2019–25 ಬಜೆಟ್ ದಿನ ನಿರ್ಮಲಾ ಸೀತಾರಾಮನ್ ಉಟ್ಟ ಸೀರೆಗಳು
ಈ ವರ್ಷ ಫೆಬ್ರುವರಿ 1 ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಫೆ.1 ರಜಾದಿನವಾದ ಭಾನುವಾರವಾದರೂ ಈ ಬಾರಿ ಬಜೆಟ್ ಮಂಡನೆಯಾಗುತ್ತಿದೆ. 2019ರಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಈ ಬಾರಿ ಸತತ 9ನೇ ಬಾರಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದಾರೆ. ಪ್ರತಿ ಬಾರಿ ಬಜೆಟ್ ಮಂಡನೆಗೆ ಬರುವಾಗ ನಿರ್ಮಲಾ ಅವರು ಯಾವ ರಾಜ್ಯವನ್ನು ಪ್ರತಿನಿಧಿಸುವ ವಿಶೇಷ ಸೀರೆ ಉಡುತ್ತಾರೆ ಎನ್ನುವ ಕುತೂಹಲ ಮೂಡುತ್ತದೆ.
ಈವರೆಗೆ ಬಜೆಟ್ ಮಂಡನೆ ದಿನ ನಿರ್ಮಲಾ ಸೀತಾರಾಮನ್ ಅವರು ಉಟ್ಟ ಸೀರೆಗಳ ವಿಶೇಷತೆಯೇನು ಎನ್ನುವ ಮಾಹಿತಿ ಇಲ್ಲಿದೆ.
2019ರಲ್ಲಿ ಮೊದಲ ಬಾರಿ ಬಜೆಟ್ ಮಂಡನೆ
ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ವಿತ್ತ ಸಚಿವೆಯಾಗಿ 2019ರಲ್ಲಿ ನಿರ್ಮಲಾ ಸೀತಾರಾಮನ್ ಅವರು ಮೊದಲ ಬಾರಿ ಬಜೆಟ್ ಮಂಡನೆ ಮಾಡಿದ್ದರು. ಈ ವೇಳೆ ಗುಲಾಬಿ ಬಣ್ಣದ, ಬಂಗಾರದ ಅಂಚಿನ ಮಂಗಳಗಿರಿ ಸಿಲ್ಕ್ ಸೀರೆಯನ್ನು ಧರಿಸಿದ್ದರು. ಅದು ಆಂಧ್ರಪ್ರದೇಶದಲ್ಲಿ ಕೈಮಗ್ಗದಲ್ಲಿ ತಯಾರಾಗುವ ಸಾಂಪ್ರದಾಯಿಕ ಸೀರೆಯಾಗಿದೆ.
2020ರಲ್ಲಿ
ಎರಡನೇ ಬಾರಿ 2020ರಲ್ಲಿ ಹಸಿರು/ನೀಲಿ ಅಂಚಿನಿಂದ ಕೂಡಿರುವ ಹಳದಿ ಬಣ್ಣದ ರೇಷ್ಮೆ ಸೀರೆ ಧರಿಸಿದ್ದರು.
2021ರಲ್ಲಿ
2021ರ ಆಯವ್ಯಯ ಮಂಡನೆಗೆ ನಿರ್ಮಲಾ ಸೀತಾರಾಮನ್ ಅವರು ಕೆಂಪು ಮತ್ತು ಬಿಳಿ ಬಣ್ಣದ ಪೋಚಂಪಲ್ಲಿ ರೇಷ್ಮೆ ಸೀರೆಯನ್ನು ಧರಿಸಿದ್ದರು. ಈ ಸೀರೆ ತೆಲಂಗಾಣದ ಪರಂಪರೆ ಮತ್ತು ಸಾಂಪ್ರದಾಯಿಕ ನೇಯ್ಗೆಯನ್ನು ಸೂಚಿಸಿತ್ತು.
2022ರಲ್ಲಿ
ನಿರ್ಮಲಾ ಸೀತಾರಾಮನ್ ಅವರು 2022ರಲ್ಲಿ ಕಂದು ಮತ್ತು ಬಿಳಿ ಬಣ್ಣದ ಬೊಮ್ಕೈ ಸೀರೆಯನ್ನು ಧರಿಸಿದ್ದರು. ಈ ಸೀರೆಯು ಒಡಿಶಾದಲ್ಲಿ ಕೈಮಗ್ಗದ ಮೂಲಕ ತಯಾರಾಗಿದ್ದು, ಪ್ರಾದೇಶಿಕ ನೇಯ್ಗೆ, ಸಾಂಸ್ಕೃತಿಕ ವೈಭವವದ ಸೂಚಕವಾಗಿತ್ತು.
2023ರಲ್ಲಿ
ಕಪ್ಪು ಬಣ್ಣದ ಅಂಚಿನ ಸಂಕೀರ್ಣ ಕಸೂತಿಯಿಂದ ಕೂಡಿದ ಕೆಂಪು ಬಣ್ಣದ ರೇಷ್ಮೆ ಸೀರೆಯನ್ನು 2023ರಲ್ಲಿ ನಿರ್ಮಲಾ ಸೀತಾರಾಮನ್ ಅವರು ಧರಿಸಿದ್ದರು. ಈ ಸೀರೆ ಕರ್ನಾಟಕದ ಧಾರವಾಡದಲ್ಲಿ ತಯಾರಾಗಿದ್ದು, ನವಲಗುಂದ ಕಸೂತಿ ಶೈಲಿಯನ್ನು ಒಳಗೊಂಡಿತ್ತು. ಧಾರವಾಡ ನಗರದ ನಾರಾಯಣಪುರದಲ್ಲಿ ಇರುವ ಆರತಿ ಹಿರೇಮಠ ಮಾಲೀಕತ್ವದ ಆರತಿ ಕ್ರಾಪ್ಟ್ಸ್‌ನ ಮಹಿಳೆಯರು ರೂಪಿಸಿದ್ದರು.
2024ರ ಮಧ್ಯಂತರ ಬಜೆಟ್
2024ರಲ್ಲಿ ನಡೆದ ಮಧ್ಯಂತರ ಬಜೆಟ್‌ನ ಸಂದರ್ಭದಲ್ಲಿ ಕಾಂತ ಕಸೂತಿ ಶೈಲಿಯ ನೀಲಿ ಟಸ್ಸರ್ ರೇಷ್ಮೆಯನ್ನು ಧರಿಸಿದ್ದರು. ಈ ಸೀರೆ ಪಶ್ಚಿಮ ಬಂಗಾಳದ ಕರಕುಶಲ ಶೈಲಿಯನ್ನು ಹೊಂದಿದ್ದು, ಕೈಮಗ್ಗದಿಂದ ತಯಾರಿಸಿದ ಸೀರೆಯಾಗಿದೆ.
2024/25ರ ಪೂರ್ಣ ಪ್ರಮಾಣದ ಬಜೆಟ್
2024-25ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸುವಾಗ, ನಿರ್ಮಲಾ ಸೀತಾರಾಮನ್ ಅವರು ನೇರಳೆ ಮತ್ತು ಚಿನ್ನದ ಬಣ್ಣದ ಅಂಚನ್ನು ಹೊಂದಿರುವ ಬಿಳಿ ಬಣ್ಣದ ಕೈಮಗ್ಗದ ರೇಷ್ಮೆ ಸೀರೆಯನ್ನು ಧರಿಸಿದ್ದರು.
2025ರಲ್ಲಿ
ಕಳೆದ ವರ್ಷ 2025ರಲ್ಲಿ ನಿರ್ಮಲಾ ಅವರು ಮಧುಬನಿ ಕಲೆಯುಳ್ಳ ಸೀರೆಯನ್ನು ಧರಿಸಿದ್ದರು. ಈ ಸೀರೆಯನ್ನು ನಿರ್ಮಲಾ ಅವರಿಗೆ ಪದ್ಮ ಪ್ರಶಸ್ತಿ ಪುರಸ್ಕೃತ ದುಲಾರ ದೇವಿಯವರು ಉಡುಗೊರೆ ನೀಡಿದ್ದರು. ಚಿನ್ನದ ಬಣ್ಣದ ಅಂಚಿನಿಂದ ಕೂಡಿದ್ದ ಕೈಮಗ್ಗದ ಈ ಸೀರೆ ಬಿಹಾರದ ಮಿಥಿಲಾ ಕಲಾ ಸಂಪ್ರದಾಯವನ್ನು ಪ್ರತಿನಿಧಿಸಿತ್ತು. ಅಲ್ಲದೆ ಸೀರೆಯ ಮೇಲೆ ಮೀನಿನ ಚಿತ್ರಗಳು ಭಾರತದ ಜವಳಿ ಪರಂಪರೆಯ ಪ್ರಾದೇಶಿಕ ಕುಶಲಕರ್ಮಿಗಳ ಕರಕುಶಲತೆಯ ಸೂಚಕವಾಗಿತ್ತು.
ತಮಿಳುನಾಡಿನ ಮೂಲದವರಾದ ನಿರ್ಮಲಾ ಸೀತಾರಾಮನ್ ಅವರು, ಈ ಬಾರಿ ಚುನಾವಣೆಯೂ ಇರುವ ಕಾರಣ 2026ನೇ ಸಾಲಿನ ಬಜೆಟ್ ಮಂಡನೆಗೆ ತಮಿಳುನಾಡಿನ ಸಾಂಪ್ರದಾಯಿಕ ಶೈಲಿಯ ಸೀರೆಯನ್ನು ಉಟ್ಟು ಬರಲಿದ್ದಾರೋ ಅಥವಾ ಪಶ್ಚಿಮ ಬಂಗಾಳದ ಚುನಾವಣೆಯನ್ನು ಗಮನದಲ್ಲಿಟ್ಟು ಸೀರೆಯನ್ನು ಧರಿಸುತ್ತಾರೋ ಎನ್ನುವ ಚರ್ಚೆ ಆರಂಭವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.