ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಇಲಾಖೆ ರಾಜ್ಯ ಖಾತೆ ಸಚಿವ ಪಂಕಜ್ ಚೌಧರಿ ಹಾಗೂ ಇತರ ಅಧಿಕಾರಿಗಳೊಂದಿಗೆ ಹಣಕಾಸು ಸಚಿವಾಲಯದ ಹೊರಗೆ
ಪಿಟಿಐ ಚಿತ್ರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ.
ಸತತ 8ನೇ ಬಜೆಟ್ ಮಂಡನೆಗೆ ಸಜ್ಜಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಮಧುಬನಿ ಕಲೆ ಇರುವ ಸೀರೆಯನ್ನು ಧರಿಸಿ ಸಂಸತ್ ಭವನದತ್ತ ಹೆಜ್ಜೆ ಇಟ್ಟಿದ್ದಾರೆ.
ಆ ಮೂಲಕ ಅವರು ಮಧುಬನಿ ಕಲೆ ಮತ್ತು ಪದ್ಮ ಪ್ರಶಸ್ತಿ ಪುರಸ್ಕೃತೆ ದುಲಾರಿ ದೇವಿ ಅವರಿಗೆ ಗೌರವ ಸಲ್ಲಿಸಿದ್ದಾರೆ.
ನಿರ್ಮಲಾ ಅವರು ಇತ್ತೀಚೆಗೆ ಮಿಥಿಲಾ ಆರ್ಟ್ ಇನ್‌ಸ್ಟಿಟ್ಯೂಟ್‌ಗೆ ಹೋಗಿದ್ದಾಗ, ದುಲಾರಿ ದೇವಿ ಅವರನ್ನು ಭೇಟಿಯಾಗಿದ್ದರು. ಬಿಹಾರದಲ್ಲಿ ಮಧುಬನಿ ಕಲೆಯ ಕುರಿತು ಆತ್ಮೀಯವಾಗಿ ಮಾತುಕತೆ ನಡೆಸಿದ್ದರು. ಇದೇ ವೇಳೆ ದುಲಾರಿ ದೇವಿ ಅವರು ಸಚಿವೆಗೆ ಸೀರೆಯನ್ನು ನೀಡಿ, ಬಜೆಟ್ ದಿನ ಅದನ್ನು ಧರಿಸುವಂತೆ ಮನವಿ ಮಾಡಿದ್ದರು.
ಕೆನೆ ಬಣ್ಣ, ಚಿನ್ನ ವರ್ಣದ ಅಂಚು ಹೊಂದಿರುವ ಈ ಸೀರೆಯ ಮೇಲೆ ಮಧುಬನಿ ಕಲೆಯ ಚಿತ್ತಾರವಿದೆ.
ದುಲಾರಿ ದೇವಿ ಅವರಿಗೆ 2021ರಲ್ಲಿ ಪದ್ಮಶ್ರೀ ಗೌರವ ನೀಡಲಾಗಿದೆ.
ರಾಷ್ಟ್ರಪತಿ ಭವನದಲ್ಲಿ ನಿರ್ಮಲಾ
ಬಜೆಟ್ ಮಂಡನೆಗೂ ಮುನ್ನ, ಸಚಿವೆ ನಿರ್ಮಲಾ ಅವರು ಹಣಕಾಸು ಇಲಾಖೆ ರಾಜ್ಯ ಖಾತೆ ಸಚಿವ ಪಂಜಕ್ ಚೌಧರಿ ಅವರೊಂದಿಗೆ ರಾಷ್ಟ್ರಪತಿ ಭವನಕ್ಕೆ ತೆರಳಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.