ಮಾಲಿನಿ ಎಲ್.ತಂತ್ರಿ ಮತ್ತು ನಳಿನ್ ಕುಮಾರ್
ಭಾರತವು ಈಗ ಕವಲುದಾರಿಯಲ್ಲಿದೆ. ಒಂದೆಡೆ, ಜಾಗತಿಕ ಮಟ್ಟದಲ್ಲಿ ಪ್ರಮುಖ ರಾಷ್ಟ್ರ ಎಂಬ ಹೆಗ್ಗುರುತನ್ನು ಪಡೆದಿದ್ದರೆ, ಮತ್ತೊಂದೆಡೆ, ದೇಶೀಯ ಮಟ್ಟದಲ್ಲಿ ಅನುಷ್ಠಾನಗಳ ವಿಚಾರದಲ್ಲಿರುವ ತೊಡಕುಗಳ ನಿವಾರಣೆಗೆ ಮಾರ್ಗಗಳನ್ನು ಹುಡುಕುತ್ತಿದೆ. ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿಯೂ ಇಂತಹ ವೈರುಧ್ಯ ಇದೆ.
ಭಾರತವು ಜನಸಂಖ್ಯೆಯ ಸ್ವರೂಪದಲ್ಲಿ ಬದಲಾವಣೆಗಳನ್ನು ಕಾಣುತ್ತಿದೆ. ಇದೇ ಹೊತ್ತಿಗೆ, ಜನಪ್ರಿಯ ನಿರೀಕ್ಷೆಗಳಿಗೆ ವಿರುದ್ಧವಾಗಿ, ದೇಶದಲ್ಲಿ ಮಹಿಳೆಯರು ಉದ್ಯೋಗಗಳಲ್ಲಿ ಪಾಲ್ಗೊಳ್ಳುತ್ತಿರುವ ಪ್ರಮಾಣವು ನಿಧಾನವಾಗಿ ಕುಸಿಯುತ್ತಿದೆ. ಮತ್ತಷ್ಟು ಆತಂಕಕಾರಿಯಾದ ವಿಚಾರವೇನೆಂದರೆ, ಎಸ್‌ಟಿಇಎಮ್ (STEM) ವಿಭಾಗಗಳಲ್ಲಿ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತಕ್ಕೆ ಸಂಬಂಧಿಸಿದ ಶಿಕ್ಷಣ, ಉದ್ಯೋಗ) ಮಹಿಳೆಯರ ದಾಖಲಾತಿಯ ಪ್ರಮಾಣವು ಶೇ 43 ಆಗಿದ್ದರೆ, ಉದ್ಯೋಗ ಮಾಡುತ್ತಿರುವವರ ಪ್ರಮಾಣ ಕೇವಲ ಶೇ 29ರಷ್ಟಿದೆ.
ಇದೇ ಕಾಲಕ್ಕೆ, ಕಳೆದ ಹತ್ತು ವರ್ಷಗಳಿಂದ, ದೇಶದ ಲಿಂಗಾನುಪಾತವು (ಹುಟ್ಟಿನ ಆಧಾರದಲ್ಲಿ–ಎಸ್‌ಆರ್‌ಬಿ) ಉತ್ತಮಗೊಂಡಿದೆ. 2014–15ರಲ್ಲಿ 918 ಇದ್ದ ಲಿಂಗ ಅನುಪಾತವು 2023–24ರಲ್ಲಿ 930ಕ್ಕೆ ಏರಿಕೆಯಾಗಿದೆ. ಜತೆಗೆ, 2014–16ರಲ್ಲಿ ಒಂದು ಲಕ್ಷಕ್ಕೆ 130 ತಾಯಂದಿರು (ಎಂಎಂಆರ್) ಸಾಯುತ್ತಿದ್ದರು. 2018–20ರ ಹೊತ್ತಿಗೆ ದೇಶದಲ್ಲಿ ತಾಯಂದಿರ ಮರಣ ಪ್ರಮಾಣವು ಒಂದು ಲಕ್ಷಕ್ಕೆ 97 ಆಗಿದೆ. ಈ ಬಾರಿಯ ಆರ್ಥಿಕ ಸಮೀಕ್ಷೆಯಲ್ಲಿ ಹೇಳಿರುವಂತೆ, ತಾಯಂದಿರ ಮರಣ ಪ್ರಮಾಣದ ಇಳಿಕೆಯ ಶ್ರೇಯವು ಮಹಿಳೆಯರಿಗಾಗಿ ಬಜೆಟ್‌ನಲ್ಲಿ ಹೆಚ್ಚು ಅನುದಾನ (ಕಳೆದ ಹತ್ತು ವರ್ಷಗಳಲ್ಲಿ ಶೇ 218.8) ನೀಡಿದ್ದಕ್ಕೆ ಸಲ್ಲಬೇಕು.
‘ವಿಕಸಿತ ಭಾರತ’ ಸಾಧ್ಯವಾಗಬೇಕು ಎಂದರೆ, ಬಡವರು, ಅನ್ನದಾತರ ಜತೆಗೆ ಮಹಿಳೆಯರು ಮತ್ತು ಯುವ ಜನತೆಯ ಅಭಿವೃದ್ಧಿ ಆಗಬೇಕು ಎಂದು ಈ ಬಾರಿಯ ಬಜೆಟ್‌ನಲ್ಲಿಯೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ್ದಾರೆ. ಆದರೆ, ಮಹಿಳೆಯರಿಗಾಗಿ ಮಧ್ಯಂತರ ಬಜೆಟ್‌ನಲ್ಲಿ ಇದ್ದಂತಹ ನಿರ್ದಿಷ್ಟ ಯೋಜನೆಗಳು ಈ ಬಜೆಟ್‌ನಲ್ಲಿ ಕಾಣುತ್ತಿಲ್ಲ. ಮಹಿಳಾ ಹಾಸ್ಟೆಲ್‌ಗಳು, ಶಿಶು ಆರೈಕೆ ಕೇಂದ್ರಗಳು, ಮಹಿಳೆಯರಿಗಾಗಿಯೇ ಕೌಶಲ ತರಬೇತಿ ಯೋಜನೆ ಕೈಗೊಳ್ಳಲು ಭಾಗೀದಾರಿಕೆ ಮತ್ತು ಮಹಿಳಾ ಸ್ವಸಹಾಯ ಗುಂಪುಗಳಿಗೆ ಮಾರುಕಟ್ಟೆ ಸೃಷ್ಟಿಗೆ ಉತ್ತೇಜನ ನೀಡುವುದು ಸೇರಿದಂತೆ ಹಲವು ಕಾರ್ಯಕ್ರಮಗಳ ಪ್ರಸ್ತಾವ ಮಾಡಲಾಗಿತ್ತು.
ಉದ್ಯಮದ ಅಗತ್ಯಕ್ಕೆ ತಕ್ಕಂತೆ ಕೋರ್ಸ್‌ಗಳನ್ನು ಪುನರ್ ಸಂಯೋಜಿಸುವುದು ಉತ್ತಮ ನಡೆಯಾಗಿದ್ದು, ಇದರಿಂದ ಯುವಜನರು, ವಿಶೇಷವಾಗಿ ಮಹಿಳೆಯರು, ಉದ್ಯೋಗ ಪಡೆಯುವ ಸಾಧ್ಯತೆ ಹೆಚ್ಚಾಗಲಿದೆ. ಜತೆಗೆ, ಮಹಿಳೆಯರ ಅಭಿವೃದ್ಧಿಗಾಗಿ ₹3 ಲಕ್ಷ ಕೋಟಿಗೂ ಹೆಚ್ಚಿನ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದ್ದು, ಅವು ಮಹಿಳೆಯರು ಮತ್ತು ಬಾಲಕಿಯರಿಗೆ ನೆರವಾಗಲಿವೆ ಎನ್ನಲಾಗಿದೆ. ಆದರೆ, ಈ ಪೈಕಿ ಎಷ್ಟು ಮೊತ್ತ ಶಿಕ್ಷಣ, ಆರೋಗ್ಯ (ಆಶಾ, ಅಂಗನವಾಡಿ) ಕೌಶಲ್ಯಾಭಿವೃದ್ಧಿ ಮತ್ತು ಸುರಕ್ಷತೆಗೆ ವಿನಿಯೋಗವಾಗಲಿದೆ ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲ.
ಹಣಕಾಸು ಸಚಿವರು ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯಗಳ ಪಾತ್ರದ ಬಗ್ಗೆ ಒತ್ತಿ ಹೇಳಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಏಕೆಂದರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ಅಂಗನವಾಡಿಗಳ ನಿರಾಶಾದಾಯಕ ಪರಿಸ್ಥಿತಿಯ ಬಗ್ಗೆ ಅಧ್ಯಯನಗಳು ಬೆಳಕು ಚೆಲ್ಲಿದ್ದು, ಗಮನಾರ್ಹ ಅನುದಾನದ ನಡುವೆಯೂ ಸಕ್ಷಮ ಅಂಗನವಾಡಿ ಮತ್ತು ಪೋಷಣ್–2 ಕಾರ್ಯಕ್ರಮದ ಕಳಪೆ ಸಾಧನೆಯತ್ತ ಬೆಟ್ಟು ಮಾಡುತ್ತಿವೆ. ಬಜೆಟ್ ಉತ್ತಮವಾಗಿದ್ದರೂ, ರಾಜ್ಯಗಳಲ್ಲಿ ಅವುಗಳ ಅನುಷ್ಠಾನ ಯಾವಾಗಲೂ ಉತ್ತಮವಾಗಿಯೇನೂ ಇರುವುದಿಲ್ಲ. ಅಂಗನವಾಡಿಗಳು ಉತ್ತಮ ಸ್ಥಿತಿಯಲ್ಲಿರಬೇಕು. ಏಕೆಂದರೆ, ಬದುಕು ಆರಂಭವಾಗುವುದೇ ಅಲ್ಲಿ.
ಮಾಲಿನಿ ಅವರು ಬೆಂಗಳೂರಿನ ಐಸೆಕ್‌ನಲ್ಲಿ ಸಹ ಪ್ರಾಧ್ಯಾಪಕಿಯಾಗಿದ್ದರೆ, ನಳಿನ್ ಕುಮಾರ್ ಅವರು ಬೆಂಗಳೂರು ಪಿಇಎಸ್ ವಿವಿಯಲ್ಲಿ ಪ್ರಾಧ್ಯಾಪಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.