ADVERTISEMENT

ಧನತ್ರಯೋದಶಿ: ರಾಜ್ಯದಲ್ಲಿ 6 ಸಾವಿರ KG ಚಿನ್ನ ಮಾರಾಟ, ₹7 ಸಾವಿರ ಕೋಟಿ ವಹಿವಾಟು

ಕಳೆದ ವರ್ಷಕ್ಕೆ ಹೋಲಿಸಿದರೆ ಚಿನ್ನ ಮಾರಾಟದಲ್ಲಿ ಶೇ 30ರಷ್ಟು ಇಳಿಕೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 23:30 IST
Last Updated 18 ಅಕ್ಟೋಬರ್ 2025, 23:30 IST
<div class="paragraphs"><p>ಚಿನ್ನ</p></div>

ಚಿನ್ನ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ರಾಜ್ಯದಲ್ಲಿ ಧನತ್ರಯೋದಶಿ ಭಾಗವಾಗಿ ಶನಿವಾರ ನಡೆದ ಮಾರಾಟದ ಸಂದರ್ಭದಲ್ಲಿ ಅಂದಾಜು 6 ಸಾವಿರ ಕೆ.ಜಿ.ಯಷ್ಟು ಚಿನ್ನ ಮಾರಾಟವಾಗಿದೆ. ಮೌಲ್ಯದ ಲೆಕ್ಕದಲ್ಲಿ ಇದು ಸರಿಸುಮಾರು ₹7 ಸಾವಿರ ಕೋಟಿ ಆಗಿರಬಹುದು ಎಂದು ಬೆಂಗಳೂರು ಜ್ಯುವೆಲರ್ಸ್ ಅಸೋಸಿಯೇಷನ್‌ ಹೇಳಿದೆ.

ADVERTISEMENT

ಕಳೆದ ವರ್ಷದ ಇದೇ ದಿನ ರಾಜ್ಯದಲ್ಲಿ 9 ಸಾವಿರ ಕೆ.ಜಿ.ವರೆಗೆ ಚಿನ್ನ ಮಾರಾಟವಾಗಿತ್ತು. ತೂಕಕ್ಕೆ ಹೋಲಿಸಿದರೆ ಈ ಬಾರಿ ಮಾರಾಟದಲ್ಲಿ ಶೇ 30ರಷ್ಟು ಇಳಿಕೆಯಾಗಿದೆ, ಹಣಕಾಸಿನ ಮೌಲ್ಯದ ಲೆಕ್ಕದಲ್ಲಿ ಕಳೆದ ವರ್ಷದಷ್ಟೇ ಮಾರಾಟ ಈ ವರ್ಷವೂ ಆಗಿದೆ ಎಂದು ಅಸೋಸಿಯೇಷನ್‌ನ ಕಾರ್ಯದರ್ಶಿ ಆರ್. ಶ್ರೀನಿವಾಸ್ ಅವರು ‘ಪ್ರಜಾವಾಣಿ’ಗೆ ಶನಿವಾರ ತಿಳಿಸಿದರು.‌

ಬೆಳ್ಳಿಯು ಗರಿಷ್ಠ 15 ಸಾವಿರ ಕೆ.ಜಿ.ಯಷ್ಟು ಮಾರಾಟವಾಗಿದೆ. ಮೌಲ್ಯದ ಲೆಕ್ಕದಲ್ಲಿ ಇದು ಕನಿಷ್ಠ ₹300 ಕೋಟಿ ಆಗುತ್ತದೆ ಎಂದು ಹೇಳಿದರು.

ಬೆಂಗಳೂರಿನ ರಿಟೇಲ್‌ ಮಾರುಕಟ್ಟೆಯಲ್ಲಿ ಶನಿವಾರ ನಡೆದ ವಹಿವಾಟಿನಲ್ಲಿ 10 ಗ್ರಾಂ ಚಿನ್ನದ (24 ಕ್ಯಾರೆಟ್‌) ದರ ₹1,30,850 ಆಗಿತ್ತು. ಕೆ.ಜಿ ಬೆಳ್ಳಿ ಧಾರಣೆ ₹1.80 ಲಕ್ಷ ಆಗಿತ್ತು.

ಮಾರುಕಟ್ಟೆಯಲ್ಲಿ ಚಿನ್ನದ ಪೂರೈಕೆಯಲ್ಲಿ ವ್ಯತ್ಯಾಸವಾಗಿಲ್ಲ. ಬೆಳ್ಳಿಗೆ ಹೆಚ್ಚಿನ ಬೇಡಿಕೆ ಇದೆ, ಆದರೆ ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲ ಎಂದರು.

ಈ ಬಾರಿಯ ಧನತ್ರಯೋದಶಿಯಂದು ಚಿನ್ನಾಭರಣ ಖರೀದಿ ಎಂದಿನಂತೆ ಇತ್ತು. ಬೆಳಿಗ್ಗೆಯಿಂದಲೇ ಮಳಿಗೆಗಳಿಗೆ ಭೇಟಿ ನೀಡಿ ಗ್ರಾಹಕರು ಚಿನ್ನಾಭರಣ ಖರೀದಿಸಿದರು. ನಾಣ್ಯಗಳು, ಚಿನ್ನ ಮತ್ತು ಬೆಳ್ಳಿ ಗಟ್ಟಿ ಖರೀದಿ ಹೆಚ್ಚಾಗಿತ್ತು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.