
ಸಂಗ್ರಹ ಚಿತ್ರ
ಬೆಂಗಳೂರು: ಮೈಸೂರು ಸ್ಕಿಲ್ ಸೀರೆಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲೂ ಸೀರೆ ವಿಚಾರ ಚರ್ಚೆಯಾಗುತ್ತಿದೆ.
ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್ (ಕೆಎಸ್ಐಸಿ) ಮಳಿಗೆಗಳ ಎದುರು ಮಹಿಳೆಯರು ಮುಂಜಾನೆಯಿಂದಲೇ ಜಮಾಯಿಸುತ್ತಿದ್ದಾರೆ ಎಂದು ನೆಟ್ಟಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಸೀರೆಗಳ ಪೂರೈಕೆ ಕಡಿಮೆಯಾಗಿರುವುದೇ ಡಿಮ್ಯಾಂಡ್ ಹೆಚ್ಚಳಕ್ಕೆ ಕಾರಣ. ಹೀಗಾಗಿ, ಗಂಟೆಗಟ್ಟಲೇ ಕಾದರೂ ಸೀರೆ ಸಿಗುತ್ತದೆ ಎನ್ನುವ ಭರವಸೆಯೇ ಇಲ್ಲದಂತಾಗಿದೆ ಎಂದು ರಾಕೇಶ್ ಕೃಷ್ಣ ಸಿಂಹ ಎಂಬವರು ಎಕ್ಸ್/ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಬೆಳಿಗ್ಗೆ 10 ಗಂಟೆಗೆ ತೆರೆಯುವ ಕೆಎಸ್ಐಸಿ ಮಳಿಗೆಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ಮಹಿಳೆಯರು ಮುಂಜಾನೆ 4 ಗಂಟೆಯಿಂದಲೇ ಕಾಯುತ್ತಾರೆ. ಟೋಕನ್ ತೆಗೆದುಕೊಂಡು ಕಾಯುವ ಮಹಿಳೆಯರಿಗೆ ತಾಳ್ಮೆ ಪರೀಕ್ಷೆಯಾಗುತ್ತಿದೆ ಎಂದೂ ವಿವರಿಸಿದ್ದಾರೆ.
ಮೈಸೂರು ಸೀರೆಗಳು ಯಾಕಿಷ್ಟು ದುಬಾರಿ!
ವಿಶೇಷ ವಿನ್ಯಾಸದ ಕೆಎಸ್ಐಸಿ ಸೀರೆಗಳು 20 ಸಾವಿರದಿಂದ ₹ 2.5 ಲಕ್ಷದವರೆಗೂ ಬೆಲೆ ಹೊಂದಿದೆ. ಮೈಸೂರು ರೇಷ್ಮೆ ಸೀರೆಗಳು ದುಬಾರಿಯಾದರೂ ಅವುಗಳ ಗುಣಮಟ್ಟ, ಶುದ್ಧತೆ ಮತ್ತು ಪಾರಂಪರೆಯಿಂದಾಗಿ ಹೆಚ್ಚು ಬೇಡಿಕೆ ಸೃಷ್ಟಿಸಿವೆ. ಮೈಸೂರು ರೇಷ್ಮೆ ಸೀರೆಯನ್ನು ಉತ್ಪಾದಿಸುವ ಕೆಎಸ್ಐಸಿಯು ಜಿಐ ಟ್ಯಾಗ್ (ಜಿಯೋಗ್ರಾಫಿಕಲ್ ಇಂಡಿಕೇಷನ್ ಟ್ಯಾಗ್) ಪಡೆದಿರುವ ಏಕೈಕ ಸಂಸ್ಥೆಯಾಗಿದೆ.
ಬೇಡಿಕೆ ಹೆಚ್ಚು, ಪೂರೈಕೆ ಕಡಿಮೆ
ಸೀರೆ ಬೆಲೆ ದುಬಾರಿಯಾದರೂ ಮಹಿಳೆಯರಿಗೆ ಕೆಎಸ್ಐಸಿ ಸೀರೆ ಪ್ರೀತಿ ಹೆಚ್ಚಾಗಿದೆ. ಮೊದಲು ಸರ್ಕಾರಿ ಸಂಸ್ಥೆಗಳ ಮಹಿಳೆಯರು ಹೆಚ್ಚಾಗಿ ಖರೀದಿಸುತ್ತಿದ್ದರು. ಕಳೆದ ಕೆಲವು ವರ್ಷದಿಂದ ಈ ಟ್ರೆಂಡ್ ಬದಲಾಗಿದೆ. ಮಹಿಳೆಯರಿಗಂತೂ ಎಂಗೇಜ್‌ಮೆಂಟ್, ನಾಮಕರಣ, ಹುಟ್ಟುಹಬ್ಬ, ಮದುವೆ ಹೀಗೆ ಯಾವುದೇ ಸಮಾರಂಭಕ್ಕೂ ಕೆಎಸ್ಐಸಿ ಮೈಸೂರು ಸಿಲ್ಕ್ ಸೀರೆಗಳೇ ಬೇಕು. ನಾನು ಕೆಎಸ್ಐಸಿ ಮಳಿಗೆಗೆ ಹೋಗಿದ್ದೆ, ನನ್ನಿಷ್ಟದ ಸೀರೆ ತೆಗೆದುಕೊಂಡೆ ಎಂದು ರೀಲ್ಸ್ ಮಾಡಿ ಹಾಕುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ರೀಲ್ಸ್ ಮಾಡಿದ ಮಹಿಳೆಯರು ಅಕ್ಕ–ಪಕ್ಕದ ಮನೆಯವರಿಗಂತೂ ಹೇಳುವುದು ಖಾಯಂ. ಹೀಗಾಗಿಯೇ ಇತ್ತೀಚೆಗೆ ಕೆಎಸ್ಐಸಿ ಸೀರೆ ಹೆಚ್ಚು ಡಿಮ್ಯಾಂಡ್ ಸೃಷ್ಟಿಸಿದೆ.
ಸಿಬ್ಬಂದಿ ಕೊರತೆಯಿಂದಾಗಿ ಮೈಸೂರು ಸಿಲ್ಕ್ ಸೀರೆಗಳ ಉತ್ಪಾದನೆ ಕುಸಿದಿದೆ. ಅಪ್ಪಟ ರೇಷ್ಮೆ ಮತ್ತು ಶುದ್ಧ ಚಿನ್ನದ ಜರಿ ಬಳಸುವ ಕಾರಣದಿಂದಾಗಿ ಪ್ರತಿ ಸೀರೆಯ ತಯಾರಿಕೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಬೇಡಿಕೆಗೆ ತಕ್ಕಷ್ಟು ಸೀರೆಗಳನ್ನು ತಯಾರಿಸಲು ಹಾಗೂ ಪೂರೈಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.