುಪಿಸುವುದು ಕಷ್ಟಕರವಾಗುತ್ತದೆ. ಅದರೊಡನೆ, ಖೈದಿಗಳೇನಾದರೂ ಅಸಹಜ ಸಂಖ್ಯೆಯಲ್ಲಿ ಗುಂಪುಗೂಡುತ್ತಿದ್ದಾರೋ ಎನ್ನುವುದನ್ನೂ ಎಐ ವ್ಯವಸ್ಥೆ ಗಮನಿಸಿ, ಗುರುತಿಸಬಲ್ಲದು. ಬಳಿಕ ಅದು ಸಂಭಾವ್ಯ ದಂಗೆ ಅಥವಾ ಯೋಜಿತ ಚಟುವಟಿಕೆಗಳನ್ನು ನಡೆಸುವ ಸಾಧ್ಯತೆಗಳ ಕುರಿತೂ ಮಾಹಿತಿ ನೀಡಬಲ್ಲದು. ಈಗಾಗಲೇ ಕನಿಷ್ಠ ಸಿಬ್ಬಂದಿಗಳನ್ನು ಹೊಂದಿ, ವಿಪರೀತವಾದ ಜವಾಬ್ದಾರಿಗಳನ್ನು ನಿರ್ವಹಿಸಬೇಕಿರುವ ಜೈಲಿನ ಆಡಳಿತಕ್ಕೆ ಇಂತಹ ತಂತ್ರಜ್ಞಾನ ಎಂದೂ ನಿದ್ರೆ ಹೋಗದ, ಹೊಸ ರಕ್ಷಣಾ ಪದರದಂತೆ ಭಾಸವಾಗುತ್ತದೆ.

ಆದರೆ, ಭದ್ರತೆ ಮತ್ತು ಮಾನವರ ಗೌರವಗಳ ನಡುವೆ ಸಮತೋಲನ ಇರಬೇಕು ಎಂದು ನಂಬುವ ನಾನು ಇಲ್ಲಿನ ಕಳವಳಗಳ ಕುರಿತು ಪ್ರಾಮಾಣಿಕ ಚರ್ಚೆಗಳಾಗಬೇಕು ಎಂದು ಭಾವಿಸುತ್ತೇನೆ. ಜೈಲುಗಳಲ್ಲಿ ಬಂಧನಕ್ಕೊಳಗಾಗಿರುವವರು ಮನುಷ್ಯರೇ ಆಗಿದ್ದು, ಅವರಲ್ಲಿ ಬಹಳಷ್ಟು ಜನರು ಸಣ್ಣಪುಟ್ಟ ಪ್ರಕರಣಗಳಲ್ಲಿ ಬಂಧಿತರಾಗಿದ್ದಾರೆ ಅಥವಾ ಇನ್ನೂ ವಿಚಾರಣೆಗೆ ಕಾಯುತ್ತಿದ್ದಾರೆ. ನಿರಂತರವಾಗಿ ಎಐ ಕಣ್ಗಾವಲು ಎಂದರೆ, ಪ್ರತಿಯೊಂದು ಚಲನವಲನ, ಪ್ರತಿಯೊಂದು ಮಾತುಕತೆ, ಪ್ರತಿಯೊಂದು ಆಂಗಿಕ ಲಕ್ಷಣಗಳೂ ಸೆರೆಹಿಡಿಯಲ್ಪಟ್ಟು, ಆಲ್ಗಾರಿದಂಗಳ ವಿಶ್ಲೇಷಣೆಗೆ ಒಳಪಡುತ್ತವೆ. ಆದರೆ, ಇಷ್ಟರಮಟ್ಟಿನ ಕಣ್ಗಾವಲು ಖೈದಿಗಳ ಪುನರ್ವಸತಿಗೆ ನೆರವಾಗುತ್ತದೆಯೇ? ಯಾಕೆಂದರೆ ಬಂಧನ ಮತ್ತು ಶಿಕ್ಷೆಯ ಮುಖ್ಯ ಗುರಿಯೇ ಕೈದಿಗಳಲ್ಲಿ ಪರಿವರ್ತನೆ ತರುವುದಾಗಿದೆ. ಇಂತಹ ಕಣ್ಗಾವಲು ಜನರನ್ನು ಮನುಷ್ಯತ್ವದಿಂದ ಇನ್ನಷ್ಟು ವಿಮುಖರಾಗಿಸಬಹುದೇ? ನಾವು ನೆನಪಿಡಬೇಕಾದ ವಿಚಾರವೆಂದರೆ, ಬಂಧಿತರಲ್ಲಿ ಬಹಳಷ್ಟು ಜನರು ಅಂತಿಮವಾಗಿ ಸಮಾಜಕ್ಕೆ ಮರಳಲಿದ್ದಾರೆ. ಆದ್ದರಿಂದ ಅವರನ್ನು ಪ್ರಯೋಗಾಲಯದ ಮಾದರಿಗಳಂತೆ ನಿರಂತರ ನಿಗಾದಲ್ಲಿ ಇಟ್ಟಿರುವುದು ಸಮಾಜ ಜೀವನಕ್ಕೆ ಬೇಕಾದ ಪರಿವರ್ತನೆಗೆ ಅವರನ್ನು ಸಿದ್ಧಪಡಿಸಲಾರದೇನೋ.

ಇದರೊಡನೆ, ಭಾರತೀಯ ಸನ್ನಿವೇಶದಲ್ಲಿ ಇವುಗಳ ಜಾರಿಯ ಕುರಿತೂ ಒಂದಷ್ಟು ಪ್ರಾಯೋಗಿಕ ಸವಾಲುಗಳಿವೆ. ಎಐ ವ್ಯವಸ್ಥೆಗಳು ಯಾವುದು ಸಹಜ ವರ್ತನೆ ಮತ್ತು ಯಾವುದು ಅಸಹಜ, ಅನುಮಾನಾಸ್ಪದ ವರ್ತನೆ ಎನ್ನುವುದನ್ನು ತಿಳಿದುಕೊಳ್ಳಲು ಅಪಾರ ಪ್ರಮಾಣದ ಮಾಹಿತಿಯ ಅವಶ್ಯಕತೆ ಹೊಂದಿವೆ. ಜೈಲಿನ ಸಂಪೂರ್ಣ ನಿಯಂತ್ರಿತ ವಾತಾವರಣದಲ್ಲಿ ಇಂತಹ ಎಐ ವ್ಯವಸ್ಥೆ ಸಾಂಸ್ಕೃತಿಕ ಅಭ್ಯಾಸಗಳನ್ನು, ಧಾರ್ಮಿಕ ಕೂಟಗಳನ್ನು, ಅಥವಾ ಸಹಜ ಮಾತುಕತೆಗಳನ್ನು ಅಪಾಯಗಳೆಂದು ಪರಿಗಣಿಸಿದರೆ ಏನಾಗಬಹುದು? ಒಂದಷ್ಟು ಕೈದಿಗಳು ಜೊತೆಯಾಗಿ ಪ್ರಾರ್ಥನೆ ಸಲ್ಲಿಸುವುದೂ ಅಸಹಜ ಗುಂಪುಗೂಡುವಿಕೆ ಎಂದು ಪರಿಗಣಿತವಾಗಬಹುದೇ? ಇದಕ್ಕೆ ತಗಲುವ ವೆಚ್ಚದ ಅಂಶವನ್ನೂ ನಾವು ಕಡೆಗಣಿಸಲು ಸಾಧ್ಯವಿಲ್ಲ. ನಮ್ಮ ಜೈಲುಗಳು ಈಗಾಗಲೇ ಮಿತಿಮೀರಿದ ದಟ್ಟಣೆ, ವೈದ್ಯಕೀಯ ಸೌಲಭ್ಯಗಳ ಕೊರತೆ, ಸ್ವಚ್ಛತೆಯ ಅಭಾವ, ಮತ್ತು ಸಿಬ್ಬಂದಿ ತರಬೇತಿಯ ಕೊರತೆಯಂತಹ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ. ಎಐ ಆಧಾರಿತ ಕಣ್ಗಾವಲು ವ್ಯವಸ್ಥೆಗಳ ಅಳವಡಿಕೆ, ನಿರ್ವಹಣೆ ಮತ್ತು ಕಾರ್ಯಾಚರಣೆಗೆ ದೊಡ್ಡ ಪ್ರಮಾಣದಲ್ಲಿ ಹಣದ ಹೂಡಿಕೆಯ ಅಗತ್ಯವಿದೆ. ಆದರೆ, ಈ ಹಣವನ್ನು ಶೈಕ್ಷಣಿಯ ಕಾರ್ಯಕ್ರಮಗಳು, ತರಬೇತಿ ಯೋಜನೆಗಳು, ಜೈಲಿನೊಳಗಿನ ಜೀವನ ಮಟ್ಟ ಸುಧಾರಣೆ ಮತ್ತು ಮಾನಸಿಕ ಆರೋಗ್ಯ ಬೆಂಬಲದಂತಹ ಯೋಜನೆಗಳಿಗೆ ವಿನಿಯೋಗಿಸಿದರೆ, ಇದರಿಂದ ಖೈದಿಗಳಲ್ಲಿ ಅವಶ್ಯಕ ಪರಿವರ್ತನೆಗೆ ಮತ್ತು ಒಟ್ಟಾರೆಯಾಗಿ ಸಮಾಜಕ್ಕೆ ನೆರವಾಗದೇ ಎನ್ನುವ ಪ್ರಶ್ನೆಗಳೂ ಮೂಡಿವೆ.

ಇದಲ್ಲದೆ, ಈ ಎಐ ವ್ಯವಸ್ಥೆಗಳ ಮೇಲ್ವಿಚಾರಣೆ ನಡೆಸುವವರು ಯಾರು? ಎಐ ವ್ಯವಸ್ಥೆಗಳೂ ಸಹ ದೋಷ ಹೊಂದಬಹುದು, ತಮ್ಮನ್ನು ಪ್ರೋಗ್ರಾಮ್‌ ಮಾಡಿರುವ ವಿಧಾನಕ್ಕೆ ಅನುಗುಣವಾಗಿ ಪಕ್ಷಪಾತ ಹೊಂದಬಹುದು, ಅಥವಾ ಅವುಗಳನ್ನು ನಿಯಂತ್ರಿಸುವವರೇ ಅದನ್ನು ಬೇಕಾದಂತೆ ರೂಪಿಸಬಹುದು. ಸರಿಯಾದ ಮೇಲ್ವಿಚಾರಣೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಗಳಿಲ್ಲದೆ ಇಂತಹ ಶಕ್ತಿಶಾಕಿ ಕಣ್ಗಾವಲು ವ್ಯವಸ್ಥೆಗಳು ದುರ್ಬಳಕೆಯಾಗುವ ಸಾಧ್ಯತೆಗಳಿವೆ. ಖಾಸಗಿತನದ ಕಳವಳಗಳು ಕಾನೂನು ಮುರಿದವರಿಗೂ ಇದ್ದೇ ಇರುತ್ತವೆ. ಅದಲ್ಲದೆ, ಭಾರತೀಯ ನ್ಯಾಯಾಲಯಗಳು ಜೈಲು ಶಿಕ್ಷೆ ಎನ್ನುವುದು ಮಾನವ ಹಕ್ಕುಗಳನ್ನು ಖೈದಿಗಳಿಂದ ಕಿತ್ತುಕೊಳ್ಳುವಂತಾಗಬಾರದು ಎಂದು ಪದೇ ಪದೇ ಹೇಳುತ್ತಲೇ ಇರುತ್ತವೆ.

ನಾನು ಜೈಲಿನ ನಿರ್ವಹಣೆಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯ ವಿರೋಧಿ ಖಂಡಿತಾ ಅಲ್ಲ. ಡಿಜಿಪಿ ಅಲೋಕ್‌ ಕುಮಾರ್‌ ಅವರು ಭದ್ರತಾ ಸವಾಲುಗಳ ಕುರಿತು ಪ್ರಗತಿಪರ ಚಿಂತನೆ ಹೊಂದಿರುವುದನ್ನು ನಿಜಕ್ಕೂ ಶ್ಲಾಘಿಸಲೇಬೇಕು. ಆದರೆ, ಇದು ಹಲವಾರು ರೀತಿಯ ಜನರನ್ನು ಒಳಗೊಂಡಿರುತ್ತದೆ. ಇಂತಹ ಆಧುನಿಕ ಉಪಕ್ರಮಗಳು ಪರಿಹಾರ ನೀಡುತ್ತವೆಯೇ ಹೊರತು ಹೊಸ ಸಮಸ್ಯೆಗಳನ್ನು ಸೃಷ್ಟಿಸುವುದಿಲ್ಲ ಎಂದು ಖಾತ್ರಿಪಡಿಸಲು ನಿರಂತರವಾಗಿ ಪರಿಶೋಧನೆ ನಡೆಸಬೇಕು. ಮಾಹಿತಿ ಬಳಕೆ ಮತ್ತು ಉಳಿಕೆಯ ಕುರಿತೂ ಸ್ಪಷ್ಟ ನಿರ್ದೇಶನಗಳನ್ನು ಒದಗಿಸಬೇಕು. ತಂತ್ರಜ್ಞಾನಕ್ಕೆ ಮಾಡುವಷ್ಟೇ ಹಣದ ಹೂಡಿಕೆಯನ್ನು ಮಾನವ ಅಭಿವೃದ್ಧಿ ಯೋಜನೆಗಳಿಗೂ ಕೈಗೊಳ್ಳಬೇಕು. ಕಾರಾಗೃಹಗಳ ನಿರ್ವಹಣೆಯ ಭವಿಷ್ಯ ತಂತ್ರಜ್ಞಾನ ಮತ್ತು ಮನುಷ್ಯತ್ವದ ನಡುವೆ ಒಂದನ್ನು ಆರಿಸುವುದರಲ್ಲಲ್ಲ, ಬದಲಿಗೆ ಒಂದನ್ನು ಇನ್ನೊಂದರ ಸೇವೆಗೆ, ಒಳಿತಿಗೆ ಬಳಸುವ ಬುದ್ಧಿವಂತಿಕೆ ಮತ್ತು ಜ್ಞಾನದಲ್ಲಿದೆ.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.