‘ಯಕ್ಷೋತ್ಸವ’ದಲ್ಲಿ ನಿಟ್ಟೆ ಎನ್‌ಎಂಎಎಂ ಕಾಲೇಜು ವಿದ್ಯಾರ್ಥಿಗಳ ‘ತರಣಿಸೇನ ಕಾಳಗ’ದ ಭಾಗ
ಚಿತ್ರ ಫಕ್ರುದ್ದೀನ್ ಎಚ್
ಮಂಗಳೂರಿನ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ಮೂರು ದಶಕಗಳಿಂದ ವಿದ್ಯಾರ್ಥಿಗಳ ಯಕ್ಷಗಾನ ಸ್ಪರ್ಧೆ ‘ಯಕ್ಷೋತ್ಸವ’ ನಡೆಯುತ್ತಿದೆ. ಶೈಕ್ಷಣಿಕ ಒತ್ತಡದ ನಡುವೆ ಭಾವಗಳಲ್ಲಿ ಲೀನವಾಗಿ ರಸದೀಪ್ತಿ ಸೂಸಲು ನೆರವಾಗುವ ಈ ಸ್ಪರ್ಧೆ ವಿದ್ಯಾರ್ಥಿಗಳ ಕಲೋತ್ಸಾಹ ಬಿಂಬಿಸುವ ಕನ್ನಡಿಯೂ ಅನೇಕರಿಗೆ ಕಲಾಕ್ಷೇತ್ರದಲ್ಲಿ ಬೆಳೆಯಲು ಹೊಸದಾರಿಯೂ ಆಗಿದೆ.
ಕೃಷ್ಣನ ಚಾಣಾಕ್ಷತನ, ಹನುಮಂತನ ಶೌರ್ಯ, ಲಕ್ಷ್ಮಣನ ದಿಟ್ಟತನ, ರಾಮನ ಶಾಂತಭಾವ, ಮೋಹಿನಿಯ ಲಾಸ್ಯ, ಸುಭದ್ರೆಯ ದೈನ್ಯ, ಪಾರ್ಥನ ಧೀರತ್ವ...ಪುರಾಣ ಪಾತ್ರಗಳ ಗುಣಸ್ವಭಾವಗಳೆಲ್ಲವೂ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್‌ಡಿಎಂ) ಕಾನೂನು ಕಾಲೇಜಿನ ಆವರಣದಲ್ಲಿ ಎರಡು ದಿನ ಪ್ರತಿಫಲಿಸಿದವು.
ಚೆಂಡೆಯ ಗಂಭೀರ ನಾದ, ಮದ್ದಲೆಯ ಝೇಂಕಾರ, ಚಕ್ರತಾಳದ ಲಯಕಾರಿಯಲ್ಲಿ ಭಾಗವತಿಕೆಯ ಸೊಗಸುಗಾರಿಕೆ ಚಿತ್ತೋದ್ರೇಕ ಉಂಟುಮಾಡಿದರೆ ಪಾತ್ರಗಳ ಶಾಂತ, ಶೃಂಗಾರ, ಹಾಸ್ಯ, ಧೀರ ಭಾವಗಳು ನಗರ ಮಧ್ಯದಲ್ಲಿ ರಸದೀಪ್ತಿಯನ್ನು ಸೂಸಿದವು. ವೃತ್ತಿಪರ ಹಿಮ್ಮೇಳ ಕಲಾವಿದರು ಸೃಷ್ಟಿಸಿದ ಭೂಮಿಕೆಯಲ್ಲಿ ಪಾತ್ರಗಳಿಗೆ ಜೀವ ತುಂಬಿದವರೆಲ್ಲರೂ ಪದವಿ ವಿದ್ಯಾರ್ಥಿಗಳು. ಯಾಕೆಂದರೆ ಇದು ವಿದ್ಯಾರ್ಥಿಗಳ ಕಲೋತ್ಸಾಹದ ಯಕ್ಷಗಾನ ಸ್ಪರ್ಧೆ, ಯಕ್ಷೋತ್ಸವ.
ಎಸ್‌ಡಿಎಂ ಕಾಲೇಜಿಗೆ ಯಕ್ಷೋತ್ಸವ ಹೊಸತಲ್ಲ. ತೊಂಬತ್ತರ ದಶಕದಲ್ಲಿ ಆರಂಭಗೊಂಡ ವಿದ್ಯಾರ್ಥಿಗಳ ಯಕ್ಷೋತ್ಸವ ಮೂವತ್ಮೂರು ವರ್ಷಗಳನ್ನು ಪೂರೈಸಿದೆ. ಇಷ್ಟು ವರ್ಷಗಳಿಂದ ಸ್ಪರ್ಧಾ ವೇದಿಕೆಯಲ್ಲಿ ರಾಮ, ಕೃಷ್ಣ, ಸುದರ್ಶನ, ವಿಭೀಷಣ, ಹನುಮಂತ, ಲಕ್ಷ್ಮಣ, ಕುಂಭಕರ್ಣ, ಮೇಘನಾದ, ತರಣಿಸೇನ, ಸುಭದ್ರಾ, ದಾರುಕ, ಮೋಹಿನಿ, ಪಾರ್ಥ, ಭರತ, ಧರ್ಮಾಂಗದ, ನಾರದ, ಸುಧನ್ವ, ಬಬ್ರುವಾಹನ, ಶತ್ರುಪ್ರಸಾದನ, ನರಕಾಸುರ... ಹೀಗೆ ನಾನಾ ಪಾತ್ರಗಳನ್ನು ನಿರ್ವಹಿಸಿದವರ ಪೈಕಿ ಅನೇಕರು ಈಗ ಪ್ರಮುಖ ಮೇಳಗಳಲ್ಲಿ ವೇಷ ಹಾಕುತ್ತಿದ್ದಾರೆ. ಯಕ್ಷೋತ್ಸವ ಇದೆ ಎಂಬ ಕಾರಣದಿಂದಲೇ ಯಕ್ಷಗಾನ ಕಲಿಕೆಗೆ ಆಸಕ್ತಿ ತೋರಿದ ಎಂಜಿನಿಯರಿಂಗ್, ಮೆಡಿಕಲ್, ಮ್ಯಾನೇಜ್‌ಮೆಂಟ್ ಸೇರಿದಂತೆ ವಿವಿಧ ಕೋರ್ಸ್‌ಗಳ ವಿದ್ಯಾರ್ಥಿಗಳೂ ಇದ್ದಾರೆ.
ಯಕ್ಷೋತ್ಸವ ಆರಂಭಗೊಂಡದ್ದು 1992ರಲ್ಲಿ. ಅಂದಿನಿಂದ ಇಲ್ಲಿಯ ವರೆಗೆ ಹಲವು ಪ್ರಯೋಗಗಳನ್ನು ಕಂಡಿರುವ ಸ್ಪರ್ಧೆಯ ‘ಕಾಲಮಿತಿ’ ಎರಡು ವರ್ಷಗಳಿಂದ ತಂಡವೊಂದಕ್ಕೆ ಒಂದು ತಾಸು ಎಂಬ ಹಂತಕ್ಕೆ ತಲುಪಿದೆ. ‘ವಿದ್ಯಾರ್ಥಿಗಳ ಯಕ್ಷಗಾನ ಸ್ಪರ್ಧೆಯೊಂದು ಮೂರು ದಶಕಗಳಿಂದ ನಿರಂತರವಾಗಿ ನಡೆಯುತ್ತಿರುವುದು ಇಲ್ಲಿ ಮಾತ್ರ’ ಎನ್ನುತ್ತಾರೆ ಯಕ್ಷೋತ್ಸವದ ಸಂಚಾಲಕ ಪುಷ್ಪರಾಜ್.
‘ವಿದ್ಯಾರ್ಥಿಗಳು ಯಕ್ಷಗಾನದಿಂದ ವಿಮುಖರಾಗುತ್ತಿದ್ದಾರೆಂಬ ಆತಂಕದಿಂದ 1992ರಲ್ಲಿ ಅಂದಿನ ವಿದ್ಯಾರ್ಥಿ ನಾಯಕರಾಗಿದ್ದ ಕೆ.ಎಂ ನಟರಾಜ್ ಮತ್ತು ಮಹೇಶ ಕಜೆ ಆರಂಭಿಸಿದ್ದು ಯಕ್ಷೋತ್ಸವ. ಸತತ ಇಪ್ಪತ್ತೈದು ವರ್ಷಗಳ ಉತ್ಸವದ ನಂತರ ಇದನ್ನು ನಿಲ್ಲಿಸುವ ಯೋಚನೆಯೂ ಮೂಡಿತ್ತು. ಆಗ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಮುಂದುವರಿಸಲು ಸೂಚಿಸಿದರು. ಮೊದಲು ತಂಡವೊಂದರ ಗರಿಷ್ಠ ವೇಷಗಳ ಸಂಖ್ಯೆ ಎಂಟಕ್ಕೆ ಸೀಮಿತವಾಗಿತ್ತು. ಈಗ ಅದನ್ನು ಹತ್ತಕ್ಕೆ ಏರಿಸಲಾಗಿದೆ. ಪ್ರತಿ ವರ್ಷ ಕನಿಷ್ಠ ಹತ್ತು ತಂಡಗಳು ಭಾಗವಹಿಸುತ್ತಿವೆ. ಹಾಗೆ ಲೆಕ್ಕ ಹಾಕಿದರೆ ಇಲ್ಲಿಯವರೆಗೆ ಕಡಿಮೆ ಎಂದರೂ ಮೂರು ಸಾವಿರ ಕಲಾವಿದರಿಗೆ ಇಲ್ಲಿ ಅವಕಾಶ ಲಭಿಸಿದೆ’ ಎನ್ನುತ್ತಾರೆ ಪುಷ್ಪರಾಜ್.
ಚೀಟಿ ಎತ್ತುವ ಮೂಲಕ ಪ್ರತಿ ತಂಡಕ್ಕೆ ಪ್ರಸಂಗವನ್ನು ಯಕ್ಷೋತ್ಸವ ಸಮಿತಿಯೇ ಕೊಡುತ್ತದೆ. ಸ್ತ್ರೀ ವೇಷದ ಬ್ಲೌಸ್ ಹೊರತುಪಡಿಸಿ ಉಳಿದೆಲ್ಲ ವೇಷಗಳಿಗೆ ಪೋಷಾಕು ಸಮಿತಿಯದ್ದೇ. ಹಿಮ್ಮೇಳಕ್ಕೆ ಹೊರಗಿನ ಕಲಾವಿದರನ್ನು ಬಳಸಿಕೊಳ್ಳಲಾಗುತ್ತದೆ. ರಾಜವೇಷ, ಸ್ತ್ರೀ ವೇಷ, ಪುಂಡುವೇಷ, ಹಾಸ್ಯಗಾರ ಮತ್ತು ಬಣ್ಣದ ವೇಷ ಇರಲೇಬೇಕು. ಕಾಲೇಜುಗಳು ಮತ್ತು ಯಕ್ಷಗಾನ ತಜ್ಞರ ಸಭೆ ನಡೆಸಿ ಎಲ್ಲವನ್ನೂ ನಿರ್ಧರಿಸಲಾಗುತ್ತದೆ. ಬದಲಾವಣೆಗಳಿಗೆ ತಜ್ಞರ ಒಪ್ಪಿಗೆ ಪಡೆಯುವುದು ಕಡ್ಡಾಯ.
ಈ ಎಲ್ಲ ಸಿದ್ಧತೆ, ನಿರ್ಬಂಧಗಳ ತರುವಾಯ ಪ್ರದರ್ಶನಗೊಳ್ಳುವ ಪ್ರಸಂಗಗಳಲ್ಲಿ ವಿದ್ಯಾರ್ಥಿಗಳು ವೃತ್ತಿಪರ ಕಲಾವಿದರಂತೆಯೇ ಆಂಗಿಕಾಭಿನಯ, ಮಾತುಗಾರಿಕೆ, ನೃತ್ಯ ಮುಂತಾದ ಯಕ್ಷಗಾನದ ಎಲ್ಲ ಅಂಗಗಳನ್ನು ಪ್ರದರ್ಶಿಸಿ ಬೆರಗುಗೊಳಿಸುತ್ತಾರೆ. ಈ ಬಾರಿ ಸುದರ್ಶನ ವಿಜಯ, ತರಣಿಸೇನ ಕಾಳಗ, ಕೃಷ್ಣಾರ್ಜುನ ಕಲಾಪ, ರುಕ್ಮಾಂಗದ ಚರಿತ್ರೆ, ಸುಧನ್ವ ಮೋಕ್ಷ, ಬಬ್ರುವಾಹನ ಕಾಳಗ, ನರಕಾಸುರ ಮೋಕ್ಷ ಮುಂತಾದ ಪ್ರಸಂಗಗಳಲ್ಲಿ ಅದು ಬಿಂಬಿಸಿತ್ತು.
‘ಕಾಲೇಜು ಕಲಿಕೆಯ ಹೊರತಾದ ಕಲಾಪ್ರೀತಿ, ಯಕ್ಷಗಾನದ ಮೇಲಿನ ಸ್ವಯಂ ಅಭಿಮಾನ, ಸಜ್ಜಾಗಲು ಹಾಕುವ ಶ್ರಮ ಎಲ್ಲವೂ ಪ್ರತಿ ತಂಡದ ಪ್ರದರ್ಶನದ ಹಿಂದೆ ಲೆಕ್ಕಣಿಕೆಯಾಗಿ ನಿಲ್ಲುತ್ತದೆ. ಎಲ್ಲ ತಂಡಗಳೂ ಹತ್ತರಲ್ಲಿ ಹತ್ತು ಅಂಕಗಳನ್ನು ಗಳಿಸಲು ಸಮರ್ಥವಾಗಿವೆ. ಇಂಥ ಸ್ಪರ್ಧೆ ಯಕ್ಷಗಾನಕ್ಕೆ ಸಂಬಂಧಿಸಿ ದೊಡ್ಡ ಭಾಗ್ಯವೇ ಸರಿ’ ಎಂದು ತೀರ್ಪುಗಾರರಲ್ಲಿ ಒಬ್ಬರಾಗಿದ್ದ ನಾ.ಕಾರಂತ ಪೆರಾಜೆ ಅವರು ಆಡಿದ ಮಾತಿನಲ್ಲಿ ಯಕ್ಷೋತ್ಸವದ ಸಕಲವೂ ಅಡಗಿತ್ತು.
ಯಕ್ಷಗಾನ ಮೇಳಗಳಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ. ನಾನು ಮರೋಳಿ ಶ್ರೀ ಸೂರ್ಯನಾರಾಯಣ ಮಹಿಳಾ ಯಕ್ಷಗಾನ ಮಂಡಳಿಯ ಸದಸ್ಯೆ. ಅದರ ಮೂಲಕ ಪ್ರದರ್ಶನಗಳಲ್ಲಿ ಭಾಗವಹಿಸುತ್ತೇನೆ. ಯಕ್ಷೋತ್ಸವವದಲ್ಲಿ ಹಲವು ವರ್ಷಗಳಿಂದ ಪಾಲ್ಗೊಳ್ಳುತ್ತಿದ್ದೇನೆ. ಸಾರ್ವಜನಿಕವಾಗಿ ವೇಷ ಹಾಕಿ ಕುಣಿಯಲು ಈ ಸ್ಪರ್ಧೆ ನನಗೆ ಮತ್ತೊಂದು ಅವಕಾಶದ ಬಾಗಿಲು ತೆರೆದಿದೆ.-ರಶ್ಮಿತಾ ಮರೋಳಿ, ರಾಮನ ಪಾತ್ರ ಮಾಡಿದ ಎಲ್‌ಎಲ್‌ಎಂ ವಿದ್ಯಾರ್ಥಿನಿ
ದಶಕದಿಂದ ಯಕ್ಷಗಾನದಲ್ಲಿ ತೊಡಗಿಸಿಕೊಂಡಿದ್ದೇನೆ. ಚೆಂಡೆ ಮದ್ದಲೆ ವಾದನದ ಜೊತೆಯಲ್ಲಿ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಯಕ್ಷೋತ್ಸವದಲ್ಲಿ ಸಾಂಘಿಕವಾದ ಪ್ರಯತ್ನದ ಮೇಲೆಯೂ ಗಮನ ಇರಬೇಕಾಗುತ್ತದೆ. ಅದಕ್ಕೆ ತಕ್ಕಂತೆ ಅಭ್ಯಾಸ ಮಾಡಬೇಕಾಗುತ್ತದೆ.-ಅಜೇಯ ಸುಬ್ರಹ್ಮಣ್ಯ, ಮೂಡುಬಿದಿರೆ ಇಂದ್ರಜಿತು ಪಾತ್ರ ನಿರ್ವಹಿಸಿದ ವಿದ್ಯಾರ್ಥಿ
ಇಲ್ಲಿ ಹೆಣ್ಣುಮಕ್ಕಳು ಹೆಚ್ಚು ಭಾಗವಹಿಸುತ್ತಿರುವುದು ವಿಶೇಷ. ವಿವಿಧ ಕಾರಣಗಳಿಂದ ಹೆಣ್ಣುಮಕ್ಕಳಿಗೆ ಮೇಳಗಳಲ್ಲಿ ಪಾತ್ರ ಮಾಡಲು ಅವಕಾಶ ಇಲ್ಲ. ಆದ್ದರಿಂದ ಸಾರ್ವಜನಿಕವಾಗಿ ಅವರ ಪ್ರತಿಭೆ ಬೆಳಗುವುದಿಲ್ಲ. ಯಕ್ಷೋತ್ಸವ ಅವರಿಗೆ ಉತ್ತಮ ವೇದಿಕೆ. ಕರಾವಳಿಯ ವಿಶಿಷ್ಟ ಕಲೆಯನ್ನು ಉಳಿಸಲು ಯಕ್ಷೋತ್ಸವವೂ ನೆರವಾಗುತ್ತಿದೆ ಎಂಬುದು ಖುಷಿಯ ವಿಷಯ.-ಪುಷ್ಪರಾಜ್, ಯಕ್ಷೋತ್ಸವದ ಸಂಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.