ಕೋಣ ಹಿಡಿಯುವುದು ಸುಲಭದ ಮಾತಲ್ಲ...
‘ಲೋ ಬೇಗ ಬರ್ರೋ, ಎಷ್ಟೊತ್ತು ಮಾಡ್ತಿರಿ. ಲೇಟ್ ಮಾಡಿದ್ರೆ ಅದು ಇವತ್ತೂ ನಮ್ ಕೈಗೆ ಸಿಗಲ್ಲ. ಬೆಳೆಯನ್ನೆಲ್ಲ ಹಾಳ್ ಮಾಡ್ತಿದೆ. ಹಗ್ಗ ತಗಡ್ರೋ. ಇದನ್ನ ಇವತ್ತು ಯಾವ್ ಕಾರಣಕ್ಕೂ ಬಿಡಬಾರ‍್ದ್...’ ಹೀಗೆ ಒಂದಿಬ್ಬರು ಊರ ಜನರನ್ನೆಲ್ಲ ಒಂದೇ ಉಸಿರಿನಲ್ಲಿ ಕೂಗಿ ಕೂಗಿ ಕರೆಯುತ್ತಾ ಒಂದೆಡೆ ಕಲೆ ಹಾಕುತ್ತಿದ್ದರು. ಜನರೂ ಕೈಯಲ್ಲಿ ಹಗ್ಗ, ದೊಣ್ಣೆ ಹಿಡಿದು ಉರುಪು, ತರಾತುರಿಯಲ್ಲಿ ಗುಂಪು ಗುಂಪಾಗಿ ಹೊರಟು ಒಂದೆಡೆ ಜಮಾವಣೆ ಆಗುತ್ತಿದ್ದರು. ಅರೆಗಳಿಗೆಯಲ್ಲಿ ಎಲ್ಲರೂ ಕೈಯಲ್ಲಿ ಹಗ್ಗ, ದೊಣ್ಣೆ ಹಿಡಿದು ಗುಂಪು ಗುಂಪಾಗಿ ಹೊರಟೇ ಬಿಟ್ಟರು. ‘ಕರಡಿ ಅಪ್ಪಿತಪ್ಪಿ ಇವರ ಕೈಗೆ ಸಿಕ್ಕಿರಬೇಕು. ಅದಕ್ಕಾಗಿ ಇವರೆಲ್ಲ ತಯಾರಿ ಮಾಡಿಕೊಂಡು ಆವೇಶ, ಆವೇಗದಲ್ಲಿ ಹೊರಟ್ಟಿದ್ದಾರೆ’ ಎಂದುಕೊಂಡು ಹಿಂಬಾಲಿಸಿದೆ. ದೂರದಿಂದಲೇ ಬೆಳೆಯ ಕಡು ಹಸಿರಿನ ಮಧ್ಯೆ ಕಡು ಕಪ್ಪು, ಬಲವಾದ ಆಕೃತಿಯೊಂದು ಕಂಡಿತು. ಅದು ಪಕ್ಕಾ ಕರಡಿಯೇ ಇರಬೇಕೆಂಬ ಊಹೆ ಮತ್ತಷ್ಟು ಬಲವಾಯಿತು. ಆದರೆ ಹತ್ತಿರ ಹೋಗಿ ನೋಡಿದರೆ ಅದು ಕೋಣ.
ಹಳ್ಳಿಗಳಲ್ಲಿ ದೇವರ ಹೆಸರಿನಲ್ಲಿ ಕೋಣ ಬಿಡುವ ಸಂಪ್ರದಾಯವಿದೆ. ಹೀಗೆ ಬಿಟ್ಟ ಕೋಣ ಆ ಹಳ್ಳಿಯಲ್ಲಿ ಮಾತ್ರವಲ್ಲದೇ ಸುತ್ತ ಹತ್ತೂರಲ್ಲಿ ಓಡಾಡಿಕೊಂಡು, ಚೆನ್ನಾಗಿ ಮೇಯ್ದುಕೊಂಡು ಇರುತ್ತದೆ. ಅದು ರೈತರ ಹೊಲಗಳಿಗೆ ನುಗ್ಗಿ ಬೆಳೆಯನ್ನು ತಿಂದು ಹಾಕುತ್ತದೆ. ಆದರೆ ರೈತರು ಉಳಿದ ಜಾನುವಾರುಗಳನ್ನು ಹೊಡೆದು ಓಡಿಸುವಂತೆ ಇದನ್ನು ಹೊಡೆದೋಡಿಸದೇ ಕೇವಲ ಬೆದರಿಸುತ್ತಾರಷ್ಟೆ. ದೇವರ ಕೋಣ ಹೊಲದಲ್ಲಿ ಹಾದು ಹೋದರೆ ಅದೃಷ್ಟ, ಬೆಳೆ ತಿಂದರೆ ಫಸಲು ವೃದ್ಧಿಸುತ್ತದೆ ಎನ್ನುವ ನಂಬಿಕೆ ಇದಕ್ಕೆ ಕಾರಣ. ಆದ್ದರಿಂದ ಮನಸೋ ಇಚ್ಛೆ ಓಡಾಡಿಕೊಂಡು, ಸಿಕ್ಕಿದ್ದನ್ನೆಲ್ಲಾ ತಿಂದು ಕೊಬ್ಬಿ ಬೆಳೆಯುವ ಕೋಣ ಕೆಲವೊಮ್ಮೆ ಅಪಾಯಕಾರಿಯೂ ಆಗಿಬಿಡುತ್ತದೆ. ಸಿಕ್ಕ ಸಿಕ್ಕವರನ್ನು ತಿವಿಯುತ್ತಾ, ಹೊಲಗಳಲ್ಲಿ ದಾಂದಲೆ ಮಾಡುತ್ತದೆ. ಇಂತಹ ಪುಂಡಾಟಿಕೆಯಿಂದ ಬೇಸತ್ತವರು ಅದನ್ನು ಕಟ್ಟಿ ಹಾಕಿ ಸಂಬಂಧಿಸಿದ ಹಳ್ಳಿಯವರಿಗೆ ವಿಷಯ ಮುಟ್ಟಿಸುತ್ತಾರೆ.
ಕೋಣ ಕಟ್ಟಿ ಹಾಕುವುದೆಂದರೆ ಸುಲಭವಲ್ಲ. ಅದಕ್ಕೆ ಗುಂಡಿಗೆ ಇರಬೇಕು. ಕೊಬ್ಬಿದ ಕೋಣ ಅಷ್ಟು ಸುಲಭವಾಗಿ ಬಗ್ಗುವುದಿಲ್ಲ. ಅದನ್ನು ಕಟ್ಟಿ ಹಾಕುವಾಗ ಒದೆ ತಿಂದು, ಇರಿತ, ತುಳಿತಕ್ಕೆ ಒಳಗಾದವರು ಅನೇಕರಿದ್ದಾರೆ. ಅದಕ್ಕಾಗಿ ಕೋಣ ಕಟ್ಟಿ ಹಾಕಲು ಶಕ್ತಿಯ ಜೊತೆಗೆ ಯುಕ್ತಿಯೂ ಬೇಕು. ಕೋಣ ಹಿಡಿಯುವ ಸುದ್ದಿ ಶರವೇಗದಲ್ಲಿ ಹಳ್ಳಿಯಲ್ಲಿ ಹಬ್ಬಿ ಅದು ಇರುವಲ್ಲಿಗೆ ನೂರಾರು ಜನ ಕ್ಷಣದಲ್ಲಿ ಸೇರುತ್ತಾರೆ. ಹೀಗೆ ಸೇರಿದವರಲ್ಲಿ ಅದನ್ನು ಹಿಡಿಯಲು ಬಂದವರಿಗಿಂತ ಕಾರ್ಯಾಚರಣೆಯ ರೋಚಕ ಕ್ಷಣಗಳನ್ನು ಕಣ್ಣು ತುಂಬಿಕೊಳ್ಳಲು ಬಂದವರೇ ಹೆಚ್ಚು. ಜನ ಸಾಗರವೇ ಇದ್ದರೂ ಕೆಲವೊಮ್ಮೆ ಕೋಣ ಹಿಡಿಯಲು ಮುಂದಾಗುವವರ ಸಂಖ್ಯೆ ಒಂದಂಕಿಯೂ ದಾಟುವುದಿಲ್ಲ! ಹೀಗಾಗಿ ಈ ಕೆಲಸಕ್ಕೆ ಕೆಲವೊಂದಿಷ್ಟು ನುರಿತ, ಧೈರ್ಯದಿಂದ ಮುನ್ನುಗ್ಗುವ ಸಾಹಸಿಗಳು ಅವಶ್ಯ. ಅಂತಹ ಧೈರ್ಯಶಾಲಿಗಳ ಮುಂದಾಳತ್ವದಲ್ಲಿ ಗುಂಡಿಗೆ ಇದ್ದವರು ‘ಆಪರೇಷನ್ ಮಹಿಷ’ ತಂಡ ಸೇರುತ್ತಾರೆ.
‘ಮೂಗು ದಾರ’ ಇಲ್ಲದ ಕೋಣ ಸಂಪೂರ್ಣ ಸ್ವಾತಂತ್ರ್ಯವನ್ನು ಅನುಭವಿಸಿರುತ್ತದೆ. ಬೇಲಿ, ಬೆಳೆ ಯಾವುದನ್ನೂ ಲೆಕ್ಕಿಸದೇ ಮಾಡುವ ಪುಂಡಾಟಿಕೆ, ಹಾದಿಬೀದಿಯಲ್ಲಿ ಸೊಕ್ಕಿ ಓಡಾಡುತ್ತಾ, ಅಬಾಲವೃದ್ಧರಾದಿಯಾಗಿ ಎಲ್ಲರ ಮೇಲೆ ಏರಿ ಬರುವ ಮೂಲಕ ಜನರಲ್ಲಿ ದಿಗಿಲು ಹುಟ್ಟಿಸುತ್ತದೆ. ಭವಿಷ್ಯದಲ್ಲಿ ಬಲಿತ ಕೋಣದ ಇಂತಹ ವಿಲಕ್ಷಣ ವರ್ತನೆಯನ್ನು ಅಂದಾಜಿಸಿಯೇ ಅಂಕುಶ ಹಾಕಲು ಮೂಗುದಾರದ ಬದಲು ಮೊದಲೇ ಕಾಲಿಗೆ ಕಬ್ಬಿಣದ ಸೆಳ್ಳು ಹಾಕಲಾಗುತ್ತದೆ. ಆಗ ಕೋಣ ಸದಾ ಅಳುಕಿಗೆ ಒಳಗಾಗಿ ಅಂಕೆಯಲ್ಲಿ ಇರುತ್ತದೆ.
ದೇವರ ಕೋಣಕ್ಕೆ ಒಂದು ಗುರುತು ಇದ್ದೇ ಇರುತ್ತದೆ. ಜಾತ್ರೆ ಮುಗಿದ ನಂತರ ದೇವಿಗೆ ಕೋಣದ ಮರಿ ಬಿಡಲು ಭಕ್ತರು ತುದಿಗಾಲಲ್ಲಿ ನಿಂತಿರುತ್ತಾರೆ. ಹರಕೆ ಹೊತ್ತವರಲ್ಲಿ ಒಮ್ಮತಕ್ಕೆ ಬಂದು ಅಂತಿಮವಾಗಿ ಒಬ್ಬರು ದೇವರಿಗೆ ಕೋಣದ ಮರಿ ಬಿಡುತ್ತಾರೆ. ಕೋಣದ ಮರಿ ಬಿಡುವಾಗ ಇದು ತಮ್ಮೂರಿನ ಕೋಣವೆಂದು ಭವಿಷ್ಯದಲ್ಲಿ ಸುಲಭವಾಗಿ ಗುರುತು ಹಿಡಿಯಲು ಅದಕ್ಕೊಂದು ಗೊತ್ತು ಅಥವಾ ಗುರುತು ಮಾಡುತ್ತಾರೆ (ಈಗೀಗ ಮುರುವು ಹಾಕುತ್ತಾರೆ). ಅದು ಊರೂರು ಅಲೆಯುತ್ತಾ ಹೋಗುತ್ತದೆ. ಹೀಗೆ ಹೋಗಿದ್ದು ಕೆಲವೊಮ್ಮೆ ಎಷ್ಟು ವರ್ಷಗಳು ಕಳೆದರೂ ಪುನಃ ಸ್ವಂತ ಗ್ರಾಮಕ್ಕೆ ಮರಳುವುದೇ ಇಲ್ಲ. ದೇವಿಯ ಜಾತ್ರೆ ಬಂದಾಗಲೇ ಅಂತಹ ಕೋಣಕ್ಕೆ ಹುಡುಕಾಟ ನಡೆಯುತ್ತದೆ. ಆಗ ನೆರವಿಗೆ ಬರುವುದೇ ಈ ಗುಪ್ತ ಗುರುತು.
ಸ್ವಂತ ಹಳ್ಳಿ ಬಿಟ್ಟು ಹೋದ ಕೋಣ ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಕಾಣೆಯಾಗಿ ಬಿಡುತ್ತದೆ. ದೇವರಿಗೆ ಕೋಣದ ಮರಿ ಬಿಟ್ಟ ಮರು ಕ್ಷಣದಿಂದಲೇ ಅದರ ಇರುವಿಕೆಯ ಬಗ್ಗೆ ಜನರೂ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ದೇವಿ ಜಾತ್ರೆ ಸಮೀಪಿಸುತ್ತಿದ್ದಂತೆ ಆ ಗ್ರಾಮದವರು ಜಾಗೃತರಾಗುತ್ತಾರೆ. ತಮ್ಮ ಊರಿನ ಕೋಣ ಎಲ್ಲಿದೆ ಎಂದು ಹುಡುಕಲು ಮುಂದಾಗುತ್ತಾರೆ. ಜ್ಯೋತಿಷ್ಯ, ಅಂಜನ ಹಾಕಿ ಕೇಳುತ್ತಾರೆ. ಅವರಿವರು ಹೇಳುವ ಸುಳಿವುಗಳಿಗೆ ಕಿವಿ ತೆರೆದುಕೊಳ್ಳುತ್ತಾರೆ. ಅಂತಿಮವಾಗಿ ತಮ್ಮಲ್ಲೇ ಒಂದಿಷ್ಟು ಜನರಿಗೆ ಈ ಕೋಣ ಹುಡುಕಲು ನೇಮಿಸಿ, ದಾರಿ ಖರ್ಚಿಗೆ ದುಡ್ಡು ಕೊಟ್ಟು ಕಳುಹಿಸುತ್ತಾರೆ. ಜೊತೆಗೆ ಪತ್ತೆ ಮಾಡಿದರೆ ಬಹುಮಾನ ನೀಡುವುದಾಗಿಯೂ ಘೋಷಿಸುತ್ತಾರೆ. ಹಾಗೊಹೀಗೂ ಮಾಡಿ ಕೊನೆಗೆ ತಮ್ಮೂರಿನ ಕೋಣವನ್ನು ಪತ್ತೆ ಮಾಡಿ ಬಿಡುತ್ತಾರೆ. ಆಗ ಕೋಣ ಇಷ್ಟು ದಿನ ತಂಗಿದ್ದ ಊರಿನವರು ಇದು ತಮ್ಮೂರಿನ ಕೋಣವೆಂದು ಹುಡುಕಿಕೊಂಡು ಹೋದವರೊಂದಿಗೆ ವಾದಕ್ಕೆ ನಿಲ್ಲುತ್ತಾರೆ. ಅವರ ಮಧ್ಯೆ ಮಾತಿನ ಚಕಮಕಿ ನಡೆಯುತ್ತದೆ. ಕೆಲವೊಮ್ಮೆ ಇಂತಹ ವಾಗ್ವಾದ ಅತಿರೇಕಕ್ಕೆ ಹೋಗಿ ಕುಸ್ತಿಗೂ ಬೀಳುತ್ತಾರೆ. ಎರಡೂ ಊರುಗಳ ಮಧ್ಯೆ ಪಂಚಾಯಿತಿಯೂ, ಆಣೆ ಪ್ರಮಾಣಗಳೂ ನಡೆಯುತ್ತವೆ.
ಸೊಕ್ಕಿದ ಕೋಣಕ್ಕೆ ತಿನ್ನಲು ಏನಾದರೂ ಇಟ್ಟು ಅದು ಒಂದೆಡೆ ನಿಲ್ಲುವಂತೆ ನೋಡಿಕೊಳ್ಳುತ್ತಾರೆ. ಅದು ತಿನ್ನುವುದರಲ್ಲಿ ಮಗ್ನವಾದ ತಕ್ಷಣ ಬಡಿಗೆ, ಹಗ್ಗಗಳನ್ನು ಹಿಡಿದವರು ಅದನ್ನು ಸುತ್ತುವರಿಯುತ್ತಾರೆ. ಅತ್ಯಂತ ಜಾಗರೂಕತೆಯಿಂದ ಕೊಂಬು, ಹಿಂದೆ ಮತ್ತು ಮುಂದಿನ ಎರಡು ಕಾಲುಗಳಿಗೆ ಏಕಕಾಲದಲ್ಲಿ ಹಗ್ಗ ಹಾಕಿ ನೆಲಕ್ಕೆ ಕೆಡವುತ್ತಾರೆ. ಅದು ಬಿಡಿಸಿಕೊಳ್ಳಲು ಕಸರತ್ತು ನಡೆಸುತ್ತದೆ. ಕೋಣ ಮತ್ತು ಹಗ್ಗ ಹಿಡಿದವರ ಮಧ್ಯೆ ಜಗ್ಗಾಟ ಜೋರಾಗಿ ನಡೆಯುತ್ತದೆ. ಕೊನೆಗೆ ಮೂರ್ನಾಲ್ಕು ಬಾರಿ ಕೋಣ ನೆಲಕ್ಕೆ ಬಿದ್ದರೆ ಅದು ಸೋತಂತೆ. ಅದನ್ನು ಸರಕು ಸಾಗಣೆ ವಾಹನಕ್ಕೆ ತುಂಬಿಕೊಂಡು ತಮ್ಮೂರಿಗೆ ಹೊರಡುತ್ತಾರೆ. ಅಲ್ಲಿಗೆ ಆಪರೇಷನ್ ಮಹಿಷಕ್ಕೆ ತೆರೆಬೀಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.