ನಂದಿನಿ ಗುಪ್ತಾ– ವಿಶೇಷ ವಿನ್ಯಾಸದ ಉಡುಗೆ
ಹೈದರಾಬಾದ್: ವಿಶ್ವ ಸುಂದರಿ ಸ್ಪರ್ಧೆಯ 72ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆ ಇಂದು (ಶನಿವಾರ) ನಡೆಯುತ್ತಿದ್ದು, ಈ ನಡುವೆ 'ಮಿಸ್ ಇಂಡಿಯಾ' ನಂದಿನಿ ಗುಪ್ತಾ ಅವರು ಫಿನಾಲೆಗಾಗಿ ವಿಶೇಷ ವಿನ್ಯಾಸದ ಉಡುಗೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಂದಿನಿ ಗುಪ್ತಾ, ಫಿನಾಲೆಗಾಗಿ ಗೌನ್ ಅನ್ನು ವಿಯೆಟ್ನಾಮೀಸ್ ಫ್ಯಾಷನ್ ಡಿಸೈನರ್ ವಿನ್ಯಾಸಗೊಳಿಸಿರಬಹುದು. ಆದರೆ ಈ ವಿಶೇಷ ವಿನ್ಯಾಸದ ಉಡುಗೆಯು ಗಂಗಾ ನದಿಯ ಪ್ರತೀಕ ಮತ್ತು ದೈವಿಕತೆಯ ಸಂಕೇತವಾಗಿದೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ವಿಶೇಷ ವಿನ್ಯಾಸದ ಗೌನ್, 'ನೀರು ಮತ್ತು ಬೆಳಕಿನ ಅಲೌಕಿಕ ಸೌಂದರ್ಯದ ಪ್ರತಿಬಿಂಬವಾಗಿದೆ. ಗಂಗಾ ಕೇವಲ ನದಿಯಲ್ಲ. ಶುದ್ಧೀಕರಣ, ನವೀಕರಣದ ಕೊಂಡಿಯಾಗಿದೆ' ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
'ಬೆಳಗಿನ ಮಂಜಿನಂತೆ ಸೂಕ್ಷ್ಮವಾದ ಅರೆಪಾರದರ್ಶಕ ಬಟ್ಟೆಗಳಿಂದ ರಚಿಸಲಾದ ಈ ಗೌನ್, ಹರಿಯುವ ನೀರಿನ ಅಲೆಯಂತೆ ಭಾಸವಾಗುತ್ತದೆ. ಇದು ಸೌಂದರ್ಯಕ್ಕೆ ಮತ್ತಷ್ಟು ಸೊಬಗನ್ನು ಸಂಯೋಜಿಸುತ್ತದೆ' ಎಂದು ಗುಪ್ತಾ ಹೇಳಿದ್ದಾರೆ.
ಸುಮಾರು ಒಂದು ತಿಂಗಳಿನಿಂದ ನಡೆದ ವಿವಿಧ ಕಾರ್ಯಕ್ರಮಗಳ ಬಳಿಕ ತೆಲಂಗಾಣದ ಹೈಟೆಕ್ಸ್ ಎಕ್ಸಿಬಿಷನ್ ಸೆಂಟರ್‌ನಲ್ಲಿ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಜಗತ್ತಿನ ವಿವಿಧ ದೇಶಗಳ 108 ಸುಂದರಿಯರು ಸ್ಪರ್ಧೆಯಲ್ಲಿದ್ದಾರೆ.
ವಿಶ್ವ ಸುಂದರಿ ಸ್ಪರ್ಧೆಯು ಸೌಂದರ್ಯ, ಒಗ್ಗಟ್ಟು ಮತ್ತು ನಿರ್ದಿಷ್ಟ ಉದ್ದೇಶದ ಅದ್ಭುತ ಕಾರ್ಯಕ್ರಮವಾಗಿದೆ ಎನ್ನುತ್ತಾರೆ ಆಯೋಜಕರು.
ಕಳೆದ ವರ್ಷ ಮುಂಬೈನಲ್ಲಿ ನಡೆದಿದ್ದ ಗ್ರ್ಯಾಂಡ್ ಫಿನಾಲೆಯಲ್ಲಿ 71ನೇ ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದ ಕ್ರಿಸ್ಟಿನಾ ಪಿಸ್ಕೋವಾ ಅವರು ಹೊಸ ವಿಶ್ವ ಸುಂದರಿಗೆ ಕಿರೀಟ ತೊಡಿಸಲಿದ್ದಾರೆ.
ಭಾರತದಿಂದ ಮಿಸ್ ಇಂಡಿಯಾ ವಿಜೇತೆ ನಂದಿನಿ ಗುಪ್ತಾ ಟಾಪ್ 40 ಕ್ವಾರ್ಟರ್ ಫೈನಲಿಸ್ಟ್ ಹಾಗೂ ಏಷ್ಯಾ ಪ್ರದೇಶದ ಮೊದಲ ಹತ್ತರಲ್ಲಿ ಒಬ್ಬರಾಗಿ ಸ್ಥಾನ ಪಡೆದಿದ್ದಾರೆ.
1996 ಹಾಗೂ 2024ರ ನಂತರ ಭಾರತವು ಮೂರನೇ ಬಾರಿಗೆ ಪ್ರತಿಷ್ಠಿತ ಸ್ಪರ್ಧೆಯ ಆತಿಥ್ಯ ವಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.